ಗೆಲುವಿನ ಬಳಿಕ ಟಿವಿಕೆ ವಿಜಯ್ ಫಸ್ಟ್ ರಿಯಾಕ್ಷನ್; ಪಿಎಂ ಮೋದಿ, ರಾಹುಲ್ ಗಾಂಧಿಗೆ ಕೌಂಟರ್!
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. 234 ಕ್ಷೇತ್ರಗಳ ಪೈಕಿ 108 ಕ್ಷೇತ್ರಗಳಲ್ಲಿ ನಟ ವಿಜಯ್ ನೇತೃತ್ವದ ಪಕ್ಷ ಗೆದ್ದು ಬೀಗಿದೆ. ದಳಪತಿ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಎಂದು ಚರ್ಚೆ ನಡೀತಿದೆ. ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಗಣ್ಯಾತಿಗಣ್ಯರು, ಸಿನಿಮಾ ತಾರೆಯರು ವಿಜಯ್ ಗೆಲುವಿಗೆ ಅಭಿನಂದನೆ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಪಕ್ಷ ಕಟ್ಟಿ 2 ವರ್ಷದಲ್ಲಿ ಸರ್ಕಾರ ರಚಿಸುವ ಮೂಲಕ ವಿಜಯ್ ಸಂಚಲನ ಸೃಷ್ಟಿಸಿದ್ದಾರೆ. ದಶಕಗಳ ಇತಿಹಾಸ ಇರುವ ಡಿಎಂಕೆ ಹಾಗೂ ಎಡಿಎಂಕೆ ಪಕ್ಷಗಳನ್ನು ಹಿಂದಿಕ್ಕಿ ವಿಜಯ್ ಗಮ ಸೆಳೆದಿದ್ದಾರೆ. ಸಾಮಾನ್ಯರಿಗೆ ಎಂಎಲ್‌ಎ ಟಿಕೆಟ್ ನೀಡಿ ಗೆಲ್ಲಿಸಿಕೊಂಡಿದ್ದಾರೆ. ರಾಜಕೀಯ ಹಿನ್ನೆಲೆ ಇಲ್ಲದ ಬಹುತೇಕ ಹೊಸಬರು ಟಿವಿಕೆ ಪಕ್ಷದಿಂದ ಗೆದ್ದಿದ್ದಾರೆ. ಸ್ವತಃ ವಿಜಯ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡೂ ಕಡೆ ಜಯಭೇರಿ ಬಾರಿಸಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವಿಜಯ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ತಮ್ಮ ಗೆಲುವಿಗೆ ಅಭಿನಂದನೆ ತಿಳಿಸಿ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ಎಲ್ಲಾ ಬೇಡ ನಮ್ಮ ರಾಜ್ಯದ ಅಭಿವೃದ್ಧಿಯೇ ಮುಖ್ಯ ಎಂದು ವಿಜಯ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ರಾಷ್ಟ್ರೀಯ ನಾಯಕರಿಗೆ ಪರೋಕ್ಷವಾಗಿ ವಿಜಯ್ ಕೌಂಟರ್ ಕೊಟ್ಟಿದ್ದಾರೆ ಎಂದು ಚರ್ಚೆ ನಡೀತಿದೆ.
ಪ್ರಧಾನಿ ಮೋದಿ ಟ್ವೀಟ್ ರೀ ಟ್ವೀಟ್ ಮಾಡಿ ವಿಜಯ್ "ನಿಮ್ಮ ಶುಭಾಶಯಕ್ಕೆ ಧನ್ಯಾವಾದ. ನಮ್ಮ ಜನರ ಯೋಗಕ್ಷೇಮ ನಮ್ಮ ಏಕೈಕ ಗುರಿಯಾಗಿದೆ. ರಾಜಕೀಯವನ್ನು ಮೀರಿ, ನಾವು ರಾಜ್ಯದ ಪ್ರಗತಿ ಮತ್ತು ತಮಿಳುನಾಡಿನ ಜನರ ಕಲ್ಯಾಣದ ಮೇಲೆ ಕೇಂದ್ರೀಕರಿಸುತ್ತೇವೆ. ಈ ಪ್ರಯತ್ನದಲ್ಲಿ ನಾವು ಕೇಂದ್ರ ಸರ್ಕಾರದ ಬೆಂಬಲವನ್ನು ಎದುರು ನೋಡುತ್ತಿದ್ದೇವೆ" ಎಂದು ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿ "ಲೋಕಸಭೆಯ ಗೌರವಾನ್ವಿತ ವಿರೋಧ ಪಕ್ಷದ ನಾಯಕರ ಕರೆ ಹಾಗೂ ಶುಭಾಶಯಕ್ಕೆ ಧನ್ಯವಾದ. ಸಾರ್ವಜನಿಕ ಸೇವೆಯಲ್ಲಿ ಶ್ರೇಷ್ಠತೆಗೆ ಮತ್ತು ಸಾಮೂಹಿಕ ಸಹಕಾರದ ಅಗತ್ಯವಿರುವ ನಮ್ಮ ರಾಜ್ಯದ ಸಾಂಸ್ಕೃತಿಕ ನೀತಿಯನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿರುತ್ತೇವೆ. ರಾಜಕೀಯವನ್ನು ಮೀರಿ, ತಮಿಳುನಾಡಿನ ಜನರ ಕಲ್ಯಾಣಕ್ಕೆ ನಾವು ಆದ್ಯತೆ ನೀಡುತ್ತೇವೆ" ಎಂದು ವಿಜಯ್ ಬರೆದುಕೊಂಡಿದ್ದಾರೆ.
