ದಳಪತಿ ವಿಜಯ್ ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್; ಎರಡು ಸಿನಿಮಾಗಳು ಬಿಡುಗಡೆ
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಈಗಾಗಲೇ ವಿಜಯ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಗಮನ ಸೆಳೆದಿದ್ದಾರೆ. ಜೂನ್ 22ಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಿದ್ಧರಾಗಿದ್ದಾರೆ. ತಮಿಳುನಾಡು ಸಿಎಂ ಆದ ಬಳಿಕ ಇದು ಅವರ ಮೊದಲ ಹುಟ್ಟುಹಬ್ಬ. ಹಾಗಾಗಿ ಸಂಭ್ರಮಾಚರಣೆ ಜೋರಾಗಿ ಇರಲಿದೆ.
ವಿಜಯ್ ನಟನೆಯ ಕೊನೆಯ ಸಿನಿಮಾ 'ಜನನಾಯಗನ್' ಇನ್ನು ಬಿಡುಗಡೆಯಾಗಿಲ್ಲ. ಸೆನ್ಸಾರ್ ಸಮಸ್ಯೆಯಿಂದ ಪದೇ ಪದೆ ರಿಲೀಸ್ ಮುಂದೂಡಲಾಗುತ್ತಿದೆ. ಎದುರಾಳಿ ಪಕ್ಷಗಳು ಬೇಕೆಂದೇ ಸಿನಿಮಾ ತೆರೆಗೆ ಬರಲು ಬಿಡ್ತಿಲ್ಲ, ವಿಜಯ್ ಸಿಎಂ ಆದ ಬಳಿಕ ಸಮಸ್ಯೆ ಬಗೆಹರಿದು ಸಿನಿಮಾ ಬಿಡುಗಡೆ ಆಗುತ್ತದೆ ಎಂದುಕೊಂಡಿದ್ದವರಿಗೆ ನಿರಾಸೆಯಾಗಿದೆ. ವಿಜಯ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿನಿಮಾ ತೆರೆಗೆ ಬರುವುದು ಅನುಮಾನ ಎನ್ನುವಂತಾಗಿದೆ.

'ನನಾಯಗನ್' ಸಿನಿಮಾ ಬರದೇ ಇದ್ದರೂ ವಿಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಎರಡು ಸಿನಿಮಾಗಳು ತೆರೆಗಪ್ಪಳಿಸುತ್ತಿದೆ. ಈ ಹಿಂದೆ ತೆರೆಕಂಡು ಹಿಟ್ ಆಗಿದ್ದ 'ಜಿಲ್ಲಾ' ಹಾಗೂ 'ಮೆರ್ಸಲ್' ಚಿತ್ರಗಳನ್ನು ಮರು ಬಿಡುಗಡೆ ಮಾಡಲಾಗ್ತಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ತಮಿಳುನಾಡಿನಲ್ಲಿ ದಳಪತಿ ಕ್ರೇಜ್ ಜೋರಾಗಿದೆ. ಮುಖ್ಯಮಂತ್ರಿಯಾಗಿ ಅವರು ಆಯ್ಕೆ ಆಗಲು ಅಭಿಮಾನಿಗಳ ಬೆಂಬಲವೂ ಪ್ರಮುಖ ಪಾತ್ರ ವಹಿಸಿದೆ. ತಮಿಳುನಾಡಿನಲ್ಲಿ ಮಾತ್ರ ವಿಜಯ್ ಸಿನಿಮಾಗಳು 200ರಿಂದ 300 ಕೋಟಿ ರೂ. ಕಲೆಕ್ಷನ್ ಮಾಡಿರುವ ಉದಾಹರಣೆಗಳಿವೆ.
ಸ್ಟಾರ್ ನಟರ ಹುಟ್ಟುಹಬ್ಬಕ್ಕೆ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವುದು ಹೊಸದೇನು ಅಲ್ಲ. ತಮಿಳುನಾಡಿನಲ್ಲಿ ಕೂಡ ಈ ರೂಢಿ ಆರಂಭವಾಗಿದೆ. ರಜನಿಕಾಂತ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾಗಳು ಹೊಸದಾಗಿ ಪ್ರೇಕ್ಷಕರ ಮುಂದೆ ಬಂದು ಬಾಕ್ಸಾಫೀಸ್ ಶೇಕ್ ಮಾಡಿರುವ ಉದಾಹರಣೆಗಳಿವೆ. ಇದೀಗ ವಿಜಯ್ ನಟನೆಯ ಸಿನಿಮಾಗಳ ಸರದಿ. ಜೂನ್ 19ರಂದು ಎರಡೂ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.

