ರಜಿನಿಯ ಕೂಲಿಯನ್ನು ಕಾಡಿದ ಲೀಕಾಸುರರು, ನಮ್ಮ ಶ್ರಮ ಎಲ್ಲ ನೀರಲ್ಲಿ ಹೋಮ ಮಾಡಿದಂತೆ ಆಯಿತು ಎಂದ ಡೈರೆಕ್ಟರ್..!
ಸಿನಿಮಾ ಮಾಡೋದು ಸುಲಭ ಅಲ್ಲ. ಅದಕ್ಕೆ ಅದ್ರದ್ದೇ ಆದ ಸವಾಲುಗಳಿರುತ್ತವೆ. ಅದರಲ್ಲಿಯೂ ಕೂಡ ಈ ಮೊಬೈಲ್ ಬಂದ ನಂತರ ಚಿತ್ರದ ಚಿತ್ರೀಕರಣ ಮಾಡುವುದು ನಿಜಕ್ಕೂ ಚಿತ್ರತಂಡಕ್ಕೆ ಸವಾಲಾಗಿದೆ. ಚಿತ್ರದ ಸನ್ನಿವೇಶ, ನಾಯಕನ ವೇಷ, ಲೀಕ್ ಆಗಬಾರದೆಂದು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಕದ್ದು ಚಿತ್ರದ ಪ್ರಮುಖ ಭಾಗದ ಚಿತ್ರೀಕರಣವನ್ನು ಸೆರೆ ಹಿಡಿದು ಆನ್ ಲೈನ್‌ನಲ್ಲಿ ಕೆಲವರು ಲೀಕ್ ಮಾಡುತ್ತಾರೆ. ಈ ಲೀಕಾಸುರರಿಂದ ಕೂಲಿ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಬೇಸರಗೊಂಡಿದ್ದಾರೆ. ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಹೌದು, ಅಸಲಿಗೆ ಕೂಲಿ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ಕೇವಲ ಸೂಪರ್ ಸ್ಟಾರ್ ರಜನಿಕಾಂತ್ ಮಾತ್ರ ಅಲ್ಲ, ನಮ್ಮ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಕೂಡ ಇದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಚಿತ್ರದಲ್ಲಿದ್ದಾರೆ. ಇನ್ನೂ ಆಂಧ್ರದಿಂದ ನಾಗಾರ್ಜುನ ಕೂಲಿ ತಂಡವನ್ನು ಸೇರಿಕೊಂಡಿದ್ದಾರೆ.

ಹೀಗೆ ಬಹುಭಾಷಾ ತಾರೆಯರ ಸಮ್ಮಿಲನಕ್ಕೆ ಸಾಕ್ಷಿಯಾಗುತ್ತಿರುವ ಕೂಲಿ ಚಿತ್ರದ ಚಿತ್ರೀಕರಣ ನಡೆಯುವ ಸಮಯದಲ್ಲಿ ಕಿಡಿಗೇಡಿಗಳು, ನಾಗಾರ್ಜುನ ಭಾಗಿಯಾಗಿದ್ದ ಸನ್ನಿವೇಶವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ನೂರಾರು ಮಂದಿ ಮೈನಿಂಗ್ ನಡೆಯುತ್ತಿದ್ದ ಸ್ಥಳದಿಂದ ಓಡಿ ಬರುತ್ತಿರುವ ದೃಶ್ಯವನ್ನೂ ಕೂಡ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ಎರಡು ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.
ತಮ್ಮ ಚಿತ್ರದ ಈ ಎರಡು ಸನ್ನಿವೇಶಗಳನ್ನು ನೋಡಿದ ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ಸಹಜವಾಗಿ ಆಘಾತವಾಗಿದೆ. ಹೀಗಾಗಿಯೇ ಬೇಸರದಿಂದನೇ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಲೋಕೇಶ್ ಕನಕರಾಜ್, "ಒಂದು ರೆಕಾರ್ಡಿಂಗ್‌ನಿಂದಾಗಿ ಹಲವರ ಎರಡು ತಿಂಗಳ ಶ್ರಮ ವ್ಯರ್ಥವಾಯಿತು. ಈ ರೀತಿ ಹಾಳುಮಾಡುವಂತಹ ಅಭ್ಯಾಸಗಳನ್ನು ಇಟ್ಟುಕೊಳ್ಳಬೇಡಿ ಎಂದು ನಾನು ಎಲ್ಲರಿಗೂ ವಿನಮ್ರವಾಗಿ ವಿನಂತಿಸುತ್ತೇನೆ. ಧನ್ಯವಾದಗಳು." ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನೂ ಚಿತ್ರದ ಎರಡು ಪ್ರಮುಖ ದೃಶ್ಯಗಳು ಲೀಕ್ ಆದ ಹಿನ್ನೆಲೆ, ಚಿತ್ರದ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕ ಲೋಕೇಶ್ ಕನಕರಾಜ್ ಮುಂದೆ ಮೊಬೈಲ್ ಫೋನ್ ನಿಷೇಧಿಸುವ ಸಾಧ್ಯತೆ ಇದೆ. ಎರಡು ಗುಟ್ಟು ರಟ್ಟಾದ ಹಿನ್ನೆಲೆ ಈ ಎರಡು ಸನ್ನಿವೇಶಗಳನ್ನು ಬದಲಿಸಿ ಮರು ಚಿತ್ರೀಕರಣವನ್ನು ಲೋಕೇಶ್ ಕನಕರಾಜ್ ಮಾಡ್ತಾರಾ ಎನ್ನುವ ಪ್ರಶ್ನೆ ಕೂಡ ಈಗ ಅನೇಕರನ್ನು ಕಾಡುತ್ತಿದೆ.
