The GOAT Trailer: ವಯಸ್ಸಾದ ಸಿಂಹದ ಘರ್ಜನೆಗೆ ದಾಖಲೆಗಳು ಧೂಳ್; ಕೊನೆ ಚಿತ್ರದಲ್ಲಿ ದಳಪತಿ ಡಬಲ್ ಧಮಾಕ
ತಮಿಳಿನ 'ದಿ ಗ್ರೇಟೆಸ್ಟ್ ಆಫ್ ಆಲ್‌ಟೈಮ್' ಸಿನಿಮಾ ಟ್ರೈಲರ್ ಬಿಡುಗಡೆ ಆಗಿದೆ. ದಳಪತಿ ವಿಜಯ್ ಪಾಲಿಟಿಕ್ಸ್ ಕಡೆ ಮುಖ ಮಾಡಿದ್ದಾರೆ. ಹಾಗಾಗಿ ಇದು ಅವರ ಕೊನೆ ಸಿನಿಮಾ ಎಂದೇ ಹೇಳಲಾಗುತ್ತಿದೆ. ಈ ಸ್ಪೈ ಥ್ರಿಲ್ಲರ್ ಸಿನಿಮಾ ಗಣೇಶ ಹಬ್ಬದ ಸಂಭ್ರಮದಲ್ಲಿ ಸೆಪ್ಟೆಂಬರ್ 5ಕ್ಕೆ ತೆರೆಗೆ ಬರಲಿದೆ.
ವೆಂಕಟ್ ಪ್ರಭು ನಿರ್ದೇಶನದ 'ಗೋಟ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಕಾಲಿವುಡ್‌ನಲ್ಲಿ ದಳಪತಿ ವಿಜಯ್ ಭಾರೀ ಅಭಿಮಾನಿ ಬಳಗ ಹೊಂದಿರುವ ನಟ. ಇದೀಗ ಆತ ಸಕ್ರಿಯ ರಾಜಕೀಯಕ್ಕೆ ಧುಮುಕಲು ಮುಂದಾಗಿದ್ದಾರೆ. 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಹಾಗಾಗಿ ಈಗಿನಿಂದಲೇ ತಮ್ಮ 'ತಮಿಳಗ ವೆಟ್ರಿ ಕಳಗಂ' ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಅದೇ ಕಾರಣಕ್ಕೆ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸೋದಿಲ್ಲ. 'ಗೋಟ್' ಕೊನೆಯ ಸಿನಿಮಾ ಆಗಬಹುದು ಎನ್ನುವ ಚರ್ಚೆ ನಡೆಯುತ್ತಿದೆ.

ಸದ್ಯ ಬಿಡುಗಡೆ ಆಗಿರುವ ಆಕ್ಷನ್ ಪ್ಯಾಕ್ಡ್ ಟ್ರೈಲರ್ ಅಭಿಮಾನಿಗಳ ಮನಗೆದ್ದಿದೆ. ತಂದೆ-ಮಗನಾಗಿ ಡಬಲ್ ರೋಲ್‌ನಲ್ಲಿ ವಿಜಯ್ ಅಬ್ಬರಿಸಿರುವುದನ್ನು ನೋಡಬಹುದು. ಹೆಚ್ಚು ಕಮ್ಮಿ 3 ನಿಮಿಷಗಳ 'ದಿ ಗೋಟ್' ಚಿತ್ರದ ಟ್ರೈಲರ್ ಕಿಕ್ ಕೊಡುವಂತಿದೆ.ಆಕರ್ಷಕವಾಗಿದೆ. ಭಯೋತ್ಪಾದನಾ ನಿಗ್ರಹ ದಳದ ಲೀಡರ್ ಗಾಂಧಿ ಆಗಿ ವಿಜಯ್ ಚಿತ್ರದಲ್ಲಿ ನಟಿಸಿದ್ದಾರೆ. 60ಕ್ಕೂ ಹೆಚ್ಚು ಯಶಸ್ವಿ ಇಂಟರ್ ನ್ಯಾಷನಲ್ ಆಪರೇಷನ್ಸ್ ಪೂರ್ಣಗೊಳಿಸಿದ ಒಬ್ಬ ನಿಪುಣ ಗೂಢಚಾರ ಏಜೆಂಟ್. ಅದೇ ಕಾರಣಕ್ಕೆ ಆತ ಉಗ್ರರ ಕೆಂಗಣ್ಣಿಗೆ ಗುರಿಯಾಗುತ್ತಾನೆ.
