Leo Karnataka: ಒಂದೂವರೆ ಸಾವಿರಕ್ಕೆ ಮಾರಾಟವಾಗಿತ್ತು ಟಿಕೆಟ್: 11 ದಿನಕ್ಕೆ 'ಲಿಯೋ' ಕರ್ನಾಟಕ ಗಳಿಕೆ ಎಷ್ಟು?
ಮಿಶ್ರ ಪ್ರತಿಕ್ರಿಯೆ ನಡುವೆಯೂ ತಮಿಳಿನ 'ಲಿಯೋ' ಸಿನಿಮಾ ಕರ್ನಾಟಕದಲ್ಲಿ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. ಕರ್ನಾಟಕದಲ್ಲಿ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಅಡ್ವಾನ್ಸ್ ಬುಕ್ಕಿಂಗ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿ ಸಿನಿಮಾ ಸಂಚಲನ ಸೃಷ್ಟಿಸಿತ್ತು.
ಕೆಲವರು 'ಲಿಯೋ' ಕಲೆಕ್ಷನ್ ರಿಪೋರ್ಟ್ ಫೇಕ್ ಎನ್ನುತ್ತಿದ್ದಾರೆ. ಆದರೆ ಚಿತ್ರತಂಡವೇ ಸಿನಿಮಾ ಕಲೆಕ್ಷನ್ ಮಾಹಿತಿ ಕೊಡುತ್ತಿರುವುದರಿಂದ ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಎರಡನೇ ವಾರವೂ 'ಲಿಯೋ' ಸಿನಿಮಾ ಕರ್ನಾಟಕದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಕ್ಟೋಬರ್ 11ಕ್ಕೆ ದಸರಾ ಸಂಭ್ರಮದಲ್ಲಿ ರಿಲೀಸ್ ಆಗಿದ್ದ ಚಿತ್ರಕ್ಕೆ ಲಾಂಗ್ ವೀಕೆಂಡ್ ಪ್ಲಸ್ ಆಗಿತ್ತು.

ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಲಿಯೋ' ವಿಜಯ್ ಅಭಿಮಾನಿಗಳ ಮನಗೆದ್ದಿತ್ತು. ಫಸ್ಟ್ ಹಾಫ್ ಸೂಪರ್ ಎಂದಿದ್ದ ಕೆಲವರು ಸೆಕೆಂಡ್ ಹಾಫ್ ಚೆನ್ನಾಗಿಲ್ಲ ಎಂದುಬಿಟ್ಟರು. ಲೋಕೇಶ್ ಸಿನಿಮಾಗಳಲ್ಲೇ 'ಲಿಯೋ' ಕೆಟ್ಟ ಸಿನಿಮಾ ಎನ್ನುವ ಮಾತುಗಳು ಕೇಳಿಬಂದವು. ಆದರೂ ಕೂಡ ಪ್ರೇಕ್ಷಕರು ಹಬ್ಬದ ಸಂಭ್ರಮದಲ್ಲಿ ಸಿನಿಮಾ ನೋಡಲು ಮುಗಿಬಿದ್ದರು. ಬೆಂಗಳೂರಿನಲ್ಲಿ 'ಲಿಯೋ' ಟಿಕೆಟ್ 1000 ರೂ, 1000 ರೂ.ಗೂ ಮಾರಾಟವಾಗಿತ್ತು.
ಅಕ್ಟೋಬರ್ 19ರಂದು 'ಲಿಯೋ' ಅರ್ಲಿ ಮಾರ್ನಿಂಗ್ ಶೋಗಳಿಗೆ ಬೆಂಗಳೂರಿನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಎಲ್ಲರಿಗಿಂತ ಮೊದಲು ಸಿನಿಮಾ ನೋಡಬೇಕು ಎಂದು ಕೆಲವರು ಮುಗಿಬಿದ್ದರು. ಪರಿಣಾಮ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲೂ ಟಿಕೆಟ್ ದರ 1000 ರೂ. ತಲುಪಿತ್ತು. ಆದರೂ 5 ಪಟ್ಟು ಹೆಚ್ಚು ಹಣ ಕೊಟ್ಟು ಟಿಕೆಟ್ ಖರೀದಿಸಿ ಸಿನಿಮಾ ನೋಡಿದವರು ಇದ್ದಾರೆ. 'ಜೈಲರ್', '2.0' ಬಳಿಕ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾ ಎನ್ನುವ ಹೆಗ್ಗಳಿಕೆ 'ಲಿಯೋ' ಪಾಲಾಗಿದೆ.
