ಆ ಚಿತ್ರದಲ್ಲಿ ನಾನು ವಿಜಯ್ ಎದುರು ವಿಲನ್ ಆಗಿ ನಟಿಸ್ಬೇಕಿತ್ತು, ಜ್ಯೋತಿಕಾ ಕೇಳಿದ್ರು; ಉಪೇಂದ್ರ
ತಮಿಳುನಾಡಿನಲ್ಲಿ ನಟ ವಿಜಯ್ ಸರ್ಕಾರ ಆರಂಭವಾಗಿದೆ. ಟಿವಿಕೆ ಪಕ್ಷ ಸ್ಥಾಪಿಸಿ ಸಂಚಲನ ಸೃಷ್ಟಿಸಿದ್ದ ವಿಜಯ್ ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದರ ಬಗ್ಗೆ ಕರ್ನಾಟಕದಲ್ಲಿ ಸಿನಿಮಾ ನಟ ಯಾರಾದರೂ ಪಕ್ಷ ಕಟ್ಟಿ ಗೆಲ್ಲಬಹುದಾ ಎನ್ನುವ ಚರ್ಚೆ ಆರಂಭವಾಗಿದೆ. ಈ ಬಗ್ಗೆ ನಟ ಉಪೇಂದ್ರ ಕೂಡ ಪ್ರತಿಕ್ರಿಯಿಸಿದ್ದಾರೆ.
ಪ್ರಜಾಕೀಯ ಪಕ್ಷ ಸ್ಥಾಪಿಸಿರುವ ನಟ ಉಪೇಂದ್ರ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ತಮಿಳುನಾಡಿನಲ್ಲಿ ವಿಜಯ್ ಪಕ್ಷ ಸ್ಥಾಪಿಸಿ ಅಖಾಡಕ್ಕಿಳಿದು ಗೆದ್ರಲ್ಲ, ಸರ್. ನೀವು ಯಾವಾಗ ಚುನಾವಣೆಗೆ ಸ್ಪರ್ಧಿಸುವುದು ಎನ್ನುವ ಪ್ರಶ್ನೆ ಎದುರಾಗುತ್ತಿದೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ. ಈ ರಾಜಕೀಯ ಬೇಡ, ಜನನಾಯಕರು ಬದಲಾಗುವುದು ಬೇಡ, ಜನರೇ ಬದಲಾಗಬೇಕು ಎಂದು ಉಪೇಂದ್ರ ಹೇಳುತ್ತಿದ್ದಾರೆ.

ಟಿವಿಕೆ ಪಕ್ಷದ ನಾಯಕ ವಿಜಯ್ ಅವರನ್ನು ಯಾವತ್ತಾದರೂ ಭೇಟಿ ಆಗಿದ್ರಾ? ಎನ್ನುವ ಪ್ರಶ್ನೆಗೆ ಇಲ್ಲ ಎಂದಿದ್ದಾರೆ. ಆದರೆ ಅವರೊಟ್ಟಿಗೆ ಸಿನಿಮಾದಲ್ಲಿ ನಟಿಸುವಂತೆ ಕೇಳಿದ್ದರು. ನಾನು ಒಪ್ಪಲಿಲ್ಲ ಎಂದು ಉಪ್ಪಿ ಹೇಳಿರುವುದು ವೈರಲ್ ಆಗ್ತಿದೆ. ಟಿವಿ9 ಸಂದರ್ಶನದಲ್ಲಿ ಈ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ. "ಗಿಲ್ಲಿ ಚಿತ್ರದಲ್ಲಿ ಪ್ರಮುಖ ಪಾತ್ರ ಇತ್ತಲ್ಲ, ಅದನ್ನು ನಾನು ಮಾಡಬೇಕು ಎಂದು ಜ್ಯೋತಿಕಾ ಬಹಳ ಸಲ ಫೋನ್ ಮಾಡಿ ಕೇಳಿದ್ರು.. ಬಳಿಕ ಪ್ರಕಾಶ್ ರಾಜ್ ಆ ಪಾತ್ರ ಮಾಡಿದ್ರು.. ಆ ಸಮಯದಲ್ಲಿ ನಾನು ಅವರೊಟ್ಟಿಗೆ ನಟಿಸಬೇಕಿತ್ತು. ಆದ್ರೆ, ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದೆ. ಆ ಪಾತ್ರ ಮಾಡಲು ಮನಸ್ಸು ಬರಲಿಲ್ಲ ಅದ್ಕೆ ಮಾಡ್ಲಿಲ್ಲ" ಎಂದಿದ್ದಾರೆ.
ತೆಲುಗಿನ 'ಒಕ್ಕಡು' ಸಿನಿಮಾ ರೀಮೆಕ್ ಗಿಲ್ಲಿ. ಮೊದಲಿಗೆ ಚಿಯಾನ್ ವಿಕ್ರಂ ಹಾಗೂ ಜ್ಯೋತಿಕಾ ಈ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಬಳಿಕ ವಿಜಯ್ ಹಾಗೂ ಜ್ಯೋತಿಕಾ ನಟಿಸಬೇಕಿತ್ತು. ಕಾರಣಾಂತರಗಳಿಂದ ಕೊನೆಗೆ ವಿಜಯ್ ಹಾಗೂ ತ್ರಿಷಾ ಆ ಚಿತ್ರದಲ್ಲಿ ನಟಿಸಿದರು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ತೆಲುಗಿನಲ್ಲಿ ಒಬುಲ್ ರೆಡ್ಡಿ ಎಂಬ ನೆಗೆಟಿವ್ ರೋಲ್‌ನಲ್ಲಿ ಪ್ರಕಾಶ್ ರಾಜ್ ಅಬ್ಬರಿಸಿದ್ದರು. ಕೊನೆಗೆ ತಮಿಳು ಹಾಗೂ ಕನ್ನಡದಲ್ಲಿ(ಅಜಯ್) ಕೂಡ ಆ ಪಾತ್ರವನ್ನು ಪ್ರಕಾಶ್ ರಾಜ್ ನಿಭಾಯಿಸಿ ಗೆದ್ದಿದ್ದರು.

