ಯಾರಾದ್ರೂ ಸಣ್ಣ ಮಗು ಹಿಡ್ಕೊಂಡು ಸಹಾಯ ಕೇಳಿ ಬಂದ್ರೆ, ನಾನಾ ಹುಟ್ಸಿದ್ದು ಅಂತ ಕೇಳ್ತೀನಿ; ವರಲಕ್ಷ್ಮಿ
ತಮಿಳು ನಟಿ ವರಲಕ್ಷ್ಮಿ ಶರತ್‌ಕುಮಾರ್ ಈಗ ಚಿತ್ರ ನಿರ್ದೇಶಕಿ ಕೂಡ ಆಗಿದ್ದಾರೆ. ಆಕೆ ನಿರ್ದೇಶಿಸಿ ನಟಿಸಿರುವ 'ಸರಸ್ವತಿ' ಸಿನಿಮಾ ಇತ್ತೀಚೆಗೆಗ ತೆರೆಕಂಡಿದೆ. ಪ್ರಕಾಶ್ ರಾಜ್, ಪ್ರಿಯಾಮಣಿ, ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ವರಲಕ್ಷ್ಮಿ, ಪ್ರಿಯಾಮಣಿ ಭಾಗಿ ಆಗುತ್ತಿದ್ದಾರೆ.
ತಮಿಳು ಮಾತ್ರವಲ್ಲದೇ ತೆಲುಗಿನಲ್ಲಿ ಕೂಡ 'ಸರಸ್ವತಿ' ಸಿನಿಮಾ ಬಿಡುಗಡೆ ಆಗಿದೆ. ಮಕ್ಕಳು ಮಾಡಿಕೊಳ್ಳುವ ಬಗ್ಗೆ ವರಲಕ್ಷ್ಮಿ ಹೇಳಿಕೆವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪ್ರೇಮಾ ಜರ್ನಲಿಸ್ಟ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವರಲಕ್ಷ್ಮಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ದೇಶದ ಜನಸಂಖ್ಯೆ, ಆರ್ಥಿಕವಾಗಿ ಸಬಲರಾಗಿ ಇಲ್ಲದೇ ಇದ್ದರೂ ಮಕ್ಕಳು ಮಾಡಿಕೊಂಡು ಜನ ಕಷ್ಟಪಡುತ್ತಿದ್ದಾರೆ ಎಂದಿದ್ದಾರೆ.

ವರಲಕ್ಷ್ಮಿ ಮಾತನಾಡಿ "ಭಾರತದಲ್ಲಿ ಜನಸಂಖ್ಯೆ ಜಾಸ್ತಿ. ಆದ್ರೆ ಸೆ*ಕ್ಸ್ ಬಗ್ಗೆ ಮುಕ್ತವಾಗಿ ಮಾತನಾಡಲು ಹೆದರುತ್ತಾರೆ. ಮಕ್ಕಳು ಮಾಡಿಕೊಳ್ಳುತ್ತಾರೆ. ಅದರ ಬಗ್ಗೆ ಮಾತ್ರ ಮಾತಾಡಲ್ಲ. ಇದನ್ನು ನೋಡಿದ್ರೆ ಫನ್ನಿ ಅನ್ನಿಸುತ್ತೆ. ಮಾಡುವುದೇ ಉಂಟು, ಮಾತನಾಡಲು ಮುಜುಗರ ಯಾಕೆ. ಫ್ಯಾಕ್ಟರಿ ರೀತಿ ಪ್ರತಿಯೊಬ್ಬರು 10 ಮಕ್ಕಳು ಮಾಡಿಕೊಳ್ತಾರೆ. ಬಳಿಕ ಮಕ್ಕಳು ಹುಟ್ಟಿಸಿದ್ದೀವಿ. ಅದಕ್ಕೆ ಕಷ್ಟಪಡಬೇಕಾಗಿದೆ ಅಂತಾರೆ" ಎಂದು ಹೇಳಿದ್ದಾರೆ.
ಮಗು ಮಾಡಿಕೊಳ್ಳುವ ಮುನ್ನ ಯೋಚಿಸಬೇಕು. ಜೀವನ ಹೇಗೆ ಎಂದು ಪ್ಲ್ಯಾನ್ ಮಾಡಬೇಕು. ಅರ್ಥಿಕವಾಗಿ ಸದೃಢರಾದ ಬಳಿಕ ಮಕ್ಕಳ ಬಗ್ಗೆ ಯೋಚಿಸಬೇಕಲ್ಲವೇ? ಎಂದು ವರಲಕ್ಷ್ಮಿ ಹೇಳಿರುವುದು ವೈರಲ್ ಆಗ್ತಿದೆ. "ಮಗು ಮಾಡಿಕೊಂಡ್ರೆ, ಜೀವನ ಸಾಗಿಸಲು ಸಾಧ್ಯವೇ ಎಂದು ಯೋಚಿಸಿ. ಈಗ ಆರ್ಥಿಕ ಚಿತ್ರಣವೇ ಬದಲಾಗಿದೆ. ಮಕ್ಕಳನ್ನು ಸಾಕಿ ಬೆಳೆಸುವುದು ಕಷ್ಟವಾಗುತ್ತಿದೆ. ಮಕ್ಕಳು ಮಾಡಿಕೊಂಡು ಬೇರೆಯವರ ಬಳಿ ಹೋಗಿ ಭಿಕ್ಷೆ ಬೇಡಬೇಡಿ. ಹಾಗಂತ ಮಕ್ಕಳು ಮಾಡಿಕೊಳ್ಳುವುದಕ್ಕೆ ನಾನು ವಿರೋಧ ವ್ಯಕ್ತಪಡಿಸ್ತಿಲ್ಲ" ಎಂದು ತಿಳಿಸಿದ್ದಾರೆ.
