Jailer: ರಜನಿ ಅಭಿನಯದ ಜೈಲರ್ ಸಿನಿಮಾ 'ಡುಬ್ಬಾಕೋರ್' ಎಂದ ತಮಿಳು ಯುಟ್ಯೂಬರ್
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರ ಗಲ್ಲಾಪೆಟ್ಟಿಗೆ ಲೂಟಿ ಹೊಡೆಯಿತ್ತಿರುವುದು ಗೊತ್ತಿರುವ ವಿಚಾರ. ಸಿನಿಮಾದ ಬಗ್ಗೆ ಒಳ್ಳೆ ರೆಸ್ಪಾನ್ಸ್, ಮೌತ್ ಟಾಕ್ ಇದ್ದರೂ ಅಲ್ಲಲ್ಲಿ ಅಪಸ್ವರಗಳು ಎದ್ದೇಳುತ್ತಲೇ ಇದೆ. ರಜನಿ ಅಭಿಮಾನಿಗಳು ಇದು ತಳಪತಿ ಜೋಸೆಫ್ ವಿಜಯ್ ಅಭಿಮಾನಿಗಳದ್ದೇ ರಗಳೆ ಅಂತಿದ್ದಾರೆ.
ಮಾಧ್ಯಮಗಳು ಸಿನಿಮಾದ ರಿವ್ಯೂ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಪದ್ದತಿ. ಆದರೆ, ಇತ್ತೀಚಿನ ದಿನಗಳಲ್ಲಿ ಯೂಟ್ಯೂಬರ್ಸ್ ಎಂದು ಕರೆಯಲ್ಪಡುವವರೂ ಸಿನಿಮಾದ ವಿಮರ್ಶೆ ಮಾಡುತ್ತಿದ್ದಾರೆ. ಗಮನಿಸಬೇಕಾದ ವಿಚಾರ ಏನಂದರೆ, ಕೆಲವೊಂದು ಯೂಟ್ಯೂಬರ್‌ಗಳಿಗೆ ಲಕ್ಷಾಂತರ ಫಾಲೋವರ್ಸ್ ಇದ್ದಾರೆ.

ರಜನಿ ಮುಖ್ಯಭೂಮಿಕೆಯಲ್ಲಿರುವ 'ಜೈಲರ್' ಸಿನಿಮಾದಲ್ಲಿ ನಮ್ಮ ಶಿವಣ್ಣ, ಜಸ್ಟ್ ಐದಾರು ನಿಮಿಷ ಅತಿಥಿ ರೋಲ್ ಮಾಡಿದ್ದರು. ಸಿಗಾರ್ ಸೇದುಕೊಂಡು ಪ್ರೀ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣ ನಡೆದುಕೊಂಡ ಬಂದ ರೀತಿಗೆ ತಮಿಳರು ಫುಲ್ ಫಿದಾ ಆಗಿದ್ದರು. ಯಾವ ರೀತಿ ಶಿವಣ್ಣನ ವಾಕಿಂಗ್ ಸ್ಟೈಲಿಗೆ ಅಲ್ಲಿನ ಜನತೆ ಮನಸೋತಿದ್ದಾರೆ ಅಂದರೆ, ಶಿವರಾಜ್‌ಕುಮಾರ್ ಅವರ 'ಮಫ್ತಿ', 'ಎಕೆ 47' ಮುಂತಾದ ಸಿನಿಮಾಗಳ ರಿವ್ಯೂ ಮಾಡಲಾರಂಭಿಸಿದ್ದಾರೆ.
