Leo First Review: ಸೆನ್ಸಾರ್ ಮುಗಿಸಿದ 'ಲಿಯೋ': ಫಸ್ಟ್ ರಿವ್ಯೂ ಕೂಡ ಬಂದೇಬಿಡ್ತು
ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸಲು ಸಿದ್ಧವಾಗಿದೆ. ಲೋಕೇಶ್ ಕನಕರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಸಂಜಯ್ ದತ್ ಹಾಗೂ ಅರ್ಜುನ್ ಸರ್ಜಾ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಓವರ್‌ಸೀಸ್‌ನಲ್ಲಿ ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
'ಕೈದಿ', 'ಮಾಸ್ಟರ್', 'ವಿಕ್ರಂ' ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಕೊಟ್ಟ ಲೋಕೇಶ್ ಕನಕರಾಜ್ 2ನೇ ಬಾರಿ ವಿಜಯ್ ಜೊತೆ ಕೈ ಜೋಡಿಸಿರುವುದು 'ಲಿಯೋ' ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಈ ಸಿನಿಮಾ ಮೂಡಿಬಂದಿದೆ. ದಸರಾ ಸಂಭ್ರಮದಲ್ಲಿ ಅಕ್ಟೋಬರ್ 19ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

ಇತ್ತೀಚೆಗೆ 'ಲಿಯೋ' ಸಿನಿಮಾ ಸೆನ್ಸಾರ್ ಮುಗಿಸಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಸಿನಿಮಾ ಕಾಲಾವಧಿ 2 ಗಂಟೆ 44 ನಿಮಿಷ ಅನ್ನೋದು ರಿವೀಲ್ ಆಗಿದೆ. ಇವತ್ತಿನ ಕಾಲಕ್ಕೆ ಈ ಕಾಲಾವಧಿ ಕೊಂಚ ಹೆಚ್ಚಾಯ್ತು ಎನ್ನುವವರು ಇದ್ದಾರೆ. ಸಂಜಯ್ ದತ್- ಅರ್ಜುನ್ ಸರ್ಜಾ ಇರುವುದರಿಂದ ಅವರಿಗೆ ಹೆಚ್ಚಿನ ಸ್ಕ್ರೀನ್‌ಸ್ಪೇಸ್ ಬೇಕು ಹಾಗಾಗಿ ಕಾಲಾವಧಿ ಜಾಸ್ತಿ ಆಗಿರಬಹುದು ಎನ್ನುವ ಲೆಕ್ಕಾಚಾರವೂ ನಡೀತಿದೆ. ಇನ್ನು ಚಿತ್ರದಲ್ಲಿ ವಿಜಯ್ ಡಬಲ್ ರೋಲ್ ಮಾಡಿದ್ದಾರೆ ಎನ್ನುವ ಊಹಾಪೋಹ ಕೂಡ ಇದೆ.
ಸೆನ್ಸಾರ್ ಮಂಡಳಿ 13 ಸಣ್ಣಪುಟ್ಟ ಬದಲಾವಣೆಗಳನ್ನು ಸೂಚಿಸಿದೆ. ಮುಖ್ಯವಾಗಿ ರಕ್ತಪಾತದ ಸನ್ನಿವೇಶಗಳನ್ನು ಬ್ಲರ್ ಮಾಡಲು ಹೇಳಿದೆ. ಇನ್ನು ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇತ್ತೀಚೆಗೆ 'ಜೈಲರ್' ಚಿತ್ರದಲ್ಲಿ ಅನಿರುದ್ಧ್ ಮ್ಯೂಸಿಕ್ ಸಖತ್ ಸದ್ದು ಮಾಡಿತ್ತು. ಮುಖ್ಯವಾಗಿ ಬಿಜಿಎಂ ಬಗ್ಗೆ ಎಲ್ಲರೂ ಮಾತನಾಡುವಂತಾಯಿತು. ಸಾಮಾನ್ಯ ಸನ್ನಿವೇಶವನ್ನು ತಮ್ಮ ಮ್ಯೂಸಿಕ್‌ನಿಂದ ಎಲಿವೇಟ್ ಮಾಡಿಬಿಡುತ್ತಾರೆ. 'ಲಿಯೋ' ಹಾಡುಗಳು ನಿರಾಸೆ ಮೂಡಿಸಿವೆ. ಆದರೆ ಬಿಜಿಎಂ ಬಗ್ಗೆ ಭಾರೀ ನಿರೀಕ್ಷೆಯಿದೆ.

