39ನೇ ವರ್ಷದಲ್ಲಿ ಎರಡನೇ ಬಾರಿ ತಂದೆಯಾದ ಅಟ್ಲಿ ; ರಾಕಾ ನಿರ್ದೇಶಕನ ಮನೆಗೆ ಬಂದಳು ಮಹಾಲಕ್ಷ್ಮೀ
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಉದ್ಯಮದಲ್ಲಿ ಬಾಕ್ಸಾಫೀಸ್‌ನ ಲೆಕ್ಕಾಚಾರ ಆಚೆಯೂ ವೈಯಕ್ತಿಕ ಬದುಕೆನ್ನುವುದು ಇರುತ್ತೆ. ಹಾಗೇ ನೋಡಿದರೆ ಅಭಿಮಾನಿಗಳ ಮನ ತಣಿಸಲು ದಿನವಿಡೀ ದುಡಿಯುವ ಚಿತ್ರರಂಗದವರಿಗೆ ಎಲ್ಲರಂತೆ ನೆಮ್ಮದಿ ಸಿಗುವುದು ತಮ್ಮ ತಮ್ಮ ಮನೆಯಲ್ಲಿಯೇ.
ಅದರಲ್ಲಿಯೂ ಮದುವೆಯಾಗಿದ್ದರೆ ಮುಗೀತು. ಮನೆಗೆ ಹೋದರೆ ಇವರ ಪಾಲಿಗೆ ಸ್ವರ್ಗ ಕೇವಲ ಮೂರೇ ಗೇಣು. ಒತ್ತಡದ ವೃತ್ತಿಪರ ಬದುಕು ಮತ್ತು ವೈಯಕ್ತಿಕ ಬದುಕಿನ ಜೊತೆ ಸಮತೋಲನ ಕಾಯ್ದುಕೊಳ್ಳುವ ಕಲೆ ಸಿದ್ದಿಸಿದ್ದರೆ ಸೋನೆ ಪೆ ಸುಹಾಗ. ಸಾರ್ವಜನಿಕರ ಕಂಗಳಲ್ಲಿ ಇವರ ಬದುಕು ಸದಾ ಆಕರ್ಷಕ. ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರರಂಗದವರ ಪರ್ಸನಲ್ ಲೈಫ್ ಕುರಿತು ಹಲವರಲ್ಲಿ ವಿಪರೀತ ಕುತೂಹಲ ಇರುತ್ತೆ.

ಇದನ್ನು ಮನಗಂಡೆ ಚಿತ್ರರಂಗದಲ್ಲಿಯೂ ಕೂಡ ಹಲವರು ಆಗಾಗ ತಮ್ಮ ಬದುಕಿನ ಅಪ್‌ಡೇಟ್‌ಗಳನ್ನು ಸೋಶಿಯಲ್ ಮೀಡಿಯಾ ಮೂಲಕ ನೀಡುತ್ತಿರುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ದಕ್ಷಿಣದ ಪ್ರಖ್ಯಾತ ನಿರ್ದೇಶಕ ಅಟ್ಲಿ ತಮ್ಮ ಅಭಿಮಾನಿಗಳಿಗೆ, ಹಿತೈಶಿಗಳಿಗೆ, ತಮ್ಮ ಹಿಂಬಾಲಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಎರಡನೇ ಬಾರಿ ತಂದೆಯಾಗಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿರುವ ಅಟ್ಲಿ, ತಮಗೆ ಹೆಣ್ಣು ಮಗು ಜನಿಸಿರುವುದನ್ನು ಖಚಿತಪಡಿಸಿದ್ದಾರೆ. ಧನ್ಯತೆಯ ಭಾವ ಮೂಡಿದೆ ಎಂದು ತಮ್ಮ ಈ ಪೋಸ್ಟ್‌ಗೆ ಕ್ಯಾಪ್ಷನ್ ನೀಡಿದ್ದಾರೆ. ಇನ್ನೂ ಈಗಾಗಲೇ ಅಟ್ಲಿ ಮತ್ತು ಪ್ರಿಯಾಗೆ ಗಂಡು ಮಗ ಇದ್ದಾನೆ. 2023ರಲ್ಲಿ ಗಂಡು ಮಗುವನ್ನೂ ಸ್ವಾಗತಿಸಿದ್ದ ಈ ಜೋಡಿ ತಮ್ಮ ಮಗನಿಗೆ ಮೀರ್ ಎಂದು ನಾಮಕರಣವನ್ನು ಮಾಡಿದೆ.