ತಮಿಳುನಾಡಿನ ಜನತೆಯನ್ನು ಉದ್ದೇಶಿಸಿ ತಮಿಳಿನಲ್ಲಿ ಟಿವಿಕೆ ವಿಜಯ್ ಸುದೀರ್ಘ ಪತ್ರ ಬರೆದಿದ್ದಾರೆ. "ನನ್ನ ಹೃದಯದಲ್ಲಿ ಜಾಗ ಮಾಡಿಕೊಂಡಿರುವ ಎಲ್ಲರಿಗೂ ನಮಸ್ಕಾರ. "ಪಕ್ಷ ಆರಂಭಿಸಿದ ದಿನದಿಂದ ನಮ್ಮ ಬಗ್ಗೆ ಅಪಹಾಸ್ಯ ಮಾಡಿದ ಮತ್ತು ಮಾತನಾಡಿದ ಅನೇಕ ಜನರಿದ್ದಾರೆ. ರಾಜಕೀಯದಲ್ಲಿ ಇದು ಸಾಮಾನ್ಯ, ಅದನ್ನೆಲ್ಲಾ ನಾವು ಮೀರಿದ್ದೇವೆ. ನಾವು ಜನರನ್ನು ಮಾತ್ರ ನಂಬಿದ್ದೇವೆ ಮತ್ತು ಚುನಾವಣಾ ಅಖಾಡದಲ್ಲಿಯೂ ಬಲವಾಗಿ ನಿಂತಿದ್ದೇವೆ." ಎಂದು ವಿಜಯ್ ತಿಳಿಸಿದ್ದಾರೆ.
ತಟಸ್ಥತೆ ಮತ್ತು ಟೀಕೆಗಳ ಹೆಸರಿನಲ್ಲಿ ಮರೆಮಾಚಲ್ಪಟ್ಟ ಅವಮಾನಗಳು ನಮಗೆ ಉಡುಗೊರೆಯಾಗಿವೆ. ಆದರೆ, ನಾವು ಜನರಿಗೆ ಕೃತಜ್ಞತೆಯ ಸಾಲವನ್ನು ತೀರಿಸಲು ರಾಜಕೀಯಕ್ಕೆ ಬಂದಿದ್ದೇವೆ ಎಂದು ವಿಜಯ್ ಹೇಳಿದ್ದಾರೆ. "ನಮ್ಮ ಸ್ವಂತ ತಮಿಳುನಾಡಿನ ಜನರು ಯಾವಾಗಲೂ ನಮ್ಮನ್ನು ತಾಯಿಯಂತೆ ಬೆಂಬಲಿಸಿದ್ದಾರೆ. ಚುನಾವಣೆಯಲ್ಲಿಯೂ ನಮಗೆ ಅಪಾರ ಪ್ರೀತಿಯಿಂದ ಅಗಾಧವಾದ ಮತಗಳನ್ನು ನೀಡಿದ್ದಾರೆ. ನಾವು ಈ ಚುನಾವಣೆಯನ್ನು ಪವಾಡ ಎಂದು ಕರೆದಿದ್ದೇವೆ. ಅದು ವಿವಿಧ ರೀತಿಯಲ್ಲಿ ಸಾಬೀತಾಗಿದೆ. ಈ ಚುನಾವಣೆಯ ರಾಜಕೀಯ ಯುದ್ಧವನ್ನು ದೊಡ್ಡ ಬದಲಾವಣೆಗಾಗಿ ಗೆದ್ದವರು ನಾಮ್ ತಮಿಳುನಾಡು ವೆಟ್ರಿ ಕಳಗಂ ಮಾತ್ರವಲ್ಲ. ತಮಿಳುನಾಡಿನ ಜನರ ಮನಸ್ಸಿನಲ್ಲಿ ಬೆಳೆಸಲ್ಪಟ್ಟ ಭಾವನಾತ್ಮಕ ಪ್ರಜಾಪ್ರಭುತ್ವ ಇದು" ಎಂದು ಬರೆದುಕೊಂಡಿದ್ದಾರೆ.
ಎಂದಿಗೂ ಸಂಭವಿಸದ ಬದಲಾವಣೆಗೆ ರಾಜಕೀಯ ಗೆಲುವು ಸಾಧಿಸಿದ್ದಕ್ಕಾಗಿ ತಮಿಳುನಾಡಿನ ನನ್ನ ಸ್ವಂತ ಜನರಿಗೆ ನಾನು ನನ್ನ ಜೀವಮಾನದ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಈ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆತಿದ್ದರೂ ಸಹ, ಭವಿಷ್ಯದಲ್ಲಿ ನಮ್ಮನ್ನು ಹೆಚ್ಚು ಪ್ರೀತಿಸುವ ನಮ್ಮ ಆಪ್ತರಿಗೂ ನಾನು ನನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತೇನೆ" ಎಂದು ವಿಜಯ್ ಸುದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ.


Click it and Unblock the Notifications