ವಿಜಯ್ 'ಜನನಾಯಗನ್' ಆರ್ಭಟಕ್ಕೆ ಮಾಸ್ಟರ್ ಪ್ಲ್ಯಾನ್; ಸಿನಿಮಾ ರಿಲೀಸ್ ಯಾವಾಗ ಗೊತ್ತಾ?
ದಳಪತಿ ವಿಜಯ್ ನಟನೆಯ 'ಜನನಾಯಗನ್' ಸಿನಿಮಾ ಇನ್ನು ತೆರೆಗೆ ಬಂದಿಲ್ಲ. ಸದ್ಯ ತಮಿಳುನಾಡಿನಲ್ಲಿ ಚುನಾವಣೆ ಕಣ ರಂಗೇರಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಿನಿಮಾ ಬಿಡುಗಡೆ ಆಗಲ್ಲ. ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ 3 ತಿಂಗಳು ಕಳೆದರೂ ಬಿಡುಗಡೆ ಆಗದೇ ಇರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ವಿನೋದ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಭಾರೀ ಬಜೆಟ್‌ನಲ್ಲಿ 'ಜನನಾಯಗನ್' ಚಿತ್ರ ನಿರ್ಮಿಸಿದೆ. ಸೆನ್ಸಾರ್ ಸಮಸ್ಯೆಯಿಂದ ಸಿನಿಮಾ ಬಿಡುಗಡೆ ತಡವಾಗುತ್ತಲೇ ಬಂದಿತ್ತು. ಚಿತ್ರದಲ್ಲಿ ಒಂದಷ್ಟು ರಾಜಕೀಯ ಅಂಶಗಳು ಇವೆ. ಟಿವಿಕೆ ಪಕ್ಷ ಸ್ಥಾಪಿಸಿ ರಾಜಕೀಯರಂಗಕ್ಕೆ ಇಳಿದಿರುವ ವಿಜಯ್ ಈ ಚಿತ್ರವನ್ನು ವೇದಿಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಅವಕಾಶವೇ ಸಿಗದಂತಾಗಿದೆ.

ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ರೀಮೆಕ್ ಇದಾಗಿದ್ದು ಒಂದಷ್ಟು ಬದಲಾವಣೆಗಳ ಜೊತೆಗೆ ತಮಿಳು ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಲಾಗ್ತಿದೆ. ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಿದ್ದು ಪ್ರಕಾಶ್ ರಾಜ್, ಪ್ರಿಯಾಮಣಿ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈಗಾಗಲೇ ಚಿತ್ರದ ಹಾಡುಗಳು, ಟ್ರೈಲರ್ ಬಿಡುಗಡೆ ಆಗಿ ಹಿಟ್ ಆಗಿದೆ. ಸದ್ಯ ರಾಜಕೀಯರಂಗದಲ್ಲಿ ತೊಡಗಿಸಿಕೊಂಡಿರುವ ವಿಜಯ್ ನಟನೆಯ ಕೊನೆಯ ಸಿನಿಮಾ ಇದು ಎನ್ನಲಾಗ್ತಿದೆ.
ಏಪ್ರಿಲ್ 23ರಂದು ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿಯಲಿದೆ. ಅದರ ಬೆನ್ನಲ್ಲೇ 'ಜನ ನಾಯಗನ್' ಸಿನಿಮಾ ಬಿಡುಗಡೆಗೆ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಮೂರ್ನಾಲ್ಕು ತಿಂಗಳಿಂದ ಚುನಾವಣೆ ಗುಂಗಿನಲ್ಲಿ ಮುಳುಗಿದ್ದರು ಒಮ್ಮೆ ರಿಲ್ಯಾಕ್ಸ್ ಆಗಲು ಸಿನಿಮಾ ನೋಡಲು ಬರ್ತಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಏಪ್ರಿಲ್ 24 ಅಥವಾ ಏಪ್ರಿಲ್ 30ರಂದು ಸಿನಿಮಾ ತೆರೆಗೆ ಬರಬಹುದು ಎನ್ನುವ ಊಹಾಪೋಹ ಶುರುವಾಗಿದೆ.

