Thalaivar170: ಒಂದೇ ಚಿತ್ರದಲ್ಲಿ ರಜನಿ, ಬಿಗ್‌ಬಿ, ಫಹಾದ್ ಫಾಸಿಲ್: ಸಿನಿರಸಿಕರಿಗೆ ಹಬ್ಬ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಈಗಾಗಲೇ 'ಜ್ಞಾನವೇಲ್' ನಿರ್ದೇಶನದಲ್ಲಿ ಮತ್ತೊಂದು ಚಿತ್ರಕ್ಕೆ ತಲೈವಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಜೈಲರ್' ಚಿತ್ರದ ಪಾತ್ರವರ್ಗದ ರೀತಿಯೇ ಆ ಸಿನಿಮಾ ಕಲಾವಿದರ ಸಮಾಗಮ ಕುತೂಹಲ ಕೆರಳಿಸುತ್ತಿದೆ. ಬಾಲಿವುಡ್, ಟಾಲಿವುಡ್, ಮಾಲಿವುಡ್ ಸಿನಿಮಾ ನಟ-ನಟಿಯರು ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.
ಈ ಹಿಂದೆ 'ಜೈ ಭೀಮ್' ಸಿನಿಮಾ ಕಟ್ಟಿಕೊಟ್ಟಿದ್ದ ಜ್ಞಾನವೇಲ್ ತಲೈವಾ 170ನೇ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಲೈಕಾ ಪ್ರೊಡಕ್ಷನ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಈ ಸಂಸ್ಥೆ ಈಗಾಗಲೇ ಪೊನ್ನಿಯಿನ್ ಸೆಲ್ವನ್, ರೋಬೊ 2.0, ದರ್ಬಾರ್ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಅಂದಹಾಗೆ ಬಹುಕೋಟಿ ವೆಚ್ಚದಲ್ಲಿ ತಲೈವಾ 170ನೇ ಸಿನಿಮಾ ನಿರ್ಮಾಣವಾಗಲಿದ್ದು ರಜನಿಗೆ ಭಾರೀ ಮೊತ್ತದ ಸಂಭಾವನೆ ಕೂಡ ಸಿಕ್ಕಿದೆ. ಭಾರತೀಯ ಚಿತ್ರರಂಗದ ಖ್ಯಾತನಾಮರು ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಅಂದಹಾಗೆ ಈ ಚಿತ್ರದಲ್ಲಿ ಮುಂಬೈ ಮೂಲದ ಪೊಲೀಸ್ ಆಫೀಸರ್ ರೋಲ್‌ನಲ್ಲಿ ರಜನಿಕಾಂತ್ ನಟಿಸ್ತಾರೆ ಎನ್ನಲಾಗ್ತಿದೆ. ಅಣ್ಣಾತ್ತೆ ಬಳಿಕ ತಲೈವಾ ಸಿನಿಮಾಗಳಲ್ಲಿ ನಟಿಸೋದಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಸೂಪರ್ ಸ್ಟಾರ್ ಮಾತ್ರ ಬ್ಯಾಕ್ ಟು ಬ್ಯಾಕ್ ಸಿನಿಮಾ ಅಬ್ಬರಿಸುತ್ತಿದ್ದಾರೆ.
ರಜನಿ, ಅಮಿತಾಬ್ ಬಚ್ಚನ್
ತಲೈವಾ 170ನೇ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ನಟಿಸೋದು ಪಕ್ಕಾ ಆಗಿದೆ. 32 ವರ್ಷಗಳ ಹಿಂದೆ ಸೂಪರ್ ಸ್ಟಾರ್‌ಗಳಿಬ್ಬರು ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಹಿಂದೆ 'ಅಂದಾ ಕಾನೂನ್', 'ಗೆರಾಫ್ತರ್' ಮತ್ತು 'ಹಮ್' ಸಿನಿಮಾಗಳಲ್ಲಿ ರಜನಿ- ಬಿಗ್‌ಬಿ ಜೊತೆಯಾಗಿ ನಟಿಸಿದ್ದರು. ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿರುವುದರಿಂದ ಸಾಲು ಸಾಲು ಸೌತ್ ಸಿನಿಮಾಗಳಲ್ಲಿ ಅಮಿತಾಬ್ ನಟಿಸುತ್ತಿದ್ದಾರೆ.
170ನೇ ಚಿತ್ರದಲ್ಲಿ ಫಹಾದ್
ಇತ್ತೀಚೆಗೆ ಭಾಷೆ ಗಡಿ ಮೀರಿ ಎಲ್ಲಾ ಭಾಷೆಗಳಲ್ಲೂ ತಮ್ಮ ವಿಲಕ್ಷಣ ನಟನೆಯಿಂದ ಗಮನ ಸೆಳೆಯುತ್ತಿರುವ ನಟ ಫಹಾದ್ ಫಾಸಿಲ್. 'ಪುಷ್ಪ', 'ವಿಕ್ರಂ' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಈ ಮಲಯಾಳಂ ನಟ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಹೊಂಬಾಳೆ ಸಂಸ್ಥೆ 'ಧೂಮಮ್' ಚಿತ್ರದಲ್ಲಿ ಫಹಾದ್ ಹೀರೊ ಆಗಿ ನಟಿಸಿದ್ದರು. 'ಪುಷ್ಪ'-2 ಸೇರಿದಂತೆ ಹಲವು ಸಿನಿಮಾಗಳು ಫಹಾದ್ ಕೈಯಲ್ಲಿವೆ. ಇದರ ಜೊತೆಗೆ ರಜನಿಕಾಂತ್ ಮುಂದಿನ ಸಿನಿಮಾ ಸೇರಿಕೊಳ್ತಿದೆ.

ನಾನಿ, ಮಂಜು ವಾರಿಯರ್
ಬಾಲಿವುಡ್, ಮಾಲಿವುಡ್ ಮಾತ್ರವಲ್ಲ ತೆಲುಗಿನ ನಾನಿ ಕೂಡ ತಲೈವಾ 170ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ನಟಿ ಮಂಜು ವಾರಿಯರ್ ಸಹ ತಾರಾಗಣದಲ್ಲಿ ಇದ್ದಾರಂತೆ. ಒಟ್ನಲ್ಲಿ ಸ್ಟಾರ್ ಕಾಸ್ಟ್‌ನಿಂದಲೇ ಸೂಪರ್ ಸ್ಟಾರ್ ಮುಂದಿನ ಸಿನಿಮಾ ಕುತೂಹಲ ಮೂಡಿಸುತ್ತಿದೆ. ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೂ ಟ್ಯೂನ್ ಹಾಕಲಿದ್ದಾರೆ.
ಬಹುತಾರಾಗಣದ 'ಜೈಲರ್'
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್' ಚಿತ್ರದಲ್ಲೂ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಕನ್ನಡ ನಟ ಶಿವರಾಜ್‌ಕುಮಾರ್, ಮಲಯಾಳಂ ನಟ ಮೋಹನ್ ಲಾಲ್, ಬಾಲಿವುಡ್ ನಟ ಜಾಕಿಶ್ರಾಫ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ರಮ್ಯಾಕೃಷ್ಣ, ತಮನ್ನಾ, ಸುನಿಲ್, ಯೋಗಿ ಬಾಬು ಈಗೆ ದೊಡ್ಡ ತಾರಾಗಣ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿದೆ.


Click it and Unblock the Notifications











