ಪ್ರಧಾನಿ ಮೋದಿ ಕುರಿತು ಮತ್ತೊಂದು ಬಯೋಪಿಕ್; 'ಬಾಹುಬಲಿ' ಚಿತ್ರದ ನಟ ಹೀರೋ?
ಚಿತ್ರರಂಗದಲ್ಲಿ ಬಯೋಪಿಕ್ ಸಿನಿಮಾಗಳಿಗೇನು ಬರವಿಲ್ಲ. ಸಿನಿಮಾ ತಾರೆಯರು, ರಾಜಕೀಯ ನಾಯಕರು, ಕ್ರೀಡಾ ಸಾಧಕರ ಜೀವನದ ಕಥೆಯನ್ನು ತೆರೆಮೇಲೆ ತರುವ ಪ್ರಯತ್ನ ಸಾಕಷ್ಟು ಬಾರಿ ನಡೆದಿದೆ. ಮತ್ತೆ ಮತ್ತೆ ಇದೇ ಸಾಹಸಕ್ಕೆ ಹಲವರು ಕೈ ಹಾಕುತ್ತಿದ್ದಾರೆ.
ಪ್ರಧಾನಿ ಮೋದಿ ಜೀವನವನ್ನಾಧರಿಸಿ ಈಗಾಗಲೇ ಬಾಲಿವುಡ್‌ನಲ್ಲಿ ಒಂದು ಸಿನಿಮಾ ಬಂದು ಹೋಗಿದೆ. ಆದರೆ ಚಿತ್ರ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಒಮಂಗ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ನರೇಂದ್ರ ಮೋದಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದರು. 5 ವರ್ಷಗಳ ಹಿಂದೆ ಸಿನಿಮಾ ತೆರೆಗೆ ಬಂದಿತ್ತು. ಸಿನಿಮಾ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

ನಾಯಕನನ್ನು ಹೊಗಳುವ ಭರದಿಂದ ಸತ್ಯ ಸಂಗತಿಯನ್ನು ತೇಲಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಮೋದಿ ಬಯೋಪಿಕ್ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ಆದರೆ ಈ ಬಾರಿ ಬಾಲಿವುಡ್‌ನಲ್ಲಿ ಅಲ್ಲ. ಸೌತ್ ಸಿನಿದುನಿಯಾದಲ್ಲಿ ಇಂತಾದೊಂದು ಪ್ರಯತ್ನ ನಡೀತಿದೆ.
ಸಿ.ಎಚ್.ಕ್ರಾಂತಿ ಕುಮಾರ್ ನಿರ್ದೇಶನದಲ್ಲಿ ವಂದೇ ಮೀಡಿಯಾ ಪ್ರೈ. ಲಿ ಬ್ಯಾನರ್ ಅಡಿಯಲ್ಲಿ ಕಾಶಿರೆಡ್ಡಿ ಶರತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಾರೆ ಎನ್ನಲಾಗ್ತಿದೆ. ತಮಿಳು ನಟ ಸತ್ಯರಾಜ್ ಚಿತ್ರದಲ್ಲಿ ಪ್ರಧಾನಿ ಮೋದಿ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಸತ್ಯರಾಜ್ ಜೊತೆಗೆ ಅಭಯ್ ಡಿಯೋಲ್, ಅನುಪಮ್ ಖೇರ್, ನೀನಾ ಗುಪ್ತಾ, ಪಲ್ಲವಿ ಜೋಶಿ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಚಿತ್ರಕ್ಕೆ ಕಾಲಭೈರವ ಸಂಗೀತ ಸಂಯೋಜನೆ ಮಾಡಲಿದ್ದಾರೆ.
'ಬಾಹುಬಲಿ' ಸರಣಿ ಸಿನಿಮಾಗಳಲ್ಲಿ ಕಟ್ಟಪ್ಪ ಪಾತ್ರದಲ್ಲಿ ನಟಿಸಿ ಸತ್ಯರಾಜ್ ಗೆದ್ದಿದ್ದರು. ಆ ಪಾತ್ರಕ್ಕೆ ಮತ್ಯಾರು ಅಷ್ಟರಮಟ್ಟಿಗೆ ನ್ಯಾಯ ಒದಗಿಸುವುದಿಲ್ಲ ಎನ್ನುವಂತೆ ನಟಿಸಿ ಮೋಡಿ ಮಾಡಿದ್ದರು. ಇದೀಗ ಪ್ರಧಾನಿ ಮೋದಿ ಪಾತ್ರದಲ್ಲಿ ಸತ್ಯರಾಜ್ ಹೇಗೆ ಕಾಣಿಸಿಕೊಳ್ಳುತ್ತಾರೆ? ಎನ್ನುವ ಕುತೂಹಲ ಕೆಲವರಲ್ಲಿದೆ. ಇನ್ನು ಸತ್ಯರಾಜ್ ಈ ಚಿತ್ರಕ್ಕೆ ಒಪ್ಪಿದ್ದಾರಾ? ಎನ್ನುವುದು ಇನ್ನಷ್ಟೆ ತಿಳಿಯಬೇಕಿದೆ.

