ಈ ತಿರುಪೆ ಶೋಕಿಗೆ ಏನು ಕಡಿಮೆ ಇಲ್ಲ, ನಾಲ್ಕನೇ ಮದ್ವೆಯಾಗುತ್ತಿರುವುದಾಗಿ ಹೇಳಿದ್ದ ನಟಿಗೆ ಕ್ಯಾಕರಿಸಿ ಉಗಿದ ಜನ..!
ಇಂದು ಖುಷಿ ಖುಷಿಯಾಗಿ ನಿಂತು ಹಸೆಮಣೆ ಏರಿ ಮದುವೆಯಾದವರು ದಿನ ಕಳೆಯುವಷ್ಟರಲ್ಲಿ ಕೋರ್ಟ್ ಮೆಟ್ಟಿಲೇರುವ ಮಟ್ಟಿಗೆ ಮದುವೆ, ದಾಂಪತ್ಯ ಅನ್ನೋದು ಕಾಮನ್ನಾಗಿರೋದು ದುರ್ದೈವ. ಅದರಲ್ಲೂ ಸಿನಿಮಾ ಮಂದಿಗೆ ಇದು ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ.
ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಪೂರ್ವಾಶ್ರಮದಲ್ಲಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡ ವನಿತಾ ವಿಜಯ್ ಕುಮಾರ್ ತಮ್ಮ 43ನೇ ವಯಸ್ಸಿನಲ್ಲಿ ನಾಲ್ಕನೇ ಮದುವೆಗೆ ಸಿದ್ಧವಾಗಿದ್ದಾರೆ ಎನ್ನುವ ಸುದ್ದಿ ಮೊನ್ನೆಯಷ್ಟೇ ಸದ್ದು ಮಾಡಿತ್ತು. ಖುದ್ದು ವನಿತಾ ವಿಜಯ್ ಕುಮಾರ್ ಬೀಚ್‌ನಲ್ಲಿ ನೃತ್ಯ ನಿರ್ದೇಶಕ ರಾಬರ್ಟ್ ಎದುರು ಮಂಡಿಯೂರಿ ಪ್ರಪೋಸ್ ಮಾಡುತ್ತಿರುವ ಫೋಟೋ ಹಂಚಿಕೊಳ್ಳುವುದಲ್ಲದೇ ಅಕ್ಟೋಬರ್ 5ರಂದು ಡೇಟ್ ಸೇವ್ ಮಾಡಿಕೊಳ್ಳಿ ಎಂದ ಹಿನ್ನೆಲೆ ಈ ವಿಚಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಚರ್ಚೆಯಾಗಿತ್ತು. ವನಿತಾ ವಿಜಯ್ ಕುಮಾರ್ ಅವರ ಈ ನಾಲ್ಕನೇ ಮದುವೆ ಟ್ರೋಲಿಗರಿಗೆ ಆಹಾರವೂ ಆಗಿತ್ತು.

ಆದರೆ ಈಗ ವನಿತಾ ವಿಜಯ್ ಕುಮಾರ್ ಇದೆಲ್ಲವೂ ಮಾಡಿದ್ದು ಪ್ರಚಾರಕ್ಕೆ ಅನ್ನುವುದು ಜಗಜ್ಜಾಹೀರಾಗಿದೆ. ಹೌದು, ಅಸಲಿಗೆ ವನಿತಾ ವಿಜಯ್ ಕುಮಾರ್ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ನಾಯಕಿಯ ಪಾತ್ರಕ್ಕೆ ಬಣ್ಣವನ್ನೂ ಹಚ್ಚಿದ್ದಾರೆ. ಆ ಚಿತ್ರದ ಹೆಸರು ಮಿಸೆಸ್ & ಮಿಸ್ಟರ್. ಈ ಚಿತ್ರದಲ್ಲಿ ಒಂದು ಕಾಲದಲ್ಲಿ ವನಿತಾ ಅವರ ಜೊತೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ರಾಬರ್ಟ್ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ಪ್ರೋಮೋ ಬಿಡುಗಡೆಗೆ ವನಿತಾ ವಿಜಯ್ ಕುಮಾರ್ ತಮ್ಮ ಮದುವೆಯ ಗಿಮಿಕ್ ಮಾಡಿದ್ದಾರೆ. ಚಿತ್ರದ ಪೋಸ್ಟರ್ ಹಂಚಿಕೊಂಡು ನಿಜ ಜೀವನದಲ್ಲಿ ನಾಲ್ಕನೇ ಮದುವೆಯಾಗುತ್ತಿರುವಂತೆ ಸುದ್ದಿಯನ್ನೂ ಹಬ್ಬಿಸಿದ್ದಾರೆ.
ಸದ್ಯ ವನಿತಾ ವಿಜಯ್ ಕುಮಾರ್ ನೀಡಿದ ಈ ಚಮಕ್‌ನಿಂದ ಕೆರಳಿರುವ ಅನೇಕರು ಸಾಮಾಜಿಕ ಜಾಲತಾಣದಲ್ಲಿ ವನಿತಾ ವಿಜಯ್ ಕುಮಾರ್ ಅವರಿಗೆ ತಪರಾಕಿಯನ್ನೂ ಹಾಕುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ವನಿತಾ ಹಂಚಿಕೊಂಡ ಚಿತ್ರದ ಪ್ರೋಮೋ ಕೆಳಗೆ ಕೂಡ ತಮ್ಮ ಆಕ್ರೋಶವನ್ನೂ ಹಲವರು ವ್ಯಕ್ತಪಡಿಸುತ್ತಿದ್ದಾರೆ. ಪ್ರಚಾರ ಪಡೆಯಲು ಈ ತಿರುಪೆ ಶೋಕಿ ಬೇಕಿತ್ತಾ ಎಂದು ಪ್ರಶ್ನೆಯನ್ನು ಕೂಡ ಕೇಳುತ್ತಿದ್ದಾರೆ.
ಅಂದ್ಹಾಗೇ ತಮಿಳಿನ ಹಿರಿಯ ನಟ ವಿಜಯ್ ಕುಮಾರ್ ಹಾಗೂ ದಿವಂಗತ ತಮಿಳು ನಟಿ ಮಂಜುಳಾ ಅವರ ಮುದ್ದಿನ ಮಗಳಾಗಿರುವ ವನಿತಾ ವಿಜಯ್ ಕುಮಾರ್ 2000ನೇ ಇಸ್ವಿಯಲ್ಲಿ ಕಿರುತೆರೆ ನಟ ಆಕಾಶ್ ಎಂಬುವರ ಜೊತೆ ಸಪ್ತ ಪದಿ ತುಳಿದರು. ವಿಜಯ್ ಶ್ರೀ ಹರಿ ಮತ್ತು ಜೋವಿಕಾ ಎಂಬ ಇಬ್ಬರು ಮಕ್ಕಳ ತಾಯಿಯೂ ಆದರು. ಆದರೆ, ಆ ನಂತರ ಈ ದಾಂಪತ್ಯ ಮುರಿದು ಬಿತ್ತು. ಆಕಾಶ್ ಅವರಿಂದ ದೂರವಾದ ನಂತರ ಆನಂದದ ಹುಡುಕಾಟದಲ್ಲಿ 2007ರಲ್ಲಿ ಆನಂದ್ ಜೇ ರಾಜನ್ ಎಂಬ ಉದ್ಯಮಿಯನ್ನೂ ಮದುವೆಯಾದ ವನಿತಾ ಅವರಿಗೆ ಜಯನಿತಾ ಜನಿಸಿದರು. ಆದರೆ.. ಈ ಬಾರಿ ಕೂಡ ಇವರ ಸಂಸಾರದಲ್ಲಿ ಬಿರುಗಾಳಿ ಎದ್ದಿತು. ಗಂಡ-ಹೆಂಡ್ತಿ ಸಂಬಂಧ 2012ರಲ್ಲಿ ಮುರಿದು ಬಿತ್ತು.
ಆನಂದ್ ಅವರಿಂದ ದೂರವಾದ ನಂತರ ಸದ್ಯ ವನಿತಾ ಜೊತೆ ಮತ್ತೆ ಕಾಣಿಸಿಕೊಳ್ಳುತ್ತಿರುವ ಮಿಸೆಸ್ & ಮಿಸ್ಟರ್ ಚಿತ್ರದಲ್ಲಿ ಅಭಿನಯಿಸಿರುವ ರಾಬರ್ಟ್ ಜೊತೆ ವನಿತಾ ವಿಜಯ್ ಕುಮಾರ್ ಹೆಸರು ಕೇಳಿ ಬಂತು. ಇಬ್ಬರು ಮದುವೆಯಾಗದೇ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಇಡೀ ಚೆನ್ನೈ ಮಾತನಾಡಿಕೊಂಡಿತು. ಆದರೆ.. ಆ ನಂತರ 2020ರಲ್ಲಿ ಲಾಕ್ ಡೌನ್‌ನಿಂದ ವಿಶ್ವ ಸ್ತಬ್ಧವಾದಾಗ ವನಿತಾ ವಿಜಯ್ ಕುಮಾರ್ ವಿಎಫ್‌ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜೊತೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ಬಂಧನಕ್ಕೆ ಒಳಗಾದರು. ಮಕ್ಕಳೆದರು ಪೀಟರ್ ಬಗ್ಗೆ ಹೇಳಿದಾಗ ಅವರು ಖುಷಿಯಾಗಿ ಯೆಸ್ ಎಂದು ಕೂಗಿದರು. ನನ್ನ ಪಾಲಿಗೆ ಸಂಭವಿಸುತ್ತಿರುವ ಅತ್ಯುತ್ತಮ ಗಳಿಗೆ ಎಂದು ಮಕ್ಕಳು ಹೇಳಿದಾಗ ನನ್ನ ಕಣ್ಣಂಚಲಿ ನೀರು ಜಿನುಗಿತು ಎಂದೆಲ್ಲ ಆಗ ವನಿತಾ ಹೇಳಿದ್ದರು. ಆದರೆ ಆ ನಂತರ ಕೇವಲ 04 ತಿಂಗಳಿನಲ್ಲಿ ತಮ್ಮ ಸಂಸಾರಕ್ಕೆ ಇಬ್ಬರು ಎಳ್ಳು-ನೀರು ಬಿಟ್ಟರು. ವನಿತಾ ಅವರಿಂದ ದೂರವಾದ ಕೆಲ ದಿನಗಳ ನಂತರ ಪೀಟರ್ ಪೌಲ್ ಇಹಲೋಕ ತ್ಯಜಿಸಿದರು.


Click it and Unblock the Notifications











