ವಿಶ್ವಾಸಮತ ಪರೀಕ್ಷೆ ಗೆದ್ದ ಟಿವಿಕೆ ವಿಜಯ್ ಸರ್ಕಾರ; 144 ಶಾಸಕರ ಬೆಂಬಲ
ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಸರ್ಕಾರ ವಿಶ್ವಾಸಮತ ಸಾಬೀತು ಮಾಡಿ ಗೆದ್ದಿದೆ. 118 ಮ್ಯಾಜಿಕ್ ನಂಬರ್ ಬೇಕಿದ್ದ ಸರ್ಕಾರಕ್ಕೆ ಅಚ್ಚರಿ ಎನ್ನುವಂತೆ 144 ಶಾಸಕರ ಬೆಂಬಲ ಸಿಕ್ಕಿದೆ. ಇನ್ನು 6 ತಿಂಗಳು ವಿಜಯ್ ಸರ್ಕಾರ ಸೇಫ್ ಎನ್ನುವಂತಾಗಿದೆ. ಚುನಾವಣೆಯಲ್ಲಿ 108 ಕ್ಷೇತ್ರಗಳನ್ನು ಗೆದ್ದಿದ್ದ ಟಿವಿಕೆ ಪಕ್ಷಕ್ಕೆ ಮ್ಯಾಜಿಕ್ ನಂಬರ್ ಸಿಕ್ಕಿರಲಿಲ್ಲ.
ಒಂದು ಹಂತದಲ್ಲಿ ವಿಜಯ್ ಸರ್ಕಾರ ರಚನೆ ಕಷ್ಟ, ಡಿಎಂಕೆ ಹಾಗೂ ಎಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುತ್ತವೆ ಎನ್ನುವ ಚರ್ಚೆ ನಡೆದಿತ್ತು. ಸರ್ಕಾರ ರಚನೆಗೆ ವಿಜಯ್‌ಗೆ ಆಹ್ವಾನ ನೀಡಲು ರಾಜ್ಯಪಾಲರು ಹಿಂದೇಟು ಹಾಕಿದ್ದರು. ಎಡಿಎಂಕೆ ಪಕ್ಷದ ಶಾಸಕರು ಪಾಂಡಿಚೇರಿ ರೆಸಾರ್ಟ್ ಸೇರಿಕೊಂಡಿದ್ದರು. ಭಾರೀ ಹೈಡ್ರಾಮಾ ನಡೆಯುತ್ತದೆ ಎನ್ನುವ ವೇಳೆಗೆ ಎಲ್ಲವೂ ತಣ್ಣಗಾಗಿತ್ತು. ಮೇ 10 (ಭಾನುವಾರ) ರಂದು ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಡಿಎಂಕೆ ಕೂಡ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದಾಗಿ ಹೇಳಿತ್ತು. ಮಾಜಿ ಸಿಎಂ ಸ್ಟಾಲಿನ್ ಅವರನ್ನು ಸೂತನ ಸಿಎಂ ವಿಜಯ್ ಭೇಟಿ ಮಾಡಿ ಬಂದರು.

ಇಂದು ಸದನದಲ್ಲಿ ವಿಜಯ್ ಸರ್ಕಾರ ವಿಶ್ವಾಸಮತ ಸಾಬೀತು ಮಾಡಬೇಕಿತ್ತು. ಕಾಂಗ್ರೆಸ್ 5, ಸಿಪಿಐ, ವಿಸಿಕೆ, ಐಉಎಂಎಲ್ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ವಿಶ್ವಾಸಮತ ಯಾಚಿಸಲು ಮುಂದಾಗಿದ್ದರು. ನಿನ್ನೆ ಕೆಲ ಎಡಿಎಂಕೆ ಶಾಸಕರು ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಚಿಸಿದ್ದರು. ಹಾಗಾಗಿ ವಿಜಯ್ ನಿರಾಳರಾಗಿದ್ದರು. ಸದನದಲ್ಲಿ ಇಂದು(ಮೇ 13) ತಲೆ ಎಣಿಕೆ ಮೂಲಕ ವಿಶ್ವಾಸಮತ ಲೆಕ್ಕಾಚಾರ ನೀಡಿತು. ಎಐಡಿಎಂಕೆ 25 ರೆಬಲ್ ಶಾಸಕರು ಸೇರಿ ಒಟ್ಟು 144 ಶಾಸಕರ ಬೆಂಬಲ ವಿಜಯ್ ಸರ್ಕಾರಕ್ಕೆ ಸಿಕ್ಕಿದೆ. ವಿಜಯ್ ವಿರುದ್ಧ 22 ಮಂದಿ ಶಾಸಕರು ಮತ ಹಾಕಿದ್ದಾರೆ. ಒಟ್ಟಾರೆ ವಿಜಯ್ ಸರ್ಕಾರ ಸದ್ಯಕ್ಕೆ ಸೇಫ್ ಎನ್ನುವಂತಾಗಿದೆ.
