ದೇವರಕೋಣೆಯಲ್ಲಿ ವಿಜಯ್ ಪ್ರತಿಮೆ ಇಟ್ಟು ಪ್ರತಿದಿನ ಪೂಜೆ ಸಲ್ಲಿಸುತ್ತಿರುವ ಅಭಿಮಾನಿ
ಅಭಿಮಾನದ ಪರಾಕಷ್ಠೆ ಏನೇನೋ ಮಾಡಿಸಿಬಿಡುತ್ತದೆ. ಸಿನಿಮಾ ನಟ, ನಟಿಯರಿಗೆ ಅಭಿಮಾನಿಗಳು ದೇವಸ್ಥಾನ ಕಟ್ಟಿರುವ ಉದಾಹರಣೆಗಳಿವೆ. ರಜನಿಕಾಂತ್, ಖುಷ್ಭು, ಅಮಿತಾಬ್ ಬಚ್ಚನ್ ಸೇರಿದಂತೆ ಕೆಲ ತಾರೆಯರಿಗೆ ಅಭಿಮಾನಿಗಳು ದೇಗುಲ ನಿರ್ಮಿಸಿ ಪೂಜೆ ಮಾಡಿರುವುದು ಭಾರೀ ಸುದ್ದಿ ಆಗಿತ್ತು. ಇನ್ನು ನೆಚ್ಚಿನ ತಾರೆಯರ ಪ್ರತಿಮೆ ಸ್ಥಾಪಿಸಿ ಪೂಜೆ ಸಲ್ಲಿಸುವವರನ್ನು ನೋಡಿದ್ದೇವೆ. ಇದೀಗ ತಮಿಳುನಾಡು ಸಿಎಂ ವಿಜಯ್ ಪ್ರತಿಮೆಗೆ ಅಭಿಮಾನಿಯೊಬ್ಬರು ಪೂಜೆ ಸಲ್ಲಿಸುತ್ತಿದ್ದಾರೆ.
ತಮಿಳು ನಟ ವಿಜಯ್ ಎರಡು ವರ್ಷಗಳ ಹಿಂದೆ ಟಿವಿಕೆ ಪಕ್ಷ ಸ್ಥಾಪಿಸಿದ್ದರು. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ದೊಡ್ಡಮಟ್ಟದಲ್ಲಿ ಗೆಲುವು ಕಂಡಿತ್ತು. ಪಕ್ಷದ ಅಧ್ಯಕ್ಷ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ. ದಳಪತಿ ಗೆಲುವು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಸ್ವಂತ ಪಕ್ಷ ಕಟ್ಟಿ ಮೊದಲ ಚುನಾವಣೆಯಲ್ಲೇ ಅಧಿಕಾರ ಹಿಡಿಯುವುದು ತಮಾಷೆ ಮಾತಲ್ಲ.

ನಟ ವಿಜಯ್‌ಗೆ ತಮಿಳುನಾಡಿನಲ್ಲಿ ಭಾರೀ ಅಭಿಮಾನಿ ಬಳಗವಿದೆ. ಟಿವಿಕೆ ಗೆಲುವಿನಲ್ಲಿ ದಳಪತಿ ಅಭಿಮಾನಿಗಳ ಪಾಲು ದೊಡ್ಡದಿದೆ. ವಿಜಯ್ ನಡೆಸಿದ ಸಮಾವೇಶ, ರ್ಯಾಲಿಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದರು. ಆದರೂ ಸಿನಿಮಾ ನೋಡಿ ಶಿಳ್ಳೆ, ಚಪ್ಪಾಳೆ ಹೊಡೆಯುವವರು ವೋಟ್ ಹಾಕಿ ಗೆಲ್ಲಿಸಲ್ಲ ಎಂದು ಕೆಲವರು ಭಾವಿಸಿದ್ದರು. ಆದರೆ ವಿಜಯ್ ವಿಚಾರದಲ್ಲಿ ಆ ಮಾತು ಸುಳ್ಳಾಗಿತ್ತು. ಡಿಎಂಕೆ, ಎಡಿಎಂಕೆ ಪಕ್ಷಗಳನ್ನು ಮೂಲೆಗುಂಪು ಮಾಡಿ ಟಿವಿಕೆ ಪಕ್ಷ ಗೆದ್ದಿದೆ.
