ಚುನಾವಣೆ ಗೆದ್ದ ದಳಪತಿ ವಿಜಯ್‌ಗೆ ಗುಡ್ ನ್ಯೂಸ್; ಅಭಿಮಾನಿಗಳಿಗೆ ಇದೇ ಬ್ಯಾಡ್ ನ್ಯೂಸ್!
ನಟ ವಿಜಯ್ ತಮಿಳುನಾಡಿನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಟಿವಿಕೆ ಪಕ್ಷ ಸ್ಥಾಪಿಸಿ ಗೆದ್ದ ವಿಜಯ್ ಮುಖ್ಯಮಂತ್ರಿ ಪಟ್ಟ ಅಲಂಕರಿಸಲು ಸಿದ್ಧತೆ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದು ವಿಜಯ್ ಆಪ್ತರಿಗೆ, ಸಾಕಷ್ಟು ಅಭಿಮಾನಿಗಳಿಗೆ ಸಂತಸ ತಂದಿದೆ.
ರಾಜಕೀಯರಂಗದಲ್ಲಿ ದಳಪತಿ ದರ್ಬಾರ್ ನೋಡಲು ಕಾಯುತ್ತಿರುವ ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿ ಕೂಡ ಇದೆ. ವಿಜಯ್ ಮತ್ತೆ ಸಿನಿಮಾಗಳಲ್ಲಿ ಯಾವಾಗ ನಟಿಸುತ್ತಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಒಂದು ವೇಳೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದರೆ ವಿಜಯ್ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಜನ ನಾಯಗನ್' ಚಿತ್ರದ ಸಹನಟಿ ಮಮೈತಾ ಬೈಜು ಬಳಿ ಇದೇ ರೀತಿ ಅವರು ಚರ್ಚಿಸಿದ್ದರಂತೆ. ಆದರೆ ಚುನಾವಣೆಯಲ್ಲಿ ಗೆದ್ದು ಕಮಾಲ್ ಮಾಡಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿನಿಮಾಗಳಲ್ಲಿ ನಟಿಸುವುದು ಕಷ್ಟವಾಗುತ್ತದೆ. ಬಿಡುವಿಲ್ಲದ ರಾಜಕೀಯ ಜಂಜಾಟದ ನಡುವೆ ಬಣ್ಣ ಹಚ್ಚಿ ನಟಿಸುವುದು ಸಮಸ್ಯೆ ಆಗುತ್ತದೆ. ವಿಜಯ್ ಒಬ್ಬ ನಟ ಎಂದು ಡಿಎಂಕೆ ಪಕ್ಷ ಮೂದಲಿಸಿತ್ತು. ಸಿಎಂ ಆಗಿ ಆಯ್ಕೆಯಾಗಿ ಸಿನಿಮಾಗಳಲ್ಲಿ ನಟಿಸಿದರೆ ಸರಿ ಆಗುವುದಿಲ್ಲ. ಹಾಗಾಗಿ ಸದ್ಯಕ್ಕೆ ವಿಜಯ್ ಸಿನಿಮಾಗಳಿಂದ ದೂರಾ ದೂರ.
ಕೊನೆ ಪಕ್ಷ ಇನ್ನು 5 ವರ್ಷ ವಿಜಯ್ ಯಾವುದೇ ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನಲಾಗ್ತಿದೆ. ಸಂಕ್ರಾಂತಿಗೆ ಬರಬೇಕಿದ್ದ 'ಜನನಾಯಗನ್' ಸಿನಿಮಾ ಕಾರಣಾಂತರಗಳಿಂದ ಬಿಡುಗಡೆ ಆಗುವುದು ತಡವಾಗಿತ್ತು. ಇದೀಗ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವೇ ಅಧಿಕಾರ ಸ್ವೀಕರಿಸುತ್ತಿರುವುದರಿಂದ ಶೀಘ್ರದಲ್ಲೇ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಈ ಚಿತ್ರವನ್ನು ವಿಜಯ್ ತಮ್ಮ ರಾಜಕೀಯರಂಗ ಪ್ರವೇಶಕ್ಕೆ ವೇದಿಕೆ ಮಾಡಿಕೊಳ್ಳಲು ಬಯಸಿದ್ದರು. ಅದೇ ಕಾರಣಕ್ಕೆ ಡಿಎಂಕೆ ಸಿನಿಮಾ ಬಿಡುಗಡೆಗೆ ಅಡ್ಡಗಾಲು ಹಾಕಿತ್ತು ಎನ್ನುವ ವದಂತಿ ಹರಿದಾಡಿತ್ತು.

