ಬೆಂಗಳೂರಿನಲ್ಲಿ ಹೇಗಿದೆ ಅಜಿತ್ 'ವಿದಾಮುಯಾರ್ಚಿ' ಕ್ರೇಜ್; ಟಿಕೆಟ್ ದರ ಎಷ್ಟಿದೆ?
ಕರ್ನಾಟಕದಲ್ಲಿ ತಮಿಳು, ತೆಲುಗು ಸಿನಿಮಾಗಳ ಆರ್ಭಟ ದಶಕಗಳಿಂದ ಮುಂದುವರೆಯುತ್ತದೆ ಇದೆ. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಬರದೇ ಇರುವ ಅವಕಾಶವನ್ನು ಪರಭಾಷಾ ಚಿತ್ರಗಳು ಬಳಸಿಕೊಳ್ಳುತ್ತಿವೆ. ಈ ವಾರ ತಮಿಳಿನ 'ವಿದಾಮುಯಾರ್ಚಿ' ಸಿನಿಮಾ ದೊಡ್ಡದಾಗಿ ಬಿಡುಗಡೆ ಆಗುತ್ತಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.
ಅಜಿತ್ ನಟನೆಯ ಆಕ್ಷನ್ ಥ್ರಿಲ್ಲರ್ 'ವಿದಾಮುಯಾರ್ಚಿ' ಚಿತ್ರಕ್ಕೆ ಮಗಿಳ್ ತಿರುಮೇನಿ ಆಕ್ಷನ್ ಕಟ್ ಹೇಳಿದ್ದಾರೆ. ತ್ರಿಷಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಅರ್ಜುನ್ ಸರ್ಜಾ, ರೆಗಿನಾ ಕಸೆಂದ್ರಾ ಚಿತ್ರದ ತಾರಾಗಣದಲ್ಲಿದ್ದಾರೆ. ಹಾಲಿವುಡ್‌ನ 'ಬ್ರೇಕ್‌ಡೌನ್' ಚಿತ್ರದಿಂದ ಪ್ರೇರಣೆಗೊಂಡು ಈ ಚಿತ್ರ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಥಲಾ ಅಜಿತ್ ರಿಸ್ಕಿ ಸ್ಟಂಟ್‌ಗಳನ್ನು ಮಾಡಿದ್ದಾರೆ. ಅದರ ಮೇಕಿಂಗ್ ವೀಡಿಯೋಗಳು ವೈರಲ್ ಆಗಿತ್ತು.

ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ಅನಿರುದ್ ರವಿಚಂದರ್ ಮ್ಯೂಸಿಕ್ 'ವಿದಾಮುಯಾರ್ಚಿ' ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್, ಟ್ರೈಲರ್ ಬಂದು ಹಿಟ್ ಆಗಿದೆ. ಗುರುವಾರವೇ(ಫೆಬ್ರವರಿ 6) ಸಿನಿಮಾ ಬಿಡುಗಡೆ ಆಗ್ತಿದ್ದು ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 6.30ಕ್ಕೆ ಮೊದಲ ಪ್ರದರ್ಶನ ಆರಂಭವಾಗಲಿದೆ. ಈಗಾಗಲೇ ಕೆಲ ಶೋಗಳ ಟಿಕೆಟ್ ಸೋಲ್ಡೌಟ್ ಆಗಿದೆ.
ಕನ್ನಡದ ನಾಲ್ಕು ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಆದರೆ ಅದರ ಎಫೆಕ್ಟ್ 'ವಿದಾಮುಯಾರ್ಚಿ' ಚಿತ್ರದ ಮೇಲೆ ಆಗುತ್ತಿಲ್ಲ. ಕೆಲವೆಡೆ ಬೆಳಗ್ಗೆ 6.30ರ ಶೋಗಳ ಟಿಕೆಟ್ ದರ ಡಬಲ್ ಆಗಿದೆ. ದಳಪತಿ ವಿಜಯ್ ಹಾಗೂ ರಜನಿಕಾಂತ್ ಸಿನಿಮಾಗಳಿಗೆ ಹೋಲಿಸಿದರೆ ಅಜಿತ್ ಸಿನಿಮಾ ಕ್ರೇಜ್ ಕಮ್ಮಿ ಇದೆ. ಆದರೂ ಮೊದಲ ದಿನವೇ ಬೆಂಗಳೂರಿನಲ್ಲಿ 1000ಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರದರ್ಶನ ಆಗುವ ಸುಳಿವು ಸಿಗುತ್ತಿದೆ.
