3 ತಿಂಗಳಿನಲ್ಲಿ 3 ಚಿತ್ರಗಳಲ್ಲಿ ಕಾಣಿಸಿಕೊಂಡ ಚೆಲುವೆ, ವಿಲನ್ ಪಾತ್ರದಲ್ಲಿ ಕೂಡ ಅಬ್ಬರಿಸಿದ ನಟಿ..!
ಯಾವತ್ತು, ಎಲ್ಲಿ, ಯಾರಿಗೆ, ಹೇಗೆ ಅದೃಷ್ಟ ಒಲಿಯುತ್ತೆ ಎನ್ನುವುದನ್ನು ಯಾರಿಂದ ಕೂಡ ಊಹಿಸಲು ಸಾಧ್ಯವಾಗುವುದಿಲ್ಲ. ಆದರೆ ಒಮ್ಮೊಮ್ಮೆ ಅದೆಷ್ಟೇ ಅಲೆದಾಡಿದರೂ ಒಲಿಯದ ಅದೃಷ್ಟ ಎಂಬ ಮಾಯೆ, ಕೆಲವರ ಪಾಲಿಗೆ ಹಲವು ಸಂದರ್ಭಗಳಲ್ಲಿ ಬಯಸದೇನೆ ಒತ್ತರಿಸಿಕೊಂಡು ಬರೋದಿದೆ. ಬೇಡ ಬೇಡ ಎಂದರೂ ಕೂಡ ಇವರಿಗೆ ಅವಕಾಶಗಳು ಸಿಗುತ್ತಲೇ ಇರುತ್ತಾವೆ. ಸೋಲು ಕೂಡ ಇವರ ಹತ್ತಿರ ಸುಳಿಯಲು ಸಾಧ್ಯವಾಗುವುದಿಲ್ಲ.
ಇದಕ್ಕೆ ರೆಜಿನಾ ಕ್ಯಾಸಂಡ್ರಾ ಸದ್ಯದ ಉದಾಹರಣೆ. ಹೌದು, ರೆಜಿನಾ ಕ್ಯಾಸಂಡ್ರಾ.. ಸೂರ್ಯಕಾಂತಿಯ ಸುಂದರಿ. ಹದಿನೈದು ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದ ರೆಜಿನಾ ಕನ್ನಡಿಗರ ಹೃದಯವನ್ನು ಗೆದ್ದರು. ಇವರ ಮೌನಿ ನಾನು ಹಾಡು ಇವತ್ತು ಕೂಡ ಫೇಮಸ್.

ಸೂರ್ಯಕಾಂತಿ ಚಿತ್ರದ ನಂತರ ಚಿತ್ರರಂಗದಲ್ಲಿ ರೆಜಿನಾ ಒಂದೊಂದೇ ಮೆಟ್ಟಿಲನ್ನೇರಿದರು. ತೆಲುಗು, ತಮಿಳಿನಲ್ಲಿ ಒಂದಾದ ಮೇಲೊಂದರಂತೆ ಅವಕಾಶಗಳನ್ನು ಪಡೆದರು. ಹಿಂದಿಯಲ್ಲಿ ಕೂಡ ಮಿಂಚಿದರು. ಇದರ ನಡುವೆ ಆಗಾಗ ತಮ್ಮ ಮಾತುಗಳಿಂದ ಸುದ್ದಿಯಾದರು. ಇವರ "ಹುಡುಗರು, ಮ್ಯಾಗಿ ಎರಡೂ ಒಂದೇ.. 2 ನಿಮಿಷದಲ್ಲಿ ಮುಗಿದು ಹೋಗುತ್ತೆ" ಎಂಬ ಹೇಳಿಕೆಯನ್ನು ಇನ್ನು ಅನೇಕರು ಮರೆತಿಲ್ಲ.
ಇಂಥಾ ರೆಜಿನಾ ಅಭಿನಯದ ಮೂರು ಚಿತ್ರಗಳು ಮೂರು ತಿಂಗಳಿನಲ್ಲಿ ಬಿಡುಗಡೆಯಾಗಿವೆ. ಆ ಪೈಕಿ ಎರಡು ಬೇರೆ ಬೇರೆ ಭಾಷೆಯ ಸಿನಿಮಾಗಳು ಎನ್ನುವುದು ಮತ್ತೊಂದು ವಿಶೇಷ. ಹೌದು ವರ್ಷದ ಆರಂಭದಲ್ಲಿ ರೆಜಿನಾ ವಿಡಾಮುಯಾರ್ಚಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ತಮಿಳಿಗರ ತಲಾ ಅಜಿತ್ ಅಭಿನಯಿಸಿದ್ದ ಈ ಚಿತ್ರದಲ್ಲಿ ತ್ರಿಶಾ ನಾಯಕಿಯಾದರು ಕೂಡ ರೆಜಿನಾ ತಮ್ಮ ಅಭಿನಯದಿಂದ ಎಲ್ಲರ ಗಮನ ಸೆಳೆದರು. ಈ ವರ್ಷದ ಫೆಬ್ರವರಿಯಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು.
