Jana Nayagan: ಹೈಕೋರ್ಟ್‌ನಲ್ಲಿ ಬಗೆ ಹರಿದ ಸೆನ್ಸಾರ್ ಸಮಸ್ಯೆ; 'ಜನ ನಾಯಗನ್' ಬಿಡುಗಡೆಗೆ ಹೊಸ ಮುಹೂರ್ತ
ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಇಂದು(ಜನವರಿ 9) ಬಿಡುಗಡೆ ಆಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಸೆನ್ಸಾರ್ ಸಮಸ್ಯೆಯಿಂದ ಸಿನಿಮಾ ಬಿಡುಗಡೆ ರದ್ದಾಗಿತ್ತು. ಚಿತ್ರದಕ್ಕೆ ಯು/ಎ ಸರ್ಟಿಫಿಕೇಟ್ ಕೊಡುವಂತೆ ಮದ್ರಾಸ್ ಹೈಕೋರ್ಟ್ ಸೆನ್ಸಾರ್ ಮಂಡಳಿಗೆ ಸೂಚಿಸಿದೆ. ಹಾಗಾಗಿ ಸಿನಿಮಾ ಬಿಡುಗಡೆಗೆ ಎದುರಾಗಿದ್ದ ಸಮಸ್ಯೆ ಬಗೆ ಹರಿದಂತೆ ಆಗಿದೆ.
ವಾರಕ್ಕೂ ಮುನ್ನ 'ಜನ ನಾಯಗನ್' ಸಿನಿಮಾ ನೋಡಲು ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿತ್ತು. ಟಿಕೆಟ್ ದರಕ್ಕಿಂತ ಹಲವು ಪಟ್ಟು ಹೆಚ್ಚು ಹಣ ತೆತ್ತು ಕರ್ನಾಟಕದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಂದಾಗಿದ್ದರು. ಟಿಕೆಟ್ ಕಾಯ್ದಿರಿಸಿದ್ದರು. ಸಿನಿಮಾ ಬಿಡುಗಡೆ ರದ್ದಾಗಿದ್ದ ಹಿನ್ನೆಲೆಯಲ್ಲಿ ಹಣವನ್ನು ವಾಪಸ್ ಮಾಡಲಾಗಿತ್ತು. ಇದೀಗ ಸಿನಿಮಾ ಬಿಡುಗಡೆ ಹಾದಿ ಸುಗಮನವಾಗಿದ್ದು ಅಭಿಮಾನಿಗಳ ಸಂಭ್ರಮ ಮುಗಿಲುಮಟ್ಟಿದೆ.

ಹೊಸ ರಿಲೀಸ್ ಡೇಟ್ ಶೀಘ್ರದಲ್ಲೇ ಘೋಷಣೆ ಆಗಲಿದೆ. ಸದ್ಯ ರಾಜಕೀಯರಂಗ ಪ್ರವೇಶಿಸಿರುವ ನಟ ವಿಜಯ್ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ್ದಾರೆ. ಹಾಗಾಗಿ ಕೊನೆಯ ಚಿತ್ರವನ್ನು ದೊಡ್ಡದಾಗಿ ನೋಡಿ ಸಂಭ್ರಮಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಅದೇ ಕಾರಣಕ್ಕೆ ಸಾವಿರಾರು ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಅಂದಾಜು 350 ಕೋಟಿ ರೂ. ಬಜೆಟ್‌ನಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ 'ಜನ ನಾಯಗನ್' ಸಿನಿಮಾ ನಿರ್ಮಾಣ ಮಾಡಿದೆ.
'ಜನ ನಾಯಗನ್' ಸೆನ್ಸಾರ್ ಸಮಸ್ಯೆ ಬಗೆಹರಿಯುತ್ತಿದ್ದಂತೆ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ತರಬೇಕು ಎನ್ನುವುದು ಚಿತ್ರತಂಡದ ಬಯಕೆ. ಹಾಗಾಗಿ ಶೀಘ್ರದಲ್ಲೇ ಹೊಸ ರಿಲೀಸ್ ಡೇಟ್ ಘೋಷಣೆ ಆಗಲಿದೆ. ದಿಢೀರನೆ ಸಿನಿಮಾ ಬಿಡುಗಡೆ ಸಾಧ್ಯವಿಲ್ಲ. ಹಾಗಾಗಿ ಜನವರಿ 14ರಂದು ಸಿನಿಮಾ ತೆರೆಗಪ್ಪಳಿಸಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.