ಇನ್ನು ಮುಂದೆ ನಿರಾಳವಾಗಿ ವಿಜಯ್ ಸರ್ಕಾರ ಮುನ್ನಡೆಸಬಹುದಾಗಿದೆ. ಟಿವಿಕೆ ಪಕ್ಷದ ವಿರುದ್ಧ ಕುದುರೆ ವ್ಯಾಪಾರದ ಆರೋಪ ಕೇಳಿಬಂದಿದೆ. ವಿಶ್ವಾಸಮತ ಯಾಚನೆ ಬಳಿಕ ವಿಜಯ್ ಸದನದಲ್ಲಿ ಭಾಷಣ ಮಾಡಿದರು. ತಮಗೆ ಬೆಂಬಲ ಸೂಚಿಸಿದ ಶಾಸಕರಿಗೆ ಧನ್ಯವಾದ ತಿಳಿಸಿದರು. 1967 ಹಾಗೂ 1977ರಲ್ಲಿ ಸಾಮಾನ್ಯರು ಶಾಸಕರು ಆಗಿ ಗೆದ್ದಂತೆ ಈ ವರ್ಷ ಕೂಡ ಟಿವಿಕೆಯಲ್ಲಿ ಸಾಕಷ್ಟು ಸಾಮಾನ್ಯರ ಸರ್ಕಾರ ರಚನೆಯಾಗಿದೆ. ಜನ ಕೂಡ ನಮ್ಮ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಪಕ್ಷ ಸ್ಥಾಪಿಸಿದ 3 ವರ್ಷದಲ್ಲೇ ಗೆದ್ದಿದ್ದೇವೆ. ಸ್ವಲ್ಪದರಲ್ಲಿ ಬಹುಮತ ಕೈತಪ್ಪಿದೆ. ಬಹುಮತದ ಸರ್ಕಾರ ಅಲ್ಲ ಎನಿಸಿದರೂ ಪರವಾಗಿಲ್ಲ, ಆದರೆ ನಮ್ಮ ಬಹುಮತದ ಸರ್ಕಾರವೇ ಎಂದಿದ್ದಾರೆ.
ಎಲ್ಲಾ ವರ್ಗದ ಜನರು, ಎಲ್ಲಾ ಸಮದಾಯದ ಜನರಿಗಾಗಿ ಈ ಸರ್ಕಾರ. ನಮಗೆ ಬೆಂಬಲ ಸೂಚಿಸಿದವರಿಗೆ ಸೂಚಿಸದವರನ್ನು ಒಂದೇ ರೀತಿ ನೋಡುತ್ತೇವೆ. ಒಳ್ಳೆ ಸರ್ಕಾರ ನಡೆಸುವುದು, ಜನಸೇವೆ ಮಾಡುವುದು ಮಾತ್ರ ನಮ್ಮ ಗುರಿ ಎಂದು ವಿಜಯ್ ಪುನರುಚ್ಚರಿಸಿದ್ದಾರೆ.
ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಪಕ್ಷ ಅಚ್ಚರಿಯ ಗೆಲುವು ಸಾಧಿಸಿತ್ತು. ಕೇವಲ 20 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲರ ನಿರೀಕ್ಷೆ ಮೀರಿ ವಿಜಯ್ ನೇತೃತ್ವದ ಪಕ್ಷ ಸಾಧನೆ ಮಾಡಿದೆ. ವಿಜಯ್ ಜನಪ್ರಿಯತೆ ಜೊತೆಗೆ ಆಡಳಿತ ವಿರೋಧಿ ಅಲೆ ಟಿವಿಕೆ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತ್ತು. 50 ವರ್ಷಗಳ ಬಳಿಕ ದ್ರಾವಿಡ ಪಕ್ಷಗಳನ್ನು(ಡಿಎಂಕೆ- ಎಡಿಎಂಕೆ) ಹೊರತುಪಡಿಸಿದ ಪಕ್ಷ ಅಧಿಕಾರ ಹಿಡಿದಿದೆ. ಜನ ಸೇವೆ ಮಾಡಲು ಸಿನಿಮಾಗಳಲ್ಲಿ ನಟಿಸುವುದನ್ನು ವಿಜಯ್ ನಿಲ್ಲಿಸಿದ್ದಾರೆ.


Click it and Unblock the Notifications