43ನೇ ವಯಸ್ಸಿನಲ್ಲಿ ನಾಲ್ಕನೇ ಮದುವೆಗೆ ಸಿದ್ಧವಾದ ಮೂವರು ಮಕ್ಕಳಿರುವ ನಾಯಕಿ...!
ಇಂದು ಖುಷಿ ಖುಷಿಯಾಗಿ ನಿಂತು ಹಸೆಮಣೆ ಏರಿ ಮದುವೆಯಾದವರು ದಿನ ಕಳೆಯುವಷ್ಟರಲ್ಲಿ ಕೋರ್ಟ್ ಮೆಟ್ಟಿಲೇರುವ ಮಟ್ಟಿಗೆ ಮದುವೆ, ದಾಂಪತ್ಯ ಅನ್ನೋದು ಕಾಮನ್ನಾಗಿರೋದು ದುರ್ದೈವ. ಅದರಲ್ಲೂ ಸಿನಿಮಾ ಮಂದಿಗೆ ಇದು ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡ ವನಿತಾ ವಿಜಯ್ ಕುಮಾರ್ ತಮ್ಮ 43ನೇ ವಯಸ್ಸಿನಲ್ಲಿ ನಾಲ್ಕನೇ ಮದುವೆಗೆ ಸಿದ್ಧವಾಗಿದ್ದಾರೆ.
ಹೌದು, ವನಿತಾ ವಿಜಯ್ ಕುಮಾರ್ ... ತಮಿಳಿನ ಹಿರಿಯ ನಟ ವಿಜಯ್ ಕುಮಾರ್ ಹಾಗೂ ದಿವಂಗತ ತಮಿಳು ನಟಿ ಮಂಜುಳಾ ಅವರ ಮುದ್ದಿನ ಮಗಳು. ಇಳಯ ದಳಪತಿ ವಿಜಯ್ ಅಭಿನಯದ 'ಚಂದ್ರಲೇಖಾ' ಚಿತ್ರಕ್ಕೆ ನಾಯಕಿಯಾಗುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ವನಿತಾ ಆ ನಂತರ ಮೂರು ಚಿತ್ರಕ್ಕೆ ಮಾತ್ರ ಬಣ್ಣ ಹಚ್ಚಿ ಕಿರುತೆರೆಯತ್ತ ಮುಖ ಮಾಡಿದರು. ಆ ನಂತರ ಮತ್ತೆ ಬೆಳ್ಳಿ ತೆರೆಗೆ ಮರಳುವ ಪ್ರಯತ್ನವನ್ನೂ ಮಾಡಿದರು. ಆದರೆ.. ಅಷ್ಟರಲ್ಲಿ ಆಗಲೇ ಕಾಲಿವುಡ್‌ನಲ್ಲಿ ಅರ್ಧ ಬಾಗಿಲು ಇವರಿಗೆ ಮುಚ್ಚಿ ಹೋಗಿತ್ತು. ಹೀಗಾಗಿ ಪೋಷಕ ಪಾತ್ರಗಳಿಗೆ ಸೀಮಿತವಾದವರು ವನಿತಾ ವಿಜಯ್ ಕುಮಾರ್.