ಜನವರಿ 14ರಂದು ಚಿತ್ರಮಂದಿರಗಳಿಗೆ 'ಜನ ನಾಯಗನ್' ಬರೋದು ಸಾಧ್ಯವಾಗದಿದ್ದರೆ ಜನವರಿ 22ರಂದು ದರ್ಬಾರ್ ನಡೆಸಬಹುದು ಎನ್ನುವ ಮಾತುಗಳು ಕೇಳಿಬರ್ತಿದೆ. ಸಂಕ್ರಾಂತಿ ರಜಾ ದಿನಗಳು ಮಿಸ್ ಮಾಡಿಕೊಂಡರೂ ಗಣರಾಜ್ಯೋತ್ಸದ ಒಂದು ರಜೆ(ಜನವರಿ 26) ಸೇರಿ ಲಾಂಗ್ ವೀಕೆಂಡ್ ಸಿಗುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಸೆನ್ಸಾರ್ ಸರ್ಟಿಫಿಕೇಟ್ ಕೊಡಲು CBFCಗೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ. ಇನ್ನು ಸೆನ್ಸಾರ್ ಪ್ರಕ್ರಿಯೆ ಮುಗಿದಿಲ್ಲ.
ಡಿಸೆಂಬರ್‌ನಲ್ಲೇ ಸೆನ್ಸಾರ್ ಮಂಡಳಿಯವರು 'ಜನ ನಾಯಗನ್' ಸಿನಿಮಾ ವೀಕ್ಷಿಸಿದ್ದರು. ಆದರೆ 27 ಕಡೆ ಕಟ್, ಮ್ಯೂಟ್ ಮಾಡುವಂತೆ ಸೂಚಿಸಿ ಯು/ಎ ಸರ್ಟಿಫಿಕೇಟ್ ಕೊಟ್ಟಿದ್ದರು. ಬಳಿಕ ಸೆನ್ಸಾರ್ ಮಂಡಳಿ ಸದಸ್ಯರೊಬ್ಬರು ಚಿತ್ರವನ್ನು ರಿವ್ಯೂ ಕಮಿಟಿಗೆ ಕಳಿಸಿದ್ದರು. ಹಾಗಾಗಿ ಸೆನ್ಸಾರ್ ಸರ್ಟಿಫಿಕೇಟ್ ಸಿಗದೇ ಸಮಸ್ಯೆ ಆಗಿತ್ತು. ಸೆನ್ಸಾರ್ ಮಂಡಳಿ ಹೇಳಿದ ಬದಲಾವಣೆ ಮಾಡಿದ ಬಳಿಕವೂ ಯಾಕೆ ಸಮಸ್ಯೆ ಎಂದು ಚಿತ್ರತಂಡ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಚಿತ್ರತಂಡಕ್ಕೆ ಗೆಲುವು ಸಿಕ್ಕಿದೆ. ಆದರೆ ಸಿನಿಮಾ ಬಿಡುಗಡೆ ತಡವಾಗ್ತಿದೆ.
ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ರೀಮೆಕ್ ಈ 'ಜನ ನಾಯಗನ್'. ತೆಲುಗಿನಲ್ಲಿ ಬಾಲಕೃಷ್ಣ ಮಾಡಿದ್ದ ಪಾತ್ರವನ್ನು ವಿಜಯ್ ಮಾಡಿದ್ದಾರೆ. ವಿನೋದ್ ಆಕ್ಷನ್ ಕಟ್ ಹೇಳಿದ್ದು ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಿದ್ದಾರೆ. ಮಮಿತಾ ಬೈಜು, ಪ್ರಿಯಾಮಣಿ, ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ. ಈ ಚಿತ್ರವನ್ನು ತಮ್ಮ ಪೊಲಿಟಿಕಲ್ ಎಂಟ್ರಿಗೆ ವಿಜಯ್ ಬಳಸಿಕೊಳ್ಳುತ್ತಿದ್ದಾರೆ.


Click it and Unblock the Notifications











