Trisha Krishnan: ಮಲಯಾಳಂ ನಿರ್ಮಾಪಕನ ಜೊತೆ ಮದುವೆ..? ಕೊನೆಗೂ ಮೌನ ಮುರಿದ ತ್ರಿಶಾ
ಬಹುಭಾಷಾ ನಟಿ ತ್ರಿಶಾ ಮದುವೆ ಬಗ್ಗೆ ಕಳೆದೆರಡು ದಿನಗಳಿಂದ ಭಾರೀ ಚರ್ಚೆ ನಡೀತಿದೆ. ಮಲಯಾಳಂ ನಿರ್ಮಾಪಕರೊಬ್ಬರನ್ನು ಚೆನ್ನೈ ಚೆಲುವೆ ಕೈ ಹಿಡಿಯುತ್ತಾರೆ ಎನ್ನುವ ಸುದ್ದಿ ವೈರಲ್ ಆಗ್ತಿತ್ತು. ಇದೀಗ ಖುದ್ದು ತ್ರಿಶಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆಕೆಯ ಪೋಸ್ಟ್ ಬಗ್ಗೆ ಭಾರೀ ಚರ್ಚೆ ನಡೀತಿದೆ.
ಕನ್ನಡ ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲೂ ತ್ರಿಶಾ ಬಣ್ಣ ಹಚ್ಚಿದ್ದಾರೆ. ಸದ್ಯ ದಳಪತಿ ವಿಜಯ್ ಜೋಡಿಯಾಗಿ 'ಲಿಯೋ' ಚಿತ್ರದಲ್ಲಿ ಆಕೆ ನಟಿಸಿದ್ದಾರೆ. ದಸರಾ ಸಂಭ್ರಮದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ಸಿನಿಮಾ ತಮಿಳು ಜೊತೆಗೆ ಕನ್ನಡ, ತೆಲುಗು, ಮಲಯಾಳಂ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ.

1999ರಲ್ಲಿ ಬಂದ 'ಜೋಡಿ' ಚಿತ್ರದಲ್ಲಿ ತ್ರಿಶಾ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಆ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ಚೆಲುವೆ ಬಳಿಕ ನಾಯಕಿಯಾಗಿ ಪರಿಚಿತರಾದರು. ನಿಧಾನವಾಗಿ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ನಟಿಸೋಕೆ ಶುರು ಮಾಡಿದರು. 'ವರ್ಷಂ' ಸಿನಿಮಾದಲ್ಲಿ ಲಂಗಾ ದಾವಣಿಯಲ್ಲಿ ಕಾಣಿಸಿಕೊಂಡು ತ್ರಿಶಾ ಮೋಡಿ ಮಾಡಿದ್ದರು. ಅಲ್ಲಿಂದ ಮುಂದೆ ಆಕೆಗೆ ಭಾರೀ ಕ್ರೇಜ್ ಶುರುವಾಯಿತು.
ತಮಿಳಿನಲ್ಲಿ ವಿಜಯ್ ಹಾಗೂ ತ್ರಿಶಾ ಕಾಂಬಿನೇಷನ್ ಸೂಪರ್ ಹಿಟ್ ಆಯಿತು. ದಶಕದ ಹಿಂದೆ ಇದ್ದಕ್ಕಿದಂತೆ ಆಕೆಯ ಹವಾ ಕಮ್ಮಿ ಆಯಿತು. '96' ಸಿನಿಮಾ ಮೂಲಕ ಮತ್ತೆ ಕಂಬ್ಯಾಕ್ ಮಾಡಿದ್ದರು. ಇದೀಗ ಮತ್ತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಇತ್ತೀಚೆಗೆ ಬಂದ 'ಪೊನ್ನಿಯಿನ್ ಸೆಲ್ವನ್' ಸರಣಿಯಲ್ಲಿ ಕುಂದವೈ ಆಗಿ ಮತ್ತೊಮ್ಮೆ ಕಮಾಲ್ ಮಾಡಿದರು.

