Vijay's Leo: ಕರ್ನಾಟಕದಲ್ಲಿ ತಮಿಳು ಸಿನಿಮಾಗಳಿಗೆ ವಿರೋಧದ ಬೆನ್ನಲ್ಲೇ, 'ಲಿಯೋ' ಟ್ರೈಲರ್ ಬಿಡುಗಡೆಗೆ ಡೇಟ್ ಫಿಕ್ಸ್!
ಕರ್ನಾಟಕ- ತಮಿಳುನಾಡು ನಡುವಿನ ಕಾವೇರಿ ನದಿ ನೀರು ವಿವಾದ ಈಗ ಎರಡು ಚಿತ್ರರಂಗಗಳ ಮೇಲೆ ಗಂಭೀರ ಪರಿಣಾಮ ಬೀರುವಂತೆ ಮಾಡುತ್ತಿದೆ. ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರದ ವಿರುದ್ಧ ಕನ್ನಡಪರ ಸಂಘಟನೆಗಳು, ರೈತ ಸಂಘಗಳು, ಚಿತ್ರರಂಗ ಸೇರಿದಂತೆ ಕರ್ನಾಟಕದ ಜನತೆ ಸಿಡಿದಿದ್ದಾರೆ.
ಇದರ ಬೆನ್ನಲ್ಲೇ ತಮಿಳು ಸಿನಿಮಾಗಳಿಗೆ ವಿರೋಧ ಕೂಡ ವ್ಯಕ್ತವಾಗಿದೆ. ನಟ ದರ್ಶನ್ ಕಾವೇರಿ ಹೋರಾಟದಲ್ಲಿ ಚಿತ್ರರಂಗವನ್ನು ಕರೆಯುವವರು ತಮಿಳು ಚಿತ್ರಗಳಿಗೆ ಕೋಟಿ ಕೋಟಿ ಕಲೆಕ್ಷನ್ ಆಗುವಂತೆ ಮಾಡುತ್ತಿದ್ದಿರಿ ಅವರನ್ನೂ ಹೋರಾಟಕ್ಕೆ ಕರೆಯಿರಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ನಟ ಸಿದ್ಧಾರ್ಥ್ ಅವರ ಹೊಸ ಸಿನಿಮಾ 'ಚಿತ್ತ' ಸುದ್ದಿಗೋಷ್ಠಿಯನ್ನು ಕನ್ನಡಪರ ಸಂಘಟನೆಗಳು ಅರ್ಧಕ್ಕೆ ನಿಲ್ಲಿಸಿದ್ದವು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ದಳಪತಿ ವಿಜಯ್ ಅಭಿನಯದ 'ಲಿಯೋ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

