ನಾನು, ಸಿಎಂ ಒಂದೇ ಕಾಲೇಜು ಸ್ಟೂಡೆಂಟ್ಸ್; ಆದ್ರೆ ಸರ್ಕಾರ ನಡೆಸೋದ್ರಲ್ಲಿ ನಾವೇ ಸೀನಿಯರ್ಸ್; ಉದಯನಿಧಿ ಟಾಂಗ್
ಒಂದೇ ವಾರದಲ್ಲಿ ತಮಿಳುನಾಡು ರಾಜಕೀಯ ಚಿತ್ರಣವೇ ಬದಲಾಗಿದೆ. ಆಡಳಿತ ಪಕ್ಷದಲ್ಲಿದ್ದವರು ವಿರೋಧ ಪಕ್ಷದಲ್ಲಿ ಕೂರುವಂತಾಗಿದೆ. ನಿನ್ನೆ ಮೊನ್ನೆ ಹುಟ್ಟಿಕೊಂಡ ಟಿವಿಕೆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆಡಳಿತ ಪಕ್ಷದ ಸ್ಥಾನದಲ್ಲಿ ಕೂರುವಂತಾಗಿದೆ. ಈಗಾಗಲೇ ತಮಿಳುನಾಡು ವಿಧಾನಸಭೆ ಅಧಿವೇಶನ ಆರಂಭವಾಗಿದೆ.
ಚುನಾವಣೆ ಪ್ರಚಾರದ ವೇಳೆ ಎಲ್ಲಾ ರಾಜಕೀಯಪಕ್ಷದ ನಾಯಕರು ಪರಸ್ಪರ ಕೆಸರೆರಚಾಟ ನಡೆಸಿದ್ದರು. ಡಿಎಂಕೆ ನಾಯಕರ ವಿರುದ್ಧ ವಿಜಯ್ ಅಬ್ಬರಿಸಿ ಬೊಬ್ಬರಿದಿದ್ದರು . ಅದೇ ರೀತಿ ದಳಪತಿ ರಾಜಕೀಯರಂಗ ಪ್ರವೇಶವನ್ನು ಎದುರಾಳಿ ಪಕ್ಷದ ನಾಯಕರು ಅಣಕವಾಡಿದ್ದರು. ಆದರೆ ಅಂದು ಮಾತನಾಡಿದವರು ಈಗ ಬಾಯಿ ಮುಚ್ಚಿಕೊಳ್ಳುವಂತಾಗಿದೆ. ವಿಜಯ್ ಬಹುಮತ ಸಾಬೀತುಪಡಿಸುವುದು ಕೂಡ ಬಹಳ ಸುಲಭವಾಗಿದೆ. ಇದೆಲ್ಲದರ ನಡುವೆ ಸದನದಲ್ಲೇ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನೂತನ ಮುಖ್ಯಮಂತ್ರಿಗೆ ಟಾಂಗ್ ಕೊಟ್ಟಿದ್ದಾರೆ.

ವಿಜಯ್ ಹಾಗೂ ಉದಯನಿಧಿ ಸ್ಟಾಲಿನ್ ಒಂದ್ಕಾಲದಲ್ಲಿ ಒಳ್ಳೆ ಸ್ನೇಹಿತರಾಗಿದ್ದರು. ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಕರುಣಾನಿಧಿ ಮೊಮ್ಮಗ, ಸ್ಟಾಲಿನ್ ಮಗ ಉದಯನಿಧಿ ಕೆಲ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸೇವೆ ಸಲ್ಲಿಸಿದ್ದರು. ಆದರೆ ಈಗ ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿದ್ದಾರೆ. ವಿಜಯ್ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆಗುತ್ತಾರೆ ಎಂದು ಕನಸು ಮನಸ್ಸಿನಲ್ಲಿ ಕೂಡ ಎಣಿಸಿರಲಿಲ್ಲ. ಸದನದಲ್ಲಿ ಕೂಡ ವಿಜಯ್‌ಗೆ ಕೌಂಟರ್ ಕೊಡುವಂತೆ ಮಾತನಾಡಿದ್ದಾರೆ.
