Tamil Nadu Election 2026: ಮತ ಚಲಾಯಿಸಿದ ಟಿವಿಕೆ ವಿಜಯ್; ಚುನಾವಣೆ ಆಯೋಗಕ್ಕೆ ವಿಶೇಷ ಮನವಿ
ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನ ರಂಗೇರಿದೆ. ರಾಜ್ಯದ 234 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೀತಿದ್ದು ಬೆಳ್ಳಂಬೆಳಗ್ಗೆ ತಾರಾ ಮೆರಗು ಸಿಕ್ಕಿತ್ತು. 7 ಗಂಟೆಗೆ ನಟ ಅಜಿತ್ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. 9 ಗಂಟೆ ವೇಳೆಗೆ ಮತನ ಚಲಾಯಿಸಿದ ರಜನಿಕಾಂತ್ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದರು.
ನಟ ವಿಜಯ್ ಈ ಬಾರಿ ಟಿವಿಕೆ ಪಕ್ಷ ಕಟ್ಟಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕ್ರಾಂತಿ ಸೃಷ್ಟಿಸಲು ಮುಂದಾಗಿದ್ದಾರೆ. 2 ಕ್ಷೇತ್ರಗಳಲ್ಲಿ ವಿಜಯ್ ಸ್ಪರ್ಧಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಟಿವಿಕೆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಅಭಿಮಾನಿಗಳಿಂದ ದಳಪತಿಗೆ ಭಾರೀ ಬೆಂಬಲ ಸಿಕ್ಕಿದೆ. ಅದು ಮತಗಳಾಗಿ ಪರಿವರ್ತನೆ ಆಗುತ್ತಾ ಕಾದು ನೋಡಬೇಕಿದೆ.

ಕಮಲ್ ಹಾಸನ್ ಪುತ್ರಿ ಶ್ರುತಿ ಜೊತೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಧನುಷ್, ಶಿವಕಾರ್ತಿಕೇಯನ್, ನಿರ್ದೇಶಕ ಮಣಿರತ್ನಂ, ನಟಿ ಸುಹಾಸಿನಿ ಮಣಿರತ್ನಂ, ನಟಿ ತ್ರಿಷಾ ಸೇರಿದಂತೆ ಸಾಕಷ್ಟು ಸಿನಿಮಾ ತಾರೆಯರು 12 ಗಂಟೆಗೂ ಮುನ್ನ ತಮ್ಮ ಹಕ್ಕು ಚಲಾಯಿಸಿದರು. ನಟ ವಿಜಯ್ ಚೆನ್ನೈ ನೀಲಾಂಕರೈನ ಮುನ್ಸಿಪಲ್ ಶಾಲೆ ಮತಗಟ್ಟೆಯಲ್ಲಿ ಮತದನಾ ಮಾಡಿದರು. ನೆಚ್ಚಿನ ನಟನನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಮತಗಟ್ಟೆ ಬಳಿ ಜಮಾಯಿಸಿದ್ದರು.
ಪೆರಂಬೂರ್ ಹಾಗೂ ತಿರುಚಿರಾಪಲ್ಲಿ ಈಸ್ಟ್ ಕ್ಷೇತ್ರಗಳಲ್ಲಿ ಸ್ವತಃ ವಿಜಯ್ ಅಭ್ಯರ್ಥಿಯಾಗಿ ಕಣಕ್ಕಿಳಿದ್ದಾರೆ. ಮತದಾನದ ಅವಧಿಯನ್ನು 2 ಗಂಟೆ ಹೆಚ್ಚಿಸುವಂತೆ ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಮನವಿ ಮಾಡಿದ್ದಾರೆ. ಸಾಮಾನ್ಯವಾಗಿ ಸಂಜೆ 6 ಗಂಟೆಗೆ ಮತದಾನ ಮುಕ್ತಾಯ ಆಗುತ್ತದೆ. ಆದರೆ ರಾತ್ರಿ 8 ಗಂಟೆವರೆಗೆ ಅವಕಾಶ ಕೊಟ್ಟರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಮತ ಚಲಾಯಿಸುತ್ತಾರೆ ಎಂದಿದ್ದಾರೆ.
