ವಾರಣಾಸಿಯಲ್ಲಿರುವ ಸಾಧುಗಳಲ್ಲಿ 40% ಜನ ಕ್ರಿಮಿನಲ್‌ಗಳು ; ವಿವಾದದ ಕಿಡಿ ಹೊತ್ತಿಸಿದ ಯುವರತ್ನ ನಟಿ ಸಾಯೇಶಾ ಗಂಡ ಆರ್ಯ
''ವಾರಣಾಸಿ'' ಭಾರತದ ಆಧ್ಯಾತ್ಮಿಕ ರಾಜಧಾನಿ. ಪೌರಾಣಿಕ ನಂಬಿಕೆಯ ಪ್ರಕಾರ, ಈ ನಗರಕ್ಕೆ ಆರಂಭ ಅಥವಾ ಅಂತ್ಯ ಇಲ್ಲ.ಶಿವನ ತ್ರಿಶೂಲದ ಮೇಲೆ ನಿಂತ ನಗರ ಇದು ಎಂದು ಹೇಳಲಾಗುತ್ತದೆ. ವಾರಣಾಸಿ ನಗರವನ್ನು ಭಗವಾನ್ ಶಿವನು ಸ್ಥಾಪಿಸಿದನು ಎನ್ನಲಾಗುತ್ತದೆ. ಭೈರವ ಇಲ್ಲಿ ಕೊತ್ವಾಲ್ ಆಗಿ ನೆಲೆಸಿದ್ದಾನೆ. ಪ್ರಾಚೀನ ಕಾಲದಲ್ಲಿ ಆದಿಶಕ್ತಿ ಮತ್ತು ಸದಾಶಿವ ಇಲ್ಲಿ ನೆಲೆಸಿದ್ದರು ಎಂಬುದು ಪೌರಾಣಿಕ ನಂಬಿಕೆ.
ಇನ್ನೂ ಮೈ ತುಂಬಾ ಬೂದಿ ಬಳಿದುಕೊಂಡು, ಕಪಾಲ ಕೈಯಲ್ಲಿ ಹಿಡಿದುಕೊಂಡು, ರುದ್ರಾಕ್ಷಿ ಧರಿಸಿಕೊಂಡು ಅಘೋರಿಗಳು ಇಲ್ಲಿ ಲೆಕ್ಕ ಇಲ್ಲದಷ್ಟು ಕಾಣಿಸುತ್ತಾರೆ. ಅಘೋರಿಗಳು ದೇಶದೆಲ್ಲೆಡೆ ಇದ್ದಾರೆ. ಆದರೆ ಕಾಶಿ ಮತ್ತು ವಾರಣಾಸಿಯಲ್ಲಿ ಗರಿಷ್ಠ ಸಂಖ್ಯೆಯ ಅಘೋರಿಗಳು ಕಂಡುಬರುತ್ತಾರೆ.

ಆದರೆ ಭಕ್ತಿ ಮತ್ತು ವೈರಾಗ್ಯದ ಸಂಕೇತದಂತೆ ಹೀಗೆ ಇಲ್ಲಿ ಕಂಡು ಬರುವ ಈ ಅಘೋರಿಗಳಲ್ಲಿ ಶೇಕಡಾ 40 % ರಷ್ಟು ಅಘೋರಿಗಳು ಕಳ್ಳರು ಮತ್ತು ಅಪರಾಧಿಗಳು ಎನ್ನುವ ಮಾತನ್ನು ಸದ್ಯ ತಮಿಳು ನಟ ಆರ್ಯ ಹೇಳಿದ್ಧಾರೆ. ಈ ಮೂಲಕ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ. ವಿವಾದದ ಕೇಂದ್ರಬಿಂದುವೂ ಕೂಡ ಆಗಿದ್ದಾರೆ.