ಉದಯನಿಧಿ ಸ್ಟಾಲಿನ್ ಮಾತನಾಡಿ "ನೂತನ ಸ್ಪೀಕರ್ ಜೆಸಿಡಿ ಪ್ರಭಾಕರ್, ಇವತ್ತು ಮುಖ್ಯಮಂತ್ರಿ ಆಗಿರುವವರು ಹಾಗೂ ವಿರೋಧ ಪಕ್ಷದಲ್ಲಿ ಕೂತಿರುವ ನಾನು ಮೂವರು ಒಂದೇ ಕಾಲೇಜಿನ ಹಳೆಯ ವಿದ್ಯಾರ್ಥಿಗಳು" ಎಂದಿದ್ದಾರೆ. ಈ ವೇಳೆ ಎದುರಿಗೆ ಕೂತ ವಿಜಯ್ ನಸು ನಕ್ಕಿದ್ದಾರೆ. ಬಳಿಕ ಮಾತು ಮುಂದುವರೆಸಿದ ಉದಯನಿಧಿ "ಒಂದೇ ಕಾಲೇಜಿನಲ್ಲಿ ಓದಿದ್ದರೂ ಸರ್ಕಾರ ನಡೆಸುವುದರಲ್ಲಿ ಡಿಎಂಕೆ ಸೀನಿಯರ್ ಬ್ಯಾಚ್ ಎನ್ನುವುದು ನಿಮಗೆಲ್ಲಾ ಗೊತ್ತಿದೆ.. 1965ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಿತ್ತು. ಹಾಗಾಗಿ ನಾವೇ ಸೀನಿಯರ್ಸ್.. ಆ ಲೆಕ್ಕದಲ್ಲಿ ನಮ್ಮ ಜ್ಞಾನ ಹಾಗೂ ಅನುಭವ ಹಂಚಿಕೊಳ್ಳಲು ಸಿದ್ಧರಿದ್ದೇವೆ. ಅದನ್ನು ಸ್ವೀಕರಿಸಲು ನೀವು ಸಿದ್ಧವಾಗಿರಿ. ಅಂತಿಮವಾಗಿ ನಮಗೆ ತಮಿಳು ಜನರ ಒಳಿತು ಮುಖ್ಯ" ಎಂದಿದ್ದಾರೆ.
"ನಾವು ನಿಮ್ಮನ್ನು ಕೈಹಿಡಿದು ಕರ್ಕೊಂಡು ಬಂದು ಕೂರಿಸಿದ್ದೇವೆ. ಇನ್ನು ಮುಂದೆ ನೀವು ಕೋಪ ಮಾಡಿಕೊಳ್ಳದೇ ನಮ್ಮ ಕೈ ಹಿಡಿದು ನಡೆಸಬೇಕು" ಎಂದು ಉದಯನಿಧಿ ಹೇಳಿದ್ದಾರೆ. "ನೀವು ಕೋಪಗೊಳ್ಳುವುದಿಲ್ಲ ಅಂತ ಗೊತ್ತು. ನೀವು ಕೋಪಗೊಳ್ಳುವಂತಹ ಕೆಲಸ ನಾವು ಮಾಡಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಕಿವಿಯಾಗಿ ಪ್ರತಿಪಕ್ಷ ಕೊರಳಾಗಿ ಇರಬೇಕು. ಅದರಲ್ಲೇ ಪ್ರಜಾಪ್ರಭುತ್ವದ ಯಶಸ್ಸು ಅಡಗಿದೆ. ಹಿಂದಿನ ಸರ್ಕಾರದಲ್ಲಿ ಆಡಳಿತ ಪಕ್ಷದಲ್ಲಿ ಹೆಚ್ಚು ಶಾಸಕರು ಇರುತ್ತಿದ್ದರು, ವಿರೋಧ ಪಕ್ಷದಲ್ಲಿ ಕಮ್ಮಿ ಶಾಸಕರು ಇರ್ತಿದ್ರು. ಆದರೆ ಈ ಬಾರಿ ಹೆಚ್ಚು ಕಮ್ಮಿ ಒಂದೇ ಸಮನಾಗಿದೆ. ಅದು ಈ ಬಾರಿಯ ವಿಶೇಷ" ಎಂದು ಉದಯನಿಧಿ ತಿಳಿಸಿದ್ದಾರೆ.
ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ವಿಜಯ್ ಓದಿದ್ದರು. ಅದೇ ಕಾಲೇಜಿನಲ್ಲಿ ಉದಯನಿಧಿ ಸ್ಟಾಲಿನ್ ಕೂಡ ಅಲ್ಲೇ ವಿದ್ಯಾಭ್ಯಾಸ ಮಾಡಿದ್ದರು. 18 ವರ್ಷಗಳ ಹಿಂದೆ ರೆಡ್ ಜೈಂಟ್ಸ್ ಪ್ರೊಡಕ್ಷನ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಉದಯನಿಧಿ ಸ್ಟಾಲಿನ್ ಹುಟ್ಟುಹಾಕಿದ್ದರು. ಸಂಸ್ಥೆಯ ಮೊದಲ(ಕುರುವಿ) ಚಿತ್ರದಲ್ಲಿ ವಿಜಯ್ ಹಾಗೂ ತ್ರಿಷಾ ನಾಯಕ-ನಾಯಕಿಯಾಗಿ ನಟಿಸಿದ್ದರು. ನಾನು, ವಿಜಯ್ ಒಳ್ಳೆ ಸ್ನೇಹಿತರಾಗಿದ್ದೆವು. ಬಳಿಕ ದೂರಾದೆವು. ಯಾರೋ ನಮ್ಮಿಬ್ಬರ ನಡುವೆ ತಂದಿಟ್ಟರು ಎಂದು ಉದಯನಿಧಿ ಹಿಂದೆ ಒಮ್ಮೆ ಹೇಳಿದ್ದರು.


Click it and Unblock the Notifications