ಇನ್‌ಸ್ಟಾಗ್ರಾಮ್‌ನಲ್ಲಿ ದಾಖಲೆ ಬರೆದ ವಿಜಯ್; ದಕ್ಷಿಣ ಭಾರತದಲ್ಲಿ ಇದೇ ಮೊದಲು!
ತಮಿಳು ನಟ ದಳಪತಿ ವಿಜಯ್ ರಾಜಕೀಯರಂಗಕ್ಕೆ ಧುಮುಕಿದ್ದಾರೆ. ತಮ್ಮದೇ ಸ್ವಂತ ಪಕ್ಷ ಸ್ಥಾಪಿಸಿ ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಬೃಹತ್ ಸಮಾವೇಶಗಳನ್ನು ನಡೆಸಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಮಧುರೆಯಲ್ಲಿ ನಡೆದ ಟಿವಿಕೆ ಪಕ್ಷದ ಸಮಾವೇಶಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು.
ಲಕ್ಷಾಂತರ ಜನ ಮಧುರೈ ಸಮಾವೇಶದಲ್ಲಿ ಭಾಗಿ ಆಗಿದ್ದರು. ತಮಿಳುನಾಡಿನ ಮುಂದಿನ ಸಿಎಂ ನಮ್ಮ ವಿಜಯ್ ಎಂದು ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಲಕ್ಷಾಂತರ ಜನ ಏಳೆಂಟು ಗಂಟೆಗಳ ಕಾಲ ಸಮಾವೇಶದಲ್ಲಿ ನೆರೆದಿದ್ದರು. ವಿಜಯ್ ಭಾಷಣ ಕೇಳಿ ಸಂಭ್ರಮಿಸಿದರು. ನಮ್ಮ ಪಕ್ಷದ ಎದುರಾಳಿ ಡಿಎಂಕೆ ಪಕ್ಷ ಮಾತ್ರ ಎಂದು ವಿಜಯ್ ಸಾರಿ ಹೇಳಿದ್ದಾರೆ. ಥೇಟ್ ಸಿನಿಮಾ ಶೈಲಿಯಲ್ಲಿ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿದ್ದರು.

ಇನ್ನು ವಿಜಯ್ ವೇದಿಕೆ ಮುಂಭಾಗದಲ್ಲಿ ನಿಂತು ಅಭಿಮಾನಿಗಳ ಜೊತೆ ಒಂದು ಸೆಲ್ಫಿ ವೀಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಕೇವಲ 27 ಗಂಟೆಗಳಲ್ಲಿ ಆ ವೀಡಿಯೋಗೆ 10 ಮಿಲಿಯನ್ ಅಂದರೆ 1 ಕೋಟಿ ಲೈಕ್ಸ್ ಸಿಕ್ಕಿದೆ. ದಕ್ಷಿಣ ಭಾರತದಲ್ಲಿ ನಟನೊಬ್ಬನ ವೀಡಿಯೋಗೆ ಇಷ್ಟು ಬೇಗ 1 ಕೋಟಿ ಲೈಕ್ಸ್ ಸಿಕ್ಕಿರುವುದು ಇದೇ ಮೊದಲು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 20 ಸೆಕೆಂಡ್‌ಗಳ ವೀಡಿಯೋ 9.4 ಕೋಟಿ ವೀವ್ಸ್ ಗಳಿಸಿದೆ.
ಸೆಲ್ಫಿ ವೀಡಿಯೋ ವೈರಲ್ ಆಗಿರುವ ಪರಿ ನೋಡಿದರೆ ನಟ ವಿಜಯ್ ಕ್ರೇಜ್ ಹೇಗಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ದಕ್ಷಿಣದಲ್ಲಿ ಸ್ಟಾರ್ ನಟನೊಬ್ಬನ ಪೋಸ್ಟ್ 1 ಕೋಟಿ ಲೈಕ್ಸ್ ಪಡೆದಿರುವುದ ಇದೇ ಮೊದಲು ಎಂದು ಕೆಲವರು ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ವಿಜಯ್ 'ಜನನಾಯಗನ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ಪೋಸ್ಟರ್‌ನಲ್ಲಿ ಕೂಡ ಹೀಗೆ ವಿಜಯ್ ಜನರ ನಡುವೆ ಸೆಲ್ಫಿ ಹಿಡಿಯುವ ಫೋಟೊ ನೋಡಬಹುದು.
ತಮಿಳು ಚಿತ್ರರಂಗದಲ್ಲಿ ರಜನಿಕಾಂತ್ ಬಿಟ್ಟರೆ ಬಹು ಜನಪ್ರಿಯ ನಟ ವಿಜಯ್ ಆಗಿದ್ದಾರೆ. ಅವರ ಸಿನಿಮಾಗಳು ಬರೀ ತಮಿಳಿನಲ್ಲೇ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುತ್ತವೆ. ಚಿತ್ರವೊಂದಕ್ಕೆ 200 ಕೋಟಿ ರೂ. ಸಂಭಾವನೆ ವಿಜಯ್ ಪಡೆಯುತ್ತಾರೆ. ಆದರೂ ಅದನ್ನೆಲ್ಲಾ ಬಿಟ್ಟು ಜನಸೇವೆ ಮಾಡಲು ಮುಂದಾಗಿದ್ದಾರೆ. ಜನ ನನಗೆ ಹೆಸರು, ಜನಪ್ರಿಯತೆ ಕೊಟ್ಟಿದ್ದಾರೆ. ಮರಳಿ ಅವರಿಗೆ ಏನಾದರೂ ಕೊಡಬೇಕು, ಅದಕ್ಕೆ ರಾಜಕೀಯವೇ ಮಾರ್ಗ ಎಂದಿದ್ದಾರೆ.
ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷವನ್ನು ವಿಜಯ್ ಸ್ಥಾಪಿಸಿದ್ದಾರೆ. ಇದು ಪಕ್ಷದಿಂದ 2ನೇ ಬೃಹತ್ ಸಮಾವೇಶ. ಮುಂದಿನ ದಿನಗಳಲ್ಲಿ ಪಾದಯಾತ್ರೆಗೆ ಕೂಡ ವಿಜಯ್ ಮನಸ್ಸು ಮಾಡಿದ್ದಾರೆ. ಚುನಾವಣೆಯಲ್ಲಿ ಎಲ್ಲಾ 234 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ವಿಜಯ್ ಹೇಳಿದ್ದಾರೆ. ಎಲ್ಲರೂ ನನ್ನ ಮುಖ ನೋಡಿ ಮತ ಹಾಕಿ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದರೆ ನನ್ನನ್ನು ಗೆಲ್ಲಿಸಿದಂತೆ ಎಂದಿದ್ದಾರೆ.
ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಮುಂದೆ ಸಿನಿಮಾಗಳಲ್ಲಿ ನಟಿಸಬೇಕೋ ಬೇಡವೋ ಎಂದು ನಿರ್ಧರಿಸುವುದಾಗಿ ವಿಜಯ್ ಆಪ್ತರಲ್ಲಿ ಹೇಳಿಕೊಂಡಿದ್ದಾರಂತೆ. ವಿಜಯ್ ನಟನೆಯ 'ಜನನಾಯಗನ್' ಸಂಕ್ರಾಂತಿಗೆ ಬರಲಿದೆ. ವಿನೋದ್ ನಿರ್ದೇಶನದ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಹಣ ಹೂಡುತ್ತಿದೆ. ಚಿತ್ರಕ್ಕಾಗಿ ವಿಜಯ್ 250 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











