'ಜನನಾಯಗನ್' ಸಂಪೂರ್ಣ ಸಿನಿಮಾ ಲೀಕ್; ವಿಕಿಪಿಡಿಯ ಪೇಜ್‌ನಲ್ಲಿ ಲಿಂಕ್; ಶೀಘದಲ್ಲೇ ಓಟಿಟಿಗೆ?
ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದ 'ಜನನಾಯಗನ್' ಚಿತ್ರಕ್ಕೆ ಭಾರೀ ಪೆಟ್ಟು ಬಿದ್ದಿದೆ. ಸಿನಿಮಾ ತೆರೆಗೆ ಬರುವ ಮುನ್ನ ಆನ್ಲೈನ್‌ನಲ್ಲಿ ಲೀಕ್ ಆಗಿದೆ. ರಾತ್ರಿ(ಮಾರ್ಚ್ 9) ಚಿತ್ರದ ಕೆಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಬೆಳಗ್ಗೆ ವೇಳೆಗೆ ಸಂಪೂರ್ಣ ಸಿನಿಮಾ ಲೀಕ್ ಆಗಿರುವುದಾಗಿ ಹೇಳಲಾಗ್ತಿದೆ. ಇದರಿಂದ ಚಿತ್ರತಂಡಕ್ಕೆ ಭಾರೀ ನಷ್ಟ ಎದುರಾಗಿದೆ.
ದಳಪತಿ ವಿಜಯ್ ಟಿವಿಕೆ ಪಕ್ಷ ಸ್ಥಾಪಿಸಿ ರಾಜಕೀಯರಂಗಕ್ಕೆ ಧುಮುಕಿದ್ಧಾರೆ. ಈ ಚಿತ್ರವನ್ನು ಅದಕ್ಕೆ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ ಸೆನ್ಸಾರ್ ಸಮಸ್ಯೆಯಿಂದ ಬಿಡುಗಡೆ ಆಗಲಿಲ್ಲ. ತಮಿಳುನಾಡು ಚುನಾವಣೆ ನೀತಿ ಸಂಹಿಂತೆ ಹಿನ್ನೆಲೆಯಲ್ಲಿ ಸದ್ಯ ಸಿನಿಮಾ ತೆರೆಗೆ ತರುವುದು ಕಷ್ಟ. ಏಪ್ರಿಲ್ ಕೊನೆ ವಾರದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತದೆ ಎಂದುಕೊಂಡಿದ್ದವರಿಗೆ ಶಾಕ್ ಆಗಿದೆ.

ಅಂದಾಜು 400 ಕೋಟಿ ರೂ. ಬಜೆಟ್‌ನಲ್ಲಿ 'ಜನನಾಯಗನ್' ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಕೆಲವರು ಪೈರಸಿ ಕಾಪಿ ನೋಡಿ ಸೋಶಿಯಲ್ ಮೀಡಿಯಾದಲ್ಲಿ ರಿವ್ಯೂ ಹಾಕುತ್ತಿದ್ದಾರೆ. ಚಿತ್ರತಂಡ ಮಾತ್ರ ಈ ಬಗ್ಗೆ ಮೌನ ವಹಿಸಿದೆ. ಚಿತ್ರದ ನಿರ್ದೇಶಕ ಹೆಚ್. ವಿನೋದ್ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಪ್ರತಿ ದೃಶ್ಯ ಒಬ್ಬರ ಕನಸು.. ಬಿಡುಗಡೆಗೂ ಮುನ್ನ ಲೀಕ್ ಆಗಿರುವುದು ನೋವಿನ ಸಂಗತಿ.. ದೃಶ್ಯಗಳನ್ನು ಹಂಚಿಕೊಳ್ಳದೇ ಬೆಂಬಲಿಸಿ" ಎಂದು ಬರೆದುಕೊಂಡಿದ್ದಾರೆ.
