Singer P. Susheela: ಖ್ಯಾತ ಗಾಯಕಿ ಪಿ. ಸುಶೀಲ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
ಜನಪ್ರಿಯ ಹಿನ್ನೆಲೆ ಗಾಯಕಿ ಪಿ. ಸುಶೀಲ ಅಸ್ವಸ್ಥರಾಗಿದ್ದಾರೆ. ಪದ್ಮಭೂಷಣ ಪುರಸ್ಕೃತ ಗಾಯಕಿಯನ್ನು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗೆ ಆಕೆ ಅನಾರೋಗ್ಯದಿಂದ ಬಳಲುತ್ತಿದ್ದರು. 86 ವರ್ಷದ ಸುಶೀಲಾ ಅವರು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ವರದಿಯಾಗಿದೆ.
ಗಾಯಕಿ ಪಿ. ಸುಶೀಲ ಅವರಿಗೆ ಸದ್ಯ ನೀಡುತ್ತಿರುವ ಚಿಕಿತ್ಸೆಯಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸುಮಧುರ ಕಂಠದ ಗಾಯಕಿ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಆಕೆ ಬೇಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬೇಕೆಂದು ಚಿತ್ರರಂಗ ಮತ್ತು ಅಭಿಮಾನಿಗಳು ಬಯಸುತ್ತಿದ್ದಾರೆ. ಪ್ರಸ್ತುತ 86 ವರ್ಷ ವಯಸ್ಸಿನ ಪಿ. ಸುಶೀಲಾ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಗಾಯನಕ್ಕಾಗಿ 5 ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳನ್ನು ಪಿ. ಸುಶೀಲ ಪಡೆದಿದ್ದಾರೆ. ಸಾವಿರಾರು ಹಾಡುಗಳನ್ನು ಹಾಡಿ ಸಂಗೀತಪ್ರಿಯರ ಮನಗೆದ್ದಿದ್ದಾರೆ. ವಿವಿಧ ಭಾಚೆಗಳಲ್ಲಿ ಹಾಡುಗಳನ್ನು ಹಾಡಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್, ಏಷಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಇತ್ತೀಚೆಗೆ ಆಕೆ ಹಾಡುಗಳನ್ನು ಹಾಡುತ್ತಿಲ್ಲ. ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು.
1935ರ ನವೆಂಬರ್ 13ರಂದು ಆಂಧ್ರ ಪ್ರದೇಶದ ವಿಜಯನಗರಂನಲ್ಲಿ ಜನಿಸಿದ ಸುಶೀಲ ಎಂಟನೇ ತರಗತಿಗೆ ಓದು ನಿಲ್ಲಿಸಿದರು. ಆದರೆ ಸಂಗೀತದಲ್ಲಿ ಡಿಪ್ಲೋಮಾ ಪದವಿ ಪಡೆದರು. ಪೆಂಡ್ಯಾಲ ನಾಗೇಶ್ವರರಾಯರು ಆಕೆಯನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಖ್ಯಾತ ಗಾಯಕ ಎ. ರಾಜಾ ಅವರೊಡನೆ 'ಪೆತ್ರ ತಾಯ್' ಚಿತ್ರದ ಡ್ಯುಯೆಟ್ ಸಾಂಗ್ ಹಾಡುವ ಮೂಲ ಚಿತ್ರರಂಗಕ್ಕೆ ಸುಶೀಲ ಎಂಟ್ರಿ ಕೊಟ್ಟರು. ಬಳಿಕ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
ಎಂ. ಎಸ್. ರಾಜೇಶ್ವರಿ, ಜಮುನಾ ರಾಣಿ, ಸೋಲಮಂಗಲಂ ರಾಜಲಕ್ಷ್ಮಿ, ಬಾಲಸರಸ್ವತಿ ದೇವಿ, ಎ. ಪಿ. ಕೋಮಲ, ಕೆ. ರಾಣಿ ರೀತಿಯ ಘಟಾನುಘಟಿ ಗಾಯಕಿಯ ನಡುವೆ ಪಿ. ಸುಶೀಲ ಗೆದ್ದರು. ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ, ಬೆಂಗಾಲಿ, ಸಂಸ್ಕೃತ ಸೇರಿ ಹಲವು ಭಾಷೆಗಳಲ್ಲಿ ಹಾಡು ಹಾಡಿ ಕೇಳುಗರ ಮನಸೂರೆಗೊಂಡರು. ಆರೇಳು ದಶಕಗಳ ಕಾಲ ಸಂಗೀತಲೋಕದ ಸಾಮ್ರಾಜ್ಞಿಯಾಗಿ ಮೆರೆದರು.
ಕನ್ನಡದಲ್ಲಿ ಹಲವು ಸೂಪರ್ ಹಿಟ್ ಗೀತೆಗಳನ್ನು ಪಿ. ಸುಶೀಲ ಹಾಡಿದ್ದಾರೆ. 'ಇದೇನ ಸಭ್ಯತೆ ಇದೇನ ಸಂಸ್ಕೃತಿ, 'ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ', 'ಫಲಿಸಿತು ಒಲವಿನ ಪೂಜಾ ಫಲ', 'ಒಲವೆ ಜೀವನ ಸಾಕ್ಷಾತ್ಕಾರ' ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಇದೆ. ಕನ್ನಡದಲ್ಲೇ 5000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.


Click it and Unblock the Notifications











