ಶಾಶ್ವತ ಮನೆ, ಕಾರು, ಬೈಕ್ ; ವಿಜಯ್ ಭರವಸೆ- ರಾಜಕೀಯ ರಣಕಹಳೆ, ವಿರೋಧಿಗಳ ವಿರುದ್ದ ಗುಡುಗಿದ ದಳಪತಿ
ತಮಿಳುನಾಡಿನ ದಳಪತಿ ವಿಜಯ್ ಈಗ ಪೂರ್ಣ ಪ್ರಮಾಣದ ರಾಜಕೀಯ ನಾಯಕ. ಸಿನಿಮಾ ರಂಗದಿಂದ ರಾಜಕೀಯ ರಂಗಕ್ಕೆ ಪ್ರವೇಶಿಸಿರುವ ಅವರು ಈಗ ಕೇವಲ ನಟನಾಗಿ ಉಳಿದಿಲ್ಲ. ತಮ್ಮದೇ ಆದ 'ತಮಿಳಗ ವೆಟ್ರಿ ಕಳಗಂ (ಟಿವಿಕೆ)' ಪಕ್ಷದ ಮೂಲಕ ವಿಜಯ್ ರಾಜಕೀಯದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದಾರೆ. ಆದರೆ ಎಲ್ಲರಿಗೆ ಗೊತ್ತಿರುವಂತೆ ಇತ್ತೀಚೆಗೆ ಕರೂರು ಕ್ಷೇತ್ರದಲ್ಲಿ ನಡೆದ ಕಾಲ್ತುಳಿತದ ಘಟನೆ..
ರಾಜಕೀಯ ವಲಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಈ ದುರಂತದಲ್ಲಿ ಸುಮಾರು 41 ಜನ ಉಸಿರು ಚೆಲ್ಲಿದ್ದರು. ಈ ಅವಘಡ ವಿಜಯ್ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ವಿಪರೀತ ಒತ್ತಡವನ್ನು ತಂದಿತ್ತು. ಆದರೆ ಈಗ ವಿಜಯ್ ಮತ್ತೆ ಮೈಕೊಡವಿ ಎದ್ದು ನಿಂತಿದ್ದಾರೆ. ಕಾಲ್ತುಳಿತ ಪ್ರಕರಣದ ನಂತರ ಮತ್ತೆ ಪ್ರಚಾರದ ಕಣಕ್ಕೆ ಧುಮುಕಿದ್ದಾರೆ.

ವಿಜಯ್ ಅವರ ಈ 'ಗ್ರ್ಯಾಂಡ್ ಎಂಟ್ರಿ' ಪಕ್ಷದ ಕಾರ್ಯಕರ್ತರು ಮತ್ತು ಲಕ್ಷಾಂತರ ಅಭಿಮಾನಿಗಳಲ್ಲಿ ಹುಮ್ಮಸ್ಸು ತುಂಬಿದೆ. ಈ ಸಭೆಯಲ್ಲಿ ವಿಜಯ್ ತಮ್ಮ 'ಟಿವಿಕೆ' ಪಕ್ಷದ ಪ್ರಣಾಳಿಕೆಯ ಬಗ್ಗೆ ಮಹತ್ವದ ಭಾಷಣ ಮಾಡಿದ್ದಾರೆ. ದಳಪತಿಯ ಮುಂದಿನ ನಡೆ ಈಗ ಇಡೀ ದೇಶದ ಗಮನ ಸೆಳೆದಿದೆ.
ಕರೂರು ವಿವಾದದ ಬಳಿಕ ವಿಜಯ್ ಮಾಸ್ಟರ್ ಪ್ಲಾನ್...
ಕರೂರು ಘಟನೆಯು ವಿಜಯ್ ಅವರ ರಾಜಕೀಯ ಪ್ರಯಾಣದಲ್ಲಿ ಕಪ್ಪುಚುಕ್ಕೆ. ಘಟನೆಯ ನಂತರ ವಿಜಯ್ ಅವರು ಮೌನ ಮುರಿದು ಸಾರ್ವಜನಿಕವಾಗಿ ಮಾತನಾಡಲು ನಿರ್ಧರಿಸಿದರು. ಇದರಿಂದ ಇವರ ರಾಜಕೀಯ ವಿರೋಧಿಗಳ ಲೆಕ್ಕಾಚಾರವನ್ನು ತಲೆಕೆಳಗಾಸಿತ್ತು.
ಇಂತಿಪ್ಪ ವಿಜಯ್ ಇದೀಗ ಕರಾಳ ಘಟನೆಗಳನ್ನು ಮರೆತು ಎರಡು ತಿಂಗಳ ನಂತರ ಜನರ ಮುಂದೆ ಮತ್ತೆ ಬಂದಿದ್ಧಾರೆ. ತಮ್ಮ ನಾಯಕತ್ವದಲ್ಲಿ ತಮಿಳುನಾಡಿನ ಚಿತ್ರಣ ಬದಲಿಸುವ ವಿಶ್ವಾಸದ ಮಾತುಗಳನ್ನಾಡಿದ್ಧಾರೆ. ವಿಜಯ್ ಅವರ ಈ ನಡೆ-ನುಡಿ ಕಂಡು ಅಭಿಮಾನಿಗಳು 'ದಳಪತಿ ಕಮ್ ಬ್ಯಾಕ್' ಎಂದೇ ಬಣ್ಣಿಸುತ್ತಿದ್ದಾರೆ.
'ಟಿವಿಕೆ' ಪ್ರಣಾಳಿಕೆಯಲ್ಲಿ ವಿಜಯ್ ಫೋಕಸ್ ಏನು?
ಸಾರ್ವಜನಿಕ ಸಭೆಯಲ್ಲಿ ದಳಪತಿ ವಿಜಯ್ ತಮ್ಮ 'ಟಿವಿಕೆ' ಪಕ್ಷದ ಪ್ರಣಾಳಿಕೆಯನ್ನು ಜನರ ಮುಂದಿಟ್ಟರು. ಪ್ರಣಾಳಿಕೆಯಲ್ಲಿ ಯುವಕರ ಭವಿಷ್ಯ ಮತ್ತು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಉಚಿತ ಡಿಜಿಟಲ್ ಶಿಕ್ಷಣ ನೀಡುವುದಾಗಿ ವಿಜಯ್ ಭರವಸೆ ನೀಡಿದ್ದಾರೆ.