ಹೌದು, ಅಸಲಿಗೆ ಆರ್ಯ ಅಭಿನಯದ ''ಮಿಸ್ಟರ್ ಎಕ್ಸ್'' ಎಂಬ ಚಿತ್ರ ತೆರೆಗೆ ಬರುತ್ತಿದೆ. ಈ ಹಿನ್ನೆಲೆ ತಮ್ಮ ಈ ಚಿತ್ರದ ಪ್ರಚಾರವನ್ನು ಆರ್ಯ ಮಾಡುತ್ತಿದ್ದಾರೆ. ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇದೇ ಸಮಯದಲ್ಲಿ ವಾರಣಾಸಿ ಮತ್ತು ಅಘೋರಿಗಳ ಕುರಿತು ಮಾತನಾಡಿ ಹಲವರ ಕೆಂಗಣ್ಣಿಗೆ ಆರ್ಯ ಈಗ ಗುರಿಯಾಗಿದ್ದಾರೆ.
ಈ ಕುರಿತು ''ಸಿನಿ ಉಳಗಂ'' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆರ್ಯ, ತಮ್ಮ ವೃತ್ತಿ ಬದುಕಿನ ಅತ್ಯಂತ ಸವಾಲಿನ ಚಿತ್ರ ಮತ್ತು ಪಾತ್ರ ''ನಾನ್ ಕಡವುಳ್'' ಚಿತ್ರದ ಅನುಭವ ಮೆಲುಕು ಹಾಕಿದ್ದಾರೆ.
''ನಾನ್ ಕಡವುಳ್'' ಚಿತ್ರದ ಚಿತ್ರೀಕರಣಕ್ಕೆ ನಾವು ವಾರಣಾಸಿಗೆ ಹೋಗಿದ್ದೇವು ಎಂದು ಹೇಳಿರುವ ಆರ್ಯ, ಅಲ್ಲಿ ತುಂಬಾನೇ ನಕಲಿ ಸಾಧುಗಳಿದ್ದರು ಎಂದು ಹೇಳಿದ್ದಾರೆ. ಕೊಲೆ ಸೇರಿದಂತೆ ಹಲವು ಅಪರಾಧ ಮಾಡಿ ವಾರಣಾಸಿಯಲ್ಲಿ ಅವರು ಸಾಧು-ಸಂತನ ವೇಷದಲ್ಲಿ ತಲೆಮರೆಸಿಕೊಂಡಿದ್ದರು ಎಂದು ಹೇಳಿರುವ ಆರ್ಯ ಅವರಲ್ಲಿ ಸುಮಾರು ಶೇ. 60ರಷ್ಟು ಮಂದಿ ನಿಜವಾದ ಸಾಧುಗಳಿರಬಹುದು. ಆದರೆ ಉಳಿದ ಶೇ. 40ರಷ್ಟು ಮಂದಿ ನಕಲಿ ಸ್ವಾಮಿಗಳು ಇದ್ದರು ಎಂದು ಹೇಳಿದ್ದಾರೆ.

ಮುಂದುವರೆದು ಆ 40% ಸಾಧು-ಅಘೋರಿಗಳಲ್ಲಿ ಹಲವರು ಕ್ರಿಮಿನಲ್‌ಗಳು. ಕೆಲವರ ಬಳಿ ಹೆಸರು ಕೇಳಿದರೆ ಸ್ವಾಮಿ ಅಂತಷ್ಟೇ ಹೇಳ್ತಾರೆ. ಅವರಿಗೆ ಸರಿಯಾದ ಹೆಸರಿಲ್ಲ. ರೇಷನ್ ಕಾರ್ಡ್, ಐಡಿ ಕಾರ್ಡ್, ಪ್ಯಾನ್ ಕಾರ್ಡ್... ಯಾವುದೂ ಇರಲ್ಲ ಎಂದು ಹೇಳಿರುವ ಆರ್ಯ, ಕ್ರಿಮಿನಲ್ ಕೆಲಸ ಮಾಡಿ ಬಂದು ಇಲ್ಲಿ ಅಡಗಿಕೊಂಡಿರುತ್ತಾರೆ. ಮೂರ್ನಾಲ್ಕು ವರ್ಷ ರೆಸ್ಟ್ ಮಾಡಿ ಆ ನಂತರ ಅಲ್ಲಿಂದ ಅವರು ಹೊರಡುತ್ತಾರೆ ಎಂದು ಹೇಳಿದ್ದಾರೆ. ಅಘೋರಿಗಳಂತೆ ವೇಷ ಧರಿಸಿ ಸುಲಭವಾಗಿ ಆಶ್ರಯ ಪಡೆಯುತ್ತಾರೆ ಎಂದಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಆರ್ಯ, ಪೊಲೀಸರು ತಮ್ಮ ತಂಡಕ್ಕೆ ಎಚ್ಚರಿಕೆಯನ್ನು ಕೂಡ ನೀಡಿದ್ದರು ಎಂದು ಹೇಳಿದ್ದಾರೆ.ನಾವಿಲ್ಲಿ ಕೇವಲ 50,000 ಪೊಲೀಸರಿದ್ದೇವೆ. ನಮ್ಮ ಕೈಯಲ್ಲಿ ಇರೋದು ಸಾಮಾನ್ಯ ಗನ್‌ಗಳು. ಆದರೆ ಒಳಗೆ ಇರೋರ ಕೈಯಲ್ಲಿ ಎಕೆ-47 ಇದೆ. ಹಾಗಾಗಿ ಹುಷಾರಾಗಿ ಶೂಟಿಂಗ್ ಮಾಡಿ ಎಂದು ಪೊಲೀಸರು ನಮಗೆ ಎಚ್ಚರಿಕೆ ಕೊಟ್ಟಿದ್ದರು ಎಂದು ಹೇಳಿರುವ ಆರ್ಯ ಅಲ್ಲಿನ ನಿಜವಾದ ಪರಿಸ್ಥಿತಿ ಇದು, ಎಲ್ಲಾ ಕಡೆಯೂ ಎಲ್ಲಾ ತರಹದ ಜನ ಇರುತ್ತಾರೆ ಎಂದು ಹೇಳಿದ್ದಾರೆ.
ಆರ್ಯ ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ವಾರಣಾಸಿ ಅಪರಾಧಿಗಳ ಪಾಲಿಗೆ ''ಸೇಫ್ ಹೌಸ್'' ಆಗಿದೆಯಾ..? ಎಂಬ ಚರ್ಚೆ ನಡೆಯುತ್ತಿದೆ. ಆರ್ಯ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಅಲೆ ಎದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ #BoycottMrX ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಕೂಡ ಆಗುತ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮೂಲಕ ಆರ್ಯ ಅವರು ಸಿನಿಮಾಗೆ ಉಚಿತ ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶವನ್ನೂ ಕೂಡ ವ್ಯಕ್ತಪಡಿಸಿವೆ.
ಇನ್ನುಳಿದಂತೆ ಆರ್ಯ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ''ಯುವರತ್ನ'' ಚಿತ್ರದ ನಾಯಕಿ ಸಾಯೇಶಾ ಸೈಗಲ್ ಅವರನ್ನು ಮದುವೆಯಾಗಿದ್ದಾರೆ. ಮಾರ್ಚ್ 10, 2019ರಂದು ಹೈದರಾಬಾದ್‌ನ ಫಲಕ್‌ನುಮಾ ಪ್ಯಾಲೇಸ್‌ನಲ್ಲಿ ಇವರ ಮದುವೆ ಅದ್ಧೂರಿಯಾಗಿ ನಡೆದಿತ್ತು. ದಕ್ಷಿಣ ಭಾರತದ ಸಿನಿಮಾ ಗಣ್ಯರಿಗಾಗಿ ಚೆನ್ನೈನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಈ ಜೋಡಿ ಹಮ್ಮಿಕೊಂಡಿತ್ತು. ಇಬ್ಬರ ಪ್ರೀತಿಯ ಸಂಕೇತವಾಗಿ ಇವರಿಗೆ ಆರಿಯಾನಾ ಎಂಬ ಮಗಳಿದ್ದಾಳೆ.


Click it and Unblock the Notifications