ತಮ್ಮ ಸೇವಾ ಅವಧಿಯಲ್ಲಿ ಉಗ್ರರಿಗೆ ಸಿಂಹಸ್ವಪ್ನನಾಗಿದ್ದ ಗಾಂಧಿ ಹಾಗೂ ಆತನ ಮೂವರ ತಂಡ ನಿವೃತ್ತಿ ಬಳಿಕ ಸಮಸ್ಯೆಗೆ ಸಿಲುಕುತ್ತಾರೆ. ಹಾಗಾಗಿ ಮತ್ತೆ ಅವರು ಹೋರಾಡಬೇಕಾಗುತ್ತದೆ. ಈ ಹಾದಿಯಲ್ಲಿ ಗಾಂಧಿ ಮಗನು ತಂದೆಗೆ ಬೆಂಬಲವಾಗಿ ನಿಲ್ಲುತ್ತಾನೆ. ಮುಂದೆ ಏನೆಲ್ಲಾ ಸಾವು ನೋವು ಸಂಭವಿಸುತ್ತದೆ ಎನ್ನುವುದು ಇನ್ನುಳಿದ ಸಿನಿಮಾ ಕಥೆ. 'ದಿ ಗೋಟ್' ಚಿತ್ರದಲ್ಲಿ ಸ್ನೇಹಾ, ಪ್ರಭುದೇವಾ, ಪ್ರಶಾಂತ್, ಲೈಲಾ, ಜಯರಾಮ್ ಸೇರಿ ದೊಡ್ಡ ಕಲಾವಿದರ ದಂಡೇ ಇದೆ.

'ದಿ ಗೋಟ್' ಟ್ರೈಲರ್ ನೋಡಿದರೆ ಸಿನಿಮಾ ಬಹಳ ಅದ್ಧೂರಿಯಾಗಿ ಮೂಡಿಬಂದಿರುವುದು ಗೊತ್ತಾಗುತ್ತದೆ. ಗ್ರ್ಯಾಂಡ್ ವಿಷ್ಯುವಲ್ಸ್, ಭರ್ಜರಿ ಆಕ್ಷನ್ ಸೀಕ್ವೆನ್ಸ್ ಇರುವುದು ಗೊತ್ತಾಗುತ್ತದೆ. ಹಾಲಿವುಡ್ ಆಕ್ಷನ್ ಸಿನಿಮಾ ರೀತಿ ಭಾಸವಾಗುತ್ತದೆ. ಕೋಕಿಲ ಮೋಹನ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಟ್ರೈಲರ್ ದಳಪತಿ ಅಭಿಮಾನಿಗಳ ಮನಗೆದ್ದಿದ್ದು ಸಿನಿಮಾ ನೋಡಬೇಕು ಎನ್ನುವ ನಿರೀಕ್ಷೆ ಮೂಡಿಸಿದೆ. ಯುವನ್ ಶಂಕರ್ ರಾಜಾ ಸಂಗೀತ, ಸಿದ್ದಾರ್ಥ್ ನುನಿ ಛಾಯಾಗ್ರಹಣ ಚಿತ್ರಕ್ಕಿದೆ.
ಕೇವಲ 14 ಗಂಟೆಗಳಲ್ಲಿ 20 ಮಿಲಿಯನ್ ವೀವ್ಸ್ ಸಾಧಿಸಿ 'ದಿ ಗೋಟ್' ಟ್ರೈಲರ್ ಧೂಳೆಬ್ಬಿಸಿದೆ. ಈ ವರ್ಷ ಮತ್ಯಾವುದೇ ಸಿನಿಮಾ ಟ್ರೈಲರ್‌ಗೆ ಸಿಗದಂತ ರೆಸ್ಪಾನ್ಸ್ ಸಿಕ್ತಿದೆ. 1 ಮಿಲಿಯನ್‌ಗೂ ಅಧಿಕ ಲೈಕ್ಸ್ ಗಿಟ್ಟಿಸಿ ಮುನ್ನುಗ್ಗುತ್ತಿದೆ. ಎಜಿಎಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಲಾಗಿದೆ. ಟ್ರೈಲರ್‌ನಲ್ಲಿ ಎಲ್ಲವೂ ಚೆನ್ನಾಗಿದೆ, ಆದರೆ ಡೀ ಏಜ್ಡ್ ತಂತ್ರಜ್ಞಾನ ಬಳಸಿ ವಿಜಯ್‌ನ ಯಂಗ್ ಲುಕ್‌ನಲ್ಲಿ ತೋರಿಸಿರುವುದು ಮಾತ್ರ ಟ್ರೋಲ್ ಆಗುತ್ತಿದೆ.
ತೆಲುಗು ಹಾಗೂ ಹಿಂದಿಗೂ 'ದಿ ಗೋಟ್' ಸಿನಿಮಾ ಡಬ್ ಆಗಿದೆ. "ಎಷ್ಟೇ ವಯಸ್ಸಾದರೂ ಸಿಂಹ ಯಾವತ್ತೂ ಸಿಂಹನೇ" ಎನ್ನುವ ಡೈಲಾಗ್ ಚಿತ್ರದಲ್ಲಿ ಹೈಲೆಟ್ ಆಗಿದೆ. ಆಕ್ಷನ್ ಜೊತೆಗೆ ಎಮೋಷನಲ್ ಅಂಶಗಳನ್ನು ಸೇರಿಸಿ ವೆಂಕಟ್ ಪ್ರಭು ಸಿನಿಮಾ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ವಿಜಯ್ ಡಬಲ್ ಧಮಾಕಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











