ಚಿತ್ರವೊಂದಕ್ಕೆ 200 ಕೋಟಿ ರೂ. ಸಂಭಾವನೆ ಬಿಟ್ಟು ದಳಪತಿ ಪಾಲಿಟಿಕ್ಸ್‌ಗೆ ಬಂದಿದ್ದೇಕೆ?
ತಮಿಳು ನಟ ದಳಪತಿ ವಿಜಯ್ ರಾಜಕೀಯರಂಗಕ್ಕೆ ಧುಮುಕಿದ್ದಾರೆ. ಕೆಲ ತಿಂಗಳ ಹಿಂದೆ ಸ್ವಂತ ಪಕ್ಷ ಕಟ್ಟಿ ಪಾಲಿಟಿಕ್ಸ್‌ಗೆ ಬರುವ ಬಗ್ಗೆ ವಿಜಯ್ ಮಾಹಿತಿ ನೀಡಿದ್ದರು. ಬಳಿಕ ಪಕ್ಷದ ಹೆಸರು, ಚಿಹ್ನೆ, ಬಾವುಟ ಎಲ್ಲವನ್ನು ಅನಾವರಣ ಮಾಡಿದ್ದರು. ಇದೀಗ ಮೊದಲ ಬಹಿರಂಗ ಸಭೆ ನಡೆಸಿ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
'ತಮಿಳಗ ವೆಟ್ರಿ ಕಳಗಂ' ಎಂಬ ಪ್ರಾದೇಶಕ ಪಕ್ಷವನ್ನು ನಟ ವಿಜಯ್ ಸ್ಥಾಪಿಸಿದ್ದಾರೆ. ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ರಾಜಕೀಯರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 2026ರಲ್ಲಿ ನಡೆಯುವ ತಮಿಳುನಾಡು ವಿಧಾನಸಭ ಚುನಾವಣೆ ಮೇಲೆ ನಟ ವಿಜಯ್ ಕಣ್ಣಿಟ್ಟಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ. ಅಭಿಮಾನಿಗಳಂತೂ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ದಳಪತಿ ಎಂದು ಜೈಕಾರ ಹಾಕುತ್ತಿದ್ದಾರೆ.

ವಿಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ 'ತಮಿಳಗ ವೆಟ್ರಿ ಕಳಗಂ' ಪಕ್ಷದ ಮೊದಲ ಸಾರ್ವಜನಿಕ ಸಮಾವೇಶ ನಡೆಯಿತು. ಲಕ್ಷಾಂತರ ಜನ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಮೊದಲ ಸಭೆಯಲ್ಲೇ ವಿಜಯ್ ಪಕ್ಷ ಭರ್ಜರಿ ಯಶಸ್ಸು ಗಳಿಸಿದೆ. ಸಮಾವೇಶಕ್ಕೆ 4ರಿಂದ 5 ಲಕ್ಷ ಜನ ಸೇರಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಸಭೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಇಬ್ಬರು ಕಾರ್ಯಕರ್ತರು ಕಾರು ಅಪಘಾತದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ನಟ ವಿಜಯ್ ರಾಜಕೀಯರಂಗ ಪ್ರವೇಶದ ಬಗ್ಗೆ ಪರ- ವಿರೋಧ ಚರ್ಚೆ ನಡೆಯುತ್ತಿದೆ. ಬೇರೆ ಪಕ್ಷದ ಕೆಲ ನಾಯಕರು ವಿಜಯ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಆದರೆ ಚಿತ್ರರಂಗದ ಹಲವರು ದಳಪತಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಬೆಂಬಲವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಪಕ್ಷ ಮೊದಲ ಸಮಾವೇಶಕ್ಕೆ ಲಕ್ಷಾಂತರ ಜನ ಜಮಾಯಿಸಿ ಶೋ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಟ ವಿಜಯ್ ರಾಜಕೀಯ ಪಕ್ಷದ ಸಮಾವೇಶಕ್ಕೆ ಸಿಕ್ಕಿರುವ ರೆಸ್ಪಾನ್ಸ್ ನೋಡಿ ತಮಿಳುನಾಡಿನ ಬೇರೆ ಪಕ್ಷದ ನಾಯಕರಿಗೂ ನಡುಕ ಹುಟ್ಟಿದೆ. ಮುಂದಿನ ಚುನಾವಣೆಯಲ್ಲೇ ಏಕಾಂಗಿಯಾಗಿ ವಿಜಯ್ ಮುಖ್ಯಮಂತ್ರಿ ಕುರ್ಚಿ ಏರದೇ ಇದ್ದರೂ ಪ್ರಬಲ ಪೈಪೋಟಿ ಕೊಡುವ ಸುಳಿವು ಸಿಕ್ಕಿದೆ. ಸಮಾವೇಶದಲ್ಲಿ ದಳಪತಿ ಭಾಷಣ ಕಾರ್ತಕರ್ತರನ್ನು ಅಭಿಮಾನಿಗಳನ್ನು ಹುರಿದುಂಬಿಸಿದೆ.

