"ನನ್ನ ಸ್ನೇಹಿತರೇ ತುಂಬಾ ಜನ ಮದುವೆ ಆಗಿ ಇಷ್ಟವಿಲ್ಲದ ಜೀವನ ಸಾಗಿಸುತ್ತಿದ್ದಾರೆ"; ಡಿವೋರ್ಸ್ ಬಗ್ಗೆ ಅಂದೇ ಮಾತನಾಡಿದ್ದ ತ್ರಿಶಾ
ದಳಪತಿ ವಿಜಯ್ ಹಾಗೂ ಪತ್ನಿ ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ನಟಿಯ ಜೊತೆಗಿನ ವಿಜಯ ಸಂಬಂಧವೇ ಇದಕ್ಕೆಲ್ಲಾ ಕಾರಣ ಎಂದು ಸಂಗೀತಾ ಆರೋಪಿಸಿದ್ದಾರೆ. ಡಿವೋರ್ಸ್ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಟ ವಿಜಯ್ ಜೊತೆ ನಟಿ ತ್ರಿಶಾ ಹೆಸರು ತಳುಕು ಹಾಕಿಕೊಂಡಿದೆ.
ತ್ರಿಶಾ ಕಾರಣಕ್ಕೆ ವಿಜಯ್ ಹಾಗೂ ಸಂಗೀತಾ ದಂಪತಿ ದೂರಾಗುತ್ತಿದ್ದಾರೆ ಎನ್ನುವ ಚರ್ಚೆ ಜೋರಾಗಿ ನಡೀತಿದೆ. ಇತ್ತೀಚೆಗೆ ತಮಿಳುನಾಡು ಬಿಜೆಪಿ ಮುಖಂಡರೊಬ್ಬರು "ಮೊದಲು ತ್ರಿಶಾ ಮನೆಯಿಂದ ಹೊರಬಂದು ವಿಜಯ್ ರಾಜಕೀಯ ಮಾಡಲಿ" ಎಂದು ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಹಿಂದೆಯೇ ವಿಜಯ್, ಸಂಗೀತಾ ಡಿವೋರ್ಸ್ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಇದಕ್ಕೆಲ್ಲಾ ನಟಿ ತ್ರಿಶಾ ಕಾರಣ ಎನ್ನುವ ಊಹಾಪೋಹ ಸದ್ದು ಮಾಡಿತ್ತು. ಇದೀಗ ನಟಿಯೊಬ್ಬಳ ಕಾರಣಕ್ಕೆ ನಮ್ಮ ಸಂಸಾರ ಡಿವೋರ್ಸ್ ಮಟ್ಟಕ್ಕೆ ಹೋಗಿದೆ ಎಂದು ಸ್ವತಃ ಸಂಗೀತಾ ಹೇಳುತ್ತಿರುವುದು. ಅವಶ್ಯಕತೆ ಬಿದ್ದರೆ ಆಕೆಯ ಹೆಸರು ಹೇಳುತ್ತೇನೆ ಎಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ವಯಸ್ಸು 40 ದಾಟಿದ್ರು ನಟಿ ತ್ರಿಶಾ ಇನ್ನು ಮದುವೆ ಆಗಿಲ್ಲ. ಈ ಹಿಂದೆ ಒಮ್ಮೆ ಉದ್ಯಮಿ ಒಬ್ಬರ ಜೊತೆ ಎಂಗೇಜ್‌ಮೆಂಟ್ ನಡೆದಿತ್ತು. ಬಳಿಕ ಅದು ಮುರಿದು ಬಿದ್ದಿತ್ತು. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ತ್ರಿಶಾ ತಮ್ಮ ಅಭಿಪ್ರಾಯ ತಿಳಿಸಿದ್ದರು. ಆ ವೀಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. Indiaglitz.com ಯೂಟ್ಯೂಬ್ ಸಂದರ್ಶನದಲ್ಲಿ ತ್ರಿಶಾ ಮಾತನಾಡಿದ್ದರು.
"ನಿಮ್ಮ ಮದುವೆ ಯಾವಾಗ ಎಂದು ಸಾಕಷ್ಟು ಜನ ನನ್ನನ್ನು ಕೇಳುತ್ತಿರುತ್ತಾರೆ. ಈ ಪ್ರಶ್ನೆಗೆ ಸರಿಯಾದ ಉತ್ತರ ಹೇಳಲಾರೆ. ಕಾರಣ, ಸರಿಯಾದ ವ್ಯಕ್ತಿ ಸಿಕ್ಕಿದ್ದಾಗ ಮದುವೆ ಆಗ್ತೀನಿ. ನನಗೆ ಸೂಕ್ತವಾದ ವ್ಯಕ್ತಿ ಸಿಗದೇ ಇದ್ದರೆ ಮದುವೆ ಆಗದೇ ಇದ್ದರೂ ಪರವಾಗಿಲ್ಲ. ಮದುವೆ ಆಗಿ ಡಿವೋರ್ಸ್ ಆಗುವುದು ನನಗೆ ಇಷ್ಟವಿಲ್ಲ. ಹಾಗಾಗಿ ಆತುರಬಿದ್ದು ಮದುವೆ ಆಗಲ್ಲ. ನನ್ನ ಸ್ನೇಹಿತರಲ್ಲೇ ಸಾಕಷ್ಟು ಜನ ಇಷ್ಟವಿಲ್ಲದೇ ಮದುವೆ ಆಗಿ, ಇಷ್ಟವಿಲ್ಲದಿದ್ದರೂ ಜೀವನ ಸಾಗಿಸುತ್ತಿದ್ದಾರೆ. ನನಗೆ ಅಂತಹ ಜೀವನ ಬೇಡ" ಎಂದು ತ್ರಿಶಾ ಹೇಳಿದ್ದರು.
ಮಾತು ಮುಂದುವರೆಸಿದ ತ್ರಿಶಾ "ನನಗೆ ಸೂಕ್ತ ಎನಿಸುವ ವ್ಯಕ್ತಿಗಾಗಿ ನಾನು ಕಾಯುತ್ತೇನೆ. ಇಷ್ಟವಿಲ್ಲದ ವ್ಯಕ್ತಿ ಜೊತೆ ಕೂಡಿ ಬಾಳುವುದಕ್ಕಿಂತ ಒಂಟಿಯಾಗಿ ಇರುವುದು ಉತ್ತಮ. ನಾನು ಪ್ರೀತಿಲಿ ಬೀಳಬೇಕು ಎಂದುಕೊಳ್ಳುತ್ತಿಲ್ಲ. ಆದರೆ ನನಗೂ ಜೀವನ ಸಂಗಾತಿ ಬೇಕು. ಇಷ್ಟಪಟ್ಟವನ ಜೊತೆ ಜೀವನ ಸಾಗಿಸಬೇಕು. ಅಂತಹ ವ್ಯಕ್ತಿ ಬೇಕು" ಎಂದಿದ್ದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ವಿಜಯ್ ಹಾಗೂ ತ್ರಿಶಾ ಜೋಡಿ ಕಾಲಿವುಡ್ ಎವರ್‌ಗ್ರೀನ್ ಜೋಡಿ ಎಂದೇ ಮನೆ ಮಾತಾಗಿದೆ. 'ಗಿಲ್ಲಿ', 'ತಿರುಪ್ಪಾಚ್ಚಿ', 'ಲಿಯೋ', 'ಕುರುವಿ' ಹೀಗೆ ನಾಲ್ಕೈದು ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಎರಡು ವರ್ಷಗಳ ಹಿಂದೆ 'GOAT' ಎಂಬ ಚಿತ್ರದಲ್ಲಿ ವಿಜಯ್ ನಟಿಸಿದ್ದರು. ಆ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ವಿಜಯ್ ಜೊತೆ ತ್ರಿಶಾ ಹೆಜ್ಜೆ ಹಾಕಿದ್ದರು. ಇವರಿಬ್ಬರ ಒಂದಷ್ಟು ಫೋಟೊಗಳು ಈ ಹಿಂದೆ ವೈರಲ್ ಆಗಿದ್ದವು. ಇಬ್ಬರೂ ಒಳ್ಳೆ ಸ್ನೇಹಿತರು ಅದೇ ಕಾರಣಕ್ಕೆ ಹೀಗೆ ಕಾಣಿಸಿಕೊಂಡಿರಬಹುದು ಎಂದು ಅಭಿಮಾನಿಗಳು ಸುಮ್ಮನಾಗಿದ್ದರು.
ವಿಜಯ್ ಹಾಗೂ ತ್ರಿಶಾ ಲಿಫ್ಟ್‌ನಲ್ಲಿ ನಿಂತ ಫೋಟೊ, ತ್ರಿಶಾ ಸಾಕು ನಾಯಿಯನ್ನು ವಿಜಯ್ ಎತ್ತಿ ಮುದ್ದಾಡುವ ಫೋಟೊ ಭಾರೀ ಊಹಾಪೋಹಕ್ಕೆ ಕಾರಣವಾಗಿತ್ತು. ವಿಜಯ್ ಹಾಗೂ ಸಂಗೀತಾ ಪ್ರೀತಿಸಿ ಮದುವೆ ಆಗಿದ್ದವರು. 27 ವರ್ಷಗಳ ದಾಂಪತ್ಯ ಜೀವನ ಸಾಗಿಸಿದ್ದಾರೆ. ಹಾಗಾಗಿ ಇದನ್ನೆಲ್ಲಾ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಬ್ಬರೂ ಅನ್ಯೋನ್ಯವಾಗಿಯೇ ಇದ್ದಾರೆ ಎಂದು ಭಾವಿಸಿದ್ದರು.


Click it and Unblock the Notifications











