ವಿಜಯ್ ರಾಜಕೀಯಕ್ಕೆ ಬರುವ ಮುನ್ನ ತ್ರಿಷಾ ಮನೆಯಿಂದ ಹೊರಬನ್ನಿ ; ಬಿಜೆಪಿ ನಾಯಕನ ಹೇಳಿಕೆಗೆ ನಟಿ ಪ್ರತಿಕ್ರಿಯೆ
ರಾಜಕೀಯರಂಗದಲ್ಲಿ ನಾಯಕರ ವೈಯಕ್ತಿಕ ನಿಂದನೆ ಹೊಸದೇನು ಅಲ್ಲ. ಸುಖಾಸುಮ್ಮನೆ ಆರೋಪ ಮಾಡಿ ಎದುರಾಳಿಗಳನ್ನು ಕುಗ್ಗಿಸುವುದು, ಅವರ ಬಗ್ಗೆ ಮತದಾರರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ಮಾಡುವ ಪ್ರಯತ್ನ ನಡೆಯುತ್ತದೆ. ತಮಿಳು ನಟ ವಿಜಯ್ ಈಗ ರಾಜಕೀಯರಂಗ ಪ್ರವೇಶಿಸಿದ್ದಾರೆ. ಹಾಗಾಗಿ ಬೇರೆ ಪಕ್ಷದ ಮುಖಂಡರಿಂದ ಟೀಕೆ ಟಿಪ್ಪಣಿ ಎದುರಿಸುವಂತಾಗಿದೆ.
ಟಿವಿಕೆ ಪಕ್ಷ ಸ್ಥಾಪಿಸಿ ಮುಂದಿನ ತಮಿಳುನಾಡು ವಿಧಾನಸಭೆಗೆ ನಟ ವಿಜಯ್ ಸ್ಪರ್ಧಿಸುತ್ತಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಹಸ ಮಾಡುತ್ತಿದ್ದಾರೆ. ವಿಜಯ್ ನಮ್ಮ ಮುಂದಿನ ಸಿಎಂ ಎಂದು ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ. ಸಿನಿಮಾ ಮಂದಿ ರಾಜಕೀಯಕ್ಕೆ ಬಂದು ಸಾಧಿಸುವುದು ಅಷ್ಟರಲ್ಲೇ ಇದೆ ಎನ್ನವ ಚರ್ಚೆ ನಡೀತಿದೆ. ಇನ್ನು ವಿಜಯ್ ಬಗ್ಗೆ ಬಿಜೆಪಿ ಮುಖಂಡ ನೈನಾರ್ ನಾಗೇಂದ್ರನ್ ಅಸಭ್ಯ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ವಿಜಯ್ ರಾಜಕೀಯರಂಗ ಪ್ರವೇಶದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನೈನಾರ್ ನಾಗೇಂದ್ರನ್ ಉತ್ತರಿಸಿದ್ದಾರೆ. "ಪಾಪ ಅವರಿಗೆ ರಾಜಕಿಯ ಅನುಭವವೇ ಇಲ್ಲ. ಮೊದಲು ಮನೆಯಿಂದ ಹೊರಗಡೆ ಬರಬೇಕು. ಜನರ ಜೊತೆ ಬೆರೆಯಬೇಕು. ಅದರಲ್ಲೂ ತ್ರಿಷಾ ಮನೆಯಿಂದ ಹೊರ ಬಂದರೆ ಮಾತ್ರ ಎಲ್ಲವೂ ಸಾಧ್ಯ" ಎಂದು ಅಣಕವಾಡಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೆಲ ರಾಜಕೀಯ ಮುಖಂಡರು ಇದನ್ನು ಖಂಡಿಸಿದ್ದಾರೆ. ಇದೀಗ ತಮ್ಮ ವಕೀಲರ ಮೂಲಕ ನಟಿ ತ್ರಿಷಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮೂರ್ಲಾಲ್ಕು ಸಿನಿಮಾಗಳಲ್ಲಿ ವಿಜಯ್ ಹಾಗೂ ತ್ರಿಷಾ ಒಟ್ಟಿಗೆ ನಟಿಸಿದ್ದಾರೆ. ಜೋಡಿ ಅಭಿಮಾನಿಗಳ ಫೇವರಿಟ್ ಎನಿಸಿಕೊಂಡಿದೆ. ಇಬ್ಬರೂ ಆತ್ಮೀಯ ಸ್ನೇಹಿತರು. ಇಬ್ಬರೂ ಲಿವ್ ಇನ್‌ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎಂದು ಕೆಲವರು ವದಂತಿ ಹಬ್ಬಿಸುತ್ತಿರುತ್ತಾರೆ. ಸದ್ಯ ಬಿಜೆಪಿ ಮುಖಂಡ ನೈನಾರ್ ನಾಗೇಂದ್ರನ್ ಹೇಳಿಕೆ ಬಗ್ಗೆ ತಮ್ಮ ವಕೀಲರು, ಸಲಹೆಗಾರ ನಿತ್ಯೇಶ್ ನಟರಾಜ್ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ನನ್ನ ಕಕ್ಷಿದಾರರಾದ, ನಟಿ ಶ್ರೀಮತಿ ತ್ರಿಶಾ ಕೃಷ್ಣನ್ ಅವರ ಸೂಚನೆಗಳ ಮೇರೆಗೆ, ನಾನು ಈ ಕೆಳಗಿನವುಗಳನ್ನು ದಾಖಲಿಸಲು ಈ ಪ್ರಕಟಣೆಯನ್ನು ಹೊರಡಿಸುತ್ತಿದ್ದೇನೆ ಎಂದು ನಿತ್ಯೇಶ್ ನಟರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕಕ್ಷಿದಾರರ ಬಗ್ಗೆ ಅಸಹ್ಯಕರವಾದ ಕಾಮೆಂಟ್‌ಗೆ ಸಂಬಂಧಿಸಿದಂತೆ, ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಹೊಂದಿರುವ ವ್ಯಕ್ತಿಯಿಂದ ಇಂತಹ ಅಸಹ್ಯಕರ ಮತ್ತು ಅನುಚಿತ ಹೇಳಿಕೆಯನ್ನು ನನ್ನ ಕಕ್ಷಿದಾರ ಎಂದಿಗೂ ನಿರೀಕ್ಷಿಸಿರಲಿಲ್ಲ. ನನ್ನ ಕಕ್ಷಿದಾರರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಅಥವಾ ಆ ಉದ್ದೇಶವೂ ಇಲ್ಲ. ಆಕೆ ತನ್ನನ್ನು ನಟಿಯಾಗಿ ಗುರ್ತಿಸಲು ಬಯಸುತ್ತಾರೆ. ಯಾವುದೇ ಆಪಾದಿತ ರಾಜಕೀಯ ಹೊಂದಾಣಿಕೆಯಿಂದಲ್ಲ. ನನ್ನ ಕಕ್ಷಿದಾರರ ಹೆಸರನ್ನು ಅವರಿಗೆ ಸಂಬಂಧಿಸದ ವಿಷಯಗಳಲ್ಲಿ ಸೇರಿಸಬಾರದು ಎಂದು ವಿನಂತಿಸುತ್ತೇನೆ" ಎಂದು ಹೇಳಿದ್ದಾರೆ.
ವಕೀಲರ ಪತ್ರಿಕಾ ಪ್ರಕಟನೆಯನ್ನು ಹಂಚಿಕೊಂಡಿರುವ ನಟಿ ತ್ರಿಷಾ "ಅಗೌರವವನ್ನು ಯಾವಾಗಲೂ ಖಂಡಿಸಬೇಕು" ಎಂದು ಬರೆದುಕೊಂಡಿದ್ದಾರೆ. ನಟಿ ತ್ರಿಷಾ ಇಂದಿಗೂ ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ.
'ಲಿಯೋ' ಚಿತ್ರದಲ್ಲಿ ಕೊನೆಯದಾಗಿ ವಿಜಯ್ ಹಾಗೂ ತ್ರಿಷಾ ಒಟ್ಟಿಗೆ ನಟಿಸಿದ್ದರು. 'ಜನ ನಾಯಗನ್' ಸಿನಿಮಾ ಬಳಿಕ ವಿಜಯ್ ಸಿನಿಮಾಗಳಲ್ಲಿ ನಟಿಸುವುದು ಅನುಮಾನ ಎನ್ನುವಂತಾಗಿದೆ. 50ಕ್ಕೂ ಅಧಿಕ ಸಿನಿಮಾಗಳಲ್ಲಿ ವಿಜಯ್ ನಟಿಸಿದ್ದಾರೆ. ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ಅಭಿಮಾನಿಗಳ ಬಲದಿಂದಲೇ ರಾಜಕೀಯರಂಗದಲ್ಲಿ ಗೆಲ್ಲುವ ಕನಸು ಕಾಣುತ್ತಿದ್ದಾರೆ.
ಸಮಾವೇಶ, ರ್ಯಾಲಿಗಳನ್ನು ನಡೆಸಿ ವಿಜಯ್ ಟಿವಿಕೆ ಪಕ್ಷ ಸಂಘಟಿಸುವ ಪ್ರಯತ್ನದಲ್ಲಿದ್ದಾರೆ. ಶೀಘ್ರದಲ್ಲೇ ತಮಿಳುನಾಡು ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಆಗಲಿದೆ. ಇನ್ನೆರಡು ತಿಂಗಳಲ್ಲಿ ಮತದಾನ ನಡೆಯುವ ನಿರೀಕ್ಷೆಯಿದೆ.


Click it and Unblock the Notifications











