ತಿರುಪತಿ ಲಡ್ಡು ವಿವಾದ; ಕ್ಯೂನ್ ಭಾಯ್? ಎಂದು ಪ್ರಶ್ನಿಸಿದ ಖುಷ್ಬೂ
ತಿರುಮಲ ತಿರುಪತಿ ಲಡ್ಡು ವಿವಾದ ಭಾರೀ ಸುದ್ದಿ ಮಾಡುತ್ತಿದೆ. ಸದ್ಯ ಈ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಎಪಿ ಡಿಸಿಎಂ ಪವನ್ ಕಲ್ಯಾಣ್ ಹಾಗೂ ನಟ ಪ್ರಕಾಶ್ ರಾಜ್ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ. ಈಗಾಗಲೇ ಹಲವರು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜಗನ್ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡೂ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಸೇರಿಸಲಾಗಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಲ್ಯಾಬ್ ವರದಿಯಲ್ಲೂ ಇದು ಬಹಿರಂಗವಾಗಿದೆ ಎಂದು ಟಿಡಿಪಿ ಪಕ್ಷ ಹೇಳುತ್ತಿದೆ. ಡಿಸಿಎಂ ಪವನ್ ಕಲ್ಯಾಣ್ ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಸನಾತನ ಧರ್ಮದ ಮೇಲಿನ ದಾಳಿಯನ್ನು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮತ್ತು ನಿಷೇಧಿತ ವಸ್ತುಗಳನ್ನು ಬೆರೆಸಿದ್ದಾರೆ ಎನ್ನುವುದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿಚಾರ ಎಂದು ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲ ಸಿನಿಮಾ ತಾರೆಯರು ಸಹ ಇದಕ್ಕೆ ದನಿಗೂಡಿಸಿದ್ದಾರೆ. ನಟಿ ಪ್ರಣೀತಾ ಸುಭಾಷ್ ಇತ್ತೀಚೆಗೆ ಈ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದರು. ಇದೀಗ ಹಿರಿಯ ನಟಿ ಖುಷ್ಬೂ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
"ತಿರುಪತಿ ಲಡ್ಡೂ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಿಂದೂ ಧರ್ಮವನ್ನು ಗುರಿಯಾಗಿಸಿಕೊಂಡಾಗಲೆಲ್ಲ ನಾವು ಎಲ್ಲಾ ನಡೆಯುತ್ತೆ (ಚಲತಾ ಹೈ) ಮನೋಭಾವವನ್ನು ಹೊಂದಬೇಕೆಂದು ನಾನು ಗಮನಿಸಿದ್ದೇನೆ. ಯಾಕಪ್ಪಾ? (ಕ್ಯೂನ್ ಭಾಯ್?) ಭಾಯ್? ಒಂದು ನಿರ್ದಿಷ್ಟ ಧರ್ಮವನ್ನು ನಿಂದಿಸುವವನ್ನು, ನಾನು ಕೇಳುತ್ತೇನೆ, ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮದ ಬಗ್ಗೆ ಇದೇ ರೀತಿ ಮಾತನಾಡಲು ನಿಮಗೆ ಧೈರ್ಯವಿದೆಯೇ? ಎಂದು ನಟಿ ಖುಷ್ಬೂ ಪ್ರಶ್ನಿಸಿದ್ದಾರೆ.
ಬೇರೆ ಯಾವುದೇ ಧರ್ಮವನ್ನು ನಿಂದಿಸುವ ಆಲೋಚನೆಯಲ್ಲಿಯೂ ಕೂಡ ನಿಮ್ಮ ಬೆನ್ನುಮೂಳೆ ನಡುಗುತ್ತದೆ. ಸೆಕ್ಯುಲರಿಸಂ ಎಂದರೆ ಪ್ರತಿಯೊಂದು ಧರ್ಮವನ್ನು ಗೌರವಿಸುವುದು. ಪಕ್ಷಪಾತಿ ಆಗಬಾರದು. ನಾನು ಕೂಡ ಇಸ್ಲಾಂ ಕುಟುಂಬದಲ್ಲಿ ಹುಟ್ಟಿದ್ದೇನೆ. ಆದರೆ ಹಿಂದೂ ವ್ಯಕ್ತಿಯನ್ನು ಮದುವೆ ಆಗಿದ್ದೇನೆ. ನನಗೆ ಎಲ್ಲ ಧರ್ಮಗಳೂ ಒಂದೇ. ಹಿಂದೂ ಧರ್ಮವನ್ನು ಅವಮಾನಿಸುವುದು ಅಥವಾ ಲಘುವಾಗಿ ತೆಗೆದುಕೊಳ್ಳುವುದನ್ನು ಬಿಡಿ. ಅಂತಹ ಯಾವುದೇ ಅಗೌರವವನ್ನು ಸಹಿಸುವುದಿಲ್ಲ" ಎಂದು ಬರೆದುಕೊಂಡಿದ್ದಾರೆ.