ತಮಿಳುನಾಡಿನಲ್ಲಿ ಸಿನಿಮಾ ಕಲಾವಿದರು ರಾಜಕೀಯರಂಗ ಪ್ರವೇಶಿಸಿ ಸ್ವಂತ ಪಕ್ಷ ಕಟ್ಟಿರುವುದು ಇದೇ ಮೊದಲಲ್ಲ. ಎಂಜಿಆರ್ ಕಾಲದಲ್ಲೇ ಇದು ಶುರುವಾಯಿತು. ಕರುಣಾನಿಧಿ, ಜಯಲಲಿತಾ ಕೂಡ ಈ ಹಾದಿಯಲ್ಲಿ ಸಕ್ಸಸ್ ಕಂಡಿದ್ದರು. ತೆಲುಗಿನಲ್ಲಿ ಎನ್‌ಟಿಆರ್ ಸಿಎಂ ಗದ್ದುಗೆಗೆ ಏರಿ ರಾಜ್ಯವನ್ನು ಮುನ್ನಡೆಸಿದ್ದರು. ವಿಜಯ್‌ಕಾಂತ್ ಸೇರಿದಂತೆ ಕೆಲವರು ಪ್ರಯತ್ನಿಸಿದರೂ ದೊಡ್ಡ ಗೆಲುವು ಸಿಕ್ಕಿರಲಿಲ್ಲ. ನಟ ರಜನಿಕಾಂತ್‌ಗೆ ಆ ಅವಕಾಶ ಇತ್ತು. ಪ್ರಾದೇಶಿಕ ಪಕ್ಷ ಘೋಷಣೆ ಮಾಡಿದ್ದ ತಲೈವಾ ಬಳಿಕ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.
ಇದೀಗ ನಟ ದಳಪತಿ ವಿಜಯ್ ರಾಜಕೀಯ ಪರ್ವ ಶುರುವಾಗಿದೆ. ತಮಿಳು ಚಿತ್ರರಂಗದ ಬಹುಬೇಡಿಕೆಯ ನಟ, ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಚಿತ್ರರಂಗ ಬಿಟ್ಟು ರಾಜಕೀಯರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಇನ್ನೊಂದು ಚಿತ್ರದಲ್ಲಿ ಮಾತ್ರ ನಟಿಸಲು ಒಪ್ಪಿದ್ದಾರೆ. ಚಿತ್ರವೊಂದಕ್ಕೆ ವಿಜಯ್ 200 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಭಾರತೀಯ ಚಿತ್ರರಂಗದಲ್ಲೇ ಇದು ಅತಿಹೆಚ್ಚು ಎನ್ನಲಾಗ್ತಿದೆ. ಇಂತಿಪ್ಪ ದಳಪತಿ ಯಾಕೆ ಚಿತ್ರರಂಗ ಬಿಟ್ಟು ಪಾಲಿಟಿಕ್ಸ್ ಸೇರುತ್ತಿದ್ದಾರೆ? ಎನ್ನುವ ಅನುಮಾನ ಮೂಡುವುದು ಸಹಜ. ಅದಕ್ಕೆ ಸ್ವತಃ ವಿಜಯ್ ಇದಕ್ಕೆ ಉತ್ತರ ಕೊಟ್ಟಿದ್ದಾರೆ.
ಟಿವಿಕೆ ಮಾನಾಡು ಸಮಾವೇಶದಲ್ಲಿ 45 ನಿಮಿಷಗಳ ಕಾಲ ವಿಜಯ್ ಭಾಷಣ ಮಾಡಿದರು. ಈ ವೇಳೆ ತಮ್ಮ ಪಕ್ಷ ಅಜೆಂಡಾ, ಐಡಿಯಾಲಜಿ ಎಲ್ಲವನ್ನು ವಿವರಿಸಿದ್ದರು. ಯಾವುದೇ ಪಕ್ಷದ ಹೆಸರು, ನಾಯಕರ ಹೆಸರು ತೆಗೆದುಕೊಳ್ಳದೇ ಪರೋಕ್ಷವಾಗಿ ತಿರುಗೇಟು ನೀಡಿದರು. 2026ರಲ್ಲಿ ತಮಿಳುನಾಡು ರಾಜಕೀಯ ಚಿತ್ರಣವನ್ನೇ ಬದಲಿಸುವುದಾಗಿ ಹೇಳಿದ್ದಾರೆ. ವಿಜಯ್ ಆವೇಶಭರಿತ ಮಾತುಗಳು ಅಭಿಮಾನಿಗಳ ಮನಗೆದ್ದಿದೆ.