ಕರ್ನಾಟಕದಲ್ಲಿ 'ಲಿಯೋ' ಸಿನಿಮಾ 11 ದಿನಕ್ಕೆ 35 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಅಂದಾಜಿಸಿದ್ದಾರೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಪ್ರೇಕ್ಷಕರು ಸಿನಿಮಾ ನೋಡುತ್ತಿದ್ದಾರೆ. ಶಿವಣ್ಣ ನಟನೆಯ 'ಘೋಸ್ಟ್' ಸಿನಿಮಾ ಪೈಪೋಟಿ ಮಧ್ಯೆಯೂ 'ಲಿಯೋ' ಆರ್ಭಟ ಮುಂದುವರೆದಿದೆ. ವಾರದ ದಿನಗಳಲ್ಲಿ ಕಲೆಕ್ಷನ್ ಡಲ್ ಆದರೂ ವೀಕೆಂಡ್‌ನಲ್ಲಿ ಚೆನ್ನಾಗಿದೆ. ಕನ್ನಡದ ದೊಡ್ಡ ಸಿನಿಮಾಗಳು ರಿಲೀಸ್ ಆಗದೇ ಇರುವುದು 'ಲಿಯೋ'ಗೆ ವರದಾನವಾಗುತ್ತಿದೆ. ದೀಪಾವಳಿ ವೇಳೆಗೆ ಯಾವುದೇ ದೊಡ್ಡ ಸಿನಿಮಾ ಬರ್ತಿಲ್ಲ. ಹಾಗಾಗಿ 'ಘೋಸ್ಟ್' ಹಾಗೂ 'ಲಿಯೋ' ಸಿನಿಮಾಗಳೇ ಥಿಯೇಟರ್‌ಗಳಲ್ಲಿ ಮುಂದುವರೆಯುವ ಸಾಧ್ಯತೆಯಿದೆ.
ಲೋಕೇಶ್ ಕನಕರಾಜ್ ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ 3 ಸಿನಿಮಾಗಳ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. 'ಕೈದಿ' ಬಳಿಕ 'ವಿಕ್ರಂ' ಸಿನಿಮಾ ಬಂದಿತ್ತು. ಈ ಎರಡ ಕತೆಗಳಿಗೆ ಸಣ್ಣ ಲಿಂಕ್ ಇತ್ತು. ಈಗ ಬಂದಿರುವ 'ಲಿಯೋ' ಇನ್ನುಳಿದ 2 ಚಿತ್ರಗಳಿಗೂ ಕನೆಕ್ಟ್ ಮಾಡಿದ್ದಾರೆ. ಹಾಗಾಗಿ LCUಯಲ್ಲಿ ಬರುವ ಮುಂದಿನ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಮೂಡಿದೆ.
ಕರ್ನಾಟಕ ಮಾತ್ರವಲ್ಲ ಕೇರಳ ಹಾಗೂ ಆಂಧ್ರ, ತೆಲಂಗಾಣದಲ್ಲಿ 'ಲಿಯೋ' ಸಿನಿಮಾ ಅಬ್ಬರ ಜೋರಾಗಿದೆ. ಓವರ್‌ಸೀಸ್ ಮಾರ್ಕೆಟ್‌ನಲ್ಲೂ ದಳಪತಿ ಸಿನಿಮಾ ಆರ್ಭಟ ಮುಂದುವರೆದಿದೆ. ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ಕಲೆಕ್ಷನ್ ಡಲ್ಲಾಗಿದೆ. ಇನ್ನು ಬೆಂಗಳೂರಿನಲ್ಲಿ ಸಿನಿಮಾ 11 ದಿನಕ್ಕೆ ಬರೋಬ್ಬರಿ 7092 ಶೋಗಳಲ್ಲಿ ಪ್ರದರ್ಶನ ಕಂಡು ದಾಖಲೆ ಬರೆದಿದೆ. ತ್ರಿಷಾ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದು ಅರ್ಜುನ್ ಸರ್ಜಾ, ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ.
ಮೊದಲ ವಾರವೇ 'ಲಿಯೋ' ಸಿನಿಮಾ 416 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿತ್ತು. ಸೆವೆನ್ ಸ್ಕ್ರೀನ್ ಸ್ಟುಡಿಯೋ ಸಂಸ್ಥೆ ಚಿತ್ರವನ್ನು ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿತ್ತು. ಇನ್ನು 'ಲಿಯೋ' ಸಿನಿಮಾ ಬಿಡುಗಡೆಯಾದ 5 ದಿನಕ್ಕೆ ದಳಪತಿ ವಿಜಯ್ ಹೊಸ ಸಿನಿಮಾ ಆರಂಭಿಸಿದ್ದಾರೆ. ವೆಂಕಟ್ ಪ್ರಭು ನಿರ್ದೇಶನದಲ್ಲಿ ಮುಂದೆ ವಿಜಯ್ ನಟಿಸಲಿದ್ದಾರೆ.


Click it and Unblock the Notifications