'ಲಿಯೋ' ಟ್ರೇಲರ್ ಬಿಡುಗಡೆಗೆ ಸಜ್ಜು
ದಳಪತಿ ವಿಜಯ್ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿದ್ದ ಸುದ್ದಿ ಹೊರಬಿದ್ದಿದ್ದು, ನಟ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ 'ಲಿಯೋ' ಟ್ರೇಲರ್ ಅಕ್ಟೋಬರ್ 5 ರಂದು ಅನಾವರಣಗೊಳ್ಳಲಿದೆ. ಲಿಯೋ ಚಿತ್ರ ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಿಗೆ ಬರಲಿದೆ. ಆದರೆ, ಕರ್ನಾಟಕದಲ್ಲಿ ಸಿನಿಮಾಕ್ಕೆ ಬೆಂಬಲ ನೀಡುತ್ತಿಲ್ಲ. ಈಗಾಗಲೇ ಲಿಯೋ ಬ್ಯಾನ್ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.
ಇನ್ನು, ನಟ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಧೂಳಿಪಟ ಮಾಡಿತ್ತು. ಕರ್ನಾಟಕದಲ್ಲಿಯೂ ಭಾರಿ ಯಶಸ್ಸು ಪಡೆದಿದ್ದ ಸಿನಿಮಾ ಬಗ್ಗೆ ನಟ ದರ್ಶನ್ ತೂಗುದೀಪ ಕಿಡಿಕಾರಿದ್ದರು. ಕಾವೇರಿ ಹೋರಾಟದ ವಿಷಯದಲ್ಲಿ ಮಾತ್ರ ಕನ್ನಡ ನಟರನ್ನು ನೆನಪಿಸಿಕೊಳ್ಳುವವರು ತಮಿಳು ಸಿನಿಮಾಗಳಿಗೆ ಅಷ್ಟೊಂದು ಬೆಂಬಲ ನೀಡುತ್ತಿರಿ, ಅವರನ್ನೇ ಹೋರಾಟಕ್ಕೂ ಏಕೆ ಕರೆಯಬಾರದು ಎಂದು ಜನರನ್ನೇ ಪ್ರಶ್ನಿಸಿದ್ದರು. ಹೀಗಾಗಿ ವಿಜಯ್ ಅವರ ಲಿಯೋ ಸಿನಿಮಾಕ್ಕೆ ರಾಜ್ಯದಲ್ಲಿ ಅದ್ಧೂರಿ ಸ್ವಾಗತವಂತೂ ಸಿಗುವುದಿಲ್ಲ. ಕಾವೇರಿ ನಮ್ಮದು ಹೋರಾಟ ಮತ್ತೆ ತೀವ್ರತೆ ಪಡೆಯುವ ಸಾಧ್ಯತೆಯಿದೆ.
ಅಕ್ಟೋಬರ್ 5 ಕ್ಕೆ ಲಿಯೋ ಟ್ರೈಲರ್ ಬಿಡುಗಡೆ
ಈ ವಿವಾದಗಳ ನಡುವೆ ಬಹುನಿರೀಕ್ಷಿತ ಲಿಯೋ ಸಿನಿಮಾ ಟ್ರೈಲರ್ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಈ ವಿಷಯವನ್ನು ಚಿತ್ರತಂಡ ತಮ್ಮ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ನಿಮ್ಮ ಆರ್ಡರ್ ತಯಾರಾಗುತ್ತಿದೆ ಲಿಯೋ ಟ್ರೇಲರ್ ದಾರಿಯಲ್ಲಿದೆ..! ನಿಮ್ಮ ಊಟವನ್ನು ಆನಂದಿಸಲು ಸಿದ್ಧರಾಗಿ. 7 ಸ್ಕ್ರೀನ್ ಸ್ಟುಡಿಯೋ ಈ ಅಕ್ಟೋಬರ್ 5 ರಂದು ಇದನ್ನು ನಿಮಗೆ ತಲುಪಿಸುತ್ತದೆ" ಎಂದು ಟ್ವೀಟ್ ಮಾಡಲಾಗಿದೆ.

ದಳಪತಿ ವಿಜಯ್ ಅಭಿನಯದ ಲಿಯೋ
'ಲಿಯೋ' ಚಿತ್ರವು ಆಕ್ಷನ್ ಥ್ರಿಲ್ಲರ್ ಆಗಿದ್ದು, ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ. ಲೋಕೇಶ್, ರತ್ನ ಕುಮಾರ್ ಮತ್ತು ದೀರಜ್ ವೈದಿ ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ದಳಪತಿ ವಿಜಯ್, ತ್ರಿಶಾ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ಮಿಸ್ಕಿನ್, ಪ್ರಿಯಾ ಆನಂದ್ ಮತ್ತು ಮನ್ಸೂರ್ ಅಲಿ ಖಾನ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಲಿತ್ ಕುಮಾರ್ ಮತ್ತು ಜಗದೀಶ್ ಪಳನಿಸಾಮಿ ಬಂಡವಾಳ ಹೂಡಿದ್ದರೇ, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.


Click it and Unblock the Notifications