ಬದುಕುದಕ್ಕೆ ಮನೆ, ತಿನ್ನಲು ಅನ್ನ, ಆದಾಯಕ್ಕೆ ಕೆಲಸ, ಇದೇ ನಮ್ಮ ಅಜೆಂಡಾ, ಇದು ಮೂರನ್ನು ಗ್ಯಾರಂಟಿ ಕೊಡದ ಸರ್ಕಾರ ಇದ್ದರೆ ಏನು ಹೋದರೆ ಏನು ಎಂದು ವಿಜಯ್ ಹೇಳಿದ್ದಾರೆ. ನಾನು ಚಿತ್ರರಂಗಕ್ಕೆ ಬಂದಾಗ ಮುಖ ಸರಿಯಿಲ್ಲ, ವ್ಯಕ್ತಿ ಸರಿಯಿಲ್ಲ, ಸುಂದರವಾಗಿಲ್ಲ, ಕೂದಲು ಸರಿಯಿಲ್ಲ, ನಡೆ ಸರಿಯಲ್ಲ ಎಂದು ಅವಮಾನ ಮಾಡಿದ್ದರು. ಆದರೆ ಕುಗ್ಗಲಿಲ್ಲ ಹಂತಹಂತವಾಗಿ ಬೆಳೆದು ಬಂದೆ ವಿಜಯ್ ಎಂದು ರೋಷಾವೇಶದಿಂದ ಹೇಳಿದ್ದಾರೆ.
ಚುನಾವಣೆಯಲ್ಲಿ ಸೋತವರು, ಗೆದ್ದವರ ಬಗ್ಗೆ ತಿಳಿದುಕೊಂಡು ನನ್ನ ಸಿನಿಜೀವನದ ಉತ್ತುಂಗದಲ್ಲಿರುವ ಸಮಯದಲ್ಲಿ ಎಲ್ಲವನ್ನು ಬಿಟ್ಟು ನಿಮ್ಮ ವಿಜಯ್ ಆಗಿ ನಿಮ್ಮನ್ನು ನಂಬಿ ಬಂದಿದ್ದೀನಿ. ನೀವು ನನ್ನ ಕೈ ಹಿಡಿಯುತ್ತೀರಾ ಎನ್ನುವ ನಂಬಿಕೆ ಇದೆ. ಭ್ರಷ್ಟಾಚಾರ ಕಮ್ಮಿ ಆಗಬೇಕು, ನೀಟ್ ಅವ್ಯವಹಾರದ ಬಗ್ಗೆ ತಿಳಿದಾಗ ಬೇಸರವಾಯಿತು. ಯಾರು ಹೇಳುತ್ತಾರೆ ಮೀನು ಹಿಡಿದು ಕೊಡುವುದಕ್ಕಿಂತ ಮೀನು ಹಿಡಿಯುವುದು ಹೇಳಿಕೊಡಬೇಕು ಅಂತ. ಆದರೆ ನಮ್ಮ ಯೋಚನೆ ಆ ರೀತಿ ಇಲ್ಲ. ಮೀನು ಹಿಡಿಯುವವರು ಹಿಡಿದು ತಿನ್ನಲಿ, ಸಾಧ್ಯವಾಗದವರಿಗೆ ಹಿಡಿದು ಕೊಡ್ತೀವಿ ಎಂದು ದಳಪತಿ ಹೇಳಿದ್ದಾರೆ.
ಈ ರಾಜಕೀಯ ನಮಗ್ಯಾಕೆ? ನಟಿಸ್ತಿದ್ದೀನಿ, ಸುಮ್ನೆ ನಟಿಸಿ ನಾಲ್ಕು ಕಾಸು ನೋಡೋಣ ಎಂದು ನಾನು ಆರಂಭದಲ್ಲಿ ಅಂದುಕೊಂಡು ಸುಮ್ಮನಿದ್ದೆ. ಆದರೆ ನಾನು ಮಾತ್ರ ಚೆನ್ನಾಗಿರಬೇಕು ಎನ್ನುವುದು ದುರಾಸೆ ಅಲ್ಲವೇ? ನಮ್ಮನ್ನು ಬೆಳೆಸಿದ ಈ ಜನಕ್ಕಾಗಿ ಏನಾದರೂ ಮಾಡದೇ ಇರುವುದು ಚೆನ್ನಾಗಿರುತ್ತಾ? ಒಂದು ಹಂತದ ಬಳಿಕ ಹಣ ಕೂಡಿಟ್ಟು ಏನು ಮಾಡ್ತೀವಿ, ನಮಗೆ ಈ ಜೀವನ ಕೊಟ್ಟ ಜನರಿಗೆ ನಾವು ತಿರುಗಿ ಏನು ಮಾಡ್ತೀವಿ ಎನ್ನುವ ಪ್ರಶ್ನೆಗಳು ಮನಸ್ಸಿನಲ್ಲಿ ಓಡುತ್ತಿತ್ತು. ಇಂತಹ ಪ್ರಶ್ನೆಗಳಿಗೆಲ್ಲಾ ಉತ್ತರ ಏನು ಎಂದು ಯೋಚಿಸಿದಾಗ ರಾಜಕೀಯ ಎನ್ನುವ ಉತ್ತರ ಸಿಕ್ಕಿತು ಎಂದು ವಿಜಯ್ ವಿವರಿಸಿದ್ದಾರೆ.


Click it and Unblock the Notifications