ದಳಪತಿ ವಿಜಯ್ ಬದುಕಿನಲ್ಲಿ ಬಿರುಗಾಳಿ ; 26 ವರ್ಷಗಳ ದಾಂಪತ್ಯ ಅಂತ್ಯ- ಸಂಗೀತಾ ಆರೋಪಗಳೇನು?
ದುಡ್ಡು ಎಲ್ಲಿ ಹೆಚ್ಚಿರುತ್ತೆ ಅಲ್ಲಿ ಪ್ರೀತಿ ಕಡಿಮೆ ಇರುತ್ತೆ ಎನ್ನುವ ಮಾತನ್ನು ಹಲವರು ಹೇಳುತ್ತಾರೆ. ಕೆಲವರ ಬದುಕಿನಲ್ಲಿ ದುಡ್ಡು..ಆಸ್ತಿ.. ಐಶ್ವರ್ಯ.. ಹೆಚ್ಚಾದಂತೆ ನೆಮ್ಮದಿ ನಿಧಾನವಾಗಿ ಮಾಯವಾಗುತ್ತೆ. ಚಿತ್ರರಂಗದಲ್ಲಿಯಂತೂ ಇದಕ್ಕೆ ಹತ್ತು ಹಲವು ಉದಾಹರಣೆಗಳು ಕೂಡ ಇವೆ. ಇಲ್ಲಿ ಶ್ರೀಮಂತರೆಂದು ಕರೆಸಿಕೊಳ್ಳುವ ಅನೇಕರ ಬದುಕಿನಲ್ಲಿ ಪ್ರೀತಿ ಮರಿಚೀಕೆಯಾಗಿರುತ್ತೆ.
ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೆ.. ಆ ನಂತರ ಯಾಕೆ ಮದುವೆಯಾಗ್ತಾರೆ ಎನ್ನುವುದು ಅವರವರಿಗೆ ಗೊತ್ತಾದರೂ ಹಲವರ ದಾಂಪತ್ಯ ಇಲ್ಲಿ ಮುರಿದು ಬಿದ್ದಿವೆ. ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ.. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ. ಈ ಸಾಲಿಗೆ ಈಗ ಇಳಯ ದಳಪತಿ ವಿಜಯ್ ಮತ್ತು ಸಂಗೀತಾ ಕೂಡ ಸೇರಿಕೊಂಡಿದ್ದು ದುರಂತ.

ಹೌದು, ಹಲವು ವರ್ಷಗಳಿಂದ ವಿಜಯ್ ಮತ್ತು ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಅನುಮಾನ ಹಲವರಲ್ಲಿತ್ತು. ಇಬ್ಬರ ನಡೆ ಕೂಡ ಇದಕ್ಕೆ ಪೂರಕವಾಗಿಯೇ ಇತ್ತು. ವಿಜಯ್ ಅವರ ಸಿನಿಮಾ ಕಾರ್ಯಕ್ರಮ ಇರಲಿ ಅಥವಾ ರಾಜಕೀಯದ ರ್‍ಯಾಲಿ ಇರಲಿ ಸಂಗೀತಾ ಅಕ್ಕ-ಪಕ್ಕ ಎಲ್ಲಿಯೂ ಕಳೆದ ಎರಡು ಮೂರು ವರ್ಷಗಳಿಂದ ಕಾಣಿಸಿಕೊಂಡಿರಲಿಲ್ಲ. ಬದಲಿಗೆ ವಿಜಯ್ ತಮ್ಮ ಪತ್ನಿಗಿಂತ ಖ್ಯಾತ ನಟಿಯ ಜೊತೆ ಕಾಣಿಸಿಕೊಂಡಿದ್ದೇ ಹೆಚ್ಚು.
