Vijay: ತಂದೆಗೆ ಶಸ್ತ್ರಚಿಕಿತ್ಸೆ: ಭಿನ್ನಾಭಿಪ್ರಾಯ ಪಕ್ಕಕ್ಕಿಟ್ಟು ಅಮೆರಿಕಾದಿಂದ ಬಂದು ವಿಜಯ್ ಭೇಟಿ
ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳ ಮೂಲಕ ತಮಿಳು ನಟ ವಿಜಯ್ ಸಂಚಲನ ಸೃಷ್ಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿದ್ದಾರೆ. ಕಾಲಿವುಡ್‌ನಲ್ಲಿ ವಿಜಯ್ ಮುಂದಿನ ಸೂಪರ್ ಸ್ಟಾರ್ ಎನ್ನುವ ಚರ್ಚೆ ನಡೀತಿದೆ. ಸದ್ಯ 'ಲಿಯೋ' ಸಿನಿಮಾ ರಿಲೀಸ್‌ಗಾಗಿ ದಳಪತಿ ವಿಜಯ್ ಕಾಯುತ್ತಿದ್ದಾರೆ.
ಸಿನಿಮಾ ಸಂಗತಿ ಪಕ್ಕಕ್ಕಿಟ್ಟರೆ ನಟ ವಿಜಯ್ ಹಾಗೂ ತಂದೆ ಚಂದ್ರಶೇಖರ್ ನಡುವೆ ಕೆಲ ಭಿನ್ನಾಭಿಪ್ರಾಯಗಳಿವೆ. ಅದರಲ್ಲೂ ಪೊಲಿಟಿಕಲ್ ಎಂಟ್ರಿ ವಿಚಾರದಲ್ಲಿ ತಂದೆ ಮಗನ ನಡುವೆ ಕಲಹ ಉಂಟಾಗಿತ್ತು. ತನಗೆ ಗೊತ್ತಿಲ್ಲದೇ ತಂದೆ ಚಂದ್ರಶೇಖರ್ ಪೊಲಿಟಿಕಲ್ ಪಾರ್ಟಿ ಆಫೀಸ್ ಆರಂಭಿಸಿದ್ದು ವಿಜಯ್ ಬೇಸರಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ತಂದೆ ವಿರುದ್ಧವೇ ವಿಜಯ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಎನ್ನಲಾಯಿತು. ಆದರೆ ತಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ವಿಜಯ್ ಎಂದೂ ಮಾತನಾಡಲಿಲ್ಲ.

ತಂದೆಯ ವಿಚಾರದಲ್ಲಿ ವಿಜಯ್ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿರುತ್ತದೆ. ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ವಿಜಯ್ ನಟನೆಯ 'ವಾರೀಸು' ಸಿನಿಮಾ ರಿಲೀಸ್ ಆಗಿತ್ತು. ಚಿತ್ರದಲ್ಲಿರುವ ತಂದೆ- ಮಗನ ಸೆಂಟಿಮೆಂಟ್ ವಿಚಾರವಾಗಿ ಮಾತನಾಡಿದಾಗ "ನಿಜ ಜೀವನದಲ್ಲಿ ತಂದೆಯನ್ನು ದೂರ ಇಟ್ಟು ಸಿನಿಮಾಗಳಲ್ಲಿ ಚೆನ್ನಾಗಿ ಡೈಲಾಗ್ ಹೊಡಿತ್ತೀಯ" ಎಂದು ಕೆಲವರು ಮೂದಲಿಸಿದ್ದರು.