ತಮಿಳುನಾಡು ಚುನಾವಣೆ ಮತದಾನಕ್ಕೂ ಮುನ್ನ 'ಜನನಾಯಗನ್' ಸಿನಿಮಾ ಆನ್ಲೈನ್‌ನಲ್ಲಿ ಸಂಪೂರ್ಣವಾಗಿ ಲೀಕ್ ಆಗಿತ್ತು. ವಿಜಯ್ ತಮ್ಮ ಪೊಲಿಟಿಕಲ್ ಮೈಲೇಜ್‌ಗಾಗಿ ಹೀಗೆ ಮಾಡಿಸಿರಬಹುದು ಎಂದು ಕೆಲವರು ಆರೋಪಿಸಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ಲೀಕ್ ಆಗಿದ್ದರಿಂದ ನಿರ್ಮಾಪಕರಿಗೆ ಭಾರೀ ನಷ್ಟವಾಯ್ತು ಎಂದು ಭಾವಿಸಲಾಗಿತ್ತು. ಆದರೆ ಈಗ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.
ವಿಜಯ್ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದು ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ. ಇಂತಹ ಸಮಯದಲ್ಲಿ 'ಜನನಾಯಗನ್' ಚಿತ್ರ ಬಿಡುಗಡೆಯಾದರೆ ದೊಡ್ಡಮಟ್ಟದಲ್ಲಿ ಯಶಸ್ಸು ಗಳಿಸುವು ಸುಳಿವು ಸಿಕ್ಕಿದೆ. ಒಂದಷ್ಟು ಬದಲಾವಣೆ ಮಾಡಿ ಶೀಘ್ರದಲ್ಲೇ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಜೂನ್ 4ರಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗಪ್ಪಳಿಸಬಹುದು ಎನ್ನಲಾಗ್ತಿದೆ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ 'ಜನನಾಯಗನ್' ಸಿನಿಮಾ ನಿರ್ಮಿಸಿದೆ. ಅಂದಾಜು 350 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ತಯಾರಾಗಿದೆ. ಇದು ನನ್ನ ಕೊನೆಯ ಸಿನಿಮಾ ಎಂದು ವಿಜಯ್ ಅಧಿಕೃತವಾಗಿ ಹೇಳಿರಲಿಲ್ಲ. ಆದರೆ ಪರೋಕ್ಷವಾಗಿ ಇಂತಹ ಸಂದೇಶ ರವಾನೆ ಆಗಿತ್ತು. ವಿಜಯ್ ತಮಿಳುನಾಡು ಸಿಎಂ ಆಗುವುದು ಖಚಿತ ಎಂದು ಕೆಲವರು ಭವಿಷ್ಯ ನುಡಿದಿದ್ದರು. ಅದು ಈಗ ನಿಜವಾಗಿದೆ.
ವಿಜಯ್ ರಾಜಕೀಯರಂಗಕ್ಕೆ ಬಂದು ಗೆದ್ದಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಆದರೆ ಮತ್ತೆ ನೆಚ್ಚಿನ ನಟನನ್ನು ತೆರೆಮೇಲೆ ನೋಡುವುದು ಯಾವಾಗ ಎಂದು ಬೇಸರ ಶುರುವಾಗಿದೆ. 'ಜನನಾಯಗನ್' ಚಿತ್ರವನ್ನು ದೊಡ್ಡಮಟ್ಟದಲ್ಲಿ ಗೆಲ್ಲಿಸುವ ಲೆಕ್ಕಾಚಾರದಲ್ಲಿದ್ದಾರೆ. ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ರೀಮೆಕ್ ಇದು. ವಿನೋದ್ ನಿರ್ದೇಶನದ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications