ಅಡೆತಡೆಗಳನ್ನು ದಾಟಿಕೊಂಡು ಮೈಕೊಡವಿ ಎದ್ದು ನಿಂತ ಜನನಾಯಗನ್ ; ವಿಜಯ್ ಕೊನೆ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್
''ಜನನಾಯಗನ್'' ತಮ್ಮ ರಾಜಕೀಯ ಜೀವನಕ್ಕೆ ಭದ್ರ ಅಡಿಪಾಯ ಹಾಕುವ ತುರುಪ್ ಕಾ ಎಕ್ಕಾ ಆಗುತ್ತೆ ಎಂದು ವಿಜಯ್ ಅಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ. ಚುನಾವಣೆಯ ಕಾವು ತಣ್ಣಗಾಗುವವರೆಗೆ ''ಜನನಾಯಗನ್'' ಡಬ್ಬಾದಿಂದ ಹೊರ ಬರದಂತೆ ವ್ಯವಸ್ಥೆಯೊಂದು ವ್ಯವಸ್ಥಿತವಾಗಿ ನೋಡಿಕೊಂಡಿತು. ಈ ಮೂಲಕ ವಿಜಯ್ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿತು.
ರಾಜಕೀಯ ಸಂಭಾಷಣೆಗಳು ಮತ್ತು ಸನ್ನಿವೇಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸೆನ್ಸಾರ್ ಮಂಡಳಿ, ಚಿತ್ರತಂಡದವರು ಎಷ್ಟೇ ತಿಪ್ಪರಲಾಗ ಹಾಕಿದರೂ ಪಟ್ಟು ಸಡಿಲಿಸಲಿಲ್ಲ. ನ್ಯಾಯಾಲಯದ ಮೊರೆ ಹೋದರು ಕೂಡ ''ಜನನಾಯಗನ್'' ಸಮಸ್ಯೆ ಬಗೆಹರಿಯಲಿಲ್ಲ. ಕೊನೆಗೆ ಬಿಡುಗಡೆಯ ಭಾಗ್ಯ ಕಾಣದೇ ಒದ್ದಾಡುತ್ತಿದ್ದ ''ಜನನಾಯಗನ್''ನ ಮೊಬೈಲ್ ನಲ್ಲಿಯೇ ಕಣ್ತುಂಬಿಕೊಳ್ಳುವ ಸೌಭಾಗ್ಯವನ್ನು ಅಭಿಮಾನಿಗಳಿಗೆ ಕಲ್ಪಿಸಲಾಯ್ತು. ಚಿತ್ರವನ್ನು ಆನ್ ಲೈನ್‌ನಲ್ಲಿ ಸೋರಿಕೆ ಮಾಡಲಾಯ್ತು.

ಈ ಎಲ್ಲಾ ವಿದ್ಯಮಾನಗಳಿಂದ ವಿಜಯ್ ನೊಂದುಕೊಂಡಿದ್ದರಾ..? ಇಲ್ಲವಾ..? ಗೊತ್ತಿಲ್ಲ. ಆದರೆ ವಿಜಯ್ ಅವರನ್ನು ಕೊನೆಯ ಬಾರಿ ಬೆಳ್ಳಿಪರದೆಯ ಮೇಲೆ ನೋಡಬೇಕು, ಚಿತ್ರಮಂದಿರದ ಎದುರು ಶಿಳ್ಳೆ ಹೊಡೆದು ರಣಕೇಕೆ ಹಾಕಬೇಕು ಎಂದು ಕಾಯುತ್ತಿದ್ದ ಇವರ ಅಸಂಖ್ಯಾತ ಅಭಿಮಾನಿಗಳು ಮಾತ್ರ ನೊಂದು ಬೆಂದು ಹೋಗಿದ್ದರು. ವಿಜಯ್ ವಿರುದ್ಧ ಷಡ್ಯಂತ್ರ, ಪಿತೂರಿ ಮಾಡಲಾಗುತ್ತಿದೆ ಎಂದು ಕಣ್ಣೀರು ಹಾಕಿದ್ದರು.
ಈಗ ಚುನಾವಣೆ ಮುಗಿದಿದೆ. ಇನ್ನೇನು ಫಲಿತಾಂಶ ಮಾತ್ರ ಹೊರ ಬರಬೇಕಿದೆ. ಅದಕ್ಕೂ ಕೂಡ ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಹೀಗಿರುವಾಗ ಈಗ ''ಜನನಾಯಗನ್'' ಹಾದಿಯಲ್ಲಿ ಬಿದ್ದಿದ್ದ ಕಲ್ಲುಗಳನ್ನೆಲ್ಲಾ ಎತ್ತಿ ಪಕ್ಕಕ್ಕೆ ಎಸೆಯಲಾಗಿದೆ. ಅಡೆ-ತಡೆಯ ಗೋಡೆ ಕುಸಿದು ಬಿದ್ದಿದೆ. ಬಿಡುಗಡೆಗೆ ಮುಹೂರ್ತ ಕೊನೆಗೂ ಫಿಕ್ಸ್ ಆಗಿದೆ.
ಹೌದು, ''ಜನನಾಯಗನ್'' ಬಿಡುಗಡೆಯ ಕುರಿತು ''ಪಿಂಕ್ ವಿಲ್ಲಾ'' ವರದಿಯನ್ನು ಮಾಡಿದ್ದು ಆ ಪ್ರಕಾರ ಚಿತ್ರ ಇದೇ ಮೇ 8ರಂದು ಬಿಡುಗಡೆಯಾಗಲಿದೆ. ಚುನಾವಣಾ ಫಲಿತಾಂಶದ ನಂತರ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಕುತೂಹಲ ಕೂಡ ಗರಿಗೇದರಿದೆ. ಯಾಕೆಂದರೆ ಚುನಾವಣೆಯಲ್ಲಿ ವಿಜಯ್‌ಗೆ ಹಿನ್ನೆಡೆಯಾದರೆ ಚಿತ್ರಕ್ಕೂ ಹಿನ್ನೆಡೆಯಾಗುತ್ತೆ ಎನ್ನುವ ಅಭಿಪ್ರಾಯ ಸದ್ಯ ಹಲವರದ್ದು.
ಇನ್ನೂ ಅಪ್ಪಿ ತಪ್ಪಿ ಚುನಾವಣೆಯಲ್ಲಿ ಮ್ಯಾಜಿಕ್ ವರ್ಕ್ ಆಗಿ ದಳಪತಿ ತಮಿಳುನಾಡಿನ ಕಿಂಗ್ ಮೇಕರ್ ಆದರೆ ಚಿತ್ರಕ್ಕೆ ಬ್ಲಾಕ್ ಬಸ್ಟರ್ ಓಪನಿಂಗ್ ಸಿಗುವುದು ಖಚಿತ ಎನ್ನುವ ಮಾತು ಕೂಡ ಸದ್ಯ ತಮಿಳುನಾಡಿನ ಚಿತ್ರ ವಿಶ್ಲೇಷಕರ ಮತ್ತು ಪಂಡಿತರ ವಲಯದಲ್ಲಿ ಕೇಳಿ ಬರುತ್ತಿದೆ.