ವಿಡಾಮುಯಾರ್ಚಿ ಚಿತ್ರದ ನಂತರ ರೆಜಿನಾ ಅಭಿನಯದ ಜಾಟ್ ಚಿತ್ರ ಈ ತಿಂಗಳಿನಲ್ಲಿ ತೆರೆಗೆ ಬಂತು. ಏಪ್ರಿಲ್ ಹತ್ತರಂದು ಬಿಡುಗಡೆಯಾದ ಈ ಚಿತ್ರದಲ್ಲಿ ರೆಜಿನಾ ವಿಭಿನ್ನವಾದ ಪಾತ್ರವನ್ನು ನಿರ್ವಹಿಸಿದ್ದರು. ಗ್ಲ್ಯಾಮರಸ್ ಪಾತ್ರವನ್ನು ನಿರ್ವಹಿಸದೇ ಖಳನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದರು. ರಣ್‌ದೀಪ್ ಹೂಡ ಮತ್ತು ಸನ್ನಿ ಡಿಯೋಲ್ ಮುಂದೆ ರೆಜಿನಾ ಮಿಂಚಿದರು.
ಜಾಟ್ ಚಿತ್ರದಲ್ಲಿ ರೆಜಿನಾ ಅಭಿನಯಕ್ಕೆ ಹಿಂದಿ ಪ್ರೇಕ್ಷಕರು ಎಷ್ಟರ ಮಟ್ಟಿಗೆ ಮನ ಸೋತಿದ್ದಾರೆ ಅಂದರೆ ಅನೇಕರು ರೆಜಿನಾ ಹೆಸರನ್ನು ಗೂಗಲ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೆಜಿನಾ ಅವರ ಅಭಿನಯದ ಬಗ್ಗೆ ಚರ್ಚೆಯನ್ನು ಮಾಡುತ್ತಿದ್ದಾರೆ.
ಜಾಟ್ ಚಿತ್ರ ಇನ್ನು ಚಿತ್ರಮಂದಿರದಲ್ಲಿ ಇದೆ. ಹಲವಡೆ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಹೀಗೀರುವಾಗ ಇಂದು ರೆಜಿನಾ ಅಭಿನಯದ ಮತ್ತೊಂದು ಹಿಂದಿ ಚಿತ್ರ ಕೇಸರಿ ಚಾಪ್ಟರ್ 2 ಚಿತ್ರ ಬಿಡುಗಡೆಯಾಗಿದೆ. ಅಕ್ಷಯ್ ಕುಮಾರ್, ಆರ್.ಮಾಧವನ್, ಅನನ್ಯಾ ಪಾಂಡೆ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದು ರೆಜಿನಾ ಅವರ ಪಾತ್ರಕ್ಕೂ ಕೂಡ ತುಂಬಾನೇ ಮಹತ್ವವನ್ನು ನೀಡಲಾಗಿದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಕೇಸರಿ 2 ಬಾಕ್ಸಾಫೀಸ್‌ನಲ್ಲಿ ಗೆಲ್ಲುವ ಎಲ್ಲ ಲಕ್ಷಣ ಕೂಡ ಕಂಡು ಬರುತ್ತಿದೆ.
ಹೀಗೆ ಫೆಬ್ರವರಿ, ಮಾರ್ಚ್, ಏಪ್ರಿಲ್ ಈ ಮೂರು ತಿಂಗಳಿನಲ್ಲಿ ರೆಜಿನಾ ಅಭಿನಯದ ಮೂರು ಚಿತ್ರಗಳು ತೆರೆಗೆ ಬಂದಿವೆ. ವಿಶೇಷ ಅಂದರೆ ಕೇವಲ ಗ್ಲ್ಯಾಮರ್ ಪಾತ್ರಗಳಿಗೆ ಮಾತ್ರ ಸೀಮಿತವಾಗದ ರೆಜಿನಾ ಈ ಮೂರು ಚಿತ್ರಗಳಲ್ಲಿಯೂ ಭಿನ್ನವಾದ ಪಾತ್ರಗಳನ್ನು ಮಾಡಿದ್ದಾರೆ. ಈ ಮೂಲಕ ತಮ್ಮ ಅಭಿನಯ ಸಾಮರ್ಥ್ಯದ ಪ್ರದರ್ಶನವನ್ನು ಮಾಡಿದ್ದಾರೆ. ತಮಿಳು ಜೊತೆ ಹಿಂದಿ ಪ್ರೇಕ್ಷಕರ ಹೃದಯವನ್ನು ಕೂಡ ಗೆದ್ದಿದ್ದಾರೆ.
ಅಂದ್ಹಾಗೇ 2018ರಲ್ಲಿ ರೆಜಿನಾ ಹಿಂದಿಯಲ್ಲಿ ಏಕ್ ಲಡ್ಕೀ ಕೋ ದೇಖಾ ತೋ ಐಸಾ ಲಗಾ ಎಂಬ ಚಿತ್ರವನ್ನು ಮಾಡಿದ್ದರು. ಆ ನಂತರ ಬಾಲಿವುಡ್‌ನಿಂದ ದೂರ ಇದ್ದ ರೆಜಿನಾ ಈ ವರ್ಷ ಬ್ಯಾಕ್ ಟು ಬ್ಯಾಕ್ ಎರಡು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರೆಜಿನಾ ಅಭಿನಯದ ಮತ್ತೊಂದು ಹಿಂದಿ ಚಿತ್ರ ಸೆಕ್ಷನ್ 108 ಇನ್ನು ತೆರೆಗೆ ಬರಬೇಕಿದೆ.


Click it and Unblock the Notifications











