JanaNayagan Release Date: ಅಧಿಕೃತವಾಗಿ ವಿಜಯ್ 'ಜನನಾಯಗನ್' ರಿಲೀಸ್ ದಿನಾಂಕ ಘೋಷಣೆ
ದಳಪತಿ ವಿಜಯ್ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೊನೆಗೂ 'ಜನನಾಯಗನ್' ಸಿನಿಮಾ ರಿಲೀಸ್ ಡೇಟ್ ಅಧಿಕೃತವಾಗಿ ಘೋಷಣೆಯಾಗಿದೆ. ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ 6 ತಿಂಗಳು ತಡವಾಗಿ ತೆರೆಗೆ ಬರ್ತಿದೆ. ಇತ್ತೀಚೆಗೆ ಒಂದಷ್ಟು ಬದಲಾವಣೆಗಳ ಬಳಿಕ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'A' ಸರ್ಟಿಫಿಕೇಟ್ ಸಿಕ್ಕಿತ್ತು.
ಹೆಚ್. ವಿನೋದ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಜನನಾಯಗನ್' ಸಿನಿಮಾ ಸುಗ್ಗಿ ಸಂಭ್ರಮದಲ್ಲಿ ಜನವರಿ 9ರಂದು ತೆರೆಗೆ ಬರಬೇಕಿತ್ತು. ಆದರೆ ಸೆನ್ಸಾರ್ ಸಮಸ್ಯೆ ಎದುರಾಗಿತ್ತು. ಕಾನೂನಾತ್ಮಕವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಪ್ರಯತ್ನಿಸಿದ್ರು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ತಮಳುನಾಡು ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿ ಸಂಕಷ್ಟ ಎದುರಾಗಿತ್ತು. ಚುನಾವಣೆಯಲ್ಲಿ ವಿಜಯ್ ಗೆದ್ದು ಸಿಎಂ ಆಗಿದ್ದಾರೆ. ಇದೀಗ 'ಜನನಾಯಗನ್' ಸಿನಿಮಾ ಬಿಡುಗಡೆ ಸಮಸ್ಯೆ ಬಗೆಹರಿದಿದೆ. ಜುಲೈ 23ಕ್ಕೆ ಸಿನಿಮಾ ತೆರೆಗೆ ಬರುವುದಾಗಿ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಜುಲೈ 23 ಅಥವಾ 24ರಂದು 'ಜನನಾಯಗನ್' ಸಿನಿಮಾ ಬಿಡುಗಡೆ ಆಗಬಹುದು ಎಂದು ಕೆಲವರು ನಿರೀಕ್ಷಿಸಿದ್ದರು. ಇದೀಗ ಸ್ವತಃ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿದೆ. ಈ ಸುದ್ದಿ ಕೇಳಿ ದಳಪತಿ ಅಭಿಮಾನಿಗಳಂತೂ ಖುಷಿಯಾಗಿದ್ದಾರೆ. ಶೀಘ್ರದಲ್ಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ. ವಿಜಯ್ ರಾಜಕೀಯರಂಗದಲ್ಲಿ ಸಕ್ರಿಯರಾಗಿರುವುದರಿಂದ ಇದು ಅವರ ಕೊನೆಯ ಸಿನಿಮಾ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಾಕ್ಸಾಫೀಸ್ ಲೆಕ್ಕಾಚಾರ
'ಜನನಾಯಗನ್' ಎದುರು ಯಾವುದೇ ಸಿನಿಮಾ ಬಿಡುಗಡೆ ಆಗ್ತಿಲ್ಲ. ಆಗಸ್ಟ್ 26ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರ್ತಿದೆ. ನಡುವೆ ಒಂದು ತಿಂಗಳು ಅಂತರ ಇರುವಂತೆ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನೋಡಿಕೊಳ್ತಿದೆ. ವಿಜಯ್ ಸಿನಿಮಾಗಳು ತಮಿಳುನಾಡು ಹಾಗೂ ಬೆಂಗಳೂರಿನಲ್ಲಿ ಒಳ್ಳೆ ಕಲೆಕ್ಷನ್ ಮಾಡುತ್ತವೆ. ಈ ಸಿನಿಮಾ ಯಾವ ರೀತಿ ಸದ್ದು ಮಾಡುತ್ತದೆ ಎನ್ನುವ ಕುತೂಹಲ ಮೂಡಿದೆ. ವಿಜಯ್ ತಮಿಳುನಾಡು ಸಿಎಂ ಆಗಿ ಆಯ್ಕೆಯಾದ ಬಳಿಕ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ.