ಈಗ ಮನೆಗೆ ಲಕ್ಷ್ಮೀ ಬಂದಿದ್ದಾಳೆ. ಈ ಹಿನ್ನೆಲೆ ಇಲ್ಲಿಯೂ ತಮ್ಮ ಕ್ರಿಯೇಟಿವಿಟಿಯ ಪ್ರದರ್ಶನ ಮಾಡಿರುವ ಅಟ್ಲಿ, ತಮ್ಮ ಮೊದಲ ಪುತ್ರ ಮೀರ್ ಈಗ ದೊಡ್ಡ ಅಣ್ಣನ ಜವಾಬ್ದಾರಿ ವಹಿಸಿಕೊಳ್ಳಲು ಸಜ್ಜಾಗಿರುವಂತೆ ಮುದ್ದಾದ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ.
ಸದ್ಯ ಅಟ್ಲಿ ಮತ್ತು ಪ್ರಿಯಾಗೆ ಚಿತ್ರರಂಗದ ಹಲವರು ಶುಭಾಶಯ ಕೋರುತ್ತಿದ್ದಾರೆ. ದಳಪತಿ ವಿಜಯ್, ರಶ್ಮಿಕಾ ಮಂದಣ್ಣ, ಸಮಂತಾ ಸೇರಿದಂತೆ ಅನೇಕರು ಅಟ್ಲಿ ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನೂ ಇವರ ಅಭಿಮಾನಿಗಳ ಸಂಭ್ರಮ ಕೂಡ ಸದ್ಯ ಮುಗಿಲು ಮುಟ್ಟಿದೆ.
ಅಂದ್ಹಾಗೇ ಅಟ್ಲಿ ಮತ್ತು ಪ್ರಿಯಾ ಅವರದ್ದು ಲವ್ ಮ್ಯಾರೇಜ್. ಚಿತ್ರರಂಗದಲ್ಲಿ ಅಟ್ಲಿ ಸೈಕಲ್ ಹೊಡೆಯುತ್ತಿದ್ದ ದಿನಗಳಲ್ಲಿಯೂ ಕೂಡ ಬೆನ್ನ ಹಿಂದೆ ಬಂಡೆಗಲ್ಲಿನಂತೆ ನಿಂತಿದ್ದವರು ಪ್ರಿಯಾ. ಹಲವು ವರ್ಷಗಳ ಕಾಲ ಪ್ರೀತಿಸಿ 2014ರಲ್ಲಿ ಮದುವೆಯಾಗಿದ್ದರು.
ಮದುವೆಯಾದ ಎಂಟು ವರ್ಷಗಳ ನಂತರ ಅಂದರೆ, 2023ರ ಜನವರಿ 31ರಂದು ಮೊದಲ ಮಗುವನ್ನು ಇಬ್ಬರು ಸ್ವಾಗತಿಸಿದ್ದರು. ಮಗನಿಗೆ ಮೀರ್ ಎಂದು ನಾಮಕರಣವನ್ನು ಮಾಡಿದ್ದರು. ಈಗ ಎರಡನೇ ಮಗುವನ್ನು ದಂಪತಿ ಬರ ಮಾಡಿಕೊಂಡಿದ್ದು ಕುಟುಂಬದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ.
ಇನ್ನುಳಿದಂತೆ ಅಟ್ಲಿ ಈಗ ಕೇವಲ ದಕ್ಷಿಣಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಉತ್ತರ ಭಾರತದಲ್ಲಿಯೂ ಇವರ ಹವಾ ಇದೆ. ಶಾರುಖ್ ಖಾನ್ ಅವರ ವೃತ್ತಿ ಬದುಕಿನ ಬಹುದೊಡ್ಡ ಬ್ಲಾಕ್ ಬಸ್ಟರ್ ''ಜವಾನ್'' ಚಿತ್ರವನ್ನು ನಿರ್ದೇಶಿಸಿರುವ ಹೆಗ್ಗಳಿಕೆಯೂ ಇವರಿಗಿದೆ. ಸದ್ಯ ಅಲ್ಲು ಅರ್ಜುನ್ ಜೊತೆ ''ರಾಕಾ'' ಚಿತ್ರವನ್ನು ಅಟ್ಲಿ ಮಾಡುತ್ತಿದ್ದು ದೀಪಿಕಾ ಪಡುಕೋಣೆ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹಾಲಿವುಡ್‌ಗೆ ಸೆಡ್ಡು ಹೊಡೆಯುವಂತಹ ಸಿನಿಮಾ ಇದು ಎನ್ನುವ ಮಾತು ಸದ್ಯ ಕೇಳಿ ಬರುತ್ತಿದ್ದು ವೈಯಕ್ತಿಕವಾಗಿ ಅಲ್ಲು ಅರ್ಜುನ್ ಅವರಿಗೆ ಈ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆಗಳಿವೆ.


Click it and Unblock the Notifications