ಮತದಾರರು ಮತಗಟ್ಟೆಗಳಿಗೆ ತಲುಪಿ ಹಕ್ಕು ಚಲಾಯಿಸಲು ಸಮಸ್ಯೆ ಆಗುತ್ತಿದೆ. ಹಾಗಾಗಿ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ವಿಜಯ್ ಮನವಿ ಮಾಡಿದ್ದಾರೆ. ಚೆನ್ನೈ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರು ಸಿಲುಕಿಕೊಂಡಿರುವ ಬಗ್ಗೆ ಅವರು ಗಮನ ಸೆಳೆದಿದ್ದಾರೆ. ಮತಗಟ್ಟೆಗಳಲ್ಲಿ ಜನ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಮತದಾನ ವೇಗವಾಗಿ ನಡೀತಿಲ್ಲ ಈ ಬಗ್ಗೆ ಚುನಾವಣೆ ಅಧಿಕಾರಿಗಳು ಗಮನ ಹರಿಸಬೇಕು ಎಂದಿದ್ದಾರೆ.
ಸಾಕಷ್ಟು ನಟ-ನಟಿಯರು ಬಹಿರಂಗವಾಗಿಯೇ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಟಿವಿಕೆ ಪಕ್ಷಕ್ಕೆ ಮತಹಾಕಿ ಎಂದು ಮನವಿ ಮಾಡಿದ್ದಾರೆ. ಕೆಲವರು ಪ್ರಚಾರ ಕೂಡ ಮಾಡಿದ್ದಾರೆ. ಹಿರಿಯ ನಟ ಸತ್ಯರಾಜ್ ಡಿಎಂಕೆ ಪಕ್ಷವನ್ನು ಬೆಂಬಲಿಸುತ್ತಿರುವುದು ಗೊತ್ತೇಯಿದೆ. ಇತ್ತೀಚೆಗೆ ವಿಜಯ್ ಪೊಲಿಟಿಕಲ್ ಎಂಟ್ರಿ ಬಗ್ಗೆ ಅವರು ವ್ಯಂಗ್ಯವಾಡಿ ಟೀಕಿಸಿದ್ದರು. ಆದರೆ ಅವರ ಪುತ್ರ ಸಿಬಿ ಸತ್ಯರಾಜ್ ಬಹಿರಂಗವಾಗಿಯೇ ವಿಜಯ್‌ಗೆ ಬೆಂಬಲ ಸೂಚಿಸಿದ್ದಾರೆ.
ಕೆಲ ತಾರೆಯರು ಟಿವಿಕೆ ಪಕ್ಷಕ್ಕೆ ಮತ ಚಲಾಯಿಸಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ ಪೋಸ್ಟ್ ಮಾಡುತ್ತಿದ್ದಾರೆ. ವಿಜಯ್ ಅಭಿಮಾನಿಗಳ ಆ ಪೋಸ್ಟ್‌ಗಳನ್ನು ವೈರಲ್ ಮಾಡುತ್ತಿದ್ದಾರೆ. ಟಿವಿಕೆ ಪಕ್ಷದ ಕ್ರೇಜ್ ನೋಡುತ್ತಿದ್ದರೆ 20 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ನಡೀತಿದೆ. ಅದೇ ನಿಜವಾದರೆ ವಿಜಯ್ ಗೆದ್ದಂತೆಯೇ ಸರಿ. ದಶಕಗಳಿಂದ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳೇ ತಮಿಳುನಾಡಿನಲ್ಲಿ ಸರ್ಕಾರ ರಚಿಸುತ್ತಾ ಬರ್ತಿವೆ. ಆದರೆ ಈ ಬಾರಿ ವಾತಾವರಣ ಬದಲಾದಂತೆ ಕಾಣುತ್ತಿದೆ.
ತಮಿಳುನಾಡು ರಾಜಕೀಯರಂಗದಲ್ಲಿ ವಿಜಯ್ ದೊಡ್ಡ ಮಾಸ್ ಲೀಡರ್ ಆಗುವ ಸುಳಿವು ಸಿಗುತ್ತಿದೆ. ಇದೇ ಕಾರಣಕ್ಕೆ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನುವಂತೆ ವಿಜಯ್ ಹೇಳುತ್ತಿದ್ದಾರೆ. ಮೇ 4ರಂದು ಚುನಾವಣೆ ಫಲಿತಾಂಶ ಹೊರಬೀಳಲಿದೆ.


Click it and Unblock the Notifications