ಇನ್ನು ತ್ರಿಶಾ ವೈಯಕ್ತಿಕ ವಿಚಾರಕ್ಕೆ ಬಂದರೆ ವಯಸ್ಸು ನಲವತ್ತಾದ್ರು ಇನ್ನು ಮದುವೆ ಆಗಿಲ್ಲ. ಅಭಿಮಾನಿಗಳು ಮದುವೆ ಯಾವಾಗ? ಎಂದು ಕೇಳಿ ಕೇಳಿ ಸುಮ್ಮನಾಗಿದ್ದಾರೆ. ಪದೇ ಪದೆ ಆಕೆಯ ಮದುವೆ ವಿಚಾರ ಸದ್ದು ಮಾಡುತ್ತಲೇ ಇರುತ್ತದೆ. ಮಲಯಾಳಂ ನಿರ್ಮಾಪಕರೊಬ್ಬರನ್ನು ಚೆನ್ನೈ ಚೆಲುವೆ ಕೈ ಹಿಡಿಯುತ್ತಾರೆ ಎನ್ನುವ ಗುಸುಗುಸು ಕಳೆದೆರಡು ದಿನಗಳಿಂದ ಭಾರೀ ಸದ್ದು ಮಾಡ್ತಿತ್ತು. ಈ ಬಗ್ಗೆ ಸ್ವತಃ ತ್ರಿಶಾ ಈಗ ಪ್ರತಿಕ್ರಿಯಿಸಿದ್ದಾರೆ.
ಮದುವೆ ವದಂತಿ ಹಬ್ಬಿಸಿದವರಿಗೆ ತ್ರಿಶಾ ಶಾಕ್ ಕೊಟ್ಟಿದ್ದಾರೆ. ಎಕ್ಸ್ (ಟ್ವಿಟ್ಟರ್) ಮೂಲಕ ಪ್ರತಿಕ್ರಿಯಿಸಿರುವ ತ್ರಿಶಾ, ಡಿಯರ್ "ನೀವು ಮತ್ತು ನಿಮ್ಮ ತಂಡ ಯಾರೆಂದು ನಿಮಗೆ ತಿಳಿದಿದೆ, ಸುಮ್ಮನಿರಿ ಮತ್ತು ವದಂತಿಗಳನ್ನು ನಿಲ್ಲಿಸಿ, ಚೀರ್ಸ್" ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಮದುವೆಗೆ ಬಗ್ಗೆ ಕೇಳಿಬರುತ್ತಿರುವ ಗಾಳಿಸುದ್ದಿಗೆ ಬ್ರೇಕ್ ಆಗಿದ್ದಾರೆ.
ತ್ರಿಶಾ ಪೋಸ್ಟ್ ಈಗ ಸಖತ್ ವೈರಲ್ ಆಗ್ತಿದೆ. ಯಾರು ಈ ರೀತಿ ವದಂತಿ ಹಬ್ಬಿಸಿದರು? ಆಕೆ ಗರಂ ಆಗಿದ್ದು ಯಾಕೆ? ಈ ರೀತಿ ತ್ರಿಶಾ ಮದುವೆ ಬಗ್ಗೆ ಗಾಸಿಪ್ ಹಬ್ಬಿಸಿದರೆ ಯಾರಿಗೆ ಏನು ಲಾಭ? ಅಂತೆಲ್ಲಾ ಚರ್ಚೆ ನಡೆಸುತ್ತಿದ್ದಾರೆ.
ನಟಿ ತ್ರಿಶಾ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಜೋಡಿಯಾಗಿ 'ಪವರ್' ಚಿತ್ರದಲ್ಲಿ ಮಿಂಚಿದ್ದರು. ಆ ಚಿತ್ರದ 'ಗುರುವಾರ ಸಂಜೆ' ಸಾಂಗ್‌ನಲ್ಲಿ ತ್ರಿಶಾ ಮೋಡಿ ಮಾಡಿದ್ದರು. ಇನ್ನು ಆಕೆಗೆ ಈ ಹಿಂದೆ ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಆದರೆ ಮದುವೆ ಆಗಲಿಲ್ಲ. 2015ರಲ್ಲಿ ವರುಣ್ ಮಣಿಯನ್ ಎಂಬ ಉದ್ಯಮಿ ಜೊತೆ ಮದುವೆ ನಿಶ್ಚಯವಾಗಿತ್ತು. ಅದ್ಧೂರಿಯಾಗಿಯೇ ಇಬ್ಬರೂ ಉಂಗುರ ಬದಲಿಸಿಕೊಂಡಿದ್ದರು. ಆದರೆ ಬಳಿಕ ಭಿನ್ನಾಭಿಪ್ರಾಯಗಳಿಂದ ಆ ಮದುವೆ ನಿಂತು ಹೋಗಿತ್ತು.


Click it and Unblock the Notifications











