ವಿಜಯ್ ಮತ್ತು ತ್ರಿಶಾ ಸಂಬಂಧದ ಬಗ್ಗೆ ಮತ್ತೆ ಚರ್ಚೆ, ಅನುಮಾನ ಹೆಚ್ಚಿಸಿದ ತಾಯಿಯ ನಡೆ..!
ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಅವರು ತಮ್ಮ ವ್ಯೆಯಕ್ತಿಕ ಜೀವನದಲ್ಲಿ ಒಂದು ಬೊಂಬೆ ಜೊತೆ ಆಟ ಆಡಿದರೂ ಕೂಡ ಅದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇದೆಲ್ಲ ಗೊತ್ತಿದ್ದರು ಕೂಡ ಕೆಲವರು ಇಲ್ಲಿ ಬದುಕು ಮುನ್ನಡೆಸುತ್ತಿದ್ದಾರೆ. ಯಾರು ಏನೇ ಅಂದರೂ ಯಾವುದಕ್ಕೂ ಕೇರ್ ಮಾಡದೇ ಬದುಕುತ್ತಿದ್ದಾರೆ. ಉದಾಹರಣೆಗೆ ಗ್ಲಾಮರ್ ಗೊಂಬೆ ತ್ರಿಶಾ ಮತ್ತು ಇಳಯ ದಳಪತಿ ವಿಜಯ್.
ಹೌದು, ತ್ರಿಶಾ ಮತ್ತು ಇಳಯ ದಳಪತಿ ನಡುವೆ ಅಕ್ರಮ ಸಂಬಂಧ ಇದೆ ಎಂಬ ಮಾತು ಇಂದು, ನಿನ್ನೆಯದ್ದಲ್ಲ. ವರ್ಷಾನುವರ್ಷಗಳಿಂದ ಈ ಮಾತು ಕೇಳಿ ಬರುತ್ತಾನೇ ಇದೆ. ಎಷ್ಟರ ಮಟ್ಟಿಗೆ ಅಂದರೆ ತ್ರಿಶಾ ಅವರಿಗೆ ಮನ ಸೋತ ವಿಜಯ್ ತಮ್ಮ ಪತ್ನಿ ಸಂಗೀತಾ ಅವರಿಗೆ ವಿಚ್ಛೇದನವನ್ನು ನೀಡಲು ಮುಂದಾಗಿದ್ದಾರೆ ಎನ್ನುವ ಮಾತು ಕೂಡ ಚೆನ್ನೈನಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತೆ.

ಹೀಗಿರುವಾಗ ಇದೀಗ ವಿಜಯ್ ಬರ್ತ್‌ಡೇ ಪ್ರಯುಕ್ತ ತ್ರಿಶಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾದ ಫೋಟೊ ಹಂಚಿಕೊಂಡಿದ್ಧಾರೆ. ಅತ್ಯುತ್ತಮನಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಹೇಳಿದ್ಧಾರೆ. ತ್ರಿಶಾ ಹಂಚಿಕೊಂಡ ಈ ಫೋಟೊದಿಂದ ಇಬ್ಬರ ಸಂಬಂಧದ ಕುರಿತು ಈಗ ಮತ್ತೊಮ್ಮೆ ಚರ್ಚೆ ಶುರುವಾಗಿದೆ.
ಇನ್ನೂ.. ಫೋಟೊದಲ್ಲಿ ತ್ರಿಶಾ ಸಾಕಿದ ನಾಯಿಯನ್ನು ವಿಜಯ್ ಎತ್ತಿಕೊಂಡು ಮುದ್ದು ಮಾಡುತ್ತಿದ್ದಾರೆ. ಆದರೆ.. ತ್ರಿಶಾ ಅವರ ಹಾವ ಭಾವ ಎಲ್ಲರ ಗಮನಸೆಳೆಯುವಂತೆ ಇದೆ. ಕಣ್ಣು ಮಿಟುಕಿಸದೇ ವಿಜಯ್ ಅವರನ್ನು ತ್ರಿಶಾ ಇಲ್ಲಿ ನೋಡುತ್ತಿದ್ದಾರೆ. ಹೀಗಾಗಿಯೇ ಇಬ್ಬರ ಮಧ್ಯೆ ಇರುವ ಆಪ್ತತೆಗೆ ಈ ಫೋಟೊನೇ ಸಾಕ್ಷಿ ಎಂದು ಹಲವರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಇದೆಲ್ಲದಕ್ಕೆ ಕಳಶ ಇಟ್ಟಂತೆ ತ್ರಿಶಾ ಅವರ ತಾಯಿ ಉಮಾ ಕೃಷ್ಣನ್ ಕೂಡ ಸನ್ ನ್ಯೂಸ್ ಹಂಚಿಕೊಂಡ ತ್ರಿಶಾ ಮತ್ತು ವಿಜಯ್ ಅವರ ಫೋಟೊವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರೀ ಶೇರ್ ಮಾಡಿದ್ದಾರೆ. ಉಮಾ ಅವರ ಈ ನಡೆ ಹಲವರಲ್ಲಿನ ಅನುಮಾನವನ್ನು ಇನ್ನೂ ಹೆಚ್ಚಿಸಿದೆ. ಗೊಂದಲಕ್ಕೆ ಕೂಡ ಎಡೆ ಮಾಡಿ ಕೊಟ್ಟಿದೆ. ಸದ್ಯ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರ ಮನದಲ್ಲಿ ಪ್ರಶ್ನೆಯನ್ನು ಕೂಡ ಹುಟ್ಟುಹಾಕಿದೆ.
