ಶ್ರೀಲೀಲಾ ಸಿನಿಮಾ ನೋಡಿ 'ದಳಪತಿ69' ರೀಮೆಕ್? ಆ ಚಿತ್ರದ ರೈಟ್ಸ್ ಕೊಂಡುಕೊಂಡ್ರಾ ಕೆವಿಎನ್?
ತಮಿಳು ನಟ ವಿಜಯ್ ರಾಜಕೀಯರಂಗದತ್ತ ಮುಖ ಮಾಡಿದ್ದಾರೆ. ಕೊನೆಯದಾಗಿ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಆ ಚಿತ್ರಕ್ಕೆ ಹಣ ಹೂಡುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದ್ದು ಹೆಚ್. ವಿನೋದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ದಳಪತಿ 69' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯ ಕ್ರಿಸ್‌ಮಸ್ ರಜೆ ಮೇಲೆ ವಿಜಯ್ ಲಂಡನ್ ಪ್ರವಾಸ ಕೈಗೊಂಡಿದ್ದಾರೆ. ಹಾಗಾಗಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದಾರೆ. ಇನ್ನೆರಡು ತಿಂಗಳಲ್ಲಿ ವಿಜಯ್ ತಮ್ಮ ಭಾಗದ ದೃಶ್ಯಗಳನ್ನು ಮುಗಿಸುತ್ತಾರೆ. ಬಳಿಕ ಪಾಲಿಟಿಕ್ಸ್ ಕಡೆ ಸಂಪೂರ್ಣವಾಗಿ ಗಮನ ಹರಿಸುತ್ತಾರೆ ಎನ್ನಲಾಗ್ತಿದೆ. ಇನ್ನು 'ದಳಪತಿ 69' ತೆಲುಗು ಚಿತ್ರದ ರೀಮೆಕ್ ಎನ್ನುವ ಗುಸುಗುಸು ಶುರುವಾಗಿದೆ.

2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ. ಅಷ್ಟರಲ್ಲಿ 'ತಮಿಳಗ ವೆಟ್ರಿ ಕಳಗಂ' ಪಕ್ಷವನ್ನು ಸಂಘಟಿಸಿ ಸದ್ದು ಮಾಡಲು ವಿಜಯ್ ಮುಂದಾಗಿದ್ದಾರೆ. ಪಕ್ಷ ಮೊದಲ ಸಮಾವೇಶಕ್ಕೆ ಸಿಕ್ಕ ಬೆಂಬಲ ನೋಡಿ ದಳಪತಿ ಸಹ ಖುಷಿಯಾಗಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಪಕ್ಷ ಜಾದೂ ಮಾಡುತ್ತದೆ ಎನ್ನುವ ಚರ್ಚೆ ಆರಂಭವಾಗಿದೆ.
ಚುನಾವಣೆಯಲ್ಲಿ ವಿಜಯ್ ಒಂದು ಹಂತಕ್ಕೆ ಗೆದ್ದರೆ ಸಿನಿಮಾಗಳಿಂದ ಸಂಪೂರ್ಣವಾಗಿ ದೂರಾಗುವ ಸಾಧ್ಯತೆಯಿದೆ. ಕೆಲವರಂತೂ ತಮಿಳುನಾಡಿನ ಮುಂದಿನ ಸಿಎಂ ದಳಪತಿ ಎಂದು ಜೈಕಾರ ಹಾಕಲು ಆರಂಭಿಸಿದ್ದಾರೆ. ಹಾಗಾಗಿ 'ದಳಪತಿ 69' ಅವರ ಕೊನೆಯ ಸಿನಿಮಾ ಎಂದು ಬಿಂಬಿಸಲಾಗುತ್ತಿದೆ. ಇದೇ ಕಾರಣಕ್ಕೆ 250 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ.
'ದಳಪತಿ 69' ಚಿತ್ರದ ಬಗ್ಗೆ ಅದೊಂದು ಮಾತು ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇದು ಹೇಳಿಕೇಳಿ ವಿಜಯ್ ಕೊನೆಯ ಸಿನಿಮಾ. ಕಥೆ ಏನು? ಸಿನಿಮಾ ಹೇಗಿರುತ್ತದೆ? ಎಂದು ಅಭಿಮಾನಿಗಳು ಕುತೂಹಲ ಹೆಚ್ಚಾಗಿದೆ. ಇದೆಲ್ಲದರ ಬೆನ್ನಲ್ಲೇ ಇದು ರೀಮೆಕ್ ಸಿನಿಮಾ ಎನ್ನುವ ಗುಸುಗುಸು ಶುರುವಾಗಿದೆ. ಇದು ಕೆಲವರಿಗೆ ನಿರಾಸೆ ಮೂಡಿಸಿದೆ. ಇಷ್ಟು ದೊಡ್ಡ ಚಿತ್ರಕ್ಕೆ ಒಂದು ಒಳ್ಳೆ ಕಥೆ ಸಿಗಲಿಲ್ಲವೇ? ಎಂದು ಕೇಳುತ್ತಿದ್ದಾರೆ.