ಅದಾಗಲೇ 'ನಾಗರಹಾವು' ಚಿತ್ರದಲ್ಲಿ ಉಪೇಂದ್ರ ಹಾಗೂ ಜ್ಯೋತಿಕಾ ನಾಯಕ-ನಾಯಕಿಯಾಗಿ ನಟಿಸಿದ್ದರು. ಹಾಗಾಗಿ ಇಬ್ಬರು ನಡುವೆ ಒಳ್ಳೆ ಸ್ನೇಹ ಇತ್ತು. ಹಾಗಾಗಿ ಆಕೆ 'ಒಕ್ಕಡು' ತಮಿಳು ರೀಮೆಕ್ 'ಗಿಲ್ಲಿ' ಚಿತ್ರದಲ್ಲಿ ನಟಿಸುವಂತೆ ಕೇಳಿದ್ದರು. ವಿಜಯ್ ಹಾಗೂ ತ್ರಿಷಾ ಇಬ್ಬರ ಕರಿಯರ್‌ಗೆ ಈ ಸಿನಿಮಾ ಬ್ರೇಕ್ ನೀಡಿತ್ತು. ಅಲ್ಲಿಯವರೆಗೂ ರೊಮ್ಯಾಂಟಿಕ್ ಸಿನಿಮಾಗಳಲ್ಲೇ ಹೆಚ್ಚು ನಟಿಸಿದ್ದ ವಿಜಯ್ ಬಳಿಕ ಮಾಸ್ ಹೀರೊ ಇಮೇಜ್ ಸಂಪಾದಿಸಿದರು. ಮುಂದೆ ಮಾಸ್ ಹೀರೊ ಆಗಿ ಇವತ್ತು ತಮಿಳುನಾಡಿನ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ.
2004ರಲ್ಲಿ 'ಗಿಲ್ಲಿ' ಸಿನಿಮಾ ತೆರೆಗೆ ಬಂದಿತ್ತು. ಅಷ್ಟರಲ್ಲಾಗಲೇ ಉಪೇಂದ್ರ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು. 'ಪ್ರೀತ್ಸೆ' ಚಿತ್ರದಲ್ಲಿ ನೆಗೆಟಿವ್ ಶೇಡ್ ರೋಲ್‌ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಹಾಗಾಗಿ ಆ ಪಾತ್ರಕ್ಕೆ ಅವರನ್ನು ಕಾಲಿವುಡ್ ಮಂದಿ ಸಂಪರ್ಕಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಸಂಪೂರ್ಣ ನೆಗೆಟಿವ್ ಪಾತ್ರ ಉಪ್ಪಿ ಇಮೇಜ್‌ಗೆ ಪೆಟ್ಟು ಕೊಡುತ್ತಿತ್ತು. ಅದೇ ಕಾರಣಕ್ಕೋ ಏನೋ ಅವರು ನಟಿಸೋಕೆ ಒಲ್ಲೆ ಎಂದಿದ್ದಾರೆ. ಆ ಬಳಿಕ ಕೂಡ ಕೆಲ ತಮಿಳು ಸಿನಿಮಾಗಳಲ್ಲಿ ರಿಯಲ್ ಸ್ಟಾರ್ ಬಣ್ಣ ಹಚ್ಚಿದ್ದಾರೆ. ಕೊನೆಯದಾಗಿ 'ಕೂಲಿ' ಚಿತ್ರದಲ್ಲಿ ರಜನಿಕಾಂತ್ ಜೊತೆ ಮಿಂಚಿದ್ದರು.


Click it and Unblock the Notifications