"ನೀಟ್ ಪರೀಕ್ಷೆ ಬಗ್ಗೆ ಜನರಿಗೆ ನಂಬಿಕೆ ಇಲ್ಲ, ಇದಕ್ಕೆ ಒಂದೇ ಪರಿಹಾರ"; ವಿಜಯ್
ತಮಿಳು ನಟ ವಿಜಯ್ ಇದೀಗ ರಾಜಕೀಯರಂಗದತ್ತ ಮುಖ ಮಾಡಿದ್ದಾರೆ. ತಮ್ಮದೇ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಮೊದಲಿನಿಂದಲೂ ದನಿ ಎತ್ತುತ್ತಾ ಬರುತ್ತಿದ್ದಾರೆ. ಇದೇ ಕಾರಣಕ್ಕೆ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೂ ಇದೆ. ಇದೆಲ್ಲದರ ನಡುವೆ ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದು ಜನ ಸೇವೆ ಮಾಡಲು ದಳಪತಿ ಮನಸ್ಸು ಮಾಡಿದ್ದಾರೆ.
ನೀಟ್ ಪರೀಕ್ಷೆಯ ಹಗರಣ ದೇಶಾದ್ಯಂತ ಭಾರೀ ಚರ್ಚೆ ಹುಟ್ಟಾಕ್ಕಿದೆ. ವೈದ್ಯಕೀಯ ಪ್ರವೇಶಾತಿಗೆ ನಡೆಯುವ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು ನೀಟ್ ಪರೀಕ್ಷೆ ಬಗ್ಗೆಯೇ ಜನ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಇನ್ನು ನೀಟ್ ಪರೀಕ್ಷೆ ಭ್ರಷ್ಟಾಚಾರ ಹಾಗೂ ಪರೀಕ್ಷಾ ಅಕ್ರಮದ ಬಗ್ಗೆ ಉನ್ನತಮಟ್ಟದ ತನಿಖೆ ಒತ್ತಡ ಹೆಚ್ಚಾಗುತ್ತಿದೆ.

ನಟ ದಳಪತಿ ವಿಜಯ್ ನೀಟ್ ಪರೀಕ್ಷೆಯನ್ನು ರದ್ದು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ತಮಿಳಗ ವೆಟ್ರಿ ಕಳಗಂ ಪಕ್ಷದ ವತಿಯಿಂದ ಆಯೋಜಿಸಿದ್ದ ಎರಡನೇ ವಾರ್ಷಿಕ ಶಿಕ್ಷಣ ಪ್ರಶಸ್ತಿ ಸಮಾರಂಭದಲ್ಲಿ ವಿಜಯ್ ಭಾಗವಹಿಸಿದ್ದರು. ಈ ವರ್ಷ 10ನೇ ಮತ್ತು 12ನೇ ಬೋರ್ಡ್ ಪರೀಕ್ಷೆ ಟಾಪರ್ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಮಾತನಾಡಿದರು. ಈ ವೇಳೆ ನೀಟ್ ಹಗರಣದ ಬಗ್ಗೆ ಪ್ರಸ್ತಾಪಿಸಿದರು.
"ನೀಟ್ ಪರೀಕ್ಷೆಯಲ್ಲಿ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ದೇಶಕ್ಕೆ ನೀಟ್ ಅಗತ್ಯವಿಲ್ಲ. ನೀಟ್‌ನಿಂದ ವಿನಾಯಿತಿಯೊಂದೇ ಪರಿಹಾರ. ರಾಜ್ಯ ವಿಧಾನಸಭೆಯಲ್ಲಿ ನೀಟ್ ವಿರುದ್ಧ ಅಂಗೀಕರಿಸಿದ ನಿರ್ಣಯವನ್ನು ನಾನು ಸ್ವಾಗತಿಸುತ್ತೇನೆ. ತಮಿಳುನಾಡಿನ ಜನರ ಭಾವನೆಗಳನ್ನು ಗೌರವಿಸುವಂತೆ ಕೇಂದ್ರ ಸರ್ಕಾರವನ್ನು ಕೋರುತ್ತೇನೆ" ಎಂದಿದ್ದಾರೆ.