ಚುನಾವಣೆ ಫಲಿತಾಂಶ ನೋಡಿದ ಮೇಲೆ ವಿಜಯ್ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸುತ್ತಾರೋ ಇಲ್ಲವೋ ಎನ್ನುವುದು ನಿರ್ಧಾರವಾಗುತ್ತದೆ. ಟಿವಿಕೆ ಪಕ್ಷ ಹೊಸದಾಗಿ ತಮಿಳುನಾಡಿನಲ್ಲಿ ಹವಾ ಸೃಷ್ಟಿಸಿದೆ. ಆದರೆ ಮೊದಲ ಚುನಾವಣೆಯಲ್ಲೇ ಮ್ಯಾಜಿಕ್ ಮಾಡುವ ಸಾಧ್ಯತೆ ಕಂಡುಬರ್ತಿಲ್ಲ. ವಿಜಯ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಇನ್ನುಳಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. 20ರಿಂದ 30 ಕ್ಷೇತ್ರಗಳಲ್ಲಿ ಟಿವಿಕೆ ಪಕ್ಷ ಗೆಲ್ಲಬಹುದು ಎಂದು ಕೆಲವರು ಅಂದಾಜಿಸುತ್ತಿದ್ದಾರೆ.
'ಜನ ನಾಯಗನ್' ಸಿನಿಮಾ ಬಿಡುಗಡೆ ಆಗದೇ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದೆ. ನೂರಾರು ಕೋಟಿ ಬಂಡವಾಳ ಸುರಿದು ಸಮಸ್ಯೆ ಎದುರಿಸುವಂತಾಗಿದೆ. ಸೆನ್ಸಾರ್ ವಿವಾದ ಬಹುತೇಕ ಬಗೆ ಹರಿದಿದ್ದು ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾತ್ರ ಬಾಕಿ ಎನ್ನುವ ಮಾತುಗಳು ಕೇಳಿಬರ್ತಿದೆ. ಸೆನ್ಸಾರ್ ಮಂಡಳಿ ಅಭ್ಯಂತರ ವ್ಯಕ್ತಪಡಿಸಿದ್ದ ದೃಶ್ಯಗಳನ್ನು ತೆಗೆಯಲು, ಡೈಲಾಗ್‌ಗಳನ್ನು ಮ್ಯೂಟ್ ಮಾಡಲು ಚಿತ್ರತಂಡ ಒಪ್ಪಿದೆ. 350 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ವಿಜಯ್‌ಗೆ 250 ಕೋಟಿ ರೂ. ಸಂಭಾವನೆ ಕೊಟ್ಟಿರುವುದಾಗಿ ಗುಲ್ಲಾಗಿದೆ.
'ಜನ ನಾಯಗನ್' ಮಾತ್ರವಲ್ಲ ಕೆವಿಎನ್ ಸಂಸ್ಥೆ ನಿರ್ಮಾಣದ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಕೂಡ ಪದೇ ಪದೆ ಮುಂದೆ ಹೋಗ್ತಿದೆ. ಇದು ಸಹಜವಾಗಿಯೇ ನಿರ್ಮಾಪಕರಿಗೆ ಹೊರೆಯಾಗುತ್ತಿದೆ. ದಳಪತಿ ಅಭಿಮಾನಿಗಳಂತೂ 'ಜನ ನಾಯಗನ್' ಆರ್ಭಟ ನೋಡಲು ಕಾತರರಾಗಿದ್ದಾರೆ. ಕರ್ನಾಟಕದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾದ ಬಳಿಕ ಸಿನಿಮಾ ಬಿಡುಗಡೆಗೆ ಅಡ್ಡಿ ಎದುರಾಗಿತ್ತು. ಆ ಬಳಿಕ ಎಷ್ಟೇ ಪ್ರಯತ್ನಿಸಿದರೂ ಅವಕಾಶ ಸಿಗಲೇ ಇಲ್ಲ. ಏಪ್ರಿಲ್ ಕೊನೆ ವಾರದಲ್ಲೇ ಧನುಷ್ ನಟನೆಯ 'ಕಾರ' ಎಂಬ ಸಿನಿಮಾ ಕೂಡ ತೆರೆಗೆ ಬರುವ ನಿರೀಕ್ಷೆಯಿದೆ. ಹಾಗಾಗಿ ತಮಿಳು ಸಿನಿರಸಿಕರಿಗೆ ಹಬ್ಬವೇ ಸರಿ.


Click it and Unblock the Notifications