ಅಂದಹಾಗೆ ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ರೀಮೆಕ್ 'ದಳಪತಿ 69' ಎನ್ನುವ ಮಾತುಗಳು ಕೇಳಿಬರ್ತಿದೆ. ಇದೀಗ ಚಿತ್ರದ ರೀಮೇಕ್ ರೈಟ್ಸ್ ಕೂಡ ಕೊಂಡುಕೊಂಡಿದ್ದಾರೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ತೆಲುಗಿನ 'ಭಗವಂತ್ ಕೇಸರಿ' ಬಾಲಕೃಷ್ಣ ಹಾಗೂ ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಆದರೆ ಚಿತ್ರ ದೊಡ್ಡದಾಗಿ ಸದ್ದು ಮಾಡಿರಲಿಲ್ಲ. ಇಂತಹ ಸಿನಿಮಾ ಯಾಕೆ ವಿಜಯ್ ರೀಮೆಕ್ ಮಾಡ್ತಾರೆ? ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.
'ಭಗವಂತ್ ಕೇಸರಿ' ಚಿತ್ರದಲ್ಲಿ ಬಾಲಯ್ಯ ಮಗಳ ಸಮಾನವಾದ ಪಾತ್ರದಲ್ಲಿ ಶ್ರೀಲೀಲಾ ನಟಿಸಿದ್ದರು. ಆಕೆಯ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರದಲ್ಲಿ ಮಾಜಿ ಜೈಲರ್ ಪಾತ್ರದಲ್ಲಿ ಬಾಲಕೃಷ್ಣ ಅಬ್ಬರಿಸಿದ್ದರಯ. 'ದಳಪತಿ 69' ತೆಲುಗಿನ 'ಭಗವಂತ್ ಕೇಸರಿ' ರೀಮೆಕ್ ಅಲ್ಲ. ಆದರೆ ಕಥೆಯಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಹಾಗಾಗಿ ಆ ಚಿತ್ರದ ರೀಮೆಕ್ ರೈಟ್ಸ್ ಅನ್ನು ಕೆವಿಎನ್ ಸಂಸ್ಥೆ ಕೊಂಡುಕೊಂಡಿದೆ ಎನ್ನುವ ವದಂತಿ ಶುರುವಾಗಿದೆ.
'ದಳಪತಿ 69' ಚಿತ್ರದಲ್ಲಿ ವಿಜಯ್ ನಿವೃತ್ತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ಮಲಯಾಳಂ ನಟಿ ಮಮಿತಾ ಮೈಜು ಆತನ ಮಗಳ ಸಮಾನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಭಗವಂತ್ ಕೇಸರಿ' ಚಿತ್ರದ ಶ್ರೀಲೀಲಾ ಪಾತ್ರಕ್ಕೂ ಈ ಚಿತ್ರದಲ್ಲಿ ಮಮಿತಾ ಪಾತ್ರಕ್ಕೂ ಬಹಳ ಹೋಲಿಕೆ ಇದೆ. ಅದೇ ಕಾರಣಕ್ಕೆ ಮುಂದೆ ಸಮಸ್ಯೆ ಆಗುವುದು ಬೇಡ ಎಂದು ರೀಮೆಕ್ ರೈಟ್ಸ್ ಖರೀದಿಸಿದ್ದಾರೆ ಎನ್ನುವುದು ಹೊಸ ಚರ್ಚೆ.
ವಿಜಯ್ ಕೊನೆ ಚಿತ್ರವನ್ನು ಯಾಕೆ ರೀಮೆಕ್ ಮಾಡ್ತಾರೆ. ವಿನೋದ್ ಹೇಳಿದ ಕತೆ ಬಹಳ ಇಷ್ಟವಾಗಿದೆ. ಕಂಪ್ಲೀಟ್ ಹೊಸ ಕಥೆ ಇದು ಎನ್ನುವವರು ಇದ್ದಾರೆ. ಆದರೂ ಯಾಕೆ 'ಭಗವಂತ್ ಕೇಸರಿ' ರೀಮೆಕ್ ರೈಟ್ಸ್ ಖರೀದಿಸಿದ್ದು ಯಾಕೆ? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಎಲ್ಲದಕ್ಕೂ ಶೀಘ್ರದಲ್ಲೇ ಉತ್ತರ ಸಿಗಲಿದೆ.


Click it and Unblock the Notifications











