ಒಂದಾದ ಕದಡಿದ ಮನಸುಗಳು, ನಿರಾಳವಾದ ರಜಿನಿ ಮಾಜಿ ಅಳಿಯ ಧನುಷ್...!
ದಕ್ಷಿಣ ಭಾರತೀಯ ಚಿತ್ರರಂಗದ ಅದ್ಭುತ ನಟ ಧನುಷ್. ಕಮರ್ಷಿಯಲ್ ಹೀರೋ ಆಗಿ ತನ್ನದೇ ಆದ ಸ್ಥಾನವನ್ನ ಹೊಂದಿರುವ ಧನುಷ್, ಬೇರೆ ಸೂಪರ್ ಸ್ಟಾರ್ ಗಳು ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಸಲೀಸಾಗಿ ನಟಿಸುತ್ತಾ ಬಂದಿದ್ದಾರೆ. ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ.
ಇಂಥಾ ಧನುಷ್ ಮೇಲೆ ಕಳೆದ ಕೆಲ ದಿನಗಳ ಹಿಂದೆ ಧನುಷ್ ತಮಿಳಿನ ಕೆಲವು ನಿರ್ಮಾಪಕರಿಂದ{ TFPC} ಅಡ್ವಾನ್ಸ್ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ, ಡೇಟ್ಸ್ ಕೊಡುವುದಕ್ಕೆ ಸತಾಯಿಸುತ್ತಿದ್ದಾರೆಂದು ನಿರ್ಮಾಪಕರು ಆರೋಪ ಮಾಡಿದ್ದರು. ಸಾಕಷ್ಟು ಚರ್ಚೆಯನ್ನೂ ಮಾಡಿ ಧನುಷ್ ಮೇಲೆ ನಿಷೇಧವನ್ನೂ ಹೇರಿದ್ದರು. ಚಿತ್ರಗಳ ನಿರ್ಮಾಣ ವೆಚ್ಚ ಹೆಚ್ಚಳವಾಗಿರುವುದು, ನಟರ ಸಂಭಾವನೆ ಹೆಚ್ಚಳ, ಅಡ್ವಾನ್ಸ್ ಪಡೆದು ಸಿನಿಮಾ ಪ್ರಾರಂಭ ಮಾಡದೇ ಇರುವುದು, ನಟರು ಡೇಟ್ಸ್ ನೀಡದೇ ಇರುವುದು ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ ಮಾಡಿದ್ದರು. ತಮ್ಮ ಬೇಡಿಕೆ ಈಡೇರುವವರೆಗೆ ನವೆಂಬರ್ 1 ರಿಂದ ತಮ್ಮ ಎಲ್ಲ ಸಿನಿಮಾ ಕೆಲಸಗಳನ್ನು ಬಂದ್ ಮಾಡುವುದಾಗಿಯೂ ಕೂಡ ನಿರ್ಮಾಪಕರು ಹೇಳಿದ್ದರು.

ನಿರ್ಮಾಪಕರ ಈ ನಿರ್ಧಾರದಿಂದ ತಮಿಳು ಕಲಾವಿದರ ಸಂಘಕ್ಕೆ (ನಾಡಿಗರ್ ಸಂಗಂ) ಭಾರೀ ಮುಜುಗರವಾಗಿತ್ತು. ಕಲಾವಿದರ ಸಂಘದ ಪದಾಧಿಕಾರಿಗಳನ್ನು ಕೆರಳಿಸಿತ್ತು. ನಿರ್ಮಾಪಕರು ಏಕಾಏಕಿ ತೆಗೆದುಕೊಂಡು ಈ ನಿರ್ಧಾರ ಮಾಧ್ಯಮಗಳಿಂದ ತಮಗೆ ತಿಳಿದಿದೆ. ಇವರು ತೆಗೆದುಕೊಂಡಿರುವ ನಿರ್ಧಾರ ಕಾನೂನು ಬಾಹಿರವಾಗಿದೆ ಎಂದು (ನಾಡಿಗರ್ ಸಂಗಂ) ನಿರ್ಮಾಪಕರ ಸಂಘಕ್ಕೆ ಮಾಧ್ಯಮಗಳ ಮೂಲಕ ಪ್ರತ್ಯುತ್ತರ ನೀಡಿತ್ತು.
ಈ ಹಗ್ಗಜಗ್ಗಾಟದಿಂದ ಧನುಷ್ ಅವರಿಂದ ತಮಿಳು ಚಿತ್ರರಂಗ ಇಬ್ಬಾಗವಾಗುತ್ತಿದೆ ಎಂದು ಅನೇಕರು ಅಲವತ್ತುಕೊಂಡಿದ್ದರು. ಧನುಷ್ ಅವರ ಮೇಲೆ ಹೇರಲಾದ ನಿಷೇಧ ಹಿಂಪಡೆಯಬೇಕು ಎಂದು ಅವರ ಅಭಿಮಾನಿಗಳು ಕೂಡ ಆಗ್ರಹಿಸಿದ್ದರು. ನಿರ್ಮಾಪಕರ ಈ ನಿಧಾರದಿಂದ ತಮಿಳು ಚಿತ್ರರಂಗದ ಕಲಾವಿದರೇ ಚಕಾರ ಎತ್ತಿದ್ದರು. ನಿರ್ಮಾಪಕರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈಗ ಈ ವಿವಾದ ಬಗೆಹರಿದಿದೆ. ಧನುಷ್ ಮೇಲೆ ಹೇರಲಾಗಿದ್ದ ನಿಷೇಧವನ್ನು ಕೊನೆಗೂ ತೆರವುಗೊಳಿಸಲಾಗಿದೆ. ಧನುಷ್ ಮೇಲೆ ಹೇರಲಾಗಿದ್ದ ನಿಷೇಧವನ್ನು ನಿರ್ಮಾಪಕರ ಸಂಘ ಹಿಂದೆ ತೆಗೆದುಕೊಂಡಿದೆ.