"ತಿರುಪತಿ ಲಡ್ಡುವಿನಲ್ಲಿ ಹೀಗೆ ಪ್ರಾಣಿಗಳ ಕೊಬ್ಬು ಸೇರಿಸಿದ್ದಾರೆ ಎನ್ನುವುದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಭಾವನೆಗಳು ಮತ್ತು ನಂಬಿಕೆಗಳಿಗೆ ನೋವುಂಟು ಮಾಡುತ್ತವೆ. ಯಾರೇ ಇದಕ್ಕೆ ಹೊಣೆಗಾರರಾಗಿದ್ದರೂ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ವೆಂಕಟೇಶ್ವರ ಸ್ವಾಮಿ ನೋಡುತ್ತಿದ್ದಾನೆ" ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ.
ಸಾಕಷ್ಟು ಜನ ನಟಿ ಖುಷ್ಬೂ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಆಕೆಗೆ ಬೆಂಬಲ ಸೂಚಿಸಿ ಕಾಮೆಂಟ್ ಮಾಡಿದ್ದಾರೆ. ಸರಿಯಾಗಿ ಹೇಳಿದ್ದೀರಾ ಮೇಡಂ? ಎನ್ನುತ್ತಿದ್ದಾರೆ. ಸಾವಿರಾರು ಟ್ವಿಟ್ಟಿಗರು ಲೈಕ್ಸ್, ಕಾಮೆಂಟ್ಸ್ ಹಾಗೂ ರೀಟ್ವೀಟ್ ಮಾಡುತ್ತಿದ್ದಾರೆ.
ವೆಂಕಟೇಶ್ವರನ ಆಲಯದ ಪಾವಿತ್ರ್ಯತೆಗೇ ಧಕ್ಕೆ ತಂದ ಲಡ್ಡೂ ವಿಚಾರ ಸಂಬಂಧ ಇತ್ತೀಚೆಗೆ ಅರ್ಚಕರು ಶುದ್ಧೀಕರಣ ಕಾರ್ಯ ನಡೆಸಿದರು. ಮಹಾ ಶಾಂತಿ ಹೋಮ ಮಾಡಿ ತಿರುಪತಿಗೆ ಅಂಟಿರುವ ಕಳಂಕ ನಿವಾರಣೆ ಮಾಡುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಅಷ್ಟೇ ಅಲ್ಲ ಲಡ್ಡು ತಯಾರು ಮಾಡುವ ಕೇಂದ್ರದಲ್ಲೂ ಶುದ್ಧೀಕರಣ ಮಾಡಲಾಗಿತ್ತು.
ಈ ಹಿಂದೆ ಲಡ್ಡೂ ತಯಾರಿಸಲು ಕರ್ನಾಟಕದ ನಂದಿನಿ ತುಪ್ಪ ಸರಬರಾಜು ಆಗುತ್ತಿತ್ತು. ಆದರೆ ಕೆಲ ವರ್ಷಗಳ ಹಿಂದೆ ನಂದಿನಿ ತುಪ್ಪ ಬಿಟ್ಟು ಬೇರೆ ತುಪ್ಪ ಬಳಸಲು ತೀರ್ಮಾನಿಸಲಾಗಿತ್ತು. ಈ ವೇಳೆ ಬಳಸಿದ ತುಪ್ಪವನ್ನು ತಯಾರಿಸಲು ಮೀನಿನ ಎಣ್ಣೆ, ದನದ ಕೊಬ್ಬು ಹಾಗೂ ಹಂದಿ ಕೊಬ್ಬು ಮಿಶ್ರಣ ಮಾಡಲಾಗಿತ್ತು ಎನ್ನುವ ಆರೋಪ ಕೇಳಿಬಂದಿದೆ. ಆದರೆ ಆ ಆರೋಪವನ್ನು ಆಂಧ್ರದ ಮಾಜಿ ಸಿಎಂ ಜಗನ್ ಅಲ್ಲಗಳೆದಿದ್ದಾರೆ.


Click it and Unblock the Notifications











