"ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲಿ ನಾನೇ ಅಭ್ಯರ್ಥಿ"; ದಳಪತಿ ವಿಜಯ್
ನಟ ವಿಜಯ್ ತಮಿಳುನಾಡು ರಾಜಕೀಯ ಚಿತ್ರಣ ಬದಲಿಸುವ ಪಣ ತೊಟ್ಟಿದ್ದಾರೆ. ಈಗಾಗಲೇ TVK ಪಕ್ಷ ಸ್ಥಾಪಿಸಿ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 234 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವುದಾಗಿ ವಿಜಯ್ ಘೋಷಿಸಿದ್ದಾರೆ. ಮಧುರೈನಲ್ಲಿ ಇಂದು(ಆಗಸ್ಟ್ 21) ನಡೆದ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನರನ್ನು ಉದ್ದೇಶಿಸಿ ವಿಜಯ್ ಭಾಷಣ ಮಾಡಿದರು.
ಆಡಳಿತ ಪಕ್ಷ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸುತ್ತಲೇ ತಮ್ಮ ಮುಂದಿನ ನಡೆ ಬಗ್ಗೆ ದಳಪತಿ ವಿಜಯ್ ಹೇಳಿದ್ದಾರೆ. ಬಿಜೆಪಿ ಜೊತೆ ಸೇರುವ ಮಾತೇಯಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಮುಂದಿನ ಚುನಾವಣೆ ಏನಿದ್ದರೂ ಟಿವಿಕೆ ಹಾಗೂ ಡಿಎಂಕೆ ನಡುವೆ ಮಾತ್ರ. ಬೇರೆ ಯಾವುದೇ ಪಕ್ಷದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ವಿಜಯ್ ಹೇಳಿದ್ದಾರೆ. ಲಕ್ಷಾಂತರ ಜನ ಅಭಿಮಾನಿಗಳು, ಕಾರ್ಯಕರ್ತರನ್ನು ನೋಡಿ ವಿಜಯ್ ಭಾವುಕರಾಗಿದ್ದಾರೆ.

ವಿಜಯ್ ಮಾತನಾಡುತ್ತಾ "ನಾನು ನಮ್ಮ ಪಕ್ಷ ಅಭ್ಯರ್ಥಿಗಳ ಹೆಸರುಗಳು ಈಗ ಹೇಳ್ತೀನಿ. ಮಧುರೈ ಪೂರ್ವ ಕ್ಷೇತ್ರದ ಅಭ್ಯರ್ಥಿ ವಿಜಯ್.. ಮಧುರೈ ಪಶ್ಚಿಮ ಕ್ಷೇತ್ರದ ಅಭ್ಯರ್ಥಿ ವಿಜಯ್.. ಮಧುರೈ ಕೇಂದ್ರ ಕ್ಷೇತ್ರದ ಅಭ್ಯರ್ಥಿ ವಿಜಯ್.. ಏನಪ್ಪಾ ಎಲ್ಲಾ 234 ಕ್ಷೇತ್ರಗಳಲ್ಲಿ ವಿಜಯ್ ಸ್ಪರ್ಧಿನಾ ಅಂದುಕೊಂಡ್ರಾ?" ಎಂದು ಹೇಳಿದ್ದಾರೆ. ಇದನ್ನು ಕೇಳಿ ನೆರೆದವರು ಶಾಕ್ ಆಗಿದ್ದಾರೆ. ಬಳಿಕ ಮಾತು ಮುಂದುವರೆಸಿ "ಎಲ್ಲಾ ಕ್ಷೇತ್ರಗಳಲ್ಲಿ ಈ ನಿಮ್ಮ ವಿಜಯ್ ಸ್ಪರ್ಧಿಸುತ್ತಾರೆ ಎಂದುಕೊಳ್ಳಿ. ನಿಮ್ಮ ಮನೆಯಲ್ಲಿರುವ ಅಭ್ಯರ್ಥಿಯೇ ಚುನಾವಣೆಗೆ ಇಳಿಯುತ್ತಾರೆ. ಆ ಅಭ್ಯರ್ಥಿ, ನಾನು ಬೇರೆ ಬೇರೆ ಅಲ್ಲ, ಆತನಿಗೆ ಮತ ಹಾಕಿದರೆ ನನಗೆ ಹಾಕಿದಂತೆ, ನನ್ನ ಮುಖ ನೋಡಿ ಮತ ಹಾಕಿ. ನಾನು ಹಾಗೂ ನಿಮ್ಮ ಕ್ಷೇತ್ರದ ಅಭ್ಯರ್ಥಿ ಬೇರೆ ಬೇರೆ ಅಲ್ಲ. ನೀವು ಅವರಿಗೆ ಮತ ಹಾಕಿದ್ರೆ ನನಗೆ ಹಾಕಿದಂತೆ, ಅವ್ರು ಗೆದ್ದರೆ ನಾನು ಗೆದ್ದಂತೆ" ಎಂದು ವಿಜಯ್ ಮನವಿ ಮಾಡಿದ್ದಾರೆ.
ತಮಿಳುನಾಡಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಡಿಎಂಕೆ ಸರ್ಕಾರವನ್ನು TVK ಪಕ್ಷದ ಸ್ಥಾಪಕ ವಿಜಯ್ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಸಂಸ್ಥೆಗಳ ತನಿಖೆಯಿಂದ ತನ್ನ ನಾಯಕರನ್ನು ರಕ್ಷಿಸಲು ಡಿಎಂಕೆ ಬಿಜೆಪಿಯೊಂದಿಗೆ ರಹಸ್ಯ ಮೈತ್ರಿ ಮಾಡಿಕೊಂಡಿದೆ ಎಂದು ವಿಜಯ್ ಆರೋಪಿಸಿದ್ದಾರೆ. ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನು 'ಸ್ಟಾಲಿನ್ ಅಂಕಲ್' ಎಂದು ವ್ಯಂಗ್ಯವಾಗಿ ಕರೆದಿದ್ದಾರೆ. ರಾಜ್ಯದಲ್ಲಿರುವ ಮಹಿಳೆಯರಿಗೆ 1,000 ರೂ. ಕೊಟ್ಟರೆ ಸಾಕಾ ಅಂಕಲ್? ರಾಜ್ಯದಲ್ಲಿ ಮಹಿಳೆಯರಿಗೆ ಭದ್ರತೆಯ ಕೊರತೆಯಿದೆ ಅನ್ನು ನೋಡಬೇಕು ಎಂದು ಹೇಳಿದರು.