ವಿಜಯ್ ಅವರ 50ನೇ ವರ್ಷದ ಹುಟ್ಟುಹಬ್ಬದ ಸಮಯದಲ್ಲಿ ಕೂಡ ನಟಿ, ವಿಜಯ್ ಜೊತೆ ಕಾಣಿಸಿಕೊಂಡಿದ್ದರು. ಮಿರರ್ ಸೆಲ್ಫಿ ಕ್ಲಿಕಿಸಿಕೊಂಡಿದ್ದರು. ಈ ಫೋಟೊ ಕೂಡ ತಮಿಳುನಾಡಿನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿತ್ತು. ಸಂಗೀತಾ ಅವರಿಗೆ ವಿಚ್ಛೇದನವನ್ನು ನೀಡಿ ವಿಜಯ್ ತ್ರಿಶಾ ಅವರ ಜೊತೆ ಮದುವೆಯಾಗಲಿದ್ದಾರೆ ಎಂದು ಪುಕಾರು ಹಬ್ಬಿತ್ತು.
ಈ ಕುರಿತು ಗಾಯಕಿ ಸುಚಿತ್ರಾ ಕೂಡ ಬಾಂಬ್ ಸಿಡಿಸಿದ್ದರು. ದಳಪತಿ ವಿಜಯ್ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ಬಯಸಿದ್ದಾರೆ. ವಿಜಯ್ ತಮ್ಮ ಪತ್ನಿಯಿಂದ ದೂರು ಉಳಿದು ವರ್ಷಗಳೇ ಕಳೆದಿವೆ. ಇಬ್ಬರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆಂದು ಹೇಳಿದ್ದರು.
ಕೊನೆಗೂ ಈಗ ಹಲವರ ಅನುಮಾನ ನಿಜಾ ಆಗಿದ್ದು, ವಿಚ್ಚೇದನಕ್ಕೆ ವಿಜಯ್ ಅವರ ಪತ್ನಿ ಸಂಗೀತಾ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ವರದಿಗಳ ಪ್ರಕಾರ, ಈ ವಿಚ್ಛೇದನ ಅರ್ಜಿಯ ವಿಚಾರಣೆಯು ಮಾರ್ಚ್ 20, 2026 ರಂದು ನಡೆಯಲಿದ್ದು, ಸಂಗೀತಾ ತಮ್ಮ ಅರ್ಜಿಯಲ್ಲಿ
ವಿಜಯ್ ವಿರುದ್ಧ ಹಲವು ಗಂಭೀರ ಆರೋಪ ಮಾಡಿದ್ದಾರೆ. ವಿಜಯ್ ಅವರ ಅಕ್ರಮ ಸಂಬಂಧವೇ ವಿಚ್ಚೇದನಕ್ಕೆ ಕಾರಣ ಎಂದು ಹೇಳಿದ್ದಾರೆ.

12 ಪುಟಗಳ ಅರ್ಜಿಯಲ್ಲಿ ತಮ್ಮ 26 ವರ್ಷಗಳ ವೈವಾಹಿಕ ಜೀವನದ ಮೇಲೆ ಬೆಳಕು ಚೆಲ್ಲಿರುವ ಸಂಗೀತಾ ಮದುವೆಯಾದ ಆರಂಭಿಕ ವರ್ಷಗಳು ಚೆನ್ನಾಗಿದ್ದವು, ಸುಖಮಯವಾಗಿದ್ದವು ಎಂದು ಹೇಳಿದ್ದಾರೆ. 2021ರಲ್ಲಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಂಪನ ಶುರುವಾಯ್ತು ಎಂದು ಹೇಳಿರುವ ಸಂಗೀತಾ ನಟಿಯ ಜೊತೆ ತಮ್ಮ ಪತಿಯ ಅಕ್ರಮ ಸಂಬಂಧದ ಸುದ್ದಿ ಕೇಳಿ ನನಗೆ ಆಘಾತವಾಯ್ತು ಎಂದಿದ್ದಾರೆ.
ಈ ಸಮಸ್ಯೆಯನ್ನು ನಾಲ್ಕು ಗೋಡೆಗಳ ನಡುವೆಯೇ ಬಗೆಹರಿಸುವ ಪ್ರಯತ್ನವನ್ನು ಸಾಕಷ್ಟು ಬಾರಿ ಮಾಡಿರುವುದಾಗಿ ತಮ್ಮ ಅರ್ಜಿಯಲ್ಲಿ ಉಲ್ಲೇಖ ಮಾಡಿರುವ ಸಂಗೀತಾ 2021ರ ಸೆಪ್ಟೆಂಬರ್‌ನಿಂದ 2022ರ ಫೆಬ್ರವರಿವರೆಗೆ ವಕೀಲರ ಮೂಲಕ ವಿಜಯ್ ಜೊತೆ ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ.