ಇತ್ತೀಚೆಗಷ್ಟೆ ನಟ ವಿಜಯ್ ವಿದೇಶ ಪ್ರವಾಸ ಕೈಗೊಂಡಿದ್ದರು. ಇನ್ನು ತಂದೆ ಚಂದ್ರಶೇಖರ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸದ್ಯ ಅವರಿಗೆ ಶಸ್ತ್ರ ಚಿಕಿತ್ಸೆ ನಡೆದಿದೆ. ಅಮೇರಿಕಾದಿಂದ ಚೆನ್ನೈಗೆ ವಾಪಸ್ ಬಂದ ವಿಜಯ್ ತಂದೆ ಮನೆಗೆ ಭೇಟಿ ನೀಡಿದ್ದಾರೆ. ಮಗ ಬರುವ ಸುದ್ದಿ ತಿಳಿದು ವಿಶೇಷ ಅಡುಗೆ ಸಿದ್ದಪಡಿಸಲಾಗಿತ್ತಂತೆ. ಇನ್ನು ಪೋಷಕರ ಜೊತೆ ವಿಜಯ್ ಕ್ಲಿಕ್ಕಿಸಿಕೊಂಡಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಏನೇ ಭಿನ್ನಾಭಿಪ್ರಾಯಗಳಿದ್ದರೂ ಎಲ್ಲವನ್ನು ಪಕ್ಕಕ್ಕಿಟ್ಟು ತಂದೆ ಚಂದ್ರಶೇಖರ್ ಅವರನ್ನು ವಿಜಯ್ ಭೇಟಿ ಮಾಡಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ವಿಜಯ್ ತಂದೆ ಎಸ್. ಎ ಚಂದ್ರಶೇಖರ್ ನಿರ್ಮಾಪಕರಾಗಿ, ನಿರ್ದೇಶಕರಾಗಿ, ನಟರಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ತಾಯಿ ಶೋಭಾ ಚಂದ್ರಶೇಖರ್ ಕೂಡ ನಿರ್ದೇಶಕಿಯಾಗಿ ನಿರ್ಮಾಪಕಿಯಾಗಿ ಗಾಯಕಿಯಾಗಿ ಕಾಲಿವುಡ್‌ಗೆ ಕೊಡುಗೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಎಸ್. ಎ ಚಂದ್ರಶೇಖರ್ ಮಗ ವಿಜಯ್ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ್ದರು. "ಪ್ರತಿ ತಂದೆ ಮಗನ ನಡುವೆ ಭಿನ್ನಾಭಿಪ್ರಾಯಗಳಿರುವಂತೆ ನಮ್ಮ ನಡುವೆಯೂ ಇದೆ. ಹಾಗಾಗಿ ನಮ್ಮಿಬ್ಬರ ನಡುವೆ ಇತ್ತೀಚೆಗೆ ಮೊದಲಿನ ಒಟನಾಟ ಇಲ್ಲ. ಆತ್ಮೀಯವಾಗಿ ಮಾತನಾಡಿದ ಸಂದರ್ಭಗಳು ಕಮ್ಮಿನೇ. ಆದರೂ ನನ್ನ ಮಗ ವಿಜಯ್ ಅಂದರೆ ಬಹಳ ಇಷ್ಟ. ಆತನಿಗೆ ನನ್ನ ಮೇಲೆ ಪ್ರೀತಿ ಇದೆ. ಇತ್ತೀಚೆಗೆ ಬಿಡುಗಡೆಯಾದ 'ವಾರಿಸು' ಚಿತ್ರವನ್ನು ಒಟ್ಟಿಗೆ ನೋಡಿದ್ದೆವು"
"ತಂದೆ- ಮಗ ಅಂದಮೇಲೆ ಜಗಳ ಮಾಡೋದು, ಮತ್ತೆ ಒಂದಾಗೋದು ಸರ್ವೇ ಸಾಮಾನ್ಯ. ಕಳೆದ ವರ್ಷ ವಿಜಯ್ ಏನೋ ಸ್ಟೇಟ್‌ಮೆಂಟ್ ಕೊಟ್ಟ ಅಂತ ದೊಡ್ಡದಾಗಿ ಸುದ್ದಿಯಾಯಿತು. ನಮ್ಮಿಬ್ಬರ ಭಿನ್ನಾಭಿಪ್ರಾಯಗಳ ಬಗ್ಗೆ ಹೆಚ್ಚಾಗಿ ಚರ್ಚಿಸುವ ಅಗತ್ಯ ಇಲ್ಲ" ಎಂದು ವಿಜಯ್ ತಂದೆ ಚಂದ್ರಶೇಖರ್ ಹೇಳಿದ್ದರು.
'ಲಿಯೋ' ಸಿನಿಮಾ ವಿಚಾರಕ್ಕೆ ಬಂದರೆ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಅಕ್ಟೋಬರ್ 19ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಂಜಯ್ ದತ್, ಅರ್ಜುನ್ ಸರ್ಜಾ, ಬಾಬು ಆಂಟೋನಿ, ಮನೋಬಲ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅನಿರುದ್ಧ್ ಸಂಗೀತ 'ಲಿಯೋ' ಆರ್ಭಟಕ್ಕಿದೆ.


Click it and Unblock the Notifications