ಅಂದ್ಹಾಗೇ ಕಳೆದ ವರ್ಷ ಕೂಡ ವಿಜಯ್ ಅವರ 50ನೇ ವರ್ಷದ ಹುಟ್ಟುಹಬ್ಬದ ಸಮಯದಲ್ಲಿ ವಿಜಯ್ ಜೊತೆ ತ್ರಿಶಾ ಕಾಣಿಸಿಕೊಂಡಿದ್ದರು. ಮಿರರ್ ಸೆಲ್ಫಿ ಕ್ಲಿಕಿಸಿಕೊಂಡಿದ್ದರು. ಈ ಫೋಟೊ ಕೂಡ ತಮಿಳುನಾಡಿನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿತ್ತು. ಸಂಗೀತಾ ಅವರಿಗೆ ವಿಚ್ಛೇದನವನ್ನು ನೀಡಿ ವಿಜಯ್ ತ್ರಿಶಾ ಅವರ ಜೊತೆ ಮದುವೆಯಾಗಲಿದ್ದಾರೆ ಎಂದು ಪುಕಾರು ಹಬ್ಬಿತ್ತು.
ಈ ಕುರಿತು ಗಾಯಕಿ ಸುಚಿತ್ರಾ ಬಾಂಬ್ ಸಿಡಿಸಿದ್ದರು. ದಳಪತಿ ವಿಜಯ್ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ಬಯಸಿದ್ದಾರೆ, ವಿಜಯ್ ತಮ್ಮ ಪತ್ನಿಯಿಂದ ದೂರು ಉಳಿದು ವರ್ಷಗಳೇ ಕಳೆದಿವೆ. ಇಬ್ಬರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆಂದು ಹೇಳಿದ್ದರು. ಎಂಜಿಆರ್ ಹಾಗೂ ಜಯಲಲಿತಾರಂತೆಯೇ ತ್ರಿಶಾ ಜೊತೆ ಬಾಂಧವ್ಯ ಇಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಪೂರಕವಾಗಿ ಕೀರ್ತಿ ಸುರೇಶ್ ಅವರ ಮದುವೆಗೆ ಕೂಡ ತಮ್ಮ ಪತ್ನಿಯ ಜೊತೆ ಹೋಗದೇ ತ್ರಿಶಾ ಜೊತೆ ವಿಜಯ್ ಹೋಗಿದ್ದರು. ಹೊಸ ಜೋಡಿಗೆ ಶುಭಾಶಯವನ್ನು ಕೋರಿದ್ದರು.
ಇನ್ನುಳಿದಂತೆ ಉದ್ಯಮಿ ವರುಣ್ ಮಣಿಯನ್ ಜೊತೆ ತ್ರಿಶಾ ಹತ್ತು ವರ್ಷದ ಹಿಂದೆ ಮದುವೆಯಾಗಬೇಕಿತ್ತು. ಇಬ್ಬರ ನಿಶ್ಚಿತಾರ್ಥ ಕೂಡ ನೆರವೇರಿತ್ತು. ಆದರೆ ಆ ನಂತರ ಈ ಸಂಬಂಧ ಮುರಿದು ಬಿತ್ತು. ಆ ನಂತರ ರಾಣಾ ದಗ್ಗುಬಾಟಿ ಜೊತೆ ತ್ರಿಶಾ ಹೆಸರು ಥಳುಕು ಹಾಕಿಕೊಂಡಿತ್ತು. ಇಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು.
ಒಟ್ನಲ್ಲಿ ಸದ್ಯ ತ್ರಿಶಾ ಹಂಚಿಕೊಂಡ ಫೋಟೊದಿಂದ ಇಬ್ಬರ ಸಂಬಂಧ ಮತ್ತೊಮ್ಮೆ ಚರ್ಚೆಯಲ್ಲಿದೆ. ಈ ಚರ್ಚೆಗಳಿಗೆಲ್ಲ ಮೊದಲಿಂದ ತಲೆ ಕೆಡಿಸಿಕೊಳ್ಳದ ವಿಜಯ್ ಮತ್ತು ತ್ರಿಶಾ ಈ ಬಾರಿಯಾದರೂ ಉತ್ತರ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