ಈಗಾಗಲೇ ಬೆಂಗಳೂರಿನಲ್ಲಿ 'ವಿದಾಮುಯಾರ್ಚಿ' ಚಿತ್ರಕ್ಕೆ ಮೊದಲ ದಿನ 864 ಶೋಗಳು ಸಿಕ್ಕಿದೆ. 115ಕ್ಕೂ ಅಧಿಕ ಅರ್ಲಿ ಮಾರ್ನಿಂಗ್ ಶೋಗಳು ಲಿಸ್ಟ್‌ನಲ್ಲಿದೆ. ಬೆಳಗಿನ ಶೋಗಳ ಟಿಕೆಟ್ ದರ 400 ರೂ. 500 ರೂ. ದಾಟಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಂಕ್ರಾಂತಿ ಸಂಭ್ರಮದಲ್ಲೇ ಈ ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಕೊಂಚ ತಡವಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ 'ವಿದಾಮುಯಾರ್ಚಿ' ಸಿನಿಮಾ ನಿರ್ಮಾಣವಾಗಿದೆ. ಚಿತ್ರಕ್ಕೆ ದೊಡ್ಡದಾಗಿ ಪ್ರಚಾರ ಮಾಡುತ್ತಿಲ್ಲ. ನಟ ಅಜಿತ್ ಸಾಮಾನ್ಯವಾಗಿ ತಮ್ಮ ಸಿನಿಮಾಗಳ ಪ್ರಚಾರದಲ್ಲಿ ಭಾಗಿ ಆಗುವುದಿಲ್ಲ. ಚಿತ್ರತಂಡಕ್ಕೂ ಇದೇ ಮಾತನ್ನು ಹೇಳುತ್ತಾರೆ. ಸಿನಿಮಾ ಬಗ್ಗೆ ನಾವು ಮಾತನಾಡಬಾರದು, ಪ್ರೇಕ್ಷಕರು ಮಾತನಾಡಬೇಕು ಎನ್ನುವುದು ಅವರ ಲೆಕ್ಕಾಚಾರ. ಈ ಸಿನಿಮಾ ವಿಚಾರದಲ್ಲೂ ಅದೇ ಮುಂದುವರೆದಿದೆ.
ಹೊಸದಾಗಿ ಮದುವೆಯಾದ ದಂಪತಿ. ಒಮ್ಮೆ ಇಬ್ಬರು ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣಿಸುವ ವೇಳೆ ಪತ್ನಿ ಕಿಡ್ನ್ಯಾಪ್ ಆಗುತ್ತದೆ. ಆಕೆಯನ್ನು ಕಿಡ್ನ್ಯಾಪ್ ಮಾಡಿದ್ಯಾರು? ನಾಯಕ ಹೇಗೆ ತನ್ನ ಪತ್ನಿಯನ್ನು ವಾಪಸ್ ಕರೆದುಕೊಂಡು ಬರುತ್ತಾನೆ? ಎನ್ನುವುದು 'ವಿದಾಮುಯಾರ್ಚಿ' ಚಿತ್ರದ ಒನ್‌ಲೈನ್ ಸ್ಟೋರಿ. ಭರ್ಜರಿ ಆಕ್ಷನ್ ಸನ್ನಿವೇಶಗಳನ್ನು ಸೇರಿಸಿ ಅದನ್ನು ಬಹಳ ರೋಚಕವಾಗಿ ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ.
ಇತ್ತೀಚೆಗೆ ಅಜಿತ್ ಕಾರ್ ರೇಸ್‌ನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಅಜಿತ್ ತಂಡ ದುಬೈ ಕಾರ್ ರೇಸ್‌ನಲ್ಲಿ 991 ಕ್ಯಾಟಗರಿಯಲ್ಲಿ 3ನೇ ಸ್ಥಾನ ಪಡೆದಿತ್ತು. ಇದನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದರು. ಇದೀಗ 'ವಿದಾಮುಯಾರ್ಚಿ' ಸಿನಿಮಾ ನೋಡಲು ಕಾಯುತ್ತಿದ್ದಾರೆ. ವಿಶ್ವದಾದ್ಯಂತ ದೊಡ್ಡದಾಗಿ ಸಿನಿಮಾ ಬಿಡುಗಡೆ ಆಗುತ್ತಿದೆ.


Click it and Unblock the Notifications