ವಿಚಾರಕ್ಕೆ ಬರುವುದಾದರೆ, 'ಜೈಲರ್' ಸಿನಿಮಾಗೆ ಬಾಕ್ಸ್ ಆಫೀಸ್ ಪತರುಗುಟ್ಟುತ್ತಿದ್ದರೆ, ಜನಪ್ರಿಯ ತಮಿಳು ಯೂಟ್ಯೂಬರ್ ಒಬ್ಬರು ಸಿನಿಮಾವನ್ನು 'ಡುಬ್ಬಾಕೋರ್' ಎಂದಿದ್ದಾರೆ. ಚಿತ್ರದ ಸನ್ನಿವೇಶಕ್ಕೆ ಒಂದಕ್ಕೊಂದು ಸಂಬಂಧವೇ ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಅವರ ಈ ವಿಮರ್ಶೆಗೆ ತಮಿಳು ಮಕ್ಕಳ್ ಎಕ್ಕಾಮಕ್ಕಾ ಉಗಿಯುತ್ತಿದ್ದಾರೆ.

ತಮಿಳ್ ಟಾಕೀಸ್ ಹೆಸರಿನ್ ಯುಟ್ಯೂಬ್ ಚಾನೆಲ್, ಜೈಲರ್ ಚಿತ್ರದ ವಿಮರ್ಶೆ ಮಾಡಿ ವಿಡಿಯೋ ಅಪ್ಲೋಡ್ ಮಾಡಿದೆ. ಇದು ಈಗಾಗಲೇ ಇಪ್ಪತ್ತು ಲಕ್ಷ ವೀವ್ಸ್ ಪಡೆದುಕೊಂಡಿದೆ ಮತ್ತು ಸುಮಾರು ಹದಿನೈದು ಸಾವಿರ ಕಾಮೆಂಟುಗಳು ಅವರ ವಿಮರ್ಶೆಗೆ ಹರಿದು ಬಂದಿದೆ. ಕಥೆಯಲ್ಲಿನ ಪಾತ್ರಧಾರಿಗಳು ಸೀರಿಯಸ್ಸಾಗಿ ನಟಿಸುತ್ತಿದ್ದರೂ, ಪ್ರೇಕ್ಷಕರಾದ ನಮಗೆ ಚಿತ್ರಕಥೆಯನ್ನು ಹಣೆದ ರೀತಿ ನೋಡಿ ನಗು ಬರುತ್ತೆ ಎಂದು ತಮ್ಮ ವಿಡಿಯೋದಲ್ಲಿ ಅವರು ಹೇಳಿದ್ದಾರೆ.
ಮುಂದುವರಿಯುತ್ತಾ, ಡಾರ್ಕ್ ಕಾಮಿಡಿ ಮಾಡಲು ಹೋಗಿ, ಇಡೀ ಸಿನಿಮಾ ಕಾಮಿಡಿಯಾಗಿದೆ. ಕಥೆ ನೇರವಾಗಿ ಹೋಗದೆ, ಎಲ್ಲೆಲ್ಲೋ ಹೋಗುತ್ತೆ, ನಿಜವಾದ ವಿಲನ್ ಯಾರೆಂದು ಗೊತ್ತಾದ ಮೇಲೂ ಚಿತ್ರವನ್ನು ರೈಟ್ ಟ್ರ್ಯಾಕಿಗೆ ತರಬಹುದಾಗಿತ್ತು. ಚಿತ್ರವನ್ನು ನೋಡಿದ ಪ್ರೇಕ್ಷಕ ಸಿನಿಮಾ ಮುಗಿಯುವ ಹೊತ್ತಿಗೆ ಕೋಮಾಗೆ ಹೋಗಿರುತ್ತಾರೆ.
ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೋಗಿ, ಕನ್ನಡದಲ್ಲಿ ಶಿವರಾಜ್ ಕುಮಾರ್, ಮಲಯಾಳಂನಿಂದ ಮೋಹನ್ ಲಾಲ್, ಹಿಂದಿಯಿಂದ ಜಾಕಿ ಶ್ರಾಫ್ ಅವರನ್ನು ಕರೆ ತರಲಾಗಿದೆ. ಅವರು ಒಂದೈದು ನಿಮಿಷ ನಟಿಸಿದ್ದಾರೆ. ಅವರ ಎಂಟ್ರಿ ಅವರ ಭಾಷೆಯಲ್ಲೇ ಆಗುತ್ತೆ. ಇದರಿಂದ ಇದೊಂದು ಡಬ್ಬಿಂಗ್ ಸಿನಿಮಾದ ರೀತಿಯಲ್ಲಿದೆ ಎನ್ನುವ ಅನುಭವ ಪ್ರೇಕ್ಷಕರಿಗೆ ಆಗುತ್ತದೆ. ಇವರೆಲ್ಲಾ 'ಪುಷ್ಪ', 'ಕೆಜಿಎಫ್' ಮುಂತಾದ ಚಿತ್ರಗಳನ್ನು ನೋಡಿ ಕಲಿಯಲಿ ಎಂದು ಹೇಳಿದ್ದಾರೆ.