"ಶಿಕ್ಷಣವನ್ನು ಸಾಮಾನ್ಯ ಪಟ್ಟಿಯಿಂದ ರಾಜ್ಯ ಪಟ್ಟಿಗೆ ತರಬೇಕು. ನೀಟ್ ಪರೀಕ್ಷೆಯಿಂದಾಗಿ ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯ ಬಡ, ಅರ್ಹ ಮತ್ತು ಅಂಚಿನಲ್ಲಿರುವ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ" ಎಂದು ವಿಜಯ್ ಹೇಳಿದ್ದಾರೆ.
ನೀವು ರಾಷ್ಟ್ರಭಾಷೆ, ರಾಷ್ಟ್ರ ಸಿಲಬಸ್ ಓದಿ NCERT ಸಿಲಬಸ್‌ನಲ್ಲಿ ಪರೀಕ್ಷೆ ಬರೆದರೆ ಅದು ಹೇಗೆ ಸಾಧ್ಯವಾಗುತ್ತದೆ ಎಂದು ವಿಜಯ್ ಪ್ರಶ್ನಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮುಖ್ಯವಾಗಿ ಮೆಡಿಸಿನ್ ಓದಬೇಕು ಎಂದುಕೊಂಡವರಿಗೆ ಇದು ಎಷ್ಟು ಕಷ್ಟ ಎನ್ನುವುದನ್ನು ಪರಿಗಣಿಸಬೇಕು. ಕಳೆದ ಮೇ 5 ರಂದು ನಡೆದ ಪರೀಕ್ಷೆ ಆ ಬಳಿಕ ಬಹಿರಂಗವಾಗಿ ನೀಟ್ ಹಗರಣ ಸುದ್ದಿ ನೋಡಿದ್ದೇವೆ. ಇದರಿಂದ ನೀಟ್ ಮೇಲೆ ಜನರಿಗೆ ವಿಶ್ವಾಸ ಹೋಯಿತು. ಹಾಗಾಗಿ ದೇಶಾದ್ಯಂತ ನೀಟ್ ಅವಸರವಿಲ್ಲ ಎಂದು ನನಗೆ ಅನಿಸುತ್ತದೆ" ಎಂದಿದ್ದಾರೆ.
"ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಪ್ರತ್ಯೇಕ ಜಂಟಿ ಪಟ್ಟಿ ರಚಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಶಿಕ್ಷಣ ಮತ್ತು ಆರೋಗ್ಯವನ್ನು ಅದರಲ್ಲಿ ಸೇರಿಸಬೇಕು" ಎಂದು ದಳಪತಿ ವಿಜಯ್ ಮನವಿ ಮಾಡಿದ್ದಾರೆ.
ನಟ ವಿಜಯ್ ಶೀಘ್ರದಲ್ಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಲು ಸಿದ್ಧತೆ ನಡೆಸಿದ್ದಾರೆ. ಸದ್ಯ ವೆಂಕಟ್ ಪ್ರಭು ನಿರ್ದೇಶನದ 'ಗೋಟ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಡಬಲ್ ರೋಲ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ದೀಪಾವಳಿ ವೇಳೆಗೆ ಸಿನಿಮಾ ತೆರೆಗೆ ಬರಲಿದೆ. ಆ ಬಳಿಕ ಮತ್ತೊಂದು ಸಿನಿಮಾದಲ್ಲಿ ಮಾತ್ರ ನಟಿಸಲು ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ.
ಇತ್ತೀಚೆಗೆ ಆಂಧ್ರ ಚುನಾವಣೆಯಲ್ಲಿ ನಟ ಪವನ್ ಕಲ್ಯಾಣ್ ಗೆದ್ದು ಡಿಸಿಎಂ ಆಗಿದ್ದಾರೆ. ಇದೀಗ ವಿಜಯ್ ತಮಿಳುನಾಡು ರಾಜಕಾರಣದ ಮೇಲೆ ಕಣ್ಣಿಟ್ಟಿದ್ದಾರೆ.


Click it and Unblock the Notifications