ಪೈರಸಿ ಪೆಟ್ಟು
ಇತ್ತೀಚೆಗೆ ಸಿನಿಮಾಗಳಿಗೆ ಲೀಕಾಸುರರ ಕಾಟ ಹೆಚ್ಚಾಗಿದೆ. ಬಿಡುಗಡೆಗೂ ಮುನ್ನ ಸಂಪೂರ್ಣ ಸಿನಿಮಾ ಪೈರಸಿ ಆಗಿರುವ ಉದಾಹರಣೆಗಳಿವೆ. 'ಜನನಾಯಗನ್' ಕೂಡ ಅದೇ ಪಟ್ಟಿಗೆ ಸೇರಿದೆ. ತಮಿಳುನಾಡು ಚುನಾವಣೆಗೂ ಮುನ್ನ ಇಡೀ ಸಿನಿಮಾ ಆನ್ಲೈನ್‌ನಲ್ಲಿ ಸೋರಿಕೆಯಾಗಿತ್ತು. ಈ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಒಂದು ಪೈರಸಿ ವೆಬ್‌ಸೈಟ್‌ನಲ್ಲೇ ಕೋಟ್ಯಂತರ ಜನ ಸಿನಿಮಾ ನೋಡಿರುವುದಾಗಿ ಇತ್ತೀಚೆಗೆ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಸಾಕಷ್ಟು ಜನ ಸಿನಿಮಾ ನೋಡಿದ್ದಾರೆ. ಅವರೆಲ್ಲಾ ಮತ್ತೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡ್ತಾರಾ? ಎನ್ನುವ ಪ್ರಶ್ನೆ ಮೂಡಿದೆ.
ಅಭಿಮಾನಿಗಳ ಬಲ
ತಮಿಳುನಾಡಿನಲ್ಲಿ ರಜನಿಕಾಂತ್ ಬಿಟ್ಟರೆ ಆ ಮಟ್ಟಿಗೆ ಅಭಿಮಾನಿ ಬಳಗ ಇರುವ ನಟ ವಿಜಯ್. ಅದೇ ಕಾರಣಕ್ಕೆ ತಮಿಳುನಾಡಿನಲ್ಲೇ ಅವರ ಸಿನಿಮಾಗಳು 300 ಕೋಟಿ ರೂ. ಕಲೆಕ್ಷನ್ ಮಾಡುತ್ತವೆ. ಈಗಾಗಲೇ ಸಿನಿಮಾ ಪೈರಸಿ ಆಗಿದ್ದರೂ ದೊಡ್ಡಮಟ್ಟದಲ್ಲಿ ಸಿನಿಮಾ ನೋಡಿ ಗೆಲ್ಲಿಸಲು ಕಾಯುತ್ತಿದ್ದಾರೆ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ದಳಪತಿ ಮೇಲಿನ ಅಭಿಮಾನದ ಪ್ರದರ್ಶನವಾಗಲಿದೆ.
ಒಂದಷ್ಟು ಬದಲಾವಣೆ
ವಿಜಯ್ ತಮ್ಮ ರಾಜಕೀಯರಂಗ ಪ್ರವೇಶಕ್ಕೆ 'ಜನನಾಯಗನ್' ಸಿನಿಮಾ ವೇದಿಕೆ ಮಾಡಿಕೊಳ್ಳಲು ಬಯಸಿದ್ದರು. ಹಾಗಾಗಿ ಒಂದಷ್ಟು ರಾಜಕೀಯ ವಿಚಾರಗಳನ್ನು ಸೇರಿಸಿದ್ದರು. ಭ್ರಷ್ಟ ರಾಜಕಾರಣಿಗಳ ವಿರುದ್ಧ ಹೋರಾಡುವ ನಾಯಕನ ಕಥೆ ಇತ್ತು. ವಿಜಯ್ ಪಾತ್ರದ ಹೆಸರು 'ಥಳಪತಿ ವೆಟ್ರಿ ಕೊಂಡನ್'. ಇದನ್ನು ಶಾರ್ಟ್ ಆಗಿ ಟಿವಿಕೆ ಎಂದು ಬಳಸಿಕೊಂಡಿದ್ದರು. ವಿಜಯ್ ಪಕ್ಷದ ಹೆಸರು ಕೂಡ ಟಿವಿಕೆ ಎನ್ನುವುದು ಗೊತ್ತೇಯಿದೆ. ವಿಜಯ್ ಈಗ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆಗಿದ್ದಾರೆ. ಹಾಗಾಗಿ ಚಿತ್ರದಲ್ಲಿ ಒಂದಷ್ಟು ಬದಲಾವಣೆ ಮಾಡಿದ್ದಾರೆ ಎನ್ನಲಾಗ್ತಿದೆ. 40 ಸೆಕೆಂಡ್‌ಗಳ ಹೊಸ ಸನ್ನಿವೇಶವನ್ನು ಸೇರಿಸಿದ್ದಾರೆ ಎಂದು ಹೇಳಲಾಗ್ತಿದೆ.


Click it and Unblock the Notifications