ಅಂದ್ಹಾಗೇ ಧನುಷ್ ಅವರದ್ದು ವೃತ್ತಿಪರವಲ್ಲದ ನಡುವಳಿಕೆ ಎಂದು ಈ ಹಿಂದೆ ತೆನಾಂಡಾಲ್ ಫಿಲ್ಮ್ಸ್ ಮತ್ತು 5 ಸ್ಟಾರ್ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆಯ ನಿರ್ಮಾಪಕರು, ತಮಿಳು ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು. ಧನುಷ್ ಅವರನ್ನು ಚಿತ್ರರಂಗದಿಂದ ನಿಷೇಧಿಸಬೇಕೆಂದು ನಿರ್ಮಾಪಕರು ಆಲೋಚನೆಯನ್ನು ಮಾಡಿದ್ದು ಇಲ್ಲಿಂದನೇ. ಈ ಎರಡು ಸಂಸ್ಥೆಗಳ ಕಷ್ಟ ಸುಖ ಕೇಳಿದ್ದ ನಿರ್ಮಾಪಕ ಸಂಘ ವಿಚಾರಣೆಯ ನಂತರ ಧನುಷ್ ವಿರುದ್ಧ ನಿಷೇಧ ಹೇರಿತ್ತು.
ಆದರೆ ಈಗ ಮಾತು-ಕಥೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಇಷ್ಟೇ ಅಲ್ಲ ತಮ್ಮ ವಿರುದ್ಧ ದೂರು ನೀಡಿದ್ದ ತೆನಾಂಡಾಲ್ ಫಿಲ್ಮ್ಸ್ ಸಂಸ್ಥೆಯ ಜೊತೆ ಹೊಸ ಸಿನಿಮಾ ಮಾಡಲು ಕೂಡ ಧನುಷ್ ಒಪ್ಪಿಕೊಂಡಿದ್ದಾರೆ. ಇದಲ್ಲದೇ ಈ ಹಿಂದೆ 5 ಸ್ಟಾರ್ ಕ್ರಿಯೇಷನ್ಸ್‌ನಿಂದ ಪಡೆದಿದ್ದ ಹಣವನ್ನೂ ಕೂಡ ಧನುಷ್ ಪ್ರಾಮಾಣಿಕವಾಗಿ ಮರಳಿ ನೀಡಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿಯನ್ನೂ ಮಾಡಿವೆ. ಇನ್ನೂ ಧನುಷ್ ಅವರ ಮೇಲಿನ ನಿಷೇಧ ತೆರವು ಆದ ಹಿನ್ನೆಲೆ ಅವರ ಅಭಿಮಾನಿಗಳು ಸಂಭ್ರಮಾಚರಣೆಯನ್ನೂ ಮಾಡುತ್ತಿದ್ದಾರೆ. ಹೇಗೂ ಒಡೆದ ಮನಸುಗಳು ಕೊನೆಗೂ ಒಂದಾದವಲ್ಲ ಎಂದು ಕಲಾವಿದರ ಸಂಘದ ಸದಸ್ಯರು ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಉಳಿದಂತೆ ಸದ್ಯ ಧನುಷ್ ಕುಬೇರ ಚಿತ್ರದಲ್ಲಿ ನಟಿಸಿದ್ದು, ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.


Click it and Unblock the Notifications