ಮುಂದುವರೆದು ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿಯ ಜೊತೆಗಿನ ಸಂಬಂಧ ಕಡಿದುಕೊಳ್ಳುವ ಭರವಸೆಯನ್ನು ವಿಜಯ್ ನನಗೆ ನೀಡಿದ್ದರು ಎಂದು ಹೇಳಿರುವ ಸಂಗೀತಾ ಭರವಸೆ ಕೇವಲ ಭರವಸೆಯಾಗಿಯಷ್ಟೇ ಉಳಿಯಿತು ಎಂದು ಹೇಳಿದ್ದಾರೆ. ಮತ್ತೆ ಮತ್ತೆ ಈ ವಿಚಾರದ ಕುರಿತು ಪ್ರಶ್ನೆ ಮಾಡಿದಾಗ ವಿಜಯ್ ನನಗೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದರು, ಮಾನಸಿಕ ಹಿಂಸೆ ನೀಡಿದರು ಎಂದು ಹೇಳಿದ್ದಾರೆ.
ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರಿಗೆ ತೊಂದರೆಯಾಗಬಾರದೆಂದು ಎಲ್ಲವನ್ನೂ ಸಹಿಸಿಕೊಂಡು, ವಿಚ್ಛೇದನ ಪ್ರಕ್ರಿಯೆ ನಾನು ಮುಂದೂಡತ್ತಲೇ ಬಂದೆ ಎಂದು ಹೇಳಿರುವ ಸಂಗೀತಾ ನನ್ನ ಪತಿ ನನ್ನ ಮಾತುಗಳಿಗೆ ಮತ್ತು ನನ್ನ ಭಾವನೆಗಳಿಗೆ ಯಾವತ್ತು ಬೆಲೆ ಕೊಡಲಿಲ್ಲ ಎಂದಿದ್ದಾರೆ. ಆ ನಟಿಯ ಜೊತೆ ಎಲ್ಲೆಂದರಲ್ಲಿ ಕಾಣಿಸಿಕೊಂಡ ವಿಜಯ್ ಆಕೆಯ ವಿದೇಶ ಪ್ರವಾಸಕ್ಕೆ ಕೂಡ ಹೋಗಿದ್ದರು, ಅವರ ಇಬ್ಬರ ಫೋಟೊಗಳು ಸೋಶಿಯಲ್ ಮೀಡಿಯಾ ತುಂಬಾ ಹರಿದಾಡಿದರೂ ಕೂಡ ಅದರ ಬಗ್ಗೆ ವಿಜಯ್ ಚಕಾರ ಎತ್ತಲಿಲ್ಲ ಎಂದು ಹೇಳಿರುವ ಸಂಗೀತಾ ಇದೆಲ್ಲದರಿಂದ ನನಗೆ ಮತ್ತು ನನ್ನ ಮಕ್ಕಳಿಗೆ ಅವಮಾನ ಆಗಿದೆ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಇದಕ್ಕೂ ಮುನ್ನ ಎರಡು ಬಾರಿ ಮತ್ತೊಮ್ಮೆ ಮಾತುಕತೆ ಮಾಡಲು ಮುಂದಾದಾಗ ಕೂಡ ವಿಜಯ್ ಸಹಕರಿಸಲಿಲ್ಲ ಎಂದು ಹೇಳಿರುವ ಸಂಗೀತಾ ನವೆಂಬರ್ 9ರಂದು ಇನ್ನೊಮ್ಮೆ ಈ ವಿಷಯವನ್ನು ಬಗೆಹರಿಸುವ ಪ್ರಯತ್ನವನ್ನು ನಾನು ಮಾಡಿದೆ. ಆದರೆ ಅದಕ್ಕೂ ಕೂಡ ವಿಜಯ್ ಕ್ಯಾರೇ ಎನ್ನಲಿಲ್ಲ ಈ ಹಿನ್ನೆಲೆ ನ್ಯಾಯಾಲಯದ ಬಾಗಿಲು ತಟ್ಟುವುದು ನನಗೆ ಅನಿವಾರ್ಯವಾಯ್ತು ಎಂದು ಹೇಳಿದ್ದಾರೆ.
