ವಿಜಯ್ ಜೊತೆಗಿನ ಸಾಂಗ್ ನೆನೆದು ತ್ರಿಷಾ ಎಮೋಷನಲ್; 'ಗಿಲ್ಲಿ' ಚಿತ್ರಕ್ಕೆ ಇವರಿಬ್ರು ಮೊದಲ ಆಯ್ಕೆ ಆಗಿರಲಿಲ್ವಾ?
ತಮಿಳು ನಟ ವಿಜಯ್ ಹಾಗೂ ತ್ರಿಷಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ವದಂತಿ ಇಂದು ನಿನ್ನೆಯದ್ದಲ್ಲ. ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ ಬಳಿಕ ಈ ಚರ್ಚೆ ಮತ್ತಷ್ಟು ಹೆಚ್ಚಾಗಿದೆ. ತ್ರಿಷಾ ಕೂಡ ಪರೋಕ್ಷವಾಗಿ ಈ ಬಗ್ಗೆ ಸುಳಿವು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ 'ಗಿಲ್ಲಿ' ಚಿತ್ರದ ಸೂಪರ್ ಹಿಟ್ ಸಾಂಗ್ ವಿಡಿಯೋ ತ್ರಿಷಾ ಹಂಚಿಕೊಂಡಿದ್ದಾರೆ.
ವಿಜಯ್ ಹಾಗೂ ತ್ರಿಷಾ ನಟನೆಯ 'ಗಿಲ್ಲಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ತೆಲುಗಿನ 'ಒಕ್ಕಡು' ಸಿನಿಮಾ ರೀಮೆಕ್ ಇದು. ಕನ್ನಡದಲ್ಲಿ ಇದೇ ಚಿತ್ರವನ್ನು 'ಅಜಯ್' ಹೆಸರಿನಲ್ಲಿ ಪುನೀತ್ ರಾಜ್‌ಕುಮಾರ್ ರೀಮೆಕ್ ಮಾಡಿದ್ದರು. ಚಿತ್ರದ 'ಅಪ್ಪಡಿ ಪೋಡು ಪೋಡು' ಸೂಪರ್ ಹಿಟ್ ಸಾಂಗ್ ಆಗಿತ್ತು. ವಿಜಯ್ ಹಾಗೂ ತ್ರಿಷಾ ಡ್ಯಾನ್ಸ್ ನೋಡಿ ಸಿನಿರಸಿಕರು ಫಿದಾ ಆಗಿದ್ದರು. ದಶಕದ ಕಾಲ ತಮಿಳುನಾಡಿನ ಯಾವುದೇ ಶಾಲಾ, ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮ, ಆರ್ಕೇಸ್ಟ್ರಾ ಈ ಸಾಂಗ್ ಡ್ಯಾನ್ಸ್ ಇಲ್ಲದೇ ಮುಗಿಯುತ್ತಿರಲಿಲ್ಲ. ಅಷ್ಟರಮಟ್ಟಿಗೆ ಈ ಸಾಂಗ್ ಸದ್ದು ಮಾಡಿತ್ತು.

ಕಾರ್ಯಕ್ರಮವೊಂದರಲ್ಲಿ ಚಿಕ್ಕ ಮಕ್ಕಳು 'ಅಪ್ಪಡಿ ಪೋಡು ಪೋಡು' ಎಂದು ಬಿಂದಾಸ್ ಆಗಿ ಕುಣಿದಿದ್ದಾರೆ. ಆ ವೀಡಿಯೋವನ್ನು ತ್ರಿಷಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳ ಡ್ಯಾನ್ಸ್ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಮತ್ತೊಮ್ಮೆ ಈ ಎವರ್‌ಗ್ರೀನ್ ಸಾಂಗ್ ಕ್ರೇಜ್ ಮೆಲುಕು ಹಾಕುತ್ತಿದ್ದಾರೆ. ವಿಜಯ್ ಸಿನಿ ಬದುಕಿಗೆ ಭಾರೀ ತಿರುವು ಕೊಟ್ಟಿದ್ದ ಸಿನಿಮಾ 'ಗಿಲ್ಲಿ'. ಆ ಬಳಿಕ ಅವರ ಕ್ರೇಜ್ ಮತ್ತಷ್ಟು ಹೆಚ್ಚಾಗಿತ್ತು.
ಅಂದಹಾಗೆ 'ಗಿಲ್ಲಿ' ಚಿತ್ರಕ್ಕೆ ನಾಯಕ- ನಾಯಕಿಯಾಗಿ ಮೊದಲ ಆಯ್ಕೆ ವಿಜಯ್ ಹಾಗೂ ತ್ರಿಷಾ ಆಗಿರಲಿಲ್ಲವಂತೆ. ಚಿಯಾನ್ ವಿಕ್ರಂ ಹಾಗೂ ಜ್ಯೋತಿಕಾ ಚಿತ್ರದಲ್ಲಿ ಜೋಡಿಯಾಗಿ ನಟಿಸಬೇಕಿತ್ತು. ಆದರೆ ಅವರಿಬ್ಬರು ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರಿಂದ ಆ ಅವಕಾಶ ವಿಜಯ್ ಹಾಗೂ ತ್ರಿಷಾ ಪಾಲಾಗಿತ್ತು. ಇಬ್ಬರ ಅದೃಷ್ಟ ಕುಲಾಯಿಸಿತ್ತು. ಅಲ್ಲಿಯವರೆಗೂ ರೊಮ್ಯಾಂಟಿಕ್ ಹೀರೊ ಎನಿಸಿಕೊಂಡಿದ್ದ ವಿಜಯ್ 'ಗಿಲ್ಲಿ' ಮೂಲಕ ಮಾಸ್ ಹೀರೊ ಇಮೇಜ್ ಪಡೆದುಕೊಂಡಿದ್ದರು.