'ವಿಶ್ವನೇತ' ಟೈಟಲ್‌ನಲ್ಲಿ ಈ ಬಾರಿ ಪ್ರಧಾನಿ ಮೋದಿ ಬಯೋಪಿಕ್ ಬರುತ್ತದೆ ಎಂದು ಚರ್ಚೆ ನಡೀತಿದೆ.
ಗುಜರಾತ್ ಮೂಲದ ಪ್ರಧಾನಿ ಮೋದಿ ಮೊದಲಿಗೆ ಟೀ ಮಾರುತ್ತಿದ್ದರು. ಬಳಿಕ ಹಂತ ಹಂತವಾಗಿ ಬೆಳೆದು ಇಂದು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಎರಡು ಬಾರಿ ಪ್ರಧಾನಿಯಾಗಿ ಆಳ್ವಿಕೆ ನಡೆಸಿದ್ದಾರೆ. 3ನೇ ಬಾರಿ ಪ್ರಧಾನಿಯಾಗಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಅವರ ಪೂರ್ಣ ಹೆಸರು ನರೇಂದ್ರ ದಾಮೋದರ ದಾಸ್ ಮೋದಿ. ಅವರು 2001 ರಿಂದ 2014 ರವರೆಗೆ ಮೂರು ಬಾರಿ ಗುಜರಾತ್ ರಾಜ್ಯದ ಸಿಎಂ ಆಗಿ ಸೇವೆ ಸಲ್ಲಿಸಿದ್ದರು.
ಬಳಿಕ ರಾಷ್ಟ್ರರಾಜಕಾರಣಕ್ಕೆ ಧುಮುಕಿದರು. 2014ರ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದರು. ಒಂದೇ ಕಥೆಯನ್ನು ಎರಡೆರಡು ಬಾರಿ ಸಿನಿಮಾ ಮಾಡಿರುವು ಉದಾಹರಣೆಗಳಿವೆ. ಈಗಾಗಲೇ ಹಿಂದಿಯಲ್ಲಿ ಮೋದಿ ಬಯೋಪಿಕ್ ಬಂದಿದ್ದರೂ ಮತ್ತೊಮ್ಮೆ ಅದೇ ಕಥೆಯನ್ನು ತೆರೆಗೆ ತರುವ ಸನ್ನಾಹ ನಡೀತಿದೆ.
ಒಂದ್ಕಾಲದಲ್ಲಿ ಹೀರೊ ಆಗಿ ತಮಿಳು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದ ಸತ್ಯರಾಜ್ ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. ನಾಯಕ, ನಾಯಕಿಯ ತಂದೆ ಪಾತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಆದರೆ 'ಬಾಹುಬಲಿ' ಚಿತ್ರದ ಕಟ್ಟಪ್ಪ ಪಾತ್ರ ದೊಡ್ಡ ಬ್ರೇಕ್ ನೀಡಿತ್ತು.


Click it and Unblock the Notifications