ತಮ್ಮ ಅರ್ಜಿಯಲ್ಲಿ ನಟಿಯ ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡದ ಸಂಗೀತಾ, ವಿಜಯ್ ದಾಂಪತ್ಯದಲ್ಲಿ ವಿಶ್ವಾಸದ್ರೋಹ ಎಸಗಿದ್ದು, 2021ರಿಂದ ಪದೇ ಪದೇ ತನ್ನನ್ನು ಮೌಖಿಕವಾಗಿ ನಿಂದಿಸಿದ್ದಾರೆ ಎಂದಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಖಾಸಗಿಯಾಗಿ ನಡೆಸುವಂತೆ ಮನವಿಯನ್ನು ಕೂಡ ಮಾಡಿರುವ ಸಂಗೀತಾ ಅನಿವಾರ್ಯ ಮತ್ತು ಅವಶ್ಯಕತೆ ಇದ್ದಲ್ಲಿ ವಿಜಯ್ ಮತ್ತು ನಟಿಯ ನಡುವಿನ ಅಕ್ರಮ ಸಂಬಂಧಕ್ಕೆ ಪುರಾವೆಗಳನ್ನು ಬಹಿರಂಗಗೊಳಿಸುವ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
ಅಂದ್ಹಾಗೇ ವಿಜಯ್ ಕೈ ಹಿಡಿದಿದ್ದ ಸಂಗೀತಾ ಬೇರೆ ಯಾರು ಬದಲಿಗೆ ಅಪ್ಪಟ ಅಭಿಮಾನಿ. ಕಳೆದ 26 ವರ್ಷಗಳಿಂದ ವಿಜಯ್ ಅವರ ಏಳುಬೀಳುಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದ ಸಂಗೀತಾ ಹುಟ್ಟಿ ಬೆಳೆದಿದ್ದು ಎಲ್ಲವೂ ಲಂಡನ್‌ನಲ್ಲಿ. 1996 ರಲ್ಲಿ ವಿಜಯ್ ಅಭಿನಯದ ''ಪೂವೆ ಉನಕ್ಕ'' ಪ್ರಚಂಡ ಯಶಸ್ಸು ಕಂಡಾಗ ಲಂಡನ್‌ನಿಂದ ಚೆನ್ನೈಗೆ ಬಂದು ವಿಜಯ್ ಅವರನ್ನು ಸಂಗೀತಾ ಭೇಟಿ ಮಾಡಿದ್ದರು.
ಆ ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿ ಆಗಸ್ಟ್ 25, 1999 ರಂದು ಇಬ್ಬರು ಮದುವೆಯಾಗಿದ್ದರು. ಹಿಂದೂ ಮತ್ತು ಕ್ರಿಶ್ಚಿಯನ್ ವಿಧಿವಿಧಾನಗಳ ಪ್ರಕಾರ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಇವರಿಬ್ಬರಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರೂ ಮಕ್ಕಳಿದ್ದು ರಾಜಕೀಯ ರಂಗದಲ್ಲಿ ದೊಡ್ಡ ಬದಲಾವಣೆ ತರಲು ಹೊರಟಿರುವ ವಿಜಯ್‌ಗೆ ಈ ವೈಯಕ್ತಿಕ ವಿಷಯ ಈಗ ಸವಾಲಾಗಿದೆ. ಇದರಿಂದ ವಿಜಯ್‌ಗೆ ಹಿನ್ನೆಡೆಯಾಗುವ ಸಾಧ್ಯತೆ ಕೂಡ ಇದೆ. ಕೋರ್ಟ್ ವಿಚಾರಣೆಯ ನಂತರವಷ್ಟೇ ಈ ವಿಚ್ಛೇದನ ಪ್ರಕ್ರಿಯೆಯ ಸಂಪೂರ್ಣ ಚಿತ್ರಣ ಹೊರಬೀಳಲಿದೆ.


Click it and Unblock the Notifications