ಇಂಥಾ ವನಿತಾ ವಿಜಯ್ ಕುಮಾರ್ 2000ನೇ ಇಸ್ವಿಯಲ್ಲಿ ಕಿರುತೆರೆ ನಟ ಆಕಾಶ್ ಎಂಬುವರ ಜೊತೆ ಸಪ್ತ ಪದಿ ತುಳಿದರು. ವಿಜಯ್ ಶ್ರೀ ಹರಿ ಮತ್ತು ಜೋವಿಕಾ ಎಂಬ ಇಬ್ಬರು ಮಕ್ಕಳ ತಾಯಿಯೂ ಆದರು. ಆದರೆ, ಆ ನಂತರ ಈ ದಾಂಪತ್ಯ ಮುರಿದು ಬಿತ್ತು. ಆಕಾಶ್ ಅವರಿಂದ ದೂರವಾದ ನಂತರ ಆನಂದದ ಹುಡುಕಾಟದಲ್ಲಿ 2007ರಲ್ಲಿ ಆನಂದ್ ಜೇ ರಾಜನ್ ಎಂಬ ಉದ್ಯಮಿಯನ್ನೂ ಮದುವೆಯಾದ ವನಿತಾ ಅವರಿಗೆ ಜಯನಿತಾ ಜನಿಸಿದರು. ಆದರೆ.. ಈ ಬಾರಿ ಕೂಡ ಇವರ ಸಂಸಾರದಲ್ಲಿ ಬಿರುಗಾಳಿ ಎದ್ದಿತು. ಗಂಡ-ಹೆಂಡ್ತಿ ಸಂಬಂಧ 2012ರಲ್ಲಿ ಮುರಿದು ಬಿತ್ತು.
ಆನಂದ್ ಅವರಿಂದ ದೂರವಾದ ನಂತರ ನಿರ್ದೇಶಕ ರಾಬರ್ಟ್ ಜೊತೆ ವನಿತಾ ವಿಜಯ್ ಕುಮಾರ್ ಹೆಸರು ಕೇಳಿ ಬಂತು. ಇಬ್ಬರು ಮದುವೆಯಾಗದೇ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಇಡೀ ಚೆನ್ನೈ ಮಾತನಾಡಿಕೊಂಡಿತು. ಆದರೆ.. ಆ ನಂತರ 2020ರಲ್ಲಿ ಲಾಕ್ ಡೌನ್‌ನಿಂದ ವಿಶ್ವ ಸ್ತಬ್ಧವಾದಾಗ ವನಿತಾ ವಿಜಯ್ ಕುಮಾರ್ ವಿಎಫ್‌ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜೊತೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ಬಂಧನಕ್ಕೆ ಒಳಗಾದರು. ಮಕ್ಕಳೆದರು ಪೀಟರ್ ಬಗ್ಗೆ ಹೇಳಿದಾಗ ಅವರು ಖುಷಿಯಾಗಿ ಯೆಸ್ ಎಂದು ಕೂಗಿದರು. ನನ್ನ ಪಾಲಿಗೆ ಸಂಭವಿಸುತ್ತಿರುವ ಅತ್ಯುತ್ತಮ ಗಳಿಗೆ ಎಂದು ಮಕ್ಕಳು ಹೇಳಿದಾಗ ನನ್ನ ಕಣ್ಣಂಚಲಿ ನೀರು ಜಿನುಗಿತು ಎಂದೆಲ್ಲ ಆಗ ವನಿತಾ ಹೇಳಿದ್ದರು. ಆದರೆ ಆ ನಂತರ ಕೇವಲ 04 ತಿಂಗಳಿನಲ್ಲಿ ತಮ್ಮ ಸಂಸಾರಕ್ಕೆ ಇಬ್ಬರು ಎಳ್ಳು-ನೀರು ಬಿಟ್ಟರು. ವನಿತಾ ಅವರಿಂದ ದೂರವಾದ ಕೆಲ ದಿನಗಳ ನಂತರ ಪೀಟರ್ ಪೌಲ್ ಇಹಲೋಕ ತ್ಯಜಿಸಿದರು.

ಹೀಗೆ ಬಟ್ಟೆ ಬದಲಿಸಿದಷ್ಟೇ ಸುಲಭವಾಗಿ ಒಂದಾದ ಮೇಲೊಂದು ಮದುವೆಯಾದ ವನಿತಾ ವಿಜಯ್ ಕುಮಾರ್ ಈಗ ನಾಲ್ಕನೇ ಮದುವೆಯಾಗುವ ಸೂಚನೆ ನೀಡಿದ್ದಾರೆ ಎನ್ನುವ ಸುದ್ದಿ ಈಗ ತಮಿಳುನಾಡಿನೆಲ್ಲೆಡೆ ಕೇಳಿ ಬರುತ್ತಿದೆ. ವನಿತಾ ಮದುವೆಯಾಗಲಿರುವ ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಒಂದು ವರ್ಗ ಉತ್ತರವನ್ನು ಹುಡುಕಲು ಶುರು ಮಾಡಿದೆ. ಹೀಗಾಗಿ ವನಿತಾ ಸದ್ಯದಲ್ಲಿಯೇ ತಮ್ಮ ನಾಲ್ಕನೇ ಮದುವೆಯ ವಿಚಾರವನ್ನೂ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.
ಅಂದ್ಹಾಗೇ ವನಿತಾ ವಿಜಯ್ ಕುಮಾರ್ ಸಹೋದರ ಅರುಣ್ ವಿಜಯ್ ಕೂಡ ನಟರಾಗಿದ್ದು, ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ 'ಚಕ್ರವ್ಯೂಹ' ಚಿತ್ರದಲ್ಲಿ ನಟಿಸಿದ್ದಾರೆ. ಸಹೋದರಿಯರಾದ ಪ್ರೀತಾ, ಶ್ರೀದೇವಿ ಕೂಡ ನಟಿಯರು. ಶ್ರೀದೇವಿ ಅವರು ಶ್ರೀ ಮುರಳಿ ನಿರ್ದೇಶನ ಪ್ರೀತಿಗಾಗಿ, ಶಿವರಾಜ್ ಕುಮಾರ್ ನಟನೆಯ ಕಾಂಚನಗಂಗಾ, ರವಿಚಂದ್ರನ್ ನಟನೆಯ ಲಕ್ಷ್ಮಣ ಚಿತ್ರಗಳಲ್ಲಿ ನಟಿಸಿದ್ದಾರೆ. ಮತ್ತೊಬ್ಬ ಸಹೋದರಿ ಪ್ರೀತಾ, ಸಾಯಿಕುಮಾರ್ ಜತೆ 'ಓಂ ನಮಃ ಶಿವಾಯ' ಚಿತ್ರದಲ್ಲಿ ನಟಿಸಿದ್ದರು.


Click it and Unblock the Notifications