ಕೆವಿಎನ್ ಸಂಸ್ಥೆ ಮಾತ್ರ 'ಜನನಾಯಗನ್' ಸಿನಿಮಾ ಲೀಕ್ ಆಗಿರುವ ಬಗ್ಗೆ ಇನ್ನು ಪ್ರತಿಕ್ರಿಯಿಸಿಲ್ಲ. ಈಗಾಗಲೇ ಸಿನಿಮಾ ಲೀಕ್ ಆಗಿಬಿಟ್ಟಿದೆ. ಎಲ್ಲರೂ ಪೈರಸಿ ಪ್ರಿಂಟ್ ನೋಡಲು ಆರಂಭಿಸಿದ್ದಾರೆ. ಹೆಚ್ಚಿನ ನಷ್ಟ ಆಗುವ ಮುನ್ನ ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡಿ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ. ಸಿನಿಮಾಗಳು ತೆರೆಗೆ ಬರದೇ ಓಟಿಟಿಯಲ್ಲಿ ಬಿಡುಗಡೆ ಆಗುವುದು ಈಗ ಹೊಸದೇನು ಅಲ್ಲ. ದೊಡ್ಡ ಸಿನಿಮಾಗಳನ್ನೇ ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡಿರುವ ಉದಾಹರಣೆಗಳಿವೆ. ಹಾಗಾಗಿ ಶೀಘ್ರದಲ್ಲೇ ಚಿತ್ರವನ್ನು ಓಟಿಟಿಗೆ ತರುವ ನಿರ್ಧಾರ ಕೈಗೊಳ್ಳುತ್ತಾ ಚಿತ್ರತಂಡ. ಅದಕ್ಕೂ ಚುನಾವಣೆ ನೀತಿ ಸಂಹಿತೆ ಬಿಸಿ ತಟ್ಟುತ್ತಾ ಕಾದು ನೋಡಬೇಕಿದೆ.
ಕೆಲ ವರ್ಷಗಳ ಹಿಂದೆ ಪವನ್ ಕಲ್ಯಾಣ್ ನಟನೆಯ 'ಅತ್ತಾರಿಂಟಿಕಿ ದಾರೇದಿ' ಚಿತ್ರಕ್ಕೂ ಇಂಥದ್ದೇ ಸಮಸ್ಯೆ ಎದುರಾಗಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಅರ್ಧ ಸಿನಿಮಾ ಆನ್ಲೈನ್‌ನಲ್ಲಿ ಲೀಕ್ ಆಗಿದೆ. ಕೂಡಲೇ ಸಿನಿಮಾ ಬಿಡುಗಡೆ ಆಗಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಪ್ರೇಕ್ಷಕರ ಚಿತ್ರಮಂದಿರದಲ್ಲೇ ಸಿನಿಮಾ ನೋಡಿ ದೊಡ್ಡಮಟ್ಟದಲ್ಲಿ ಗೆಲ್ಲಿಸಿದ್ದರು. ಅದೇ ರೀತಿ 'ಜನನಾಯಗನ್' ಸಿನಿಮಾ ಕೂಡ ದಾಖಲೆ ಬರೆಯುತ್ತಾ ಕಾದು ನೋಡಬೇಕಿದೆ.
ಚುನಾವಣೆ ಪ್ರಚಾರಕ್ಕಾಗಿ ಟಿವಿಕೆ ಪಕ್ಷದವರೇ 'ಜನನಾಯಗನ್' ಸಿನಿಮಾ ಲೀಕ್ ಮಾಡಿಬಿಟ್ರಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನು 'ಜನನಾಯಗನ್' ಚಿತ್ರದ ವಿಕಿಪಿಡಿಯ ಪೇಜ್‌ನಲ್ಲಿ ಆನ್ಲೈನ್ ಲೀಕ್ ವೀಡಿಯೋ ಲಿಂಕ್ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ರೀಮೆಕ್ ಇದು. ಬಾಲಕೃಷ್ಣ ಹಾಗೂ ಶ್ರೀಲೀಲಾ ಮಾಡಿದ್ದ ಪಾತ್ರಗಳನ್ನು ವಿಜಯ್ ಹಾಗೂ ಮಮಿತಾ ಬೈಜು ನಿಭಾಯಿಸಿದ್ದಾರೆ.
'ಭಗವಂತ್ ಕೇಸರಿ' ಚಿತ್ರದ ಕಥೆ ಆಧರಿಸಿ ತಮಿಳು ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ಭ್ರಷ್ಟ ಸರ್ಕಾರ ಹಾಗೂ ರಾಜಕಾರಣಿಗಳ ವಿರುದ್ಧ ನಾಯಕನ ಹೋರಾಟದಂತಹ ಸನ್ನಿವೇಶಗಳು ಚಿತ್ರದಲ್ಲಿದೆ. ವಿಜಯ್ ತಮ್ಮ ಪೊಲಿಟಿಕಲ್ ಎಂಟ್ರಿಗಾಗಿ ಇದನ್ನು ಬಳಸಿಕೊಳ್ಳಲು ಮನಸ್ಸು ಮಾಡಿದ್ದರು. ಆದರೆ ತಮಗೆ ಆಗದವರು ಸಿನಿಮಾ ಬಿಡುಗಡೆ ಮಾಡದಂತೆ ತಡೆದರು ಎಂದು ವಿಜಯ್ ಆಕ್ರೋಶ ವ್ಯಕ್ತಪಡಿಸಿದ್ದರು.


Click it and Unblock the Notifications