ಎಲ್ಲರೂ ಪಕ್ಷ ಸ್ಥಾಪಿಸಿದ ಬಳಿಕ ಜನರ ಬಳಿಗೆ ಮನೆ ಮನೆಗೆ ಹೋಗುತ್ತಾರೆ. ಆದರೆ ನಾನು ಎಲ್ಲರ ಮನೆಗೆ ಹೋದ ಬಳಿಕ ಪಕ್ಷ ಸ್ಥಾಪಿಸಿದ್ದೇನೆ ಎಂದು ವಿಜಯ್ ತಮ್ಮ ಜನಪ್ರಿಯತೆ ಬಗ್ಗೆ ಹೇಳಿದ್ದಾರೆ. ನಾನು ಚಿತ್ರರಂಗದಲ್ಲಿ ಮಾರ್ಕೆಟ್ ಹೋದ ಬಳಿಕ ರಾಜಕೀಯರಂಗಕ್ಕೆ ಬಂದಿಲ್ಲ. ಚಿತ್ರರಂಗದಲ್ಲಿ ಉತ್ತುಂಗದ ಸ್ಥಿತಿಯಲ್ಲಿ ಇರುವಾಗಲೇ ನನ್ನ ಶಕ್ತಿಯೊಂದಿಗೆ ಬಂದಿದ್ದೇನೆ. ಜನರೇ ನನ್ನನ್ನೂ ಈ ಮಟ್ಟಿಬೆ ಬೆಳೆಸಿದ್ದು. ಅವರಿಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ.
ಎಷ್ಟು ಜನ್ಮ ಎತ್ತಿದ್ದರೂ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ಹಾಗಿದ್ದರೆ ಮತ್ಯಾಕೆ ರಾಜಕೀಯಕ್ಕೆ ಬಂದೆ ಎಂದು ನೀವು ಅಂದುಕೊಳ್ಳಬಹುದು. ಜೀವನ ಪರ್ಯಂತ ಜನರ ಬೆಂಬಲಕ್ಕೆ ನಿಲ್ಲುವುದು ಬಿಟ್ಟರೆ ನನಗೆ ಬೇರೆ ಗುರಿ ಇಲ್ಲ. ಈಗ ಬೇರೆ ಕೆಲಸವೂ ಇಲ್ಲ. ಜನಸೇವೆ ಒಂದೇ ಉಳಿದಿರುವುದು ಎಂದು ವಿಜಯ್ ಹೇಳಿರುವುದು ವೈರಲ್ ಆಗ್ತಿದೆ.


Click it and Unblock the Notifications