ಮೂರು ಇತರ ಭಾಷೆಯ ಅತಿಥಿ ಪಾತ್ರ ಮಾಡಿದವರು ರೌಡಿಗಳಂತೆ, ಆದರೆ ಹೀರೋ ವಿಚಾರದಲ್ಲಿ ಒಳ್ಳೆಯವರಂತೆ. ರೌಡಿಗಳಲ್ಲಿ ಒಳ್ಲೆಯವರು, ಕೆಟ್ಟವರು ಎಂದು ಇರುತ್ತಾರಾ? ಇನ್ನು ಬ್ಯಾಕ್ ಗ್ರೌಂಡ್ ಮ್ಯೂಸಿಕ್, ಕಥೆಯೊಂದು ಕಡೆ ಮ್ಯೂಸಿಕ್ ಇನ್ನೊಂದು ಕಡೆ. ನೆಲ್ಸನ್ ಅವರು ನಿರ್ದೇಶನ ಮಾಡಿದರೆ ಬೋಣಿ ಆಗುವುದಿಲ್ಲ ಎಂದು ಗೊತ್ತಿದ್ದರೂ, ಬೇರೆ ದಾರಿಯಿಲ್ಲದೇ ಅವರ ಬಳಿಯೇ ಸನ್ ಪಿಚ್ಚರ್ಸ್ ಸಿನಿಮಾವನ್ನು ಮಾಡಿಸುತ್ತದೆ ಎಂದು ಯುಟ್ಯೂಬರ್ ಅಭಿಪ್ರಾಯ ಪಟ್ಟಿದ್ದಾರೆ.
ಕಥೆಯಲ್ಲೇನೂ ಬ್ರಹ್ಮಾಂಡ ಇಲ್ಲ ಎನ್ನುವುದು ಸನ್ ಪಿಚ್ಚರ್ಸ್ ಸಂಸ್ಥೆಗೆ ಗೊತ್ತಿದ್ದರೂ ಈ ಸಿನಿಮಾವನ್ನು ಕೈಗೆತ್ತಿ ಕೊಳ್ಳುತ್ತದೆ. ರಜನಿಕಾಂತ್ ಅವರಿಗೆ ತಮಗೆ ಬೇಕಾದಂತಹ ನಿರ್ದೇಶಕ ಸಿಕ್ಕಿಲ್ಲ, ನೆಲ್ಸನ್‌ಗೆ ಅವರು ಬಯಸಿದ ಹೀರೋ ಸಿಕ್ಕಿಲ್ಲ ಎನ್ನುವುದು ಒಟ್ಟಾರೆ ಸಿನಿಮಾದ ತಾತ್ಪರ್ಯ. ವೀಕೆಂಡ್‌ನಲ್ಲಿ ಬೇರೆ ಸಿನಿಮಾ ನೋಡಲು ತಮಿಳರಿಗೆ ಆಪ್ಷನ್ ಇಲ್ಲ. ಯಾಕೆಂದರೆ, 'ಜೈಲರ್' ಒಂದೇ ರಿಲೀಸ್ ಆಗಿರುವುದು ಎಂದು ಯುಟ್ಯೂಬರ್ ಸಿನಿಮಾ ವಿಮರ್ಶೆಯನ್ನು ಮಾಡಿದ್ದಾರೆ.


Click it and Unblock the Notifications











