ಚಿತ್ರರಂಗದಲ್ಲಿ ವಿಷಾದ; ಮತ್ತೊಬ್ಬ ಹಿರಿಯ ನಟ ನಿಧನ
ದಕ್ಷಿಣ ಭಾರತ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದ ಪೋಷಕ ನಟ ಡೆಲ್ಲಿ ಗಣೇಶ್ ನಿಧನರಾಗಿದ್ದಾರೆ. ತಮಿಳುನಾಡಿನ ತಿರುನಲ್ವೇಲಿ ಮೂಲದ ಗಣೇಶ್ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ನಾಯಕ ಅಥವಾ ನಾಯಕಿಯ ಸಹೋದರ, ಮಾವ, ಅಪ್ಪ, ಚಿಕ್ಕಪ್ಪನ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು.
ನಟ ಡೆಲ್ಲಿ ಗಣೇಶ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಶನಿವಾರ ರಾತ್ರಿ(ನವೆಂಬರ್ 10) ತಮ್ಮ ನಿವಾಸದಲ್ಲೇ ಡೆಲ್ಲಿ ಗಣೇಶ್ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ಅಭಿಮಾನಿಗಳು, ತಮಿಳು ಚಿತ್ರರಂಗ ಕಂಬನಿ ಮಿಡಿದಿದ್ದು ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ. ಸೋಮವಾರ ಡೆಲ್ಲಿ ಗಣೇಶ್ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಯಲಿದೆ.

ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಡೆಲ್ಲಿ ಗಣೇಶ್ ಹೆಚ್ಚು ನಟಿಸಿದ್ದರು. ವಿಲನ್ ಹಾಗು ಕಾಮೆಡಿಯನ್ ಆಗಿಯೂ ಪ್ರೇಕ್ಷಕರನ್ನು ರಂಜಿಸಿದ್ದರು. 1976ರಲ್ಲಿ ಕೆ. ಬಾಲಚಂದರ್ ತಮ್ಮ 'ಪಟ್ಟಿನ ಪ್ರವೇಶಂ' ಚಿತ್ರದ ಮೂಲಕ ಡೆಲ್ಲಿ ಗಣೇಶ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು.
ಗಣೇಶ್ ಅವರು ಆಗಸ್ಟ್ 1, 1944 ರಂದು ತಿರುನಲ್ವೇಲಿಯಲ್ಲಿ ಜನಿಸಿದರು. 1964 ರಿಂದ 1974 ರವರೆಗೆ ಒಂದು ದಶಕದ ಕಾಲ ಭಾರತೀಯ ವಾಯುಪಡೆಯಲ್ಲಿ ಅವರು ಸೇವೆ ಸಲ್ಲಿಸಿದರು. ಬಳಿಕ ಚಿತ್ರರಂಗ ಪ್ರವೇಶಿಸಿದರು. ದೆಹಲಿಯ'ದಕ್ಷಿಣ ಭಾರತ ನಾಟಕ ಸಭಾ' ತಂಡದಲ್ಲಿ ಗುರ್ತಿಸಿಕೊಂಡು ನಾಟಕಗಳಲ್ಲಿ ನಟಿಸುತ್ತಿದ್ದರು. ಅವರ ನಟನೆ ನೋಡಿ ಕೆ ಬಾಲಚಂದರ್ ಅವರು ಗಣೇಶ್ ಅವರನ್ನು ಚಿತ್ರರಂಗಕ್ಕೆ ಕರೆತಂದರು. 'ದೆಹಲಿ ಗಣೇಶ್' ಎಂದು ಹೆಸರು ಕೊಟ್ಟರು.
1981ರಲ್ಲಿ 'ಎಂಗಮ್ಮ ಮಹಾರಾಣಿ' ಎಂಬ ಚಿತ್ರದಲ್ಲಿ ಡೆಲ್ಲಿ ಗಣೇಶ್ ಹೀರೊ ಆಗಿ ಕೂಡ ನಟಿಸಿದ್ದರು. 'ಅಪೂರ್ವ ಸಹೋದರಂಗಳ್' ಚಿತ್ರದಲ್ಲಿ ಖಳನಾಯಕನಾಗಿಯೂ ಅಬ್ಬರಿಸಿದ್ದರು. ತಮಿಳುನಾಡು ರಾಜ್ಯಪ್ರಶಸ್ತಿ, ಕಲೈಮಾಮಣಿ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಧಕ್ಕಿವೆ. 'ಸಿಂಧು ಭೈರವಿ', 'ನಾಯಕನ್', 'ಮೈಖಲ್ ಮದನ್ ಕಾಮರಾಜ' ಹಾಗೂ 'ತೆನಾಲಿ' ಡೆಲ್ಲಿ ಗಣೇಶ್ ನಟಿಸಿದ ಕೆಲ ಜನಪ್ರಿಯ ಚಿತ್ರಗಳು.
ಕಮಲ್ ಹಾಸನ್ ನಟಿಸಿದ 'ಇಂಡಿಯನ್'-2 ಚಿತ್ರದಲ್ಲಿ ಕೊನೆಯದಾಗಿ ಡೆಲ್ಲಿ ಗಣೇಶ್ ಬಣ್ಣ ಹಚ್ಚಿದ್ದರು. ನಟನಾಗಿ ಮಾತ್ರವಲ್ಲದೇ ಕಂಠದಾನ ಕಲಾವಿದನಾಗಿಯೂ ಡೆಲ್ಲಿ ಗಣೇಶ್ ಗುರ್ತಿಸಿಕೊಂಡಿದ್ದರು. ಶಂಕರ್ ನಾಗ್ ಅವರ 'ಮಾಲ್ಗುಡಿ ಡೇಸ್' ಧಾರಾವಾಹಿ ತಮಿಳಿಗೆ ಡಬ್ ಆಗಿದ್ದಾಗಿ ಗಿರೀಶ್ ಕಾರ್ನಾಡ್ ಪಾತ್ರಕ್ಕೆ ಗಣೇಶ್ ಡಬ್ ಮಾಡಿದ್ದರು.


Click it and Unblock the Notifications











