ಪುಟ್ಟಪರ್ತಿ ಸಾಯಿಬಾಬಾ ಜೀವನಾಧರಿತ 'ಅನಂತ' ಚಿತ್ರದ ಟೀಸರ್ ರಿಲೀಸ್
ಖ್ಯಾತನಾಮರ ಜೀವನಗಾಥೆಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುವ ಟ್ರೆಂಡ್ ಬಹಳ ದಿನಗಳ ಹಿಂದೆ ಶುರುವಾಯಿತು. ಬಾಲಿವುಡ್‌ನಲ್ಲಿ ಈ ಸಂಖ್ಯೆ ಹೆಚ್ಚು. ದಕ್ಷಿಣದಲ್ಲಿ ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನಡೆಯುತ್ತಿರುತ್ತದೆ. ಪ್ರಖ್ಯಾತ ಆಧ್ಯಾತ್ಮಿಕ ನಾಯಕ ಶ್ರೀ ಸತ್ಯ ಸಾಯಿ ಬಾಬಾ ಅವರ ಜೀವನ ಚರಿತ್ರೆ ದೃಶ್ಯರೂಪ ಪಡೆಯುತ್ತಿದೆ.
'ಅನಂತ' ಎಂಬ ಹೆಸರಿನಲ್ಲಿ ತಮಿಳು ನಿರ್ದೇಶಕ ಸುರೇಶ್ ಕೃಷ್ಣ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ಚಿತ್ರದ ಟೀಸರ್ ಲಾಂಚ್ ಮಾಡಲಾಗಿದೆ. ಬಹಳ ವರ್ಷಗಳ ಬಳಿಕ ಸುರೇಶ್ ಕೃಷ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಳೆದೊಂದು ದಶಕದಿಂದ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದರು. ಅಂತಿಮವಾಗಿ 'ಅನಂತ' ಸಿನಿಮಾ ಟೀಸರ್ ಹೊರಬಂದಿದೆ.

2011ರಲ್ಲಿ ಸಾಯಿಬಾಬಾ ನಿಧನರಾಗಿದ್ದರು. ಆದರೂ ಭಕ್ತರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಪುಟ್ಟಪರ್ತಿಯ ಆಶ್ರಮಕ್ಕೆ ಬರುತ್ತಲೇ ಇದ್ದಾರೆ. ಬಾಬಾ ಜನ್ಮ ಶತಮಾನೋತ್ಸವಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಬಯೋಪಿಕ್ ಸಿನಿಮಾ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಇನ್ನರ್ ವ್ಯೂ ಬ್ಯಾನರ್ ಅಡಿಯಲ್ಲಿ ಗಿರೀಶ್ ಕೃಷ್ಣಮೂರ್ತಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ತೆಲುಗು ನಟ ಜಗಪತಿ ಬಾಬು, ತಮಿಳು ನಟಿ ಸುಹಾಸಿನಿ 'ಅನಂತ' ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸಂಜಯ್ ಬಿಎಲ್ ಛಾಯಾಗ್ರಹಣ ಹಾಗೂ ಎಸ್ ರಿಚರ್ಡ್, ತೆನಿಸೈ ತೆಂಡ್ರಲ್ ಸಂಕಲನ ಚಿತ್ರಕ್ಕಿದೆ. ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗೆ ಬರಲಿದೆ. ತಮಿಳು ವರ್ಷನ್ ಚಿತ್ರಕ್ಕೆ ಪಾ ವಿಜಯ್ ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ. ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಪೋಣಿಸುತ್ತಿದ್ದಾರೆ. ಇನ್ನು ಡಾ. ಪಿ. ರಾಜೇಂದ್ರ ಕುಮಾರ್ ತೆಲುಗು ಸಂಭಾಷಣೆ ಒದಗಿಸುತ್ತಿದ್ದಾರೆ.
ನವೆಂಬರ್ 23, 1926 ರಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪುಟ್ಟಪರ್ತಿ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಜನಿಸಿದರವರು ಸತ್ಯನಾರಾಯಣ ರಾಜು. ಮುಂದೆ ಸತ್ಯನಾರಾಯಣ ರಾಜು ತಮ್ಮನ್ನು ಶಿರಡಿಯ ಸಾಯಿಬಾಬಾ ಅವರ ಪುನರ್ಜನ್ಮ ಎಂದು ಘೋಷಿಸಿಕೊಂಡಿದ್ದರು. ಭಕ್ತರ ಸಂಖ್ಯೆ ಹೆಚ್ಚಾದಂತೆ ಆಶ್ರಮ ನಿರ್ಮಾಣವಾಗಿತ್ತು. ಸಾವಿರಾರು ಜನರಿಗೆ ಆಶ್ರಮ ಆಶ್ರಯ ನೀಡಿದೆ. ಆಸ್ಪತ್ರೆಗಳು, ವಸ್ತು ಸಂಗ್ರಹಾಲಯಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಇತರ ಆಧುನಿಕ ಸೌಲಭ್ಯಗಳು ಅಲ್ಲಿದೆ.
ತೆಲುಗು ನಟ ವಿಜಯ್ ದೇವರಕೊಂಡ ಇದೇ ಪುಟ್ಟಪರ್ತಿ ಆಶ್ರಮದ ಶಾಲೆಯಲ್ಲಿ ಓದಿ ಬೆಳೆದವರು. ಬರಿಗೈಯಲ್ಲಿ ವಿಭೂತಿ, ಉಂಗುರ ಎಲ್ಲಾ ಕೊಡುವುದಾಗಿ ಹೇಳಿ ಚಮತ್ಕಾರಗಳನ್ನು ಮಾಡಿ ಸಾಕಷ್ಟು ಜನರನ್ನು ಸತ್ಯ ಸಾಯಿಬಾಬಾ ಸೆಳೆಯುತ್ತಿದ್ದರು. ಈ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದು ಇದೆ. ಈ ಸಂಗತಿಗಳನ್ನೆಲ್ಲಾ ಚಿತ್ರದಲ್ಲಿ ತೋರಿಸುತ್ತಾರಾ? ಎನ್ನುವ ಕುತೂಹಲ ಮೂಡಿದೆ.
ಸ್ನೇಹಿತರೊಬ್ಬರು ನನಗೆ ಪುಟ್ಟಪರ್ತಿ ಸಾಯಿಬಾಬಾ ಕಥೆಯನ್ನು ಸಿನಿಮಾ ಮಾಡುವಂತೆ ಹೇಳಿದರು. ಆಗ ನಾನು ಆಶ್ರಮಕ್ಕೆ ಭೇಟಿ ನೀಡಿದೆ. ಬಾಬಾ ಆಶಯದಂತೆ ಸಿನಿಮಾ ನಿರ್ಮಾಣವಾಗುತ್ತಿದೆ. ಕಳೆದ ವರ್ಷ ಒಮ್ಮೆ ಬೆಳಗಿನ ಜಾವ 3.30ಕ್ಕೆ ಬಾಬಾ ಕನಸಿನಲ್ಲಿ ಬಂದು ವಿಭೂತಿ ಕೊಟ್ಟಿದ್ದರು.
ಬಾಬಾ ಜನ್ಮ ಶತಮಾನೋತ್ಸವ ಸಂಭ್ರಮದಲ್ಲಿ 'ಅನಂತ' ಸಿನಿಮಾ ಕೆಲಸಗಳು ಜೋರಾಗಿ ನಡೀತಿದೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿದೆ. ವೈ.ಜಿ.ಮಹೇಂದ್ರನ್ ಹಾಗೂ ತಲೈವಾಸಲ್ ವಿಜಯ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.


Click it and Unblock the Notifications