ಇಷ್ಟೇ ಅಲ್ಲ ಕಾಂಚಿಪುರ ಜಿಲ್ಲೆಯ ಸುಂಗುವರ್ಚತ್ರಂನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಟಿವಿಕೆ ಮುಖ್ಯಸ್ಥ, ನಟ ವಿಜಯ್, ಯುವಕರಿಗೆ ಉದ್ಯೋಗ ಸೃಷ್ಟಿಸಲು ವಿಶೇಷ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದ್ದಾರೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರು ಶಾಶ್ವತ ಮನೆ, ಕಾರು, ಮೋಟಾರ್ ಸೈಕಲ್ ಹೊಂದಬೇಕು, ಅದೇ ನನ್ನ ಗುರಿ ನನ್ನ ಕನಸು ಎಂದು ಹೇಳಿದ್ದಾರೆ.
ಪ್ರತಿಯೊಬ್ಬರು ಪದವಿವರೆಗೂ ಕನಿಷ್ಠ ಶಿಕ್ಷಣ ಪಡೆಯಬೇಕು ಎಂದೂ ಹೇಳಿರುವ ವಿಜಯ್ ಇದೇ ವೇಳೆ ರೈತರ ಪರವಾಗಿ ತಾವು ಇರುವುದಾಗಿ ಅವರು ಹೇಳಿದ್ದಾರೆ. ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ವಿಜಯ್, ವಂಶಪಾರಂಪರ್ಯ ರಾಜಕಾರಣಕ್ಕೆ ಹಾಗೂ ಲೂಟಿ ಹೊಡೆಯುವುದನ್ನು ಗುರಿಯಾಗಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ನಮ್ಮ ಆಡಳಿತದ ಮುಖ್ಯ ಗುರಿ ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತ ನೀಡುವುದಾಗಿದೆ ಎಂದು ಘೋಷಿಸಿರುವ ದಳಪತಿ, ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣವೇ ನಮ್ಮ ಪ್ರಮುಖ ಆದ್ಯತೆ ಎಂದು ಅವರು ಒತ್ತಿ ಹೇಳಿದ್ದಾರೆ. ಇದು ತಮಿಳುನಾಡಿನ ರಾಜಕೀಯ ಚಿತ್ರಣವನ್ನೇ ಬದಲಿಸಲಿದೆ ಎನ್ನಲಾಗುತ್ತಿದೆ.
ಅಭಿಮಾನಿಗಳಲ್ಲಿ ತುಂಬಿದ ಹೊಸ ಹುಮ್ಮಸ್ಸು...
ದಳಪತಿ ವಿಜಯ್ ರಾಜಕೀಯಕ್ಕೆ ಬಂದಿರುವುದು ಅವರ ಅಭಿಮಾನಿಗಳಿಗೆ ದೊಡ್ಡ ಹಬ್ಬ. ಕರೂರು ಘಟನೆಯ ಹೊರತಾಗಿಯೂ ವಿಜಯ್ ಅವರನ್ನು ನೋಡಲು ಸಾವಿರಾರು ಜನರು ಸಭೆಗೆ ಬಂದಿದ್ದರು. ವಿಜಯ್ ವೇದಿಕೆಗೆ ಬರುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಸಿನಿಮಾ ಪರದೆಯ ಮೇಲಿನ ತಮ್ಮ ಹೀರೋ ನಿಜ ಜೀವನದಲ್ಲಿಯೂ ಬದಲಾವಣೆ ತರಲಿದ್ದಾರೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ. ವಿಜಯ್ ಅವರ ಭಾಷಣದ ಪ್ರತಿ ಮಾತು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ಸಿನಿಮಾ ಟು ರಾಜಕೀಯ: ವಿಜಯ್ ಸವಾಲುಗಳು
ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಆಗಿದ್ದರೂ ರಾಜಕೀಯದ ದಾರಿ ಅಷ್ಟು ಸುಲಭವಲ್ಲ. ವಿರೋಧ ಪಕ್ಷಗಳು ವಿಜಯ್ ಅವರ ಪ್ರತಿ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಆದರೆ ವಿಜಯ್ ಅವರು ತಮ್ಮ ಮೊದಲ ಸಾರ್ವಜನಿಕ ಸಭೆಯಲ್ಲಿಯೇ ಯಾವುದೇ ಆತಂಕವಿಲ್ಲದೆ ಮಾತನಾಡಿರುವುದು ಅವರು ಈ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ರಾಜಕೀಯಕ್ಕೆ ಬಂದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಹೊರಟಿರುವ ವಿಜಯ್ ಅವರ ದಿಟ್ಟತನಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.


Click it and Unblock the Notifications