ಅಂದ್ಹಾಗೇ ''ಜನನಾಯಗನ್''ಗೆ ಬಂಡವಾಳ ಹೂಡಿರುವುದು ಕನ್ನಡದ ನಿರ್ಮಾಣ ಸಂಸ್ಥೆ ''ಕೆವಿಎನ್''. ದುರಾದೃಷ್ಟ ಈ ಸಂಸ್ಥೆ ನಿರ್ಮಾಣದ ಮೂರು ದೊಡ್ಡ ಬಜೆಟ್‌ನ ಚಿತ್ರಗಳು ಬಿಡುಗಡೆಯ ಬಾಗಿಲಿಗೆ ಬಂದು ಸಿಲುಕಿಕೊಂಡಿದ್ದವು. ಇದರಿಂದ ಹಲವರು ಮರಗಿದ್ದರು. ಕೊನೆಗೂ ಈಗ ಶಾಪ ವಿಮೋಚನೆಯಾದಂತೆ ಆಗಿದ್ದು ಧ್ರುವಾ ಸರ್ಜಾ ಮತ್ತು ಪ್ರೇಮ್ ಕಾಂಬಿನೇಷನ್‌ನ ''ಕೆಡಿ'' ಈ ಏಪ್ರಿಲ್ 30ಕ್ಕೆ ಬಿಡುಗಡೆಯಾಗುತ್ತಿದೆ. ''ಕೆಡಿ'' ಬೆನ್ನಲ್ಲೇ ''ಜನನಾಯಗನ್'' ದರ್ಶನ ಆಗಲಿದೆ. ಆ ನಂತರ ''ಟಾಕ್ಸಿಕ್'' ಸರದಿ
ಇನ್ನು, ಆನ್‌ಲೈನ್‌ನಲ್ಲಿ ಸೋರಿಕೆಯಾದಾಗ ವಿಜಯ್, ಕೆವಿಎನ್ ಸಂಸ್ಥೆಯ ಬೆನ್ನಿಗೆ ನಿಂತಿದ್ದಾರೆ. ಮತ್ತೊಂದು ಚಿತ್ರ ಮಾಡುವುದಾಗಿ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈಗ ''ಜನನಾಯಗನ್'' ಬಿಡುಗಡೆಯಾಗುತ್ತಿದೆ. ಹೀಗಾಗಿ ''ಜನನಾಯಗನ್'' ವಿಜಯ್ ಅವರ ಕೊನೆಯ ಸಿನಿಮಾ ಆಗುತ್ತಾ..? ಅಥವಾ ಕೆವಿಎನ್ ಜೊತೆ ವಿಜಯ್ ಇನ್ನೊಂದು ಸಿನಿಮಾ ಮಾಡ್ತಾರಾ..? ಎನ್ನುವ ಪ್ರಶ್ನೆಯೂ ಇದೆ.
ಇದೇ ಸಮಯದಲ್ಲಿ ಒಂದು ವೇಳೆ ಚುನಾವಣೆಯಲ್ಲಿ ವಿಜಯ್ ಸೋತರೆ, ರಾಜಕೀಯದ ಪ್ರಯಾಣಕ್ಕೆ ಬ್ರೇಕ್ ಹಾಕಿ ವಿಜಯ್ ಮತ್ತೆ ಚಿತ್ರರಂಗಕ್ಕೆ ಮರಳುತ್ತಾರಾ ಅಥವಾ ಚಿತ್ರರಂಗದಿಂದ ದೂರ ಸರಿದು ಫುಲ್ ಟೈಮ್ ರಾಜಕಾರಣದಲ್ಲಿಯೇ ಕಳೆದು ಹೋಗುತ್ತಾರಾ..? ಎನ್ನುವ ಕುತೂಹಲ ಕೂಡ ಇದೆ. ಉತ್ತರ ಕಾಲವೇ ನೀಡಲಿದೆ.


Click it and Unblock the Notifications