ತಮಿಳುನಾಡಿನ ಆಯ್ದ ಚಿತ್ರಮಂದಿರಗಳಲ್ಲಿ 'ಜಿಲ್ಲಾ' ಹಾಗೂ 'ಮೆರ್ಸಲ್' ಚಿತ್ರಗಳು ಮರು-ಬಿಡುಗಡೆ ಆಗ್ತಿವೆ. ಆರ್. ಟಿ ನೀಸನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಜಿಲ್ಲಾ' ಸಿನಿಮಾ 12 ವರ್ಷಗಳ ಹಿಂದೆ ಹಿಟ್ ಆಗಿತ್ತು. ಮೋಹನ್ ಲಾಲ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಅಬ್ಬರಿಸಿದ್ದರು. ಕಾಜಲ್ ಅಗರ್‌ವಾಲ್ ನಾಯಕಿಯಾಗಿ ಮಿಂಚಿದ್ದರು. ಡಿಸಿಪಿ ಶಕ್ತಿ ಶಿವನ್ ಪಾತ್ರದಲ್ಲಿ ವಿಜಯ್ ದರ್ಬಾರ್ ನಡೆಸಿದ್ದರು.
ವಿಜಯ್ ಸಿನಿ ಜೀವನದ ಮತ್ತೊಂದು ಸೂಪರ್ ಹಿಟ್ ಸಿನಿಮಾ 'ಮೆರ್ಸಲ್'. ಈ ಆಕ್ಷನ್ ಥ್ರಿಲ್ಲರ್ ಸಿನಿಮಾ 9 ವರ್ಷಗಳ ಹಿಂದೆ ತೆರೆಕಂಡು ಸಕ್ಸಸ್ ಕಂಡಿತ್ತು. ತಂದೆ ಮಗನಾಗಿ ದ್ವಿಪಾತ್ರದಲ್ಲಿ ವಿಜಯ್ ಅಬ್ಬರಿಸಿದ್ದರು. ಒಂದೊಳ್ಳೆ ಮೆಸೇಜ್ ಕೂಡ ಚಿತ್ರದಲ್ಲಿತ್ತು. ವಿಜಯ್ ರಾಜಕೀಯರಂಗ ಪ್ರವೇಶಿಸಲು ಬಹಳ ಹಿಂದಿನಿಂದಲೇ ತಯಾರಿ ನಡೆಸಿದ್ದರು. ಅದಕ್ಕೆ ಈ ಸಿನಿಮಾ ಕೂಡ ಬಲ ನೀಡಿತ್ತು. 'ಮೆರ್ಸಲ್' ಚಿತ್ರದಲ್ಲಿ ಮೆಡಿಕಲ್ ಮಾಫಿಯಾ ಬಗ್ಗೆ ಚರ್ಚಿಸಲಾಗಿತ್ತು. ಇದು ಪ್ರೇಕ್ಷಕರ ಮನಗೆದ್ದಿತ್ತು.
ಅಟ್ಲಿ ನಿರ್ದೇಶನದ 'ಮೆರ್ಸಲ್' ಚಿತ್ರದಲ್ಲಿ ಕಾಜಲ್ ಅಗರ್‌ವಾಲ್, ಸಮಂತಾ ಹಾಗೂ ನಿತ್ಯಾ ಮೆನನ್ ಕೂಡ ನಟಿಸಿದ್ದರು. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಒದಗಿಸಿದ್ದರು. 120 ಕೋಟಿ ರೂ. ಬಜೆಟ್ ಸಿನಿಮಾ 250 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಮೊದಲಿನಿಂದ ವಿಜಯ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಪ್ರಯತ್ನ ಮಾಡಲೇ ಇಲ್ಲ. ತಮಿಳಿನಲ್ಲೇ ಅವರ ಸಿನಿಮಾ ದೊಡ್ಡದಾಗಿ ಸದ್ದು ಮಾಡ್ತಾ ಬರ್ತಿವೆ. ಅದೇ ಸಾಲಿಗೆ 'ಮೆರ್ಸಲ್' ಕೂಡ ಸೇರಿಕೊಂಡಿತ್ತು. ನೆಚ್ಚಿನ ನಟಮ ಹುಟ್ಟುಹಬ್ಬ ಆಚರಣೆಗೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಈ ಎರಡೂ ಸಿನಿಮಾಗಳ ಅವರ ಸಂಭ್ರಮ ಹೆಚ್ಚಿಸಲಿದೆ.


Click it and Unblock the Notifications