ಸಂಗೀತ ನಿರ್ದೇಶಕ ಅನಿರುದ್ಧ್ 'ಲಿಯೋ' ಫಸ್ಟ್ ರಿವ್ಯೂ ಕೊಟ್ಟಿದ್ದಾರೆ. ಎಕ್ಸ್ (ಟ್ವಿಟ್ಟರ್) ಮಾಧ್ಯಮದಲ್ಲಿ 'ಲಿಯೋ' ಎಂದು ಬರೆದು ಬೆಂಕಿ, ಫೈರ್‌ಬಾಂಬ್ ಹಾಗೂ ಟ್ರೋಫಿ ಎಮೋಜಿಗಳನ್ನು ಹಾಕಿದ್ದಾರೆ. ಇದನ್ನು ನೋಡಿದವರು 'ಲಿಯೋ' ಸಿನಿಮಾ ನಿಜಕ್ಕೂ ಅದ್ಭುತವಾಗಿರುತ್ತದೆ ಎಂದು ಚರ್ಚಿಸುತ್ತಿದ್ದಾರೆ. ವಿಜಯ್ ಅಭಿಮಾನಿಗಳು ಖುಷಿಯಾಗಿದ್ದಾರೆ. ರೀರೆಕಾರ್ಡಿಂಗ್ ವೇಳೆ ಸಿನಿಮಾ ನೋಡಿರುವ ಅನಿರುದ್ಧ್ ಈ ರೀತಿ ಹೇಳಿದ್ದಾರೆ ಅಂದಮೇಲೆ ಸಿನಿಮಾ ಖಂಡಿತ ಚೆನ್ನಾಗಿರುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಹೆತ್ತವರಿಗೆ ಹೆಗ್ಗಣ ಮುದ್ದು. ಸಿನಿಮಾ ರಿಲೀಸ್ ಆಗಲಿ. ಪ್ರೇಕ್ಷಕರು ನೋಡಿ ಹೇಳಲಿ ಎನ್ನುತ್ತಿದ್ದಾರೆ.
ಚಿತ್ರದಲ್ಲಿ ನಾಯಕ ವಿಜಯ್ ಮುಂಬೈ ಗ್ಯಾಂಗ್‌ಸ್ಟರ್. ತನ್ನದೇ ಒಂದು ಮಾಫಿಯಾ ಸಾಮ್ರಾಜ್ಯ ವಿಸ್ತರಿಸುತ್ತಾನೆ. ಹಣಕ್ಕಾಗಿ ಗ್ಯಾಂಗ್‌ಸ್ಟರ್ ಆಗಿ ಬದಲಾದ 'ಲಿಯೋ'ಗೆ ಎದುರಾಗುವ ಸಮಸ್ಯೆಗಳೇನು? ಮಾಫಿಯಾ ಸಾಮ್ರಾಜ್ಯದಲ್ಲಿ 'ಲಿಯೋ' ಏನೆಲ್ಲಾ ಸವಾಲುಗಳು ಎದುರಾಗುತ್ತವೆ? ಎನ್ನುವ ಪ್ರಶ್ನೆಗೆ ಉತ್ತರ ಈ ಸಿನಿಮಾ ಎನ್ನಲಾಗ್ತಿದೆ. ಇನ್ನು ಚಿತ್ರದ ಕ್ರೂಷಿಷಲ್ ಎಪಿಸೋಡ್ ಕಾಶ್ಮೀರದಲ್ಲಿ ಶೂಟ್ ಮಾಡಲಾಗಿದೆ. ಆಕ್ಷನ್, ಡ್ರಾಮಾ, ಎಮೋಷನ್ ಎಲ್ಲಾ ಬೆರಸಿ ಚಿತ್ರವನ್ನು ಕಟ್ಟಿಕೊಡಲಾಗಿದೆ.
'ಲಿಯೋ' ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಮನ್ಸೂರ್ ಅಲಿಖಾನ್, ಮೈಸ್ಕಿನ್, ಪ್ರಿಯಾ ಆನಂದ್, ಬಾಬು ಆಂಟೋನಿ, ಮನೋಬಲ, ಅನುರಾಗ್ ಕಶ್ಯಪ್ ತಾರಾಗಣದಲ್ಲಿದ್ದಾರೆ. ತೆಲುಗು ನಟ ರಾಮ್‌ಚರಣ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಸ್ಯಾಂಪಲ್‌ಗಳಲ್ಲೂ ಚರಣ್ ಕಾಣಿಸಿಲ್ಲ. ಇನ್ನು 'ಲಿಯೋ' ಹಾಲಿವುಡ್‌ನ 'ಎ ಹಿಸ್ಟರಿ ಆಫ್ ವೈಲೆನ್ಸ್' ಸಿನಿಮಾ ರೀಮೆಕ್ ಎಂದು ಕೆಲವರು ಟ್ರೋಲ್ ಮಾಡ್ತಿದ್ದಾರೆ.


Click it and Unblock the Notifications