ಮೊದಲ ಭಾರೀ ಕಣಕ್ಕಿಳಿದ ಬಹುತೇಕರು ಟಿವಿಕೆ ಪಕ್ಷದಿಂದ ಶಾಸಕರಾಗಿ ಆಯ್ಕೆ ಆಗಿದ್ದಾರೆ. ವಿಜಯ್ ಅಭಿಮಾನಗಳ ಬಲ ಎಂಥಾದ್ದು ಎನ್ನುವುದು ಇದರಿಂದ ಸಾಬೀತಾಗಿದೆ. ತಿರುಚ್ಚಿಯ ಟಿವಿಕೆ ಪಕ್ಷದ ಕಾರ್ಯಕರ್ತ ಸುಕುಮಾರ್ ಷಣ್ಮುಗಂ ತಮ್ಮ ಮನೆಯ ದೇವರ ಮನೆಯಲ್ಲಿ ನಟ ವಿಜಯ್ ಅವರ ಪ್ರತಿಮೆ ಇರಿಸಿ ಪೂಜೆ ಮಾಡುತ್ತಿದ್ದಾರೆ. ದೇವರಿಗೆ ಪೂಜೆ ಮಾಡುವಂತೆ ಪ್ರತಿನಿತ್ಯ ಆರಾಧ್ಯದೈವ ವಿಜಯ್ ಪ್ರತಿಮೆಗೆ ಆರತಿ ಅರ್ಪಿಸಿ ವಿಶೇಷ ಪೂಜೆ ನೆರವೇರಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು ಭಾರೀ ಚರ್ಚೆ ನಡೀತಿದೆ.
5 ಅಡಿ ಎತ್ತರದ ವಿಜಯ್ ಪ್ರತಿಮೆಯನ್ನು ಸುಕುಮಾರ್ ಷಣ್ಮುಗಂ ತಮ್ಮ ಮನೆಯ ದೇವರಕೋಣೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ. ವೈಟ್ ಶರ್ಟ್, ಖಾಕಿ ಪ್ಯಾಂಟ್ ಧರಿಸಿ ಸನ್ ಗ್ಲಾಸ್ ಧರಿಸಿ ವಿಜಯ್ ಕೈಮುಗಿಯುತ್ತಿರುವ ರೂಪದಲ್ಲಿ ಪ್ರತಿಮೆಯನ್ನು ನೋಡಬಹುದು. ಚುನಾವಣೆಗೂ ಮುನ್ನ ವಿಜಯ್ ಇದೇ ಲುಕ್‌ನಲ್ಲಿ ದರ್ಶನ ಕೊಡುತ್ತಿದ್ದರು. ಸಾಕಷ್ಟು ಜನ ಇದೇ ರೀತಿಯ ಬಟ್ಟೆ ಧರಿಸಿ ಮತ ಚಲಾಯಿಸಲು ಹೋಗಿದ್ದರು. ಈ ವಿಚಾರ ಭಾರೀ ಸದ್ದು ಮಾಡಿತ್ತು.
ವಿಜಯ್ ಪ್ರತಿಮೆಗೆ ಅಭಿಮಾನಿಗಳು ಪೂಜೆ ಸಲ್ಲಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಕೆಲವಡೆ ಇದೇ ರೀತಿ ನೆಚ್ಚಿನ ನಟನ ಪ್ರತಿಮೆಗೆ ಪೂಜೆ ಮಾಡಿದ್ದರು. ಆದರೆ ವಿಜಯ್ ರಾಜಕೀಯರಂಗ ಪ್ರವೇಶಿಸಿ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದು ಬಿಟ್ಟು ಜನಸೇವೆಗೆ ಮುಂದಾಗಿದ್ದಾರೆ. ನನಗೆ ಇಷ್ಟು ನೇಮು ಫೇಮು ಕೊಟ್ಟ ತಮಿಳುನಾಡಿನ ಜನತೆಗೆ ಮರಳಿ ಸೇವೆ ಮಾಡಬೇಕು ಎನ್ನುವ ಆಸೆಯಿಂದ ರಾಜಕೀಯರಂಗಕ್ಕೆ ಬಂದಿದ್ದಾರೆ.
ಹೆಚ್ಚು ಹಣ ಖರ್ಚು ಮಾಡದೇ ತಮ್ಮ ಪ್ರಣಾಳಿಕೆ ಹಾಗೂ ಅಭಿಮಾನಿಗಳ ಬಲದಿಂದಲೇ ವಿಜಯ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ವಿಜಯ್ ನಟನೆಯ ಕೊನೆ ಸಿನಿಮಾ 'ಜನನಾಯಗನ್' ಬಿಡುಗಡೆ ತಡವಾಗುತ್ತಿದೆ. ತಮಿಳುನಾಡಿನಲ್ಲೇ ವಿಜಯ್ ಸಿನಿಮಾಗಳು 200ರಿಂದ 300 ಕೋಟಿ ರೂ. ಕಲೆಕ್ಷನ್ ಮಾಡುತ್ತವೆ. ಬಿಡುಗಡೆಗೂ ಮುನ್ನ 'ಜನನಾಯಗನ್' ಸಿನಿಮಾ ಆನ್ಲೈನ್‌ನಲ್ಲಿ ಲೀಕ್ ಆಗಿತ್ತು. ಆದರೂ ದೊಡ್ಡಪರದೆಯಲ್ಲಿ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications