ನಟ, ರಾಜಕಾರಣಿ ವಿಜಯಕಾಂತ್ ಅಂತ್ಯಕ್ರಿಯೆಯಲ್ಲಿ ಕಣ್ಣೀರಿಟ್ಟ ರಜನಿಕಾಂತ್: ವಿಡಿಯೋ ವೈರಲ್
ಜನಪ್ರಿಯ ನಾಯಕ ಮತ್ತು ರಾಜಕಾರಣಿ ಕ್ಯಾಪ್ಟನ್ ವಿಜಯಕಾಂತ್ ಅವರ ಅಗಲಿಕೆ ಇಡೀ ಚಿತ್ರರಂಗ ಮತ್ತು ತಮಿಳುನಾಡಿನ ರಾಜಕೀಯಕ್ಕೆ ಒಂದು ತುಂಬಲಾರದ ನಷ್ಟ. ನಟನಿಗೆ ಶ್ರದ್ಧಾಂಜಲಿ ಅರ್ಪಿಸಲು ಶುಕ್ರವಾರ ಚೆನ್ನೈನ ಮರೀನಾ ಬೀಚ್ ಬಳಿಯ ಐಲ್ಯಾಂಡ್ ಮೈದಾನದಲ್ಲಿ ಅಭಿಮಾನಿಗಳ ಸಾಗರವೇ ನೆರೆದಿತ್ತು. ವಿಜಯಕಾಂತ್ ಅವರು ಪತ್ನಿ ಪ್ರೇಮಲತಾ, ಪುತ್ರರಾದ ವಿಜಯ ಪ್ರಭಾಕರನ್ ಮತ್ತು ಷಣ್ಮುಗ ಪಾಂಡಿಯನ್ ಅವರನ್ನು ಅಗಲಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್, ವಿಜಯ್, ಕಮಲ್ ಹಾಸನ್, ಮನ್ಸೂರ್ ಅಲಿ ಖಾನ್ ಸೇರಿದಂತೆ ಚಿತ್ರರಂಗದ ಗಣ್ಯರು ನಟ. ರಾಜಕಾರಣಿ ಕ್ಯಾಪ್ಟನ್ ವಿಜಯಕಾಂತ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ವಿಜಯಕಾಂತ್ ಅವರ ಕುಟುಂಬಸ್ಥರಿಗೆ ನಟ ರಜನಿಕಾಂತ್ ಸಮಾಧಾನ ಹೇಳಿದ್ದಾರೆ. ಇನ್ನು, ಇಲ್ಲಿನ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.

ವಿಜಯಕಾಂತ್‌ಗೆ ಅಂತಿಮ ನಮನ ಸಲ್ಲಿಸಿದ ರಜನಿಕಾಂತ್
ನಟ ರಜನಿಕಾಂತ್ ಸದ್ಯಕ್ಕೆ 'ವೆಟ್ಟೈಯನ್' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಜೈ ಭೀಮ್ ಖ್ಯಾತಿಯ ನಿರ್ದೇಶಕ ಜೆ ಜ್ಞಾನವೇಲ್ ಅವರ ಜೊತೆಯಲ್ಲಿ ಸಿನಿಮಾ ಮಾಡುತ್ತಿದ್ದು, ವಿಜಯಕಾಂತ್ ಅವರ ನಿಧನದ ಹಿನ್ನೆಲೆಯಲ್ಲಿ ಚಿತ್ರೀಕರಣ ನಿಲ್ಲಿಸಲಾಗಿದೆ. ಶೂಟಿಂಗ್ ಕ್ಯಾನ್ಸಲ್ ಮಾಡಿ ಅಂತಿಮ ದರ್ಶನಕ್ಕೆ ಭಾಗಿಯಾಗಿದ್ದರು.
ಈ ವೇಳೆ "ವಿಜಯಕಾಂತ್ ಅವರಂತಹವರು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ" ಎಂದು ಮಾಧ್ಯಮಗಳಿಗೆ ರಜನಿಕಾಂತ್ ಹೇಳಿದ್ದಾರೆ. ವಿಜಯಕಾಂತ್ ಅವರ ಪಾರ್ಥೀವ ಶರೀರದ ಅಲಂಕೃತ ಪೆಟ್ಟಿಗೆಗೆ ಹೂಮಾಲೆ ಹಾಕುವಾಗ ಅವರು ತುಂಬಾ ಭಾವುಕರಾಗಿದ್ದರು., ಜೊತೆಗೆ ಕಣ್ಣೀರು ಹಾಕಿದ್ದಾರೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ರಜನಿಕಾಂತ್ ಕಣ್ಣೀರು ಹಾಕುತ್ತಿದ್ದಾರೆ. ವಿಜಯಕಾಂತ್ ಅವರ ಅಂತ್ಯಕ್ರಿಯೆಯಲ್ಲಿ ವಿಡಿಯೋ ಇದು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ಹಲವು ಮಂದಿ ಹಂಚಿಕೊಂಡಿದ್ದು, ಸಾವಿರಾರು ವೀವ್ಸ್ ಪಡೆದುಕೊಂಡಿದೆ. ರಜನಿಕಾಂತ್ ಅವರ ಫ್ಯಾನ್ಸ್ ಕೂಡ ಭಾವುಕರಾಗಿದ್ದಾರೆ.
ಸಿನಿಮಾ ಶೂಟಿಂಗ್ ಸ್ಥಗಿತಗೊಳಿಸಿದ ರಜನಿಕಾಂತ್
ರಜನಿಕಾಂತ್ ಅವರು ಗುರುವಾರ (ಡಿಸೆಂಬರ್ 28) ತಮಿಳುನಾಡಿನ ನಾಗರ್‌ಕೋಯಿಲ್‌ನಲ್ಲಿ ತಮ್ಮ ಮುಂಬರುವ ಚಲನಚಿತ್ರ ವೆಟ್ಟೈಯಾನ್‌ನ ಚಿತ್ರೀಕರಣದಲ್ಲಿದ್ದರು. ಈ ವೇಳೆ ವಿಜಯಕಾಂತ್ ಅವರ ನಿಧನದ ವಾರ್ತೆ ತಿಳಿಸಿದೆ. ಆನ್‌ಲೈನ್ ವರದಿಗಳ ಪ್ರಕಾರ, ಅವರು ತಕ್ಷಣ ಚಿತ್ರೀಕರಣವನ್ನು ರದ್ದುಗೊಳಿಸಿ, ತಮ್ಮ ಹಳೆಯ ಸ್ನೇಹಿತನಿಗೆ ಅಂತಿಮ ನಮನ ಸಲ್ಲಿಸಲು ಚೆನ್ನೈಗೆ ಧಾವಿಸಿದ್ದರು.ಅವರ ಮನೆಯವರ ಸಂಕಟದಲ್ಲಿ ಭಾಗಿಯಾಗಿದ್ದರು.
ವಿಜಯಕಾಂತ್ ಅಂತ್ಯಕ್ರಿಯೆ
ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (DMDK) ಮುಖ್ಯಸ್ಥರ ಕ್ಯಾಪ್ಟನ್ ವಿಜಯಕಾಂತ್ ಅವರನ್ನು ಡಿಸೆಂಬರ್ 29, 2023 ರಂದು ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಸಾವಿರಾರು ಮಂದಿ ಅಭಿಮಾನಿಗಳು ಮತ್ತು ರಾಜಕಾರಣಿಗಳು ಇದ್ದ ಕಾರಣ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೇವಲ 10.7 ಕಿಲೋಮೀಟರ್ ದೂರ ಕ್ರಮಿಸಲು ಬರೋಬ್ಬರಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ತೆಗೆದುಕೊಂಡಿತ್ತು. ಇದು ಅವರ ಅಭಿಮಾನಿ ಬಳಗಕ್ಕೆ ಸಾಕ್ಷಿಯಾಗಿದೆ.
ಕ್ಯಾಪ್ಟನ್ ವಿಜಯಕಾಂತ್ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜ್ಯದ ಇತರೆ ಸಚಿವರು, ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಿನಿಮಾ ರಂಗದ ತಾರೆಯರು ಕೂಡ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಿದ್ದರು.


Click it and Unblock the Notifications










