ರಕ್ಷಿತ್ 'ಸಪ್ತ ಸಾಗರ'ದಲ್ಲಿ ಮಿಂದೆಂದು ಮಧ್ಯರಾತ್ರಿ ಏನಂದ್ರು ಉದಯನಿಧಿ?
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್- B ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸೆಪ್ಟೆಂಬರ್ 1ರಂದು ಚಿತ್ರದ ಮೊದಲ ಭಾಗ ರಿಲೀಸ್ ಆಗಿತ್ತು. 2ನೇ ಭಾಗ ಈ ಪ್ರೇಕ್ಷಕರನ್ನು ರಂಜಿಸುತ್ತಿದೆ. ಭಾವನಾತ್ಮಕ ಕತೆಗೆ ಸಿನಿರಸಿಕರು ಫಿದಾ ಆಗಿದ್ದಾರೆ.
ಹೇಮಂತ್ ರಾವ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ನಾಯಕಿಯರಾಗಿ ಮಿಂಚಿದ್ದಾರೆ. ಕನ್ನಡ ಜೊತೆಗೆ ತೆಲುಗು, ತಮಿಳು, ಮಲಯಾಳಂನಲ್ಲೂ ಸಿನಿಮಾ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ ಒಂದು ದಿನ ಮೊದ್ಲೆ ಪೇಯ್ಡ್ ಪ್ರೀಮಿಯರ್ ಶೋಗಳು ಆರಂಭವಾಗಿತ್ತು. ಸೈಡ್- A ನೋಡಿದ್ದವರು ಮುಗಿಬಿದ್ದು ಸೈಡ್- B ನೋಡಿದ್ದಾರೆ.

ತಮಿಳುನಾಡು ಸಚಿವ, ತಮಿಳು ನಟ ಉದಯನಿಧಿ ಸ್ಟಾಲಿನ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. "ಸಪ್ತಸಾಗರದಾಚೆ ಎಲ್ಲೋ ಸೈಡ್- B ಸಿನಿಮಾ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ರಕ್ಷಿತ್ ಶೆಟ್ಟಿ ಮತ್ತು ತಂಡಕ್ಕೆ ಅಭಿನಂದನೆ. ನೀವು ನಿಜಕ್ಕೂ ಸಿನಿಮಾ ಮಾಂತ್ರಿಕರು. ಎಲ್ಲರೂ ಹೋಗಿ ಥಿಯೇಟರ್‌ನಲ್ಲೇ ಸಿನಿಮಾ ನೋಡಿ" ಎಂದು ಉದಯನಿಧಿ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ. ಉದಯನಿಧಿ ಟ್ವೀಟ್‌ಗೆ ರಕ್ಷಿತ್ ಶೆಟ್ಟಿ ಧನ್ಯವಾದ ತಿಳಿಸಿದ್ದಾರೆ.
ತಮಿಳುನಾಡು ಸರ್ಕಾರದಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿ ಉದಯನಿಧಿ ಸ್ಟಾಲಿನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಸನಾತನ ಧರ್ಮ ಕುರಿತು ಉದಯನಿಧಿ ಹೇಳಿಗೆ ಭಾರೀ ವಿವಾದ ಸೃಷ್ಟಿಸಿತ್ತು. ಚೆನ್ನೈ ಸಮಾವೇಶವೊಂದರಲ್ ಮಾತಾನಾಡಿದ್ದ ಉದಯನಿಧಿ "ಕೆಲವು ನಾವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಬದಲಿಗೆ ರದ್ದುಗೊಳಿಸಬೇಕು. ಉದಾಹರಣೆಗೆ ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ನಾವು ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿಯಲ್ಲಿ ನಾವು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕಿದೆ" ಎಂದಿದ್ದರು.
ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ಹೇಳಿಕೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ವಿವಾದದ ಬೆನ್ನಲ್ಲೇ ಉದಯನಿಧಿ 'ಸಪ್ತಸಾಗರದಾಚೆ ಎಲ್ಲೋ - ಸೈಡ್ A' ಸಿನಿಮಾ ವೀಕ್ಷಿಸಿದ್ದರು. ಬಳಿಕ ಟ್ವೀಟ್ ಮಾಡಿ "ರಕ್ಷಿತ್ ಶೆಟ್ಟಿ ಬ್ರದರ್, ನಿಮ್ಮ ಹೊಸ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್-A ತುಂಬ ಇಷ್ಟವಾಯ್ತು. ಅದ್ಭುತವಾದ ಫಿಲ್ಮ್ ಮೇಕಿಂಗ್. ನಿಮ್ಮ ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ನಾನು ಸೈಡ್- B ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದರು. ಹೇಳಿದಂತೆಯೇ ಸೈಡ್- B ಸಿನಿಮಾ ವೀಕ್ಷಿಸಿದ್ದಾರೆ.
ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಮೊಮ್ಮಗ, ಹಾಲಿ ಸಿಎಂ ಎಂ. ಕೆ ಸ್ಟಾಲಿನ್ ಮಗನಾಗಿರುವ ಉದಯನಿಧಿ ಸ್ಟಾಲಿನ್ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದಷ್ಟು ಸಿನಿಮಾಗಳನ್ನು ನಿರ್ಮಿಸಿ ನಟಿಸಿದ ಉದಯನಿಧಿ ಈಗ ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ಸಂಪೂರ್ಣವಾಗಿ ರಾಜಕೀಯರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ವರ್ಷ ಬಿಡುಗಡೆಯಾದ 'ಮಾಮನನ್' ಚಿತ್ರದಲ್ಲಿ ಕೊನೆಯದಾಗಿ ಬಣ್ಣ ಹಚ್ಚಿದ್ದರು.

'ಆದವನ್' ಚಿತ್ರದಲ್ಲಿ ಮೊದಲಿಗೆ ಅತಿಥಿ ಪಾತ್ರದಲ್ಲಿ ನಟಿಸಿದರು. ಬಳಿಕ 'ಒರು ಕಲ್ ಒರು ಕನ್ನಡಿ', 'ಇದು ಕತಿರ್‌ವೇಲ್ ಕಾದಲ್', 'ನಿಮಿರ್', 'ಸೈಕೋ', 'ನೆಂಜುಕ್ಕು ನೀಧಿ', 'ಕಣ್ಣೈ ನಂಬಾತೆ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ತಮ್ಮದೇ ರೆಡ್ ಝೈಂಟ್ ಮೂವೀಸ್ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದು ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ದೊಡ್ಡ ದೊಡ್ಡ ಸಿನಿಮಾಗಳನ್ನು ತಮ್ಮ ಬ್ಯಾನರ್‌ನಲ್ಲಿ ವಿತರಣೆ ಮಾಡುತ್ತಿದ್ದಾರೆ. 'ಸಲಾರ್' ತಮಿಳುನಾಡು ಹಕ್ಕುಗಳನ್ನು ಇದೇ ಸಂಸ್ಥೆ ಕೊಂಡುಕೊಂಡಿದೆ.


Click it and Unblock the Notifications