ನನ್ನ ಬಳಿ ಕೆಲವರು ಸಹಾಯ ಕೇಳಿಕೊಂಡು ಚಿಕ್ಕ ಮಗು ಹಿಡ್ಕೊಂಡು ಬರ್ತಾರೆ. ಏನಾದರೂ ಸಹಾಯ ಮಾಡಿ ಅಂತಾರೆ. ಆಗ ನಾನು ಕೇಳುವುದು ಒಂದೇ ಪ್ರಶ್ನೆ? ನಾನು ಹುಟ್ಸಿದ್ನ ಮಗುನಾ? ಇಲ್ಲ ಅಲ್ವಾ? ನೀವು ಹುಟ್ಸಿದ್ದು ಅಲ್ವಾ? ನೀವು ಮಾಡಿಕೊಂಡಿದ್ದಕ್ಕೆ ನಾನು ಯಾಕೆ ಸಹಾಯ ಮಾಡ್ಬೇಕು ಎಂದು ಹೇಳ್ತೀನಿ ಎಂದು ವರಲಕ್ಷ್ಮಿ ತಿಳಿಸಿದ್ದಾರೆ. "ನನ್ನ ಸಿಬ್ಬಂದಿ ಹಾಗೂ ಸುತ್ತಾಮುತ್ತ ಇರುವವರಿಗೆ ಇದೇ ಮಾತು ಹೇಳ್ತೀನಿ. ಮದುವೆ ಮಾಡ್ಕೊಳ್ಳಿ. ಬಳಿಕ ಸಾಕಲು ಸಾಧ್ಯ ಎನಿಸಿದ್ರೆ ಮಾತ್ರ ಮಗು ಮಾಡ್ಕೊಳಿ ಅಂತೀನಿ. ಆರ್ಥಿಕವಾಗಿ ಸದೃಢರಾದ ಬಳಿಕ ಮಾಡ್ಕೊಳಿ. ನಾನು ನಿಮ್ಮ ಮಕ್ಕಳನ್ನು ನೋಡ್ಕೊತ್ತೀನಿ ಅಂದ್ಕೊಬೇಡಿ ಅಂತೀನಿ" ಎಂದಿದ್ದಾರೆ.
ಅಜ್ಜಿ ಸತ್ತು ಹೋಗ್ತಾರೆ ಅದಕ್ಕೆ ಮಗು ಮಾಡ್ಕೊಂಡೆ, ತಾತ ಸತ್ತು ಹೋಗ್ತಾರೆ ಮೊಮ್ಮಗನನ್ನು ನೋಡ್ಬೇಕು ಅಂತಾರೆ ಅದಕ್ಕೆ ಮಗು ಮಾಡ್ಕೊತ್ತೀನಿ ಎನ್ನುವುದೆಲ್ಲಾ ತಪ್ಪು. ಎಲ್ಲರೂ ಸಾಯುವವರೇ. ಅದಕ್ಕಾಗಿ ಕತ್ತಿಯಿಂದ ಕೈಕುಯ್ದುಕೊಳ್ಳಲು ಸಾಧ್ಯವಿಲ್ಲ. ಎಮೋಷನಲ್ ಬ್ಲ್ಯಾಕ್‌ಮೇಲ್ ಇರುತ್ತೆ. ಆದರೆ ಕೊನೆಗೆ ಆಯ್ಕೆ ನಿಮ್ಮ ಕೈಯಲ್ಲೇ ಇದೆ ಎಂದು ವರಲಕ್ಷ್ಮಿ ಶರತ್‌ಕುಮಾರ್ ಹೇಳಿರುವುದು ವೈರಲ್ ಆಗ್ತಿದೆ. ಸಾಕಷ್ಟು ಜನ ಕಾಮೆಂಟ್ ಮಾಡಿ ಆಕೆಯ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.
ತಮಿಳಿನ ಖ್ಯಾತ ನಟ ಶರತ್‌ಕುಮಾರ್ ಮಗಳು ವರಲಕ್ಷ್ಮಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಕಿಚ್ಚ ಸುದೀಪ್ ಆತ್ಮೀಯ ಸ್ನೇಹಿತೆ ಕೂಡ. 'ಮಾಣಿಕ್ಯ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. 'ಮ್ಯಾಕ್ಸ್' ಚಿತ್ರದ ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಎರಡು ವರ್ಷಗಳ ಹಿಂದೆ ನಿಕೊಲೈ ಸಚ್‌ದೇವ್ ಎಂಬುವವರನ್ನು ಪ್ರೀತಿಸಿ ಮದುವೆ ಆಗಿದ್ದರು.


Click it and Unblock the Notifications