ಅಂದ್ಹಾಗೇ ಕೂಲಿ ಚಿತ್ರದಲ್ಲಿ ಉಪೇಂದ್ರ ಖಳನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದೇ ಅನೇಕರು ಅಂದುಕೊಂಡಿದ್ದರು. ಆದರೆ, ಕೂಲಿ ಚಿತ್ರದಲ್ಲಿ ಉಪೇಂದ್ರ ವಿಲನ್ ಪಾತ್ರವನ್ನು ನಿರ್ವಹಿಸುತ್ತಿಲ್ಲ. ನಿನ್ನೆ ತಮ್ಮ ಹುಟ್ಟುಹಬ್ಬದಂದು ಈ ಕುರಿತು ಸ್ಪಷ್ಟನೆಯನ್ನು ನೀಡಿರುವ ಉಪೇಂದ್ರ ರಜನಿಕಾಂತ್ ಸರ್ ಜೊತೆ ಕೂಲಿ ಚಿತ್ರ ಮಾಡುತ್ತಿದ್ದೇನೆ. ಒಂದೊಳ್ಳೆಯ ಪಾತ್ರ ಮಾಡ್ತಿದ್ದೀನಿ, ವಿಲನ್ ರೋಲ್ ಅಲ್ಲ ಎಂದು ಹೇಳಿದ್ದಾರೆ. ಇನ್ನೂ ಉಪ್ಪಿ ಈ ಮಾತು ಹೇಳಿದ ಬೆನ್ನಲ್ಲಿಯೇ ಉಪೇಂದ್ರ ಅವರ ಪಾತ್ರ ಹೇಗಿರಬಹುದು ಎನ್ನುವ ಪ್ರಶ್ನೆ ಇವರ ಅಭಿಮಾನಿಗಳನ್ನು ಕಾಡುತ್ತಿದೆ. ಉಪ್ಪಿ ಪಾತ್ರದ ಅವಧಿ ಎಷ್ಟಿರಬಹುದು ಎಂಬ ಪ್ರಶ್ನೆ ಕೂಡ ಕಾಡುತ್ತಿದೆ.
ಉಳಿದಂತೆ ರಚಿತಾ ರಾಮ್ ಈ ಚಿತ್ರದಲ್ಲಿ ವಿಲನ್ ಪಾತ್ರವನ್ನು ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಚಿತ್ರದ ನಿರ್ದೇಶಕ ಲೊಕೇಶ್ ಕನಕರಾಜ್ ಆಗಲಿ ನಿರ್ಮಾಣ ಸಂಸ್ಥೆಯಾಗಲಿ ರಚಿತಾ ರಾಮ್ ಚಿತ್ರದಲ್ಲಿದ್ದಾರೆ ಎಂದು ಅಧಿಕೃತವಾಗಿ ಹೇಳಿಲ್ಲವಾದರೂ ರಚಿತಾ ರಾಮ್ ಈಗಾಗಲೇ ಚಿತ್ರದ ಚಿತ್ರೀಕರಣದಲ್ಲಿ ಕೂಡ ಭಾಗಿಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇವರನ್ನು ಹೊರತು ಪಡಿಸಿದರೆ ಚಿತ್ರದಲ್ಲಿ ಸೌಬಿನ್ ಶಾಹಿರ್, ಸತ್ಯರಾಜ್, ಶ್ರುತಿ ಹಾಸನ್ ಇದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮುಂದಿನ ವರ್ಷ ಕೂಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.


Click it and Unblock the Notifications