ತಮಿಳುನಾಡಿನಲ್ಲಿ ಸತತ 200 ದಿನಗಳ ಕಾಲ ಪ್ರದರ್ಶನ ಕಂಡು 'ಗಿಲ್ಲಿ' ಸಿನಿಮಾ ದಾಖಲೆ ಬರೆದಿತ್ತು. ಮಹೇಶ್ ಬಾಬು ನಟನೆಯ ತೆಲುಗು ಸಿನಿಮಾ ರೀಮೆಕ್ ಆಗಿದ್ದರೂ ತಮಿಳಿನಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲಾಗಿತ್ತು. ಕಬ್ಬಡ್ಡಿ ಆಡಲು ಮಧುರೈಗೆ ಹೋಗುವ ಯುವಕ, ಅಲ್ಲಿ ಒಬ್ಬ ದುಷ್ಟನಿಂದ ಯುವತಿಯೊಬ್ಬಳನ್ನು ಕಾಪಾಡುವ ಕಥೆ ಚಿತ್ರದಲ್ಲಿದೆ.
ಟಿವಿಕೆ ಪಕ್ಷ ಸ್ಥಾಪಿಸಿ ನಟ ವಿಜಯ್ ತಮಿಳುನಾಡು ರಾಜಕೀಯರಂಗದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಪಕ್ಷ ಹೇಗೆ ಸದ್ದು ಮಾಡುತ್ತದೆ ಎನ್ನುವ ನಿರೀಕ್ಷೆಯಿದೆ. ಮತ್ತೊಂದು ಕಡೆ ವಿಜಯ್ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ ಕೇಳಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಯಬೇಕಿದೆ.
ನಟಿಯೊಬ್ಬಳ ಕಾರಣಕ್ಕೆ ದಾಂಪತ್ಯದಲ್ಲಿ ಬಿರುಕು ಮೂಡಿರುವುದಾಗಿ ಸಂಗೀತಾ ಆರೋಪಿಸಿದ್ದಾರೆ. ಅದರ ಬೆನ್ನಲ್ಲೆ ವಿಜಯ್ ಹಾಗೂ ತ್ರಿಷಾ ಬಗ್ಗೆ ಚರ್ಚೆ ಶುರುವಾಗಿತ್ತು. ಅದಕ್ಕೆ ಟಾಂಗ್ ಕೊಡುವಂತೆ ವಿಜಯ್, ತ್ರಿಷಾ ಜೊತೆ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಒಂದೇ ಕಾರಿನಲ್ಲಿ ಬಂದು ಹೋಗಿದ್ದರು. ಇದು ಮತ್ತಷ್ಟು ವಿವಾದಕ್ಕೆ ಕಾರಣವಾಗಿತ್ತು. ಕೆಲವರು ವಿಜಯ್ ನಡೆಯನ್ನು ಟೀಕಿಸಿದ್ದರು. ತ್ರಿಷಾ ಕೂಡ ವಿಜಯ್ ಜೊತೆ ರಾಜಕೀಯರಂಗಕ್ಕೆ ಬರ್ತಾರೆ ಎಂದು ಗುಲ್ಲಾಗಿತ್ತು. ಅದಕ್ಕೆ ಆಕೆ ಪರೋಕ್ಷವಾಗಿ ಸ್ಪಷ್ಟನೆ ನೀಡಿದ್ದರು.


Click it and Unblock the Notifications