ಸಿಎಂ ವಿಜಯ್‌ನ ಅನ್‌ಫಾಲೋ ಮಾಡಿದ ನಟಿ ತ್ರಿಶಾ; ಇಬ್ಬರ ಮಧ್ಯೆ ಬ್ರೇಕಪ್?
ತಮಿಳು ನಟ ವಿಜಯ್ ಈಗ ತಮಿಳುನಾಡು ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸುತ್ತಿದ್ದಾರೆ. ನಿನ್ನೆ(ಜೂನ್ 22) ವಿಜಯ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ದಳಪತಿ ರಾಜಕೀಯ ಜೀವನದ ಜೊತೆ ಜೊತೆಗೆ ವೈಯಕ್ತಿಕ ಜೀವನ ಕೂಡ ಭಾರೀ ಸದ್ದು ಮಾಡುತ್ತಿರುವುದು ಗೊತ್ತೇಯಿದೆ. ಒಂದ್ಕಡೆ ಪತ್ನಿ ಸಂಗೀತಾ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮತ್ತೊಂದು ಕಡೆ ನಟಿ ತ್ರಿಶಾ ಜೊತೆಗಿನ ಒಡನಾಟ ವಿವಾದಕ್ಕೆ ಕಾರಣವಾಗಿದೆ.
ವಿಜಯ್ ಹಾಗೂ ತ್ರಿಶಾ ಆತ್ಮೀಯ ಸ್ನೇಹಿತರು. ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿ ಹಿಟ್ ಜೋಡಿ ಎನಿಸಿಕೊಂಡಿದ್ದಾರೆ. ನಟಿಯೊಬ್ಬರ ಕಾರಣಕ್ಕೆ ತಮ್ಮ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂದು ಸಂಗೀತಾ ಡಿವೋರ್ಸ್ ಅರ್ಜಿಯಲ್ಲಿ ತಿಳಿಸಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ವಿಜಯ್ ವೈಯಕ್ತಿಯ ಜೀವನ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆಡಿಕೊಳ್ಳುವವರ ಬಾಯಿ ಮುಚ್ಚಿಸಲು ತ್ರಿಶಾ ಜೊತೆ ವಿಜಯ್ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು.

ಚುನಾವಣೆಯಲ್ಲಿ ಟಿವಿಕೆ ಪಕ್ಷ ಮುನ್ನಡೆ ಸಾಧಿಸುತ್ತಿದ್ದಂತೆ ತ್ರಿಶಾ ನೇರವಾಗಿ ವಿಜಯ್ ಮನೆಗೆ ಭೇಟಿ ನೀಡಿ ಅಭಿನಂದನೆ ತಿಳಿಸಿದ್ದರು. ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿ ಆಗಿ ಸಂಭ್ರಮಿಸಿದ್ದರು. ಇದೀಗ ವಿಜಯ್ ಹಾಗೂ ತ್ರಿಶಾ ನಡುವೆ ಬ್ರೇಕಪ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ವಿಜಯ್ ಹುಟ್ಟುಹಬ್ಬಕ್ಕೆ ತ್ರಿಶಾ ಶುಭಾಶಯ ಕೋರಲಿಲ್ಲ. ಇದರ ಬೆನ್ನಲ್ಲೇ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅಕೌಂಟ್ ಅನ್‌ಫಾಲೋ ಮಾಡಿದ್ದಾರೆ ಎಂದು ಚರ್ಚೆ ನಡೀತಿದೆ. ವಿಜಯ್ ಅಭಿಮಾನಿಗಳು ಈ ಬಗ್ಗೆ ಸಂಭ್ರಮಿಸಿ ಕಾಮೆಂಟ್ ಮಾಡುತ್ತಿದ್ದಾರೆ.
ಕೊನೆಗೂ ತ್ರಿಶಾಗೆ ತಪ್ಪಿನ ಅರಿವಾಗಿದೆ. ನಮ್ಮ ವಿಜಯ್ ಅಣ್ಣನಿಂದ ದೂರ ಇರಲು ತೀರ್ಮಾನಿಸಿದಂತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವಿಜಯ್ ಹಾಗೂ ತ್ರಿಶಾ ತಮ್ಮಿಬ್ಬರ ರಿಲೇಷನ್‌ಶಿಪ್ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಚುನಾವಣೆ ಸಮಾವೇಶಗಳಲ್ಲಿ ವಿಜಯ್ ಪರೋಕ್ಷವಾಗಿ ಈ ಬಗ್ಗೆ ಮಾತನಾಡಿದ್ದರು. ನನ್ನ ವೈಯಕ್ತಿಕ ವಿಚಾರಗಳು ಸಾವಿರ ಇರುತ್ತವೆ, ಅದಕ್ಕೂ ರಾಜಕೀಯಕ್ಕೂ ಏನು ಸಂಬಂಧ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಇನ್ನುಳಿದಂತೆ ನೇರವಾಗಿ ಪ್ರತಿಕ್ರಿಯಿಸಲಿಲ್ಲ.
ತ್ರಿಷಾ ಪ್ರತಿ ವರ್ಷ ವಿಜಯ್ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದರು. ದಳಪತಿ ಜೊತೆಗಿನ ಫೋಟೊ ಶೇರ್ ಮಾಡಿ ಟ್ವೀಟ್ ಮಾಡುತ್ತಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅಥವಾ ಸ್ಟೋರಿ ಹಾಕುತ್ತಿದ್ದರು. ಆದರೆ ಈ ವರ್ಷ ವಿಶ್ ಮಾಡಿಲ್ಲ. ಇದೇ ವಿಚಾರ ಎರಡು ದಿನಗಳಿಂದ ಚರ್ಚೆ ಹುಟ್ಟಾಕ್ಕಿದೆ. ಅದರ ನಡುವೆ ಈಗ ಅನ್‌ಫಾಲೋ ಮಾಡಿದ್ದಾರೆ ಎನ್ನುವ ವಿಚಾರ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ವಿಜಯ್ ಹಾಗೂ ಸಂಗೀತಾ ರಾಜಿ ಮಾಡಿಕೊಳ್ಳಲು ಮುಂದಾಗಿದ್ದಾರೆ, ಇಬ್ಬರೂ ಡಿವೋರ್ಸ್ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ ಎನ್ನು ವದಂತಿ ಇತ್ತೀಚೆಗೆ ಹರಿದಾಡಿತ್ತು. ಸ್ವತಃ ವಿಜಯ್ ತಾಯಿ ಶೋಭಾ ಚಂದ್ರಶೇಖರ್ ಇಬ್ಬರ ಜೊತೆ ಮಾತನಾಡಿ ಸಂಧಾನ ಮಾಡಿಸುತ್ತಿದ್ದಾರೆ ಎನ್ನುವ ಊಹಾಪೋಹ ಹರಿದಾಡಿತ್ತು. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಗಲಿಲ್ಲ. ಇದೆಲ್ಲದರ ನಡುವೆ ವಿಜಯ್ ಹಾಗೂ ತ್ರಿಶಾ ನಡುವೆ ಬ್ರೇಕಪ್ ಎನ್ನುವ ಚರ್ಚೆ ಕುತೂಹಲ ಮೂಡಿಸಿದೆ.
'ಗಿಲ್ಲಿ' ಸಿನಿಮಾದಲ್ಲಿ ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ನಟಿಸಿದ್ದರು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ ಇಬ್ಬರ ಜೋಡಿ ಹಿಟ್ ಎನಿಸಿಕೊಂಡಿತ್ತು. ಬಳಿಕ 'ತಿರುಪಾಚ್ಚಿ', 'ಆಥಿ', 'ಕುರುವಿ' ಹಾಗೂ 'ಲಿಯೋ' ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿ ಕಮಾಲ್ ಮಾಡಿದ್ದರು. ಎರಡು ವರ್ಷಗಳ ಹಿಂದೆ ಬಂದಿದ್ದ 'GOAT' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ವಿಜಯ್ ಜೊತೆ ತ್ರಿಶಾ ಬಿಂದಾಸ್ ಡ್ಯಾನ್ಸ್ ಮಾಡಿದ್ದರು.


Click it and Unblock the Notifications