'ವಾರಿಸು' 300 ಕೋಟಿ ಕ್ಲಬ್ ಸೇರಿದ ಸೌತ್‌ನ 13ನೇ ಚಿತ್ರ; ಎಲ್ಲಾ ಚಿತ್ರಗಳ ಪಟ್ಟಿ ಇಲ್ಲಿದೆ

ಈ ಬಾರಿ ಸಂಕ್ರಾಂತಿಯ ಪ್ರಯುಕ್ತ ತೆಲುಗು ಹಾಗೂ ತಮಿಳಿನ ಹಲವು ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೊಂಡವು. ತಮಿಳಿನಲ್ಲಿ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳು ತೆರೆಗೆ ಬಂದವು. ಈ ಪೈಕಿ ಅಜಿತ್ ಕುಮಾರ್ ನಟನೆಯ ತುನಿವು ವಿರುದ್ಧ ವಿಜಯ್ ಅಭಿನಯದ ವಾರಿಸು ಚಿತ್ರ ಸ್ಪಷ್ಟ ಗೆಲುವನ್ನೇ ಸಾಧಿಸಿತು ಹಾಗೂ ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ಈ ಬಾರಿಯ ಸಂಕ್ರಾಂತಿಯ ವಿನ್ನರ್ ಎನಿಸಿಕೊಂಡಿತು.
ಹೀಗೆ ಗೆದ್ದು ಬೀಗಿದ ವಾರಿಸು ಚಿತ್ರ ಬಹುಬೇಗನೇ ನೂರು, ಇನ್ನೂರು ಕೋಟಿ ಕ್ಲಬ್ ಸೇರಿ ಸಿನಿ ರಸಿಕರ ಹುಬ್ಬೇರುವಂತೆ ಮಾಡಿತ್ತು. ಇನ್ನು ಈ ಸಿನಿಮಾ ಕಥೆಯಲ್ಲಿ ಹೊಸತನವೇನೂ ಇರಲಿಲ್ಲ. ಈಗಾಗಲೇ ಹಲವು ಚಿತ್ರಗಳಲ್ಲಿ ನೋಡಿದ್ದ ನಾಯಕ ತನ್ನ ಫ್ಯಾಮಿಲಿ ಹಾಗೂ ಫ್ಯಾಮಿಲಿಯ ಗೌರವವನ್ನು ರಕ್ಷಿಸುವ ಕಥೆಯೇ ಈ ಚಿತ್ರದಲ್ಲಿಯೂ ಇತ್ತು. ಆದ್ರೆ ಇಂಥ ಕಥೆ ತಮಿಳು ಸಿನಿ ರಸಿಕರಿಗೆ ತುಸು ಹೊಸತು ಎಂದೇ ಹೇಳಬಹುದು. ಅದರಲ್ಲಿಯೂ ವಿಜಯ್ ಸಿನಿ ಜೀವನದಲ್ಲಿ ಇಂತಹ ಕಥೆಯುಳ್ಳ ಫ್ಯಾಮಿಲಿ ಎಂಟರ್‌ಟೈನರ್ ಬಂದಿರದ ಕಾರಣ ಹಾಗೂ ವಿಜಯ್ ಸ್ಟಾರ್‌ಡಂ ಕಾರಣದಿಂದಾಗಿ ಚಿತ್ರ ಗೆಲುವನ್ನು ಕಂಡಿತು.
ಈಗಲೂ ಸಹ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದ್ದು, ನಿನ್ನೆಯಷ್ಟೇ ( ಫೆಬ್ರವರಿ 6 ) ಚಿತ್ರತಂಡ ಚಿತ್ರವು 300 ಕೋಟಿ ಗಳಿಕೆ ಮಾಡಿದೆ ಎಂದು ವಿಶೇಷ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್ ನೋಡಿದ ಹಲವರು ಚಿತ್ರ ಇಷ್ಟು ಗಳಿಸಲು ಸಾಧ್ಯವಿಲ್ಲ ಎಂದು ಟ್ರೋಲ್ ಮಾಡಿದ್ದರೂ ಸಹ ಇದು ಅಧಿಕೃತ ಪ್ರಕಟಣೆ ಆದ ಕಾರಣ ಆ ಟ್ರೋಲ್‌ಗಳಿಗೆ ಕಿಂಚಿತ್ತೂ ಬೆಲೆ ಕೊಡುವ ಹಾಗಿಲ್ಲ. ಈ ಮೂಲಕ ವಾರಿಸು ಅಧಿಕೃತವಾಗಿ 300 ಕೋಟಿ ಕ್ಲಬ್ ಸೇರಿದ್ದು, ಸಿನಿಮಾ ಇತಿಹಾಸದಲ್ಲಿ 300 ಕೋಟಿ ಕ್ಲಬ್ ಸೇರಿದ ಸೌತ್‌ನ 12ನೇ ಸಿನಿಮಾ ಎನಿಸಿಕೊಂಡಿದೆ. ಹಾಗಿದ್ದರೆ ಇಲ್ಲಿಯವರೆಗೂ 300 ಕೋಟಿ ಕ್ಲಬ್ ಸೇರಿರುವ ಸೌತ್ ಇಂಡಿಯಾದ ಹನ್ನೆರಡು ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ ನೋಡಿ..

300 ಕೋಟಿ ಕ್ಲಬ್ ಸೇರಿದ ದಕ್ಷಿಣ ಭಾರತದ ಚಿತ್ರಗಳಿವು
1. ಬಾಹುಬಲಿ 2 - 1810 ಕೋಟಿ ರೂಪಾಯಿಗಳು
2. ಆರ್ ಆರ್ ಆರ್ - 1258 ಕೋಟಿ ರೂಪಾಯಿಗಳು
3. ಕೆಜಿಎಫ್ ಚಾಪ್ಟರ್ 2 - 1250 ಕೋಟಿ ರೂಪಾಯಿಗಳು
4. ರೊಬೊ 2.0 - 800 ಕೋಟಿ ರೂಪಾಯಿಗಳು
5. ಬಾಹುಬಲಿ 1 - 650 ಕೋಟಿ ರೂಪಾಯಿಗಳು
6. ಪೊನ್ನಿಯಿನ್ ಸೆಲ್ವನ್ 1 - 500 ಕೋಟಿ ರೂಪಾಯಿಗಳು
7. ವಿಕ್ರಮ್ - 500 ಕೋಟಿ ರೂಪಾಯಿಗಳು
8. ಸಾಹೋ - 439 ಕೋಟಿ ರೂಪಾಯಿಗಳು
9. ಕಾಂತಾರ - 400 ಕೋಟಿ ರೂಪಾಯಿಗಳು
10. ಪುಷ್ಪ 1 - 373 ಕೋಟಿ ರೂಪಾಯಿಗಳು
11. ಎಂದಿರನ್ - 320 ಕೋಟಿ ರೂಪಾಯಿಗಳು
12. ಬಿಗಿಲ್ - 300 ಕೋಟಿ ರೂಪಾಯಿಗಳು
13. ವಾರಿಸು - 300 ಕೋಟಿ ರೂಪಾಯಿಗಳು

ಕನ್ನಡದ ಎರಡು ಚಿತ್ರಗಳು
ಇನ್ನು ಈ ಮೇಲ್ಕಂಡ ಪಟ್ಟಿಯಲ್ಲಿ ಕನ್ನಡ ಚಿತ್ರರಂಗದ ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಚಿತ್ರಗಳು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಈ ಎರಡೂ ಚಿತ್ರಗಳೂ ಸಹ ಕಳೆದ ವರ್ಷವೇ ಈ ಪಟ್ಟಿಗೆ ಲಗ್ಗೆ ಇಟ್ಟಿವೆ. ಸದ್ಯ ಈ ಕ್ಲಬ್ ಸೇರುವ ಸಾಮರ್ಥ್ಯ ಇರುವ ಹಲವು ಕಂಟೆಂಟ್ ಉಳ್ಳ ಚಿತ್ರಗಳನ್ನು ಕನ್ನಡ ಚಿತ್ರರಂಗ ತಯಾರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಪಟ್ಟಿಗೆ ಮತ್ತಷ್ಟು ಕನ್ನಡ ಚಿತ್ರಗಳು ಲಗ್ಗೆ ಇಡುವುದು ಖಚಿತ.

ವಾರಿಸು ಎಚ್ ಡಿ ಪ್ರಿಂಟ್ ಲೀಕ್
ಹೀಗೆ 300 ಕೋಟಿ ಗಳಿಸಿದೆಎಂದು ಘೋಷಿಸಲ್ಪಟ್ಟಿರುವ ವಾರಿಸು ಚಿತ್ರದ ಎಚ್ ಡಿ ಪ್ರಿಂಟ್ ಆನ್ ಲೈನ್ ಲೀಕ್ ಆಗಿದೆ. ಟಾರೆಂಟ್ ವೆಬ್ ತಾಣಗಳಲ್ಲಿ ಸಂಪೂರ್ಣ ಕ್ವಾಲಿಟಿ ಸಿನಿಮಾ ಹರಿದಾಡುತ್ತಿದ್ದು, ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿರುವಾಗಲೇ ಲೀಕ್ ಆಗಿರುವುದು ಚಿತ್ರತಂಡಕ್ಕೆ ಹಿನ್ನಡೆ ಉಂಟು ಮಾಡಿದೆ.


Click it and Unblock